ರಾಜ್ಯದಲ್ಲಿ ಮದ್ಯ ಇನ್ನಷ್ಟು ದುಬಾರಿ?

By Web DeskFirst Published Feb 6, 2019, 8:35 AM IST
Highlights

ರೈತರ ಸಾಲಮನ್ನಾಕ್ಕಾಗಿ ಮತ್ತೆ ಮದ್ಯ ಬೆಲೆ ಏರಿಕೆ| ಬಜೆಟ್‌ನಲ್ಲಿ ಅಬಕಾರಿ ಸುಂಕ ಶೇ.1 ಅಥವಾ ಶೇ.2ರಷ್ಟು ಏರಿಕೆ: ಮೂಲಗಳು| ಇನ್ನಷ್ಟು ದುಬಾರಿಯಾಗಲಿದೆ ಮದ್ಯ: ಕುಡುಕರ ಜೇಬಿಗೆ ಕತ್ತರಿ

ಬೆಂಗಳೂರು[ಫೆ.06]: ಮದ್ಯ ಪ್ರಿಯರಿಗೆ ಬಜೆಟ್‌ನಲ್ಲಿ ಕಿಕ್ಕೇರಲಿದ್ದು, ಅಬಕಾರಿ ಸುಂಕ ಹೆಚ್ಚಳ ಮಾಡುವ ಮೂಲಕ ಮದ್ಯ ದುಬಾರಿಯಾಗುವ ಸಾಧ್ಯತೆ ಇದೆ.

ರಾಜ್ಯಕ್ಕೆ ಆದಾಯ ತಂದುಕೊಡುವ ಮೂಲಗಳ ಪೈಕಿ ಅಬಕಾರಿ ಇಲಾಖೆಯು ಪ್ರಮುಖವಾಗಿದೆ. ಸಾಲಮನ್ನಾ ಯೋಜನೆಗೆ ಹಣದೂಗಿಸಬೇಕಾದ ಹಿನ್ನೆಲೆಯಲ್ಲಿ ಮದ್ಯದ ಬೆಲೆ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ. ಮದ್ಯವು ರಾಜ್ಯದ ಬೊಕ್ಕಸಕ್ಕೆ ಆದಾಯದ ಮೂಲ ಆಗಿದೆ. ಹೀಗಾಗಿ ಕಳೆದ ಬಾರಿಗಿಂತ ಈ ಬಾರಿ ಶೇ.1 ಅಥವಾ ಶೇ.2ರಷ್ಟು ಹೆಚ್ಚಳ ಮಾಡುವ ಉದ್ದೇಶ ಹೊಂದಲಾಗಿದೆ. ಅಬಕಾರಿ ಸುಂಕವು ಶೇ.5ರಷ್ಟುಆಗುವ ಸಂಭವ ಇದೆ ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಂಡಿಸಿದ ಕಳೆದ ಸಾಲಿನ ಬಜೆಟ್‌ನಲ್ಲಿ 19,750 ಕೋಟಿ ರು.ನಷ್ಟುಗುರಿ ನೀಡಲಾಗಿತ್ತು. ಅಬಕಾರಿ ಇಲಾಖೆ ಅಧಿಕಾರಿಗಳು ಫೆ.4ಕ್ಕೆ 17 ಸಾವಿರ ಕೋಟಿ ರು.ನಷ್ಟು ಸಂಗ್ರಹಿಸಿದ್ದಾರೆ. ಇನ್ನುಳಿದ ಮೊತ್ತವನ್ನು ಆರ್ಥಿಕ ವರ್ಷ ಮುಕ್ತಾಯದ ವೇಳೆ ಕ್ರೋಢೀಕರಿಸುವ ವಿಶ್ವಾಸವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಮುಖ್ಯಮಂತ್ರಿ ಕುಮಾರಸ್ವಾಮಿ ಆಶ್ವಾಸನೆ ನೀಡಿದ್ದಾರೆ. ಸಾಲಮನ್ನಾ ಯೋಜನೆಗೆ ಹಣ ಕ್ರೋಢೀಕರಿಸಬೇಕಿರುವ ಕಾರಣ ರಾಜ್ಯದ ಬೊಕ್ಕಸಕ್ಕೆ ಆದಾಯ ಕೊಡುವ ಮೂಲಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಸಾಲಮನ್ನಾ ಯೋಜನೆಗೆ ಸಂಬಂಧಪಟ್ಟಂತೆ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಪಾವತಿಸಬೇಕಾದ ಮೊತ್ತವನ್ನು ಒಂದೇ ಕಂತಿನಲ್ಲಿ ನೀಡುವ ಬಗ್ಗೆ ಬಜೆಟ್‌ನಲ್ಲಿ ಘೋಷಣೆ ಮಾಡುವ ಆಶ್ವಾಸನೆಯನ್ನು ಕುಮಾರಸ್ವಾಮಿ ನೀಡಿದ್ದರು. ನೀಡಿದ ಭರವಸೆಯಂತೆ ಬಜೆಟ್‌ನಲ್ಲಿ ಸಾಲಮನ್ನಾ ಯೋಜನೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದರಿಂದ ಸಹಜವಾಗಿ ಕೆಲವು ಯೋಜನೆಗಳನ್ನು ಕೈಬಿಟ್ಟು, ಬೊಕ್ಕಸಕ್ಕೆ ಹೆಚ್ಚಿಸುವ ಮೂಲಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇದೇ ಆಧಾರದ ಮೇಲೆ ಅಬಕಾರಿ ಸುಂಕವು ಹೆಚ್ಚಿಸಿ ಮದ್ಯದ ಬೆಲೆಯನ್ನು ಹೆಚ್ಚಿಸಲಾಗುತ್ತದೆ ಎಂದು ಹೇಳಲಾಗಿದೆ.

ಕಳೆದ ಏಪ್ರಿಲ್‌ ತಿಂಗಳಿನಿಂದ ಜನವರಿ ಅಂತ್ಯಕ್ಕೆ ಅಬಕಾರಿ ಇಲಾಖೆಯಿಂದ ರಾಜ್ಯದ ಬೊಕ್ಕಸಕ್ಕೆ ಬಂದ ಆದಾಯದ ಬಗ್ಗೆ ಮುಖ್ಯಮಂತ್ರಿಗಳಿಗೆ ಸಮಾಧಾನ ತಂದಿದೆ. ಇತ್ತೀಚೆಗೆ ರಾಜ್ಯದಲ್ಲಿ ಮದ್ಯ ನಿಷೇಧ ಮಾಡುವಂತೆ ತೀವ್ರತರ ಹೋರಾಟ ನಡೆಯಿತು. ಈ ವೇಳೆ ಕುಮಾರಸ್ವಾಮಿ ಮದ್ಯ ನಿಷೇಧ ಮಾಡುವುದು ಸುಲಭವಲ್ಲ ಎಂದು ಹೇಳುವ ಮೂಲಕ ಮದ್ಯ ನಿಷೇಧವನ್ನು ತಳ್ಳಿಹಾಕಿದ್ದಾರೆ. ಸಾಲಮನ್ನಾ ಯೋಜನೆಗೆ ಹಣದ ಅಗತ್ಯ ಇರುವ ಹಿನ್ನೆಲೆಯಲ್ಲಿ ಮದ್ಯ ನಿಷೇಧ ದೂರದ ಮಾತು. ಕಳೆದ ಬಜೆಟ್‌ನಲ್ಲಿ ಅಬಕಾರಿ ಸುಂಕವನ್ನು ಶೇ.4ರಷ್ಟುಹೆಚ್ಚಳ ಮಾಡಲಾಗಿತ್ತು. ಈಗ ಅದಕ್ಕಿಂತ ಶೇ.1 ಅಥವಾ 2ರಷ್ಟಾದರೂ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಪ್ರತಿ ತಿಂಗಳು ಅಬಕಾರಿ ಇಲಾಖೆಯು ಕ್ರೋಢೀಕರಿಸುವ ಮೊತ್ತವು ಹೆಚ್ಚಳವಾಗಿದೆ. ಸರಾಸರಿ ಪ್ರತಿ ತಿಂಗಳು 1495 ಕೋಟಿ ರು.ನಷ್ಟುಸಂಗ್ರಹವಾಗಿದ್ದು, ಶೇ.8.89ರಷ್ಟುಬೆಳವಣಿಗೆಯಾಗಿದೆ ಎನ್ನಲಾಗಿದೆ.

ಈ ನಡುವೆ, ಫೆಡರೇಶನ್‌ ಆಪ್‌ ವೈನ್‌ ಮರ್ಚಂಟ್ಸ್‌ ಅಸೋಸಿಯೇಷನ್‌ ವತಿಯಿಂದ ಕೆಲವು ಮನವಿಗಳನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಕೆ ಮಾಡಲಾಗಿದೆ. ಚಿಲ್ಲರೆ ಮದ್ಯ ಮಾರಾಟಗಾರರ ಮೇಲಿನ ಲಾಭಾಂಶವನ್ನು ಕನಿಷ್ಠ ಶೇ.20ರಷ್ಟುಮಾಡುವಂತೆ ವಿನಂತಿ ಮಾಡಿಕೊಳ್ಳಲಾಗಿದೆ. ಪಂಚಾಯತ್‌ ರಾಜ್‌ 2ನೇ ತಿದ್ದುಪಡಿ 308 ಎ.ಸಿ. ಕಾಯ್ದೆಯನ್ನು ಹಿಂತೆಗೆದುಕೊಳ್ಳುವಂತೆ ಕೋರಲಾಗಿದೆ. ಗ್ರಾಮಪಂಚಾಯತ್‌ ಚುನಾವಣೆ ವೇಳೆ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ ಚುನಾವಣಾ ದಿನಾಂಕದವರೆಗೆ ಮದ್ಯ ಮಾರಾಟ ನಿಷೇಧಿಸಲಾಗುತ್ತಿದೆ. ಇದರಿಂದ ತೊಂದರೆಯಾಗಲಿದ್ದು, ಸರ್ಕಾರದ ಬೊಕ್ಕಸಕ್ಕೂ ನಷ್ಟ, ಮದ್ಯ ಮಾರಾಟ ಮಳಿಗೆಗಳಿಗೂ ನಷ್ಟಮತ್ತು ಅವ್ಯವಹಾರಗಳು ಸಹ ಹೆಚ್ಚಾಗಲಿವೆ. ಹೀಗಾಗಿ ಕಾಯ್ದೆಯನ್ನು ಹಿಂತೆಗೆದುಕೊಳ್ಳುವಂತೆ ಮನವಿ ಮಾಡಲಾಗಿದೆ. ಮನವಿಯ ಬಗ್ಗೆ ಪರಿಶೀಲಿಸುವ ಆಶ್ವಾಸನೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ ಎನ್ನಲಾಗಿದೆ.

ಮದ್ಯದ ದರ ಹೆಚ್ಚಳ ಇರುವ ಕಾರಣ ತೆರಿಗೆಗಳನ್ನು ಮತ್ತು ಪ್ರೀಮಿಯಮ್‌ ಬ್ರ್ಯಾಂಡ್‌ಗಳ ಘೋಷಿತ ಬೆಲೆಯನ್ನು ಹೆಚ್ಚಳ ಮಾಡಬಾರದು ಎಂದು ಕೋರಲಾಗಿದೆ. ನೆರೆ ರಾಜ್ಯಗಳಲ್ಲಿ ಮದ್ಯದ ದರ ಕಡಿಮೆ ಇರುವ ಕಾರಣ ದರ ಜಾಸ್ತಿ ಮಾಡಬಾರದು ಎಂದು ಅಸೋಷಿಯೇಷನ್‌ ಕೋರಿದೆ ಎಂದು ತಿಳಿದುಬಂದಿದೆ.

-ಪ್ರಭುಸ್ವಾಮಿ ನಟೇಕರ್‌

click me!