ಜಮೀನಿನಲ್ಲೇ ತುರ್ತು ಭೂಸ್ಪರ್ಶ ಮಾಡಿದ ಸೇನಾ ಹೆಲಿಕಾಪ್ಟರ್‌

By Web DeskFirst Published Feb 6, 2019, 8:26 AM IST
Highlights

ವಾಯುಪಡೆಯ ಡೆಸಾಲ್ಟ್‌ ಎವಿಯೇಷನ್‌ಗೆ ಸೇರಿದ ಹೆಲಿಕಾಪ್ಟರ್‌ -2147 ಮಂಗಳವಾರ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ತಾಲೂಕಿನ ಕಗ್ಗಲೀಪುರದ ಬಳಿ ತುರ್ತು ಭೂ ಸ್ಪರ್ಶ ಮಾಡಿದೆ.

ಬೆಂಗಳೂರು :  ಭಾರತೀಯ ವಾಯುಪಡೆಯ ಡೆಸಾಲ್ಟ್‌ ಎವಿಯೇಷನ್‌ಗೆ ಸೇರಿದ ಹೆಲಿಕಾಪ್ಟರ್‌ -2147 ಮಂಗಳವಾರ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ತಾಲೂಕಿನ ಕಗ್ಗಲೀಪುರದ ಬಳಿ ತುರ್ತು ಭೂ ಸ್ಪರ್ಶ ಮಾಡಿರುವ ಘಟನೆ ನಡೆದಿದೆ.

ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದನ್ನು ಅರಿತ ಐಎಎಫ್‌ನ ಪೈಲೆಟ್‌ಗಳಾದ ರಮೇಶ್‌ ಮತ್ತು ಪೂನ್‌ ಅವರು ಕಗ್ಗಲೀಪುರ ತಟ್ಟಿಗುಪ್ಪೆ ಬಳಿಯ ಬಯಲು ಜಮೀನಿನಲ್ಲಿ ತುರ್ತು ಭೂಸ್ಪರ್ಶ ಮಾಡುವ ಮೂಲಕ ಅಪಾಯದಿಂದ ಪಾರಾಗಿದ್ದಾರೆ.

ಬೆಳಗ್ಗೆ 11.45ರ ಸುಮಾರಿಗೆ ಘಟನೆ ನಡೆದಿದ್ದು, ಮಾಹಿತಿ ತಿಳಿಯುತ್ತಿದ್ದಂತೆ ಮತ್ತೊಂದು ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ ಸೇನೆಯ ಅಧಿಕಾರಿಗಳು ಮತ್ತು ಪರಿಣಿತರ ತಂಡ ಹೆಲಿಕಾಪ್ಟರ್‌ನಲ್ಲಿ ಉಂಟಾಗಿದ್ದ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಿಕೊಂಡು ಸಂಜೆ 4.30ರ ಸುಮಾರಿಗೆ ಹೆಲಿಕಾಪ್ಟರ್‌ ತೆಗೆದುಕೊಂಡು ಹೋಗಿದ್ದಾರೆ. ತುರ್ತು ಭೂಸ್ಪರ್ಶ ಮಾಡಿದ ಹಿನ್ನೆಲೆಯಲ್ಲಿ ಐಎಫ್‌ನ ದಕ್ಷಿಣ ವಲಯ ಮುಖ್ಯಸ್ಥರು ತನಿಖೆಗೆ ಆದೇಶಿಸಿದ್ದಾರೆ ಎಂದು ತಿಳಿದು ಬಂದಿದೆ.

ಹೆಲಿಕಾಪ್ಟರ್‌ ಜಮೀನಿನಲ್ಲಿ ಭೂಸ್ಪರ್ಶ ಮಾಡುತ್ತಿದ್ದಂತೆ ಅಕ್ಕಪಕ್ಕದ ಗ್ರಾಮಸ್ಥರು ಆಗಮಿಸಿ ಕುತೂಹಲದಿಂದ ಹೆಲಿಕಾಪ್ಟರ್‌ ನೋಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಸುದ್ದಿ ತಿಳಿಯುತ್ತಿದ್ದಂತೆ ಕಗ್ಗಲೀಪುರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಭದ್ರತೆ ಒದಗಿಸಿದರು.

click me!