ಗ್ಯಾರಂಟಿ ಯೋಜನೆಯಿಂದ ಖಜಾನೆ ಖಾಲಿ ಆಯ್ತಾ? ಕೇವಲ ಐದು ವರ್ಷದ ಹಿಂದಷ್ಟೇ ಸ್ಥಾಪನೆಯಾಗಿದ್ದ ಮಂಡ್ಯ ವಿವಿ ಮುಚ್ಚಲು ಮುಂದಾದ ಸರ್ಕಾರ?

Published : Feb 15, 2025, 10:48 AM ISTUpdated : Feb 15, 2025, 10:50 AM IST
ಗ್ಯಾರಂಟಿ ಯೋಜನೆಯಿಂದ ಖಜಾನೆ ಖಾಲಿ ಆಯ್ತಾ? ಕೇವಲ ಐದು ವರ್ಷದ ಹಿಂದಷ್ಟೇ ಸ್ಥಾಪನೆಯಾಗಿದ್ದ ಮಂಡ್ಯ ವಿವಿ ಮುಚ್ಚಲು ಮುಂದಾದ ಸರ್ಕಾರ?

ಸಾರಾಂಶ

ಖಜಾನೆ ಖಾಲಿ ಇರುವುದರಿಂದ ಮಂಡ್ಯ ವಿಶ್ವವಿದ್ಯಾಲಯವನ್ನು ಮೈಸೂರು ವಿವಿಯೊಂದಿಗೆ ವಿಲೀನಗೊಳಿಸಲು ರಾಜ್ಯ ಸರ್ಕಾರ ಚಿಂತಿಸುತ್ತಿದೆ. ಈ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಹೋರಾಟದ ಎಚ್ಚರಿಕೆ ನೀಡಲಾಗಿದೆ.

ಮಂಡ್ಯ  (ಫೆ.15): ಗ್ಯಾರೆಂಟಿ ಯೋಜನೆಯಿಂದ ಖಜಾನೆ ಖಾಲಿಯಾಗಿದೆ. ಸಿದ್ದರಾಮಯ್ಯ ನೇತೃತ್ವದ ಈ ಸರ್ಕಾರ ನೌಕರರಿಗೆ ವೇತನ ಕೊಡಲು ದುಡ್ಡಿಲ್ಲದ ದರಿದ್ರ ಸರ್ಕಾರವಾಗಿ ಎಂಬ ವಿಪಕ್ಷ ನಾಯಕ ಆರ್ ಅಶೋಕ್ ಆರೋಪ ನಿಜವೆನಿಸುವಂಥ ಬೆಳವಣಿಗೆಗಳು ನಡೆಯುತ್ತಿವೆ. 

ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿರುವುದರಿಂದ ಅಭಿವೃದ್ಧಿಗಷ್ಟೇ ಅಲ್ಲ, ವಿಶ್ವವಿದ್ಯಾನಿಲಯ ನಿರ್ವಹಣೆಗೂ ದುಡ್ಡಿಲ್ಲದಂತಾಗಿದೆ. ಇದೀಗ ಹಣಕಾಸಿನ ಕೊರತೆ ನೆಪವೊಡ್ಡಿ ಮಂಡ್ಯ ವಿವಿಗೆ ಬೀಗ ಜಡಿಯಲು ಕಾಂಗ್ರೆಸ್ ಸರ್ಕಾರ ತಯಾರಿ ನಡೆಸಿದೆ. ಮಂಡ್ಯ ವಿವಿಯನ್ನು ಮೈಸೂರು ವಿವಿಯೊಂದಿಗೆ ವಿಲೀನಗೊಳಿಸಲು ಮುಂದಾಗಿರುವ ಸರ್ಕಾರದ ನಡೆಗೆ ಮಂಡ್ಯದಲ್ಲಿ ಭಾರೀ ಜನಾಕ್ರೋಶ ವ್ಯಕ್ತವಾಗಿದೆ. ಮಂಡ್ಯ ವಿವಿ ವಿಲೀನ ನಿರ್ಧಾರ ವಿರೋಧಿಸಿ ಸಾಹಿತಿಗಳು, ಸಾರ್ವಜನಿಕರು, ಜನಪ್ರತಿನಿಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

5 ವರ್ಷದ ಹಿಂದೆ ಮಂಡ್ಯ ವಿವಿಯಾಗಿ ಬಿಜೆಪಿ ಸರ್ಕಾರ ಮೇಲ್ದರ್ಗೇರಿಸಿತ್ತು:

ಮೈಸೂರು ವಿವಿಯೊಂದಿಗೆ ವಿಲಿನಗೊಳಿಸಲು ಮುಂದಾಗಿರುವ ಮಂಡ್ಯ ವಿವಿಯನ್ನ ಕಳೆದ ಐದು ವರ್ಷಗಳ ಹಿಂದೆಯಷ್ಟೆ ಬಿಜೆಪಿ ಸರ್ಕಾರ ಮಂಡ್ಯ ಜಿಲ್ಲೆಯ 47 ಕಾಲೇಜುಗಳನ್ನ ಮಂಡ್ಯ ವಿವಿಗೆ ಸೇರ್ಪಡೆ ಮಾಡಿ ಮೇಲ್ದರ್ಜೆಗೇರಿಸಿತ್ತು. ಉನ್ನತ ಶಿಕ್ಷಣ ಅಭಿವೃದ್ಧಿಪಡಿಸುವ ದೃಷ್ಟಿಯಿಂದ ವಿವಿ ಸ್ಥಾಪನೆ ಮಾಡಿದ್ದ ಅಂದಿನ ಬಿಜೆಪಿ ಸರ್ಕಾರ. ಇದೀಗ ಬಿಜೆಪಿ ಸರ್ಕಾರದ ಕೊಡುಗೆಯನ್ನು ಕಸಿಯಲು ಕಾಂಗ್ರೆಸ್ ಸರ್ಕಾರ ಪ್ಲಾನ್ ಮಾಡಿದೆಯಾ ಎಂಬ ಮಾತು ಕೇಳಿಬಂದಿದೆ. ಮಂಡ್ಯ ವಿವಿ ಸ್ಥಾಪನೆಯಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಿತ್ತು. ಆದರೆ ಇದೀಗ ಮೈಸೂರು ವಿವಿಯೊಂದಿಗೆ ವಿಲೀನಗೊಳಿಸಿದರೆ ವಿದ್ಯಾರ್ಥಿಗಳು ಮೈಸೂರಿಗೆ ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು. ಹೀಗಾಗಿ ಮಂಡ್ಯ ವಿಶ್ವವಿದ್ಯಾನಿಲಯದ ಘನತೆಯನ್ನ ಹಾಳುಮಾಡುತ್ತಿದೆ ಎಂದು ಆರೋಪಿಸಿ ವಿವಿಧ ಸಂಘಟನೆಗಳು ರಾಜ್ಯ ಸರ್ಕಾರದ ವಿರುದ್ಧ ಹೋರಾಟದ ಎಚ್ಚರಿಕೆ ನೀಡಿವೆ.

ಇದನ್ನೂ ಓದಿ: ಏನು ಗ್ಯಾರಂಟಿ ನಿಲ್ಲಿಸಬೇಕಂತಾ? Chaluvarayaswamy ಟಾಂಗ್! | Mandya News | Suvarna News

ಮೈಸೂರು ವಿವಿ ಘನತೆ ಉಳಿಸುವ ಸಲುವಾಗಿ ವಿಲೀನ: ಕೃಷಿ ಸಚಿವ

ಮೈಸೂರು ವಿಶ್ವವಿದ್ಯಾಲಯಕ್ಕಿರುವ ಘನತೆ- ಗೌರವಗಳನ್ನು ಉಳಿಸುವ ಸಲುವಾಗಿ ಮಂಡ್ಯ ವಿಶ್ವವಿದ್ಯಾಲಯವನ್ನು ಅದರೊಂದಿಗೆ ವಿಲೀನಗೊಳಿಸುವುದಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಸಮರ್ಥಿಸಿಕೊಂಡಿರುವ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು, ಮೈಸೂರು ವಿಶ್ವವಿದ್ಯಾಲಯ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಶೈಕ್ಷಣಿಕ ಗುಣಮಟ್ಟ, ಪದವಿ ಪ್ರಮಾಣಪತ್ರಕ್ಕೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಳ್ಳೆಯ ಹೆಸರಿದೆ. ಮಂಡ್ಯ ಜಿಲ್ಲೆಯಲ್ಲಿ ವಿಶ್ವವಿದ್ಯಾಲಯ ಮಾಡುವುದರಿಂದ ಮೈಸೂರು ವಿಶ್ವವಿದ್ಯಾಲಯಯದ ಗಂಭೀರತೆ ಕಡಿಮೆಯಾಗಿದೆ ಎಂಬುದು ಹಲವರ ಅಭಿಪ್ರಾಯವಾಗಿತ್ತು. ಅದನ್ನು ಮನಗಂಡು ವಿಲೀನ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ಹಣಕಾಸಿನ ಕೊರತೆ ಒಪ್ಪಿಕೊಂಡ ಸಚಿವ:

ಮಂಡ್ಯ ವಿವಿಯನ್ನು ಮೈಸೂರು ವಿವಿ ಜೊತೆ ವಿಲೀನಗೊಳಿಸುವುದಕ್ಕೆ ಹಣಕಾಸಿನ ಕೊರತೆಯೂ ಮತ್ತೊಂದು ಕಾರಣ. ಮಂಡ್ಯ ವಿಶ್ವವಿದ್ಯಾಲಯ ಸ್ಥಾಪನೆಯಾಗಿ ಐದು ವರ್ಷ ಕಳೆದರೂ ಪರಿಪೂರ್ಣ ವಿಶ್ವವಿದ್ಯಾಲಯವಾಗಲು ಸಾಧ್ಯವಾಗಿಲ್ಲ. ಯುಜಿಸಿಯಿಂದ ಅನುದಾನ ಕೊಡುತ್ತಿಲ್ಲ. ರಾಜ್ಯದಿಂದ ಅನುದಾನಕ್ಕೆ ಅವಕಾಶವಿಲ್ಲ. ಇವೆಲ್ಲಾ ತೊಂದರೆಗಳಿರುವುದರಿಂದ ಮೈಸೂರು ವಿಶ್ವವಿದ್ಯಾಲಯದೊಂದಿಗೆ ವಿಲೀನಗೊಳಿಸುವುದೇ ಉತ್ತಮ ಎಂಬ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಿದರು.

ಮಂಡ್ಯಕ್ಕೆ ಐಐಟಿ ಸಿಗಲಿಲ್ಲ:

ಕೃಷಿ ವಿಶ್ವವಿದ್ಯಾಲಯ ಮಂಡ್ಯಕ್ಕೆ ಬರುವುದನ್ನು ಜೆಡಿಎಸ್‌ನವರು ಒಪ್ಪಲು ಹೇಗೆ ಸಾಧ್ಯ. ರೇವಣ್ಣ ಅವರಿಗೆ ಹಾಸನಕ್ಕೆ ಕೃಷಿ ವಿವಿ ಬರಬೇಕೆಂಬ ಆಸೆ ಇತ್ತು. ಅದು ಸಾಧ್ಯವಾಗಲಿಲ್ಲ. ಮಂಡ್ಯಕ್ಕೆ ಬಂದಿರುವುದಕ್ಕೆ ಅವರಿಗೆ ಸಹಿಸಲಾಗುತ್ತಿಲ್ಲ. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ವೇಳೆ ಐಐಟಿ ಮಂಡ್ಯಕ್ಕೆ ಬರಬೇಕಿತ್ತು. ಕೆಆರ್‌ಎಸ್‌ನಲ್ಲಿ ತೆರೆಯುವುದಕ್ಕೆ ತಾಂತ್ರಿಕ ಸಮಿತಿಯೂ ವರದಿ ಕೊಟ್ಟಿತ್ತು. ಹಾಸನ- ಮಂಡ್ಯ ಕಿತ್ತಾಟದಲ್ಲಿ ರಾಯಚೂರಿಗೆ ಹೋಯಿತು. ಜೆಡಿಎಸ್‌ನವರಿಗೆ ಮಂಡ್ಯ ಜನರ ವೋಟು ಬೇಕೇ ಹೊರತು ಅಭಿವೃದ್ಧಿ ಬೇಕಿಲ್ಲ ಎಂದು ಕಟುವಾಗಿ ಹೇಳಿದರು.

ಇದನ್ನೂ ಓದಿ: ನವೆಂಬರ್ 15 ರೊಳಗೆ ಸಿಎಂ ಬದಲಾವಣೆ, ಅನಂತರ ಕಾಂಗ್ರೆಸ್‌ನಲ್ಲಿ ಜ್ವಾಲಾಮುಖಿ ಸ್ಫೋಟ: ಭವಿಷ್ಯ ನುಡಿದ ಆರ್ ಅಶೋಕ್!

ಮಂಡ್ಯಕ್ಕೆ ಕೃಷಿ ವಿವಿ ಆಗುವುದು ರೇವಣ್ಣನವರಿಗೆ ಇಷ್ಟ ಇಲ್ಲ. ಹೋರಾಟ ಮಾಡಿದರೆ ಮಾಡಲಿ, ಬೇಡ ಎಂದವರು ಯಾರು. ಸರ್ಕಾರದ ತೀರ್ಮಾನ ಅಂತಿಮವಲ್ಲವೇ ಎಂದು ತಿಳಿಸಿದರು.

ಉಪ ಸಮಿತಿ ರಚನೆ:

ಸಮಗ್ರ ಕೃಷಿ ವಿಶ್ವವಿದ್ಯಾಲಯ ಮಂಡ್ಯಕ್ಕೆ ಬೇಡ ಎಂದು ಯಾರೂ ಹೇಳಿಲ್ಲ. ಬೆಂಗಳೂರಿನ ಜಿಕೆವಿಕೆಯನ್ನು ಸಮಗ್ರ ವಿಶ್ವವಿದ್ಯಾಲಯ ಮಾಡಬೇಕು ಎಂಬುದು ಹಲವರ ಅಭಿಪ್ರಾಯವಾಗಿದೆ. ಕೃಷಿ ವಿವಿಗೆ ಸಂಬಂಧಿಸಿದಂತೆ ಯಾವುದನ್ನು ಯಾವುದಕ್ಕೆ ಸೇರಿಸಬೇಕು ಎಂಬ ಬಗ್ಗೆ ಮುಖ್ಯಮಂತ್ರಿಯವರು ಉಪ ಸಮಿತಿ ರಚಿಸಿ ನಂತರ ಕ್ಯಾಬಿನೇಟ್‌ನಲ್ಲಿ ತೀರ್ಮಾನಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Farmer wins battle: ರೈತನಿಗೆ ಪರಿಹಾರ ನೀಡದ ಶಿವಮೊಗ್ಗ ಡಿಸಿ ಕಚೇರಿ, ಕಾರು ಜಪ್ತಿಗೆ ಕೋರ್ಟ್ ಆದೇಶ!
'ನಿಮಗೆ ಧಮ್ ಇದ್ರೆ..; ದ್ವೇಷ ಭಾಷಣ ಮಸೂದೆ ಜಾರಿಗೆ ಮುಂದಾಗಿರೋ ಕಾಂಗ್ರೆಸ್ ಸರ್ಕಾರಕ್ಕೆ ಸಿಟಿ ರವಿ ನೇರ ಸವಾಲು!