IAS vs IPS: ರೋಹಿಣಿ ಸಿಂಧೂರಿ- ಡಿ. ರೂಪಾಗೆ ಶಿಸ್ತುಕ್ರಮವಿಲ್ಲದ ನೋಟಿಸ್‌ ಜಾರಿ: ಹಲ್ಲಿಲ್ಲದ ಹಾವಿನಂತೆ ಸರ್ಕಾರದ ನಡೆ

Published : Feb 21, 2023, 11:14 AM ISTUpdated : Feb 21, 2023, 11:37 AM IST
IAS vs IPS: ರೋಹಿಣಿ ಸಿಂಧೂರಿ- ಡಿ. ರೂಪಾಗೆ ಶಿಸ್ತುಕ್ರಮವಿಲ್ಲದ ನೋಟಿಸ್‌ ಜಾರಿ: ಹಲ್ಲಿಲ್ಲದ ಹಾವಿನಂತೆ ಸರ್ಕಾರದ ನಡೆ

ಸಾರಾಂಶ

ಕಳೆದ ಎರಡು ದಿನಗಳಿಂದ ಹಾದಿರಂಪ, ಬೀದಿರಂಪ ಮಾಡಿದ್ದ ಐಪಿಎಸ್‌ ಅಧಿಕಾರಿ ಡಿ. ರೂಪಾ ಹಾಗೂ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಸರ್ಕಾರದಿಂದ ಯಾವುದೇ ಶಿಸ್ತುಕ್ರಮ ಕೈಗೊಳ್ಳದೆ ನೋಟಿಸ್‌ ನೀಡಿ ಕೈ ತೊಳೆದುಕೊಂಡಿದೆ. 

ಬೆಂಗಳೂರು (ಫೆ.21): ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳ ಮುಂದೆ ವೈಯಕ್ತಿಕ ವಿಚಾರಗಳು ಹಾಗೂ ಕರ್ತವ್ಯಕ್ಕೆ ಕುರಿತಾದ ಆರೋಪಗಳನ್ನು ಹೇಳಿಕೊಳ್ಳುವ ಮೂಲಕ ಕೆಸರೆರಚಾಟ ಮಾಡಿಕೊಂಡಿದ್ದ ಐಪಿಎಸ್‌ ಅಧಿಕಾರಿ ಐಜಿಪಿ ಡಿ. ರೂಪಾ ಹಾಗೂ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಸರ್ಕಾರದಿಂದ ನೋಟಿಸ್‌ ನೀಡಲಾಗಿದೆ. ಅದು ಕೂಡ ನೀವು ಮಾಧ್ಯಮಗಳ ಮುಂದೆ ಮಾತನಾಡದಂತೆ ಮಾತ್ರ ಸೂಚನೆ ನೀಡಲಾಗಿದ್ದು, ಯಾವುದೇ ಕಠಿಣ ಕ್ರಮವನ್ನು ಕೈಗೊಂಡಿಲ್ಲ.

ಇಡೀ ದೇಶದಲ್ಲಿ ಕರ್ನಾಟಕ ಮಾನ ಮರ್ಯಾದೆ ಹರಾಜು ಆಗುವಂತೆ ಸರ್ಕಾರ ಪ್ರಮುಖ ಹುದ್ದೆಗಳಲ್ಲಿರುವ ಐಪಿಎಸ್‌ ಮತ್ತು ಐಎಎಸ್‌ ಅಧಿಕಾರಿಗಳು ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳ ಮುಂದೆ ಆರೋಪಗಳನ್ನು ಮಾಡಿದ್ದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದ ಡಿ. ರೂಪಾ ಅವರು ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರ ತೀರಾ ಖಾಸಗಿಯಾದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಜೊತೆಗೆ 20 ಅಂಶಗಳನ್ನು ಮುಂದಿಟ್ಟು ಇದರ ಆಧಾರದಲ್ಲಿ ತನಿಖೆ ಮಾಡಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ದೂರು ನೀಡಿದ್ದರು.

IAS vs IPS Fight:ರೋಹಿಣಿ ಸಿಂಧೂರಿ ನಗ್ನ ಫೋಟೋಗಳ ಬಗ್ಗೆ ಮಾತಾಡ್ತಾರಾ.?: ಚಾಟಿಂಗ್‌ ಫೋಟೋ ಅಪ್ಲೋಡ್‌ ಮಾಡಿದ ಡಿ ರೂಪಾ

ನಾಮಕೇವಾಸ್ತೆಗೆ ನೋಟಿಸ್‌ ಜಾರಿ: ಕರ್ನಾಟಕದ ಮಾನವನ್ನು ಇಡೀ ದೇಶದಲ್ಲಿಯೇ ಹರಾಜು ಆಗುವಂತೆ ಮಾಡಿದ್ದ ಸರ್ಕಾರದ ಇಬ್ಬರು ಪ್ರಮುಖ ಅಧಿಕಾರಿಗಳ ಮೇಲೆ ಎರಡು ದಿನಗಳ ನಂತರ ಸರ್ಕಾರ ನೋಟಿಸ್‌ ಜಾರಿ ಮಾಡಿದೆ. ಅದೂ ಕೂಡ ನಾಮಕೇವಾಸ್ತೆಗೆ ಕ್ರಮ ಕೈಗೊಂಡಂತೆ ಕಾಣುತ್ತಿದೆ. ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಹಲ್ಲಿಲ್ಲದ ಹಾವಿನಂತೆ ನಡೆದುಕೊಂಡಿದೆ. ಇವರ ಮೇಲೆ ಶಿಸ್ತು ಕ್ರಮವನ್ನು ಕೈಗೊಳ್ಳದೆ ಕೇವಲ ಶಾಂತಿ ಕಾಪಾಡುವಂತೆ ಹಾಗೂ ಮಾಧ್ಯಮಗಳ ಮುಂದೆ ಮಾತನಾಡದಂತೆ ನೋಟಿಸ್‌ ನೀಡಿ ಸುಮ್ಮನಾಗಿದೆ. 

ಸರ್ಕಾರದ ನೋಟಿಸ್‌ನಲ್ಲಿ ಏನಿದೆ.?: ಇಬ್ಬರೂ ಸರ್ಕಾರಿ ಅಧಿಕಾರಿಗಳು ಆಗಿದ್ದಿ ಮಾಧ್ಯಮಗಳ ಮುಂದೆ ಯಾವುದೇ ಹೇಳಿಕೆ ನೀಡಬಾರದು. ಇದರಲ್ಲಿ ದೂರಿಗಳು, ಮನವಿಗಳು ಅಥವಾ ಇನ್ಯಾವುದೇ ಆರೋಪಗಳನ್ನು ಮಾಡುವಂತಿಲ್ಲ. ನೀವು ಸಾರ್ವಜನಿಕವಾಗಿ ಶಾಂತಿ ಕಾಪಾಡಬೇಕು. ಆಲ್ ಇಂಡಿಯಾ ಸರ್ವೀಸ್ ಕಂಡಕ್ಟ್ ರೂಲ್ಸ್‌ ಅನ್ವಯ ನಡೆದುಕೊಳ್ಳಬೇಕು. ನೀವು ಇನ್ನುಮುಂದೆ ಯಾವುದೇ ಕಾರಣಕ್ಕೂ ಆರೋಪ, ಪ್ರತ್ಯಾರೋಪ ಸೇರಿ ಸರ್ಕಾರದ ಅಧಿಕಾರವನ್ನು ಅಥವಾ ಸೇವೆಯ ಕುರಿತಾದ ಮಾಹಿತಿಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಳ್ಳಬಾರದು ಎಂದು ತಿಳಿಸಿದೆ.

IAS vs IPS ಖಡಕ್ ಅಧಿಕಾರಿಗಳಿಂದ ಗುರುತಿಸಿಕೊಂಡಿರುವ ಕರ್ನಾಟಕದ ಮಾನ ಹರಾಜು

ಸರ್ವಿಸ್‌ ಕಂಡಕ್ಟ್‌ ಅನ್ವಯ ಕ್ರಮವಿಲ್ಲ: ಇನ್ನು ಆಲ್‌ ಇಂಡಿಯಾ ಸರ್ವಿಸ್‌ ಕಂಡಕ್ಟ್‌ ರೂಲ್ಸ್‌ ಅನ್ವಯ ಐಎಎಸ್‌ ಅಥವಾ ಐಪಿಎಸ್‌ ಅಧಿಕಾರಿಗಳು ಸರ್ಕಾರಕ್ಕೆ ಮುಜುಗರ ಆಗುವಂತೆ ನಡೆದುಕೊಳ್ಳುವಂತಿಲ್ಲ. ಹೀಗೇನಾದರೀ ನಡೆದುಕೊಂಡಲ್ಲಿ ಅವರ ವಿರುದ್ಧ ಸಂಬಂಧಪಟ್ಟ ಸರ್ಕಾರಗಳು ಕೆಲವೊಂದು ಶಿಸ್ತು ಕ್ರಮಗಳನ್ನು ಕೈಗೊಳ್ಳಲು ಕೂಡ ಅವಕಾಶವಿದೆ. ಅದರಲ್ಲಿ ವರ್ಗಾವಣೆ, ದೀರ್ಘ ರಜೆ, ಅಮಾನತು ಮಾಡುವುದು, ಅಧಿಕಾರಿಗಳ ಸೇವೆಯನ್ನು ಕೇಂದ್ರ ಸರ್ಕಾರಕ್ಕೆ ವಾಪಸ್‌ ಕಳಿಹಿಸುವುದು ಹಾಗೂ ಅಧಿಕಾರಿಗಳು ಮಾಡಿದ ಕಾರ್ಯಕ್ಕೆ ಸ್ಪಷ್ಟ ಉತ್ತರ ಕೊಡುವಂತೆ ನೋಟೀಸ್‌ ಜಾರಿ ಮಾಡಬಹುದು. ಆದರೆ, ಇಬ್ಬರು ಅಧಿಕಾರಿಗಳು ಬೀದಿ ರಂಪಾಟ ಮಾಡಿಕೊಂಡು, ಮುಖ್ಯ ಕಾರ್ಯದರ್ಶಿಗೆ ದೂರು- ಪ್ರತಿದೂರು ನೀಡಿದರೂ ಸರ್ಕಾರ ಯಾವುದೇ ಶಿಸ್ತುಕ್ರಮ ಕೈಗೊಂಡಿಲ್ಲ.

ಸರ್ಕಾರ ಅಸ್ತಿತ್ವದಲ್ಲಿದೆಯಾ ಎಂಬ ಅನುಮಾನ: ಇನ್ನು ಅಧಿಕಾರಿಗಳ ಜಗಳ ಬಗ್ಗೆ ಮಾತನಾಡಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ನಿಜವಾಗಿಯೂ ಸರ್ಕಾರ ಅಸ್ತಿತ್ವದಲ್ಲಿ ಇದೆಯಾ.? ಎಂದು ಪ್ರಶ್ನೆ ಮಾಡಿದ್ದರು. ಈಗ ಇಬ್ಬರೂ ಅಧಿಕಾರಿಗಳು ರಾಜ್ಯದ ಮರ್ಯಾದೆ ಹರಾಜು ಹಾಕಿದ್ದರೂ ಮುಖ್ಯ ಕಾರ್ಯದರ್ಶಿ ಅಥವಾ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳದಂತಹ ಸ್ಥಿತಿಯನ್ನು ಪ್ರದರ್ಶನ ಮಾಡಿದೆ. ಇನ್ನು ಮುಂದಿನ ದಿನಗಳಲ್ಲಿ ಚುನಾವಣೆ ಎದುರಾಗಲಿದ್ದು, ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೇ ಸಾಪ್ಟ್‌ ಕಾರ್ನರ್‌ ಪ್ರದರ್ಶನ ಮಾಡಿದೆಯೇ ಎಂಬ ಅನುಮಾನ ಕಂಡುಬರುತ್ತಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!
ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!