ಖಾಸಗಿ ಕಾರಿನ ಮೇಲೆ ಶಾಸಕರು ಹುದ್ದೆ, ಲಾಂಛನ ಬರೆಸುವಂತಿಲ್ಲ!

By Kannadaprabha NewsFirst Published Jan 23, 2020, 7:52 AM IST
Highlights

ಖಾಸಗಿ ಕಾರಿನ ಮೇಲೆ ಶಾಸಕರು ಹುದ್ದೆ, ಲಾಂಛನ ಬರೆಸುವಂತಿಲ್ಲ| ಕ್ರಮ ಕೈಗೊಳ್ಳುವಂತೆ ಸ್ಪೀಕರ್‌ಗೆ ಹೈಕೋರ್ಟ್‌ ಮನವಿ| ಹಿಂದಿನ ಆದೇಶ ಪಾಲನೆಯಾಗದಿರುವುದಕ್ಕೆ ಬೇಸರ

ಬೆಂಗಳೂರು[ಜ.23]: ಶಾಸಕರು ತಮ್ಮ ಖಾಸಗಿ ವಾಹನಗಳ ಮೇಲೆ ಹುದ್ದೆ ಹಾಗೂ ಸರ್ಕಾರಿ ಲಾಂಛನ, ಚಿಹ್ನೆಯನ್ನು ಒಳಗೊಂಡ ನಾಮಫಲಕ ಅಳವಡಿಸದಂತೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ವಿಧಾನ ಸಭಾಧ್ಯಕ್ಷರಿಗೆ ಹೈಕೋರ್ಟ್‌ ಬುಧವಾರ ಮನವಿ ಮಾಡಿದೆ.

ಆನಂದ್‌ ಶೆಟ್ಟಿಎಂಬುವರು ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್‌.ದೇವದಾಸ್‌ ಅವರಿದ್ದ ನ್ಯಾಯಪೀಠ ಈ ಮನವಿ ಮಾಡಿದೆ.

ಬುಧವಾರ ಅರ್ಜಿಯ ವಿಚಾರಣೆ ವೇಳೆ, ಈ ಹಿಂದೆ ಹೊರಡಿಸಿದ್ದ ಆದೇಶ ಪಾಲನೆಯಾಗದಿರುವುದು ಮತ್ತು ಜನಪ್ರತಿನಿಧಿಗಳು ತಮ್ಮ ಖಾಸಗಿ ವಾಹನಗಳ ಮೇಲೆ ಹೆಸರು, ಹುದ್ದೆ, ಸರ್ಕಾರಿ ಲಾಂಛನ, ಚಿಹ್ನೆ ಅಳವಡಿಸಿಕೊಂಡಿರುವುದು ಈಗಲೂ ಕಂಡುಬರುತ್ತಿರುವುದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿತು.

ಯಾವ ಅಧಿಕಾರ ಬಳಸಿ ಜೋಪಡಿ ನೆಲಸಮ ಮಾಡಿದ್ರಿ?

ಶಾಸಕರು ತಮ್ಮ ಖಾಸಗಿ ವಾಹನಗಳ ಮೇಲೆ ಹೆಸರು, ಹುದ್ದೆ, ಸರ್ಕಾರಿ ಲಾಂಛನ ಹಾಗೂ ಚಿಹ್ನೆ ಅಳವಡಿಸಿಕೊಳ್ಳುವುದನ್ನು ತಡೆಯಲು ಅಗತ್ಯ ಕ್ರಮ ಜರುಗಿಸಬೇಕು ಎಂದು ವಿಧಾನಸಭೆ ಸ್ಪೀಕರ್‌ ಅವರಿಗೆ ಹೈಕೋರ್ಟ್‌ ಮನವಿ ಮಾಡಿತು.

ಶಾಸಕರು ಮಾತ್ರವಲ್ಲದೆ ಅಧಿಕಾರಿಗಳು ಸಹ ಖಾಸಗಿ ವಾಹನದಲ್ಲಿ ತಮ್ಮ ಹುದ್ದೆ, ಪದನಾಮ ಬಳಸಬಾರದು. ಈ ಕುರಿತು ಅರಿವು ಮೂಡಿಸಲು ಸರ್ಕಾರ ಹಾಗೂ ಸಂಬಂಧಪಟ್ಟಇಲಾಖೆಗಳು ಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ವ್ಯಾಪಕ ಪ್ರಕಟಣೆ ನೀಡಬೇಕು. ಅಲ್ಲದೆ, ಈ ಬಗ್ಗೆ ದೂರುಗಳನ್ನು ಸಲ್ಲಿಸಲು ವಾಟ್ಸ್‌ಆ್ಯಪ್‌ ನಂಬರ್‌ ಸಹ ನೀಡಬೇಕು ಎಂದು ನ್ಯಾಯಪೀಠ ಇದೇ ವೇಳೆ ನಿರ್ದೇಶನ ನೀಡಿದೆ.

ಜ.3ರಂದು ಆದೇಶ ನೀಡಿದ್ದ ಹೈಕೋರ್ಟ್‌:

ಗ್ರಾ.ಪಂ, ತಾ.ಪಂ, ಜಿ.ಪಂ, ನಗರ ಪಾಲಿಕೆ, ವಿಧಾನಸಭೆ ಮತ್ತು ಲೋಕಸಭೆಯ ಹಾಲಿ ಹಾಗೂ ಮಾಜಿ ಸದಸ್ಯರು ತಮ್ಮ ಖಾಸಗಿ ವಾಹನಗಳ ಮೇಲೆ ನೋಂದಣಿ ಸಂಖ್ಯೆ ಹೊರತುಪಡಿಸಿ, ಹೆಸರು, ಹುದ್ದೆ ಹಾಗೂ ಸರ್ಕಾರಿ ಲಾಂಛನ, ಚಿಹ್ನೆ ಸೇರಿದಂತೆ ಇನ್ನಿತರ ಯಾವುದೇ ಮಾಹಿತಿಗಳನ್ನು ಒಳಗೊಂಡ ನಾಮಫಲಕ ಅಳವಡಿಸಬಾರದು.

ಬಿಬಿಎಂಪಿ ವಿರುದ್ಧ ಹೈಕೋರ್ಟ್ ಕೆಂಡಾಮಂಡಲ!

ರಾಜ್ಯ ಮತ್ತು ಕೇಂದ್ರ ಸರ್ಕಾರಿ ಸಂಸ್ಥೆಗಳು, ಅರೆನ್ಯಾಯಿಕ ಸಂಸ್ಥೆಗಳ ಹೆಸರು, ಲಾಂಛನ-ಚಿಹ್ನೆಗಳನ್ನು ಹೋಲುವಂತಹ ಫಲಕಗಳನ್ನು ಖಾಸಗಿ ಸಂಘಟನೆ, ಸಂಘ-ಸಂಸ್ಥೆ, ಕಂಪನಿಗಳ ವಾಹನಗಳ ಮೇಲೆಯೂ ಅಳವಡಿಸಬಾರದು. ಈ ನಿಯಮ ಉಲ್ಲಂಘಿಸಿದ ವಾಹನಗಳ ಮಾಲಿಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಹಾಗೂ ಅಂತಹ ಫಲಕಗಳನ್ನು ತೆರವುಗೊಳಿಸಿ ವರದಿ ಸಲ್ಲಿಸಬೇಕು ಎಂದು ಹೈಕೋರ್ಟ್‌ ಜ.3ರಂದು ಸರ್ಕಾರಕ್ಕೆ ನಿರ್ದೇಶಿಸಿತ್ತು.

click me!