
ಡಿಕೆಶಿ ಸರ್ಕಾರದ ಚಿಂತನೆ ಏನು?
ಗ್ಯಾರಂಟಿಗಳು ಉಳ್ಳವರ ಪಾಲಾಗುವುದರ ತಡೆಗೆ ‘ಗಿವ್ ಇಟ್ ಅಪ್’ ಕ್ರಮ
ಸರ್ಕಾರಿ ನೌಕರರಿಗೆ ಶಕ್ತಿ ಯೋಜನೆ ಬೇಕೇ, ಬೇಡವೇ ಎಂದು ಚರ್ಚೆ
ಈ ಬಗ್ಗೆ ವರದಿ ಸಲ್ಲಿಸಲು ವಿವಿಧ ಇಲಾಖೆಗಳಿಗೆ ಸರ್ಕಾರ ಸೂಚನೆ
ಲಾಭ ಏನು?
ಗೃಹಲಕ್ಷ್ಮಿ ಯೋಜನೆಯಡಿ ಕನಿಷ್ಠ ಶೇ.5 ರಷ್ಟು ಮಂದಿ ಯೋಜನೆ ತ್ಯಜಿಸಿದರೂ 1,200 ಕೋಟಿ ರು. ಉಳಿತಾಯ
ನಮಗೆ ಗೃಹಜ್ಯೋತಿ ಬೇಡ ಅಂತ ಉಳ್ಳವರು ಮುಂದೆ ಬಂದರೆ ಸರ್ಕಾರಕ್ಕೆ ಉಳಿಯಲಿದೆ 600-700 ಕೋಟಿ ರು.
‘ಶಕ್ತಿ’ ಅಡಿ ಸರ್ಕಾರಿ ನೌಕರರು ಹೊರಬಂದ್ರೆ ಪುರುಷ ವಿದ್ಯಾರ್ಥಿಗಳ ಫ್ರೀ ಪಾಸ್‌ಗೆ ಹಣ ಹೊಂದಿಸಲು ಅನುಕೂಲ
ವಿಶೇಷ ವರದಿ
ಬೆಂಗಳೂರು (ಜೂ.28): ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಎಲ್‌ಪಿಜಿ ಸಬ್ಸಿಡಿಯನ್ನು ಸ್ಬಯಂಪ್ರೇರಿತರಾಗಿ ತ್ಯಜಿಸಿ ಎಂದು ಜನತೆಗೆ ಕರೆ ನೀಡಿದ್ದರು. ಇದಕ್ಕೆ ಸ್ಪಂದನೆ ಕೂಡ ಲಭಿಸಿತ್ತು. ಇದೀಗ ಅದೇ ಮಾದರಿಯಲ್ಲಿ ಕರ್ನಾಟಕ ಸರ್ಕಾರವು ತನ್ನ ಮಹತ್ವಾಕಾಂಕ್ಷಿ ಗ್ಯಾರಂಟಿಗಳು ಅನರ್ಹರ ಪಾಲಾಗುವುದನ್ನು ತಡೆಯಲು ಹಲವು ಸುಧಾರಣಾ ಕ್ರಮಕ್ಕೆ ಮುಂದಾಗಿದೆ. ಉಳ್ಳವರು ಸ್ವಯಂ ಪ್ರೇರಿತವಾಗಿ ‘ಗೃಹಲಕ್ಷ್ಮಿ’ ಹಾಗೂ ‘ಗೃಹಜ್ಯೋತಿ’ ಲಾಭ ತ್ಯಜಿಸಲು ಅನುವು ಮಾಡಿಕೊಡಲು ಚಿಂತನೆ ನಡೆಸಿದೆ.
ಅಲ್ಲದೆ, ‘ಶಕ್ತಿ’ ಯೋಜನೆಯಡಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಶಕ್ತಿ ಸ್ಮಾರ್ಟ್ ಕಾರ್ಡ್ ನೀಡಲು ತೀರ್ಮಾನಿಸಿದ್ದು, ಸರ್ಕಾರಿ ಅಧಿಕಾರಿಗಳು, ನೌಕರರು ಹಾಗೂ ತೆರಿಗೆ ಪಾವತಿದಾರರಿಗೆ ಶಕ್ತಿ ಯೋಜನೆಯ ಲಾಭ ನೀಡಬೇಕೇ ಅಥವಾ ಅವರು ಸಹ ಯೋಜನೆ ಬಿಟ್ಟುಕೊಡುವಂತೆ ಕೋರುವುದೇ ಎಂಬ ಬಗ್ಗೆ ಚಿಂತಿಸಿ ವರದಿ ನೀಡಲು ಇಲಾಖಾ ಮುಖ್ಯಸ್ಥರಿಗೆ ಸೂಚಿಸಿರುವುದಾಗಿ ತಿಳಿದುಬಂದಿದೆ.
ಇಂಧನ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸಾರಿಗೆ ಇಲಾಖೆ ಮುಖ್ಯಸ್ಥರಿಗೆ ಗ್ಯಾರಂಟಿಗಳ ಸುಧಾರಣೆಗೆ ಸೂಕ್ತ ವರದಿ ನೀಡುವಂತೆ ಸರ್ಕಾರ ಕೋರಿದೆ. ಯಾವುದೇ ಅರ್ಹರಿಗೂ ಯೋಜನೆಯ ಲಾಭ ತಪ್ಪಿಸಬಾರದು. ಆದರೆ, ಗೃಹ ಲಕ್ಷ್ಮೀ ಯೋಜನೆಯಲ್ಲಿ ಆಗಿರುವಂತೆ ದುರ್ಬಳಕೆಯೂ ಆಗಬಾರದು. ಆ ರೀತಿ ವರದಿ ನೀಡಿ ಎಂದು ಸೂಚಿಸಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.
ಉಳ್ಳವರು ಯೋಜನೆಯ ಲಾಭ ಪಡೆಯದಿರಲು (ಗಿವ್ ಅಪ್) ಅವಕಾಶ ನೀಡಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗಂಭೀರ ಚಿಂತನೆ ನಡೆಸಿದ್ದಾರೆ. ಇದರಿಂದ ಸರ್ಕಾರಕ್ಕೆ ಹೆಚ್ಚೇನೂ ಉಳಿತಾಯ ಆಗದಿದ್ದರೂ ಯೋಜನೆ ಅಗತ್ಯವಿಲ್ಲ ಎನ್ನುವವರಿಗೆ ಬಲವಂತವಾಗಿ ನೀಡುವುದನ್ನು ತಪ್ಪಿಸಿದಂತಾಗುತ್ತದೆ ಎಂಬುದು ಸರ್ಕಾರದ ನಿಲುವು. ಈ ರೀತಿ ಪುನರ್ ಪರಿಶೀಲನೆ ವೇಳೆ ಗಿವ್ ಅಪ್‌ಗೆ ಅವಕಾಶ ನೀಡಿದರೆ ಶೇ.5 ರಿಂದ ಶೇ.10 ರಷ್ಟು ಫಲಾನುಭವಿಗಳು ಹೊರಗುಳಿಯುವ ನಿರೀಕ್ಷೆ ಇದೆ.
ಗೃಹಲಕ್ಷ್ಮೀ ಯೋಜನೆಯಡಿ 1.15 ಕೋಟಿ ಫಲಾನುಭವಿಗಳಿಗೆ ಮಾಸಿಕ 2,000 ರು.ನಂತೆ ವರ್ಷಕ್ಕೆ 24,000 ಕೋಟಿ ರು. ವೆಚ್ಚ ಮಾಡಲಾಗುತ್ತಿದೆ. ಕನಿಷ್ಠ ಶೇ.5 ರಷ್ಟು ಮಂದಿ ಯೋಜನೆ ಬೇಡ ಎಂದರೂ 1,200 ಕೋಟಿ ರು. ಉಳಿತಾಯ ಆಗಲಿದೆ.
ಗೃಹಜ್ಯೋತಿ ಅಡಿಯೂ 13,000 ಕೋಟಿ ರು. ವೆಚ್ಚ ಆಗುತ್ತಿದ್ದು, 600-700 ಕೋಟಿ ರು. ಉಳಿಯಬಹುದು. ಜತೆಗೆ ಶಕ್ತಿ ಯೋಜನೆಯಡಿ ಸರ್ಕಾರಿ ನೌಕರರು ಸೇರಿ ಕೆಲವರಿಗೆ ಉಚಿತ ಪ್ರಯಾಣದಿಂದ ಕೊಕ್ ನೀಡಿದರೆ ಪುರುಷ ವಿದ್ಯಾರ್ಥಿಗಳಿಗೆ ಸೇರಿ ಅಗತ್ಯವಿರುವವರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಲು ನೆರವಾಗುತ್ತದೆ ಎಂಬುದು ಡಿ.ಕೆ. ಶಿವಕುಮಾರ್ ಅವರ ಚಿಂತನೆ ಎಂದು ಮೂಲಗಳು ತಿಳಿಸಿವೆ.
ಪಂಚ ಗ್ಯಾರಂಟಿಗಳನ್ನು ತ್ವರಿತವಾಗಿ ಜಾರಿಗೆ ತರುವ ಒತ್ತಡ ಸರ್ಕಾರದ ಮೇಲಿತ್ತು. ತರಾತುರಿಯಲ್ಲಿ ಯೋಜನೆ ಜಾರಿಗೆ ತರುವಾಗ ಲೋಪಗಳು ಆಗಿವೆ. ಇದರಿಂದಲೇ ಗೃಹಲಕ್ಷ್ಮೀ ಯೋಜನೆಯಲ್ಲಿ ವ್ಯಾಪಕ ದುರ್ಬಳಕೆ ಆಗಿದೆ. 100 ಕೋಟಿಗೂ ಹೆಚ್ಚು ಹಣ ಅನರ್ಹರ ಪಾಲಾಗಿದೆ.
ಇಂತಹ ಲೋಪಗಳು ಆಗದಂತೆ ಅರ್ಹರಿಗೆ ಮಾತ್ರ ಯೋಜನೆ ತಲುಪುವಂತೆ ಮಾಡಲು ಅರ್ಜಿಗಳ ಪುನರ್ ಪರಿಶೀಲನೆ, ಇ-ಕೆವೈಸಿ ಮಾಡಲು ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಲಾಗಿದೆ.
ಗೃಹಜ್ಯೋತಿಗೂ ಕಾಯಕಲ್ಪ:
ರಾಜ್ಯದಲ್ಲಿ ಸುಮಾರು 1.6 ಕೋಟಿ ವಿದ್ಯುತ್ ಗ್ರಾಹಕರು ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. ಕೆಲವರು ಗೃಹ ಬಳಕೆ ಹೆಸರಿನಲ್ಲಿ ವಾಣಿಜ್ಯಕ್ಕೂ ಗೃಹಜ್ಯೋತಿ ವಿದ್ಯುತ್ ಬಳಕೆ ಮಾಡುತ್ತಿದ್ದಾರೆ. ಇಂಥವುಗಳನ್ನು ಮನೆ-ಮನೆಗೂ ಭೇಟಿ ನೀಡಿ ಅಗತ್ಯ ದಾಖಲೆ ಪಡೆದು ಪರಿಶೀಲಿಸಲು ತೀರ್ಮಾನಿಸಲಾಗಿದೆ.
ಎಸ್‌ಐಆರ್ ಲಾಭ ಪಡೆಯಲು ರಾಜ್ಯ ಲೆಕ್ಕಾಚಾರ
ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ (ಎಸ್‌ಐಆರ್) ರಾಜ್ಯ ಕಾಂಗ್ರೆಸ್‌ಗೆ ಆತಂಕ ಸೃಷ್ಟಿಸಿದೆ. ಇದರ ನಡುವೆ ಎಸ್‌ಐಆರ್‌ನಿಂದ ಪರೋಕ್ಷ ಲಾಭ ಪಡೆಯಲು ಸರ್ಕಾರ ಸಜ್ಜಾಗಿದೆ. ರಾಜ್ಯದಲ್ಲಿ ಮತದಾರರ ಗುರುತಿನ ಚೀಟಿ ಹಾಗೂ ಮತದಾನದ ಹಕ್ಕಿದ್ದರೆ ಮಾತ್ರ ಗ್ಯಾರಂಟಿ ಯೋಜನೆ ನೀಡಲು ಸರ್ಕಾರ ಮುಂದಾಗಿದೆ. ಎಸ್‌ಐಆರ್‌ನಿಂದ ಬೆಂಗಳೂರು ಸೇರಿ ರಾಜ್ಯದಲ್ಲಿ ನೆಲೆಸಿರುವ ಉತ್ತರ ಭಾರತೀಯರು, ಆಂಧ್ರ, ತಮಿಳುನಾಡು, ತೆಲಂಗಾಣದವರು ಸ್ವಂತ ರಾಜ್ಯದಲ್ಲಿ ಮತ ಹಕ್ಕು ಉಳಿಸಿಕೊಂಡರೆ ಕರ್ನಾಟಕದಲ್ಲಿ ಮತದಾನದ ಹಕ್ಕು ಕಳೆದುಕೊಳ್ಳಲಿದ್ದಾರೆ. ಅಂಥವರನ್ನು ಸುಲಭವಾಗಿ ಗ್ಯಾರಂಟಿ ಯೋಜನೆಯಿಂದ ಕೈಬಿಡಲು ಮತದಾರರ ಗುರುತಿನ ಚೀಟಿ ಕಡ್ಡಾಯ ಮಾಡಲು ಸರ್ಕಾರ ಮುಂದಾಗಿದೆ. ಇದರಿಂದ ಗ್ಯಾರಂಟಿ ಹೊರೆ ಕಡಿಮೆಯಾಗಲಿದ್ದು, ತನ್ಮೂಲಕ ಎಸ್‌ಐಆರ್‌ನ ಪರೋಕ್ಷ ಲಾಭ ಪಡೆಯಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ