ರಾಜ್ಯದಲ್ಲೀಗ ಬೆತ್ತಲೆ ಸೇವೆ ಸಂಪೂರ್ಣ ಬಂದ್: ಸಿದ್ದು ತಂದ ಕಾಯ್ದೆ ಜಾರಿಗೆ!

By Kannadaprabha NewsFirst Published Jan 23, 2020, 8:06 AM IST
Highlights

ಸಿದ್ದರಾಮಯ್ಯ ತಂದ ಮೌಢ್ಯ ಪ್ರತಿಬಂಧಕ ಕಾಯ್ದೆ ಈಗ ಜಾರಿಗೆ| ರಾಜ್ಯದಲ್ಲೀಗ ಬೆತ್ತಲೆ ಸೇವೆ ಸಂಪೂರ್ಣ ನಿಷಿದ್ಧ| ಮುಟ್ಟಾದವರನ್ನು ಊರ ಹೊರಗಿಡುವುದಕ್ಕೂ ನಿಷೇಧ

ಬೆಂಗಳೂರು[ಜ.23]: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಲು ನಿರ್ಧರಿಸಲಾಗಿದ್ದ ಮೌಢ್ಯ ಪ್ರತಿಬಂಧಕ ಕಾಯ್ದೆ ಇದೀಗ ಅಧಿಕೃತವಾಗಿ ಜಾರಿಗೊಂಡಿದ್ದು, ಆದೇಶ ಹೊರಬಿದ್ದಿದೆ.

ಈ ತಿಂಗಳ 4ರಿಂದಲೇ ಜಾರಿಗೆ ಬಂದಿದೆ. ಕಾಯ್ದೆ ಜಾರಿಯಿಂದಾಗಿ ಬೆತ್ತಲೆ ಸೇವೆಗೆ ಸಂಪೂರ್ಣ ನಿಷೇಧ ಹೇರಿದಂತಾಗಿದೆ. ಮಡೆಸ್ನಾನ, ದೇವರ ಹೆಸರಲ್ಲಿ ಹಿಂಸೆಗೆ ಅವಕಾಶ ಇಲ್ಲ. ಋುತಿಮತಿಯಾದಾಗ, ಗರ್ಭಿಣಿಯಾದಾಗ ಊರ ಹೊರಗಿಡುವ ಪದ್ಧತಿ, ವಶೀಕರಣ, ವಾಮಾಚಾರದಂತಹ ಪದ್ಧತಿಯನ್ನು ಕಾಯ್ದೆಯಲ್ಲಿ ನಿಷೇಧ ಮಾಡಲಾಗಿದೆ. ಜ್ಯೋತಿಷ್ಯ, ವಾಸ್ತುಶಾಸ್ತ್ರಕ್ಕೆ ಮಸೂದೆಯಿಂದ ಯಾವುದೇ ಸಮಸ್ಯೆಯಾಗುವುದಿಲ್ಲ ಎನ್ನಲಾಗಿದೆ.

ಸಮಾಜದಲ್ಲಿರುವ ಮೌಢ್ಯ ಮತ್ತು ಕಂದಾಚಾರ ನಿಗ್ರಹಕ್ಕೆ ಮೌಢ್ಯ ಪ್ರತಿಬಂಧಕ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಮೌಢ್ಯ ಪ್ರತಿಬಂಧಕ ಕಾಯ್ದೆಯು ತೀವ್ರ ಚರ್ಚೆಗೀಡಾಗಿ ವಿವಾದವನ್ನುಂಟು ಮಾಡಿತ್ತು. ಈ ಬಗ್ಗೆ ಶೀಘ್ರದಲ್ಲಿಯೇ ಕರ್ನಾಟಕ ರಾಜ್ಯಪತ್ರ ಹೊರಡಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಮಹಿಳೆಯರಿಗೆ ಬಿಜೆಪಿ ಕಡೆ ಒಲವು ಜಾಸ್ತಿ: ಮಾಜಿ ಸಿಎಂ

ಮಹಾರಾಷ್ಟ್ರ ರಾಜ್ಯದ ಮಾದರಿಯಲ್ಲಿ ಕಾಯ್ದೆಯನ್ನು ಜಾರಿಗೆ ತರಲು ಕಾಂಗ್ರೆಸ್‌ ಮುಂದಾಗಿತ್ತು. ಅದರಂತೆಯೇ ಜಾರಿಗೊಳಿಸಲಾಗಿದೆ. ಮೂಢನಂಬಿಕೆ, ಮಡೆಸ್ನಾನ ನಿಷೇಧ ಮಾಡಬೇಕು ಎಂದು ಪ್ರಗತಿಪರ ಸಂಘಟನೆಗಳು ತೀವ್ರ ಪ್ರತಿಭಟನೆಗಳನ್ನು ನಡೆಸಿದ್ದವು. ಸರ್ಕಾರದ ಮೇಲೆ ಒತ್ತಡ ಸಹ ಹಾಕಿದ್ದವು. ಹೀಗಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮ್ಯಯ ಅವರು ಮೌಢ್ಯ ಪ್ರತಿಬಂಧಕ ಕಾಯ್ದೆಯನ್ನು ಜಾರಿಗೊಳಿಸುವ ಸಂಬಂಧ ಸಾಧಕ-ಬಾಧಕಗಳ ಅಧ್ಯಯನ ನಡೆಸಲು ಮಾಜಿ ಸಚಿವ ರಮೇಶ್‌ ಕುಮಾರ್‌ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಸಮಿತಿ ನೀಡಿದ ವರದಿ ಆಧಾರದ ಮೇಲೆ ಮೌಢ್ಯ ಪ್ರತಿಬಂಧಕ ಕಾಯ್ದೆಯನ್ನು ಜಾರಿಗೊಳಿಸಲು ವಿಧಾನಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆದುಕೊಳ್ಳಲಾಗಿತ್ತು.

ಮುಸ್ಲಿಂ ಸಮುದಾಯದಲ್ಲಿಯೂ ಕೆಲವು ಮೂಢನಂಬಿಕೆಗಳಿದ್ದು, ಅವುಗಳಿಗೂ ನಿಷೇಧ ಹೇರಬೇಕು ಎಂದು ಬಿಜೆಪಿ ಒತ್ತಾಯ ಮಾಡಿತ್ತು. ಆದರೆ, ಕಾಂಗ್ರೆಸ್‌ ಸರ್ಕಾರವು ಅದನ್ನು ಸಮರ್ಥಿಸಿಕೊಂಡಿತ್ತು. ಇದೀಗ ಕಾಂಗ್ರೆಸ್‌ ಸರ್ಕಾರದ ಉದ್ದೇಶಿತ ಮೌಢ್ಯ ಪ್ರತಿಬಂಧಕ ಕಾಯ್ದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೊಂಡಂತಾಗಿದೆ.

ಚಾಮರಾಜನಗರ: ಬೇವಿನ ಮರದಲ್ಲಿ ಹಾಲಿನ ರೂಪದ ದ್ರವ!

click me!