
ಬೆಂಗಳೂರು (ಆ.14) : ಬರ ಪ್ರದೇಶ ಘೋಷಣೆಗೆ ಇರುವ ಹಾಲಿ ಮಾರ್ಗಸೂಚಿಗಳಿಂದ ರೈತರಿಗೆ ಅನ್ಯಾಯವಾಗುವುದರಿಂದ ಮಾರ್ಗ ಸೂಚಿಗಳನ್ನು ಪರಿಷ್ಕರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರಿಗೆ ಪತ್ರ ಬರೆದಿರುವ ಮುಖ್ಯಮಂತ್ರಿಗಳು, ಹವಾಮಾನ ಬದಲಾವಣೆ, ವೈಪರೀತ್ಯಗಳಿಂದಾಗಿ ಇತ್ತೀಚಿನ ಕೆಲ ವರ್ಷಗಳಿಂದ ದೇಶದಲ್ಲಿ ಉತ್ತಮ ಪ್ರಮಾಣದ ಮಳೆಯಾದರೂ ಕೆಲ ರಾಜ್ಯ, ಜಿಲ್ಲೆ, ತಾಲ್ಲೂಕುಗಳಲ್ಲಿ ತೀವ್ರ ಮಳೆ ಕೊರತೆಯುಂಟಾಗುವ ಪರಿಸ್ಥಿತಿಗಳನ್ನು ಕಾಣಬಹುದು. ಇನ್ನು ಬೆಳೆ ಹಾನಿ ವಿಚಾರದಲ್ಲೂ ಸ್ಥಳೀಯ ಪರಿಸರ, ಮಣ್ಣಿನ ಮಾದರಿ, ನೀರಿನ ಲಭ್ಯತೆ ಮತ್ತು ಕೃಷಿ ಪದ್ಧತಿಗಳನ್ನು ಆಧರಿಸಿರುತ್ತದೆ. ಹೀಗಾಗಿ ಬರಪೀಡಿತ ಪ್ರದೇಶ ಎಂದು ಘೋಷಿಸಲು ಕೇಂದ್ರ ಸರ್ಕಾರದ ಮಾರ್ಗಸೂಚಿಗಳು ಅಡ್ಡಿಯಾಗುತ್ತಿದ್ದು ಅವುಗಳನ್ನು ಈಗಿನ ಪರಿಸ್ಥಿತಿಗೆ ತಕ್ಕಂತೆ ಪರಿಷ್ಕರಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಬಿಜೆಪಿ ಕಾಲದ ದಂಧೆ ಸಿ.ಟಿ.ರವಿಗೆ ಈಗ ನೆನಪಾಗ್ತಿರಬೇಕು: ತಂಗಡಗಿ
ರಾಜ್ಯದಲ್ಲಿ ಮುಂಗಾರು ಮಳೆ ಕೊರತೆ ಹಿನ್ನೆಲೆಯಲ್ಲಿ ಕೆಲವು ಜಿಲ್ಲೆಗಳಲ್ಲಿ ಇನ್ನೂ ಬಿತ್ತನೆ ಪ್ರಮಾಣ ಶೇ.50 ಕೂಡ ದಾಟಿಲ್ಲ. ಹೀಗಿದ್ದರೂ ರಾಜ್ಯದ ಕೆಲವು ಜಿಲ್ಲೆ ಮತ್ತು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲು ಕೇಂದ್ರ ಸರ್ಕಾರದ ನಿಯಮಗಳು ಅಡ್ಡಬರುತ್ತಿದೆ. ಹಾಲಿ ಮಾರ್ಗಸೂಚಿಗಳನ್ನು ಪಾಲಿಸಿದರೆ ಬರಪೀಡಿತ ತಾಲೂಕುಗಳಿಗೆ ಅನ್ಯಾಯ ಆಗಲಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಬರಪೀಡಿತ ಎಂದು ಘೋಷಿಸಲು ರೈತರು ಬಿತ್ತನೆ ಮಾಡಿಲ್ಲವೆಂದು ಪ್ರಮಾಣ ಪತ್ರ ಸಲ್ಲಿಸಬೇಕು ಎಂಬ ಈ ನಿಯಮಾವಳಿಯನ್ನು ಪರಿಷ್ಕರಿಸಬೇಕು. ಶೇ.60 ಮಳೆ ಆಗದಿದ್ದರೆ ಮಾತ್ರ ಬರ ಎಂದು ಘೋಷಣೆ ಮಾಡಬಹುದು. ಇಲ್ಲವಾದಲ್ಲಿ ಬಿತ್ತನೆ ಮಾಡಿದ ಬೆಳೆಯಲ್ಲಿ ಶೇ.50 ಬೆಳೆಹಾನಿ ಆಗಿರಬೇಕು ಎಂಬ ನಿಯಮವಿದೆ.ಇಂತಹ ಪರಿಸ್ಥಿತಿ ಸಂಭವಿಸಿ ಬರಪೀಡಿತ ಎಂದು ಘೋಷಣೆ ಮಾಡಿದರೂ ಕೇಂದ್ರ ಸರ್ಕಾರ ಶೇ.33% ಬೆಳೆಹಾನಿಗೆ ಮಾತ್ರ ಪರಿಹಾರವನ್ನು ನೀಡುತ್ತದೆ. ಆದ್ದರಿಂದ ಬರ ಎಂದು ಘೋಷಿಸಲು ಮಳೆ ಕೊರತೆ ಪ್ರಮಾಣವನ್ನು ಶೇ.60ರಿಂದ 30ಕ್ಕೆ ಇಳಿಸಬೇಕು. ಬೆಳೆ ಹಾನಿಗೆ ಕನಿಷ್ಠ ಮೂರು ನಾಲ್ಕು ವಾರಗಳು ಕಡಿಮೆ ಇರದಂತೆ ಎನ್ನುವ ಬದಲು ಎರಡು ಮೂರು ವಾರಗಳಿಗೆ ಕಡಿಮೆ ಇರದಂತೆ ಮಳೆ ಆಗಿರಬಾರದು ಎಂದು ಪರಿಷ್ಕರಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಕಮಿಷನ್ ಕೇಳಿಲ್ಲ ಎಂದರೆ ಡಿಕೆಶಿ ಅಜ್ಜಯ್ಯನ ಮಠಕ್ಕೆ ಬಂದು ಪ್ರಮಾಣ ಮಾಡಲಿ: ಸಿಟಿ ರವಿ ಸವಾಲು
ಕೇಂದ್ರದ ಕೃಷಿ ಇಲಾಖೆ ಅನುಮತಿಸಿದರೆ ಮಾತ್ರ ರಾಜ್ಯದ 100ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರಗಾಲ ಘೋಷಣೆ ಮಾಡಲು ಸಾಧ್ಯವಾಗುತ್ತದೆ. ಬರ ಘೋಷಣೆ ಅಡಿ ಪರಿಹಾರ ಮತ್ತು ರಿಯಾಯಿತಿ ಪಡೆಯಲು ಸರ್ಕಾರಕ್ಕೆ ಅವಕಾಶ ಸಿಕ್ಕಂತಾಗುತ್ತದೆ. ಹೀಗಾಗಿ ಸೂಕ್ತ ಮಾರ್ಗಸೂಚಿ ರೂಪಿಸುವಂತೆ ಪತ್ರದಲ್ಲಿ ಅವರು ಕೋರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ