
ಬೆಂಗಳೂರು (ಜೂ.27) ತಡರಾತ್ರಿ ಹೊಟೆಲ್ ಬಾಗಿಲು ಮುಚ್ಚಿದ ಬಳಿಕ ನುಗ್ಗಿದ ಕಿಡಿಗೇಡಿಗಳು ಊಟ ನೀಡಿಲ್ಲ ಎಂದು ದಾಂಧಲೆ ನಡೆಸಲು ಮುಂದಾದ ಘಟನೆ ನಡೆದಿದೆ. ಹೊಟೆಲ್‌ಗೆ ಬೆಂಕಿ ಹಾಕುತ್ತೇವೆ ಎಂದು ಬೆದರಿಸಲಾಗಿದೆ. ಪರಿಣಾಮ ಹೊಟೆಲ್ ಮಾಲೀಕ ಸಹಾಯಕ್ಕಾಗಿ ಕೆಂಗೇರಿ ಇನ್ಸ್‌ಪೆಕ್ಟರ್ ಕರೆ ಮಾಡಿದರೆ, ಇನ್ಸ್‌ಪೆಕ್ಟರ್ ಕೆಂಡಾಮಂಡಲವಾದ ಘಟನೆ ನಡೆದಿದೆ. ಮಧ್ಯರಾತ್ರಿ ಕರೆ ಮಾಡುತ್ತೀಯಾ? ಕಾಮನ್ ಸೆನ್ಸ್ ಇಲ್ವಾ ಎಂದು ಇನ್ಸ್‌ಪೆಕ್ಟರ್ ಪ್ರಶ್ನಿಸಿದ ಘಟನೆ ಬೆಂಗಳೂರಲ್ಲಿ ನಡೆದಿದೆ. ಇನ್ಸ್‌ಪೆಕ್ಟರ್ ಕೆಂಡಾಮಂಡಲದ ಆಡಿಯೋ ಕ್ಲಿಪ್ ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಲಭ್ಯವಾಗಿದೆ.
ಜೂನ್ 26ರಂದು ರಾತ್ರಿ 11.30ರ ವೇಳೆಗೆ ಕೆಂಗೇರಿಯ ರಾಜರತ್ನ ಹೊಟೆಲ್ ಮುಚ್ಚಲಾಗಿತ್ತು. ಹೊಟೆಲ್ ಮುಚ್ಚಿ ಕ್ಲೀನಿಂಗ್ ಕೆಲಸ ನಡೆಯುತ್ತಿತ್ತು. ಈ ವೇಳೆ ಹೊಟೆಲ್‌ಗೆ ನುಗ್ಗಿದ ಕೆಲ ಕಿಡಿಗೇಡಿಗಳು ಊಟಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಆದರೆ ಅದಾಗಲೇ ಹೊಟೆಲ್ ಮುಚ್ಚಿ ಕಿಚಿನ್ ರೂಂ ಕ್ಲೀನಿಂಗ್ ಕೆಲಸದಲ್ಲಿದ್ದ ಕಾರಣ ಹೊಟೆಲ್ ಸಿಬ್ಬಂದಿಗಳು ಹೊಟೆಲ್ ಕ್ಲೋಸ್ ಆಗಿದೆ ಎಂದಿದ್ದಾರೆ. ಇದರಿಂದ ಕೆರಳಿದ ಕಿಡಿಗೇಡಿಗಳು, ಧಮ್ಕಿ ಹಾಕಿದ್ದಾರೆ. ಹೊಟೆಲ್‌ಗೆ ಬೆಂಕಿ ಹಾಕುತ್ತೇವೆ, ನಾಳೆಯಿಂದ ಹೊಟೆಲ್ ನಡೆಸಲು ಬಿಡುವುದಿಲ್ಲ ಎಂದು ಬೆದರಿಸಿದ್ದಾರೆ.
ಕಿಡಿಗೇಡಿಗಳ ಬೆದರಿಕೆ ತೀವ್ರಗೊಳ್ಳುತ್ತಿದ್ದಂತೆ ಹೊಟೆಲ್ ಮಾಲೀಕ ಮಧುಕಿರಣ್ ನೇರವಾಗಿ 112ಕ್ಕೆ ಕರೆ ಮಾಡಿದ್ದಾನೆ. ಕೆಲ ಹೊತ್ತಲ್ಲಿ ಹೊಯ್ಸಳ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಪೊಲೀಸರು ಆಗಮಿಸಿದರೂ ಕಿಡಿಗೇಡಿಗಳು ಗಲಾಟೆ ಮುಂದುವರಿಸಿದ್ದಾರೆ. ಪೊಲೀಸರು ಕೆಲ ಕಿಡಿಗೇಡಿಗಳನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಕೆಂಗೇರಿ ಪೊಲೀಸ್ ಠಾಣಗೆ ತೆರಳಿದ ಮಾಲೀಕ ಮಧುಕಿರಣ್, ದೂರು ನೀಡಲು ಮುಂದಾಗಿದ್ದಾರೆ. ಇದೇ ವೇಳೆ ಕೆಂಗೇರಿ ಇನ್ಸ್‌ಪೆಕ್ಟರ್ ಜಗದೀಶ್‌ಗೆ ಕರೆ ಮಾಡಿದ ಹೊಟೆಲ್ ಮಾಲೀಕ ಮಧುಕಿರಣ್ ವಿರುದ್ಧ ಇನ್ಸ್‌ಪೇಕ್ಟರ್ ಜಗದೀಶ್ ಕೆಂಡಾಮಂಡಲರಾಗಿದ್ದಾರೆ. ಮಧ್ಯರಾತ್ರಿ ಕರೆ ಮಾಡುತ್ತೀಯಾ, ಕಾಮನ್ ಸೆನ್ಸ್ ಇಲ್ವಾ ಎಂದು ಬೈಗುಳದ ಸುರಿಮಳೆಗೈದಿದ್ದಾರೆ.
ಪೊಲೀಸರು ಸರಿಯಾಗಿ ದೂರು ದಾಖಲಿಸಿಲ್ಲ, ಎಲ್ಲಾ ಆರೋಪಿಗಳನ್ನು ಬಿಟ್ಟುಕಳುಹಿಸಿದ್ದಾರೆ. ಪೊಲೀಸರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಹೊಟೆಲ್ ಮಾಲೀಕ ಮಧುಕಿರಣ್ ಆರೋಪಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ