ಸರ್ಕಾರವೇ ಅಮಾಯಕರನ್ನು ಕೊಲ್ಲಿಸಿದೆ: ಎಚ್‌ಡಿಕೆ| ‘ಗುಂಡು ಹಾರಿಸಿದರೂ ಒಬ್ಬರೂ ಸಾಯಲಿಲ್ಲ’ ಎಂಬ ಪೊಲೀಸರ ವಿಡಿಯೋ ಪೋಸ್ಟ್| ಸಿಎಂ ನೈತಿಕ ಹೊಣೆ ಹೊತ್ತುಕೊಳ್ಳಲಿ| ಬಿಎಸ್‌ವೈ ವಿರುದ್ಧ ಮಾಜಿ ಸಿಎಂ ಟ್ವೀಟ್ ದಾಳಿ
ಬೆಂಗಳೂರು[ಡಿ.21]: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ‘ಗುಂಡು ಹಾರಿಸಿದರೂ ಒಬ್ಬರೂ ಸಾಯಲಿಲ್ಲ’ ಎಂದು ಮಾತನಾಡಿಕೊಂಡಿರುವ ಪೊಲೀಸ್ ಸಿಬ್ಬಂದಿಯ ವಿಡಿಯೋವನ್ನು ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸರ್ಕಾರವೇ ಮುಂದೆ ನಿಂತು ಪ್ರತಿಭಟನಾಕಾರರನ್ನು ಕೊಂದಿದೆ ಎಂಬುದಕ್ಕೆ ಈ ವೀಡಿಯೋ ಸಾಕ್ಷಿಯಾಗಿ ನಿಂತಿದೆ ಎಂದು ಹರಿಹಾಯ್ದಿದ್ದಾರೆ.
ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನೇ ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದಾರೆ.
undefined
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಮೆಚ್ಚಿಸಲು ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಅಮಾಯಕರ ಮೇಲೆ ಗುಂಡು ಸಿಡಿಸಿತೆ? ಅಥವಾ ರಾಜ್ಯ ಸರ್ಕಾರ ಶೌರ್ಯ ಪ್ರದರ್ಶನಕ್ಕೆ ಇಂತಹ ಆದೇಶ ನೀಡಿತೆ? ಗೋಲಿಬಾರ್ ನಡೆಸಿ ಬಲಿ ತೆಗೆದುಕೊಂಡಿದ್ದು ಯಾವ ಕಾರಣಕ್ಕೆ? ಯಾರನ್ನು ಮೆಚ್ಚಿಸಲು ಇಂತಹ ಮತಿಗೇಡಿ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ? ಅಧಿಕಾರಿಗಳು ತಾವಾಗಿಯೇ ಶಾಂತಿಯುತ ಪ್ರತಿಭಟನೆ ತಹಬದಿಗೆ ತರಲು ಅವಿವೇಕದ ನಿರ್ಧಾರ ಕೈಗೊಂಡರೋ ಎಂದು ಟ್ವೀಟರ್‌ನಲ್ಲಿ ಖಾರವಾಗಿ ಪ್ರಶ್ನಿಸಿದ್ದಾರೆ.
"ಫೈರ್ ಮಾಡಿದೆವು, ಒಂದು ಗುಂಡೂ ಬೀಳ್ಲಿಲ್ವಲ, ಒಬ್ಬರೂ ಸಾಯಲಿಲ್ವಲ" ಇದು ಮಂಗಳೂರು ಪ್ರತಿಭಟನೆ ವೇಳೆ ಹೋರಾಟಗಾರರನ್ನು ಕೊಂದ ಪೊಲೀಸ್ ಅಧಿಕಾರಿಯೊಬ್ಬರ ಮಾತು. ಸರ್ಕಾರವೇ ಮುಂದೆ ನಿಂತು ಪ್ರತಿಭಟನಾಕಾರರನ್ನು ಕೊಂದಿದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿ ನಿಂತಿದೆ. ಇದರ ಹೊಣೆಯನ್ನು ಮುಖ್ಯಮಂತ್ರಿ ಹೊರಬೇಕು.
(1/4) pic.twitter.com/3p8QN7rmL0
ಈ ಹಿಂದೆ ಆಡಳಿತಾವಧಿಯಲ್ಲಿ ರೈತರನ್ನು ಕೊಂದಿದ್ದು, ಈ ಬಾರಿ ಅಮಾಯಕ ಹೋರಾಟಗಾರರನ್ನು ಹತ್ಯೆಗೆದಿರುವುದನ್ನು ಮುಖ್ಯಮಂತ್ರಿ ಯಡಿಯೂರಪ್ಪ ನೈತಿಕ ಹೊಣೆ ಹೊರಬೇಕು. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಯಾರೂ ಪ್ರತಿಭಟಿಸಲೇಬಾರದೆ? ನಾಲ್ಕು ತಿಂಗಳ ಆಡಳಿತಾವಧಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಪವಿತ್ರ ಸರ್ಕಾರವು ಮಾಡಲು ಹೊರಟಿಸುವುದು ಏನು? ಕಾಯ್ದೆ ವಿರುದ್ಧ ಅಸ್ಸಾಂನಲ್ಲಿ ಮೊದಲು ತೀವ್ರತರವಾದ ಪ್ರತಿಭಟನೆ, ಆಕ್ರೋಶ ಭುಗಿಲೆದ್ದಿತು. ಆದರೆ, ಅಲ್ಲಿ ನಡೆಯದ ಗೋಲಿಬಾರ್, ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ರಾಜ್ಯದಲ್ಲಿ ನಡೆದಿದ್ದಾರೂ ಯಾಕೆ? ಅಮಾಯಕರ ‘ರಕ್ತ ತರ್ಪಣ’ ಕೊಡುವ ಮೂಲಕ ಯಾರಿಗೆ ಯಾವ ಸಂದೇಶ ರವಾನಿಸಲಾಗಿದೆ ಎಂದು ಕಿಡಿಕಾರಿದ್ದಾರೆ.
ಹಿಂದಿನ ಸರ್ಕಾರದಲ್ಲಿ ರೈತರನ್ನು ಕೊಂದ, ಈ ಬಾರಿ ಅಮಾಯಕ ಹೋರಾಟಗಾರರನ್ನು ಕೊಂದ ಬಿಎಸ್ವೈ ನೈತಿಕ ಹೊಣೆಗಾರಿಕೆ ಅರಿತು ಈ ಕೂಡಲೇ ಮೃತ ಹೋರಾಟಗಾರ ಕುಟುಂಬಗಳ ಕ್ಷಮೆ ಕೋರಬೇಕು.
(3/4)
ಅಧಿಕಾರದ ಅಮಲಿನಲ್ಲಿರುವವರ ದಾಹ, ಕ್ರೌರ್ಯಕ್ಕೆ ಪ್ರಜೆಗಳ ಹೆಣಗಳು ತೋರಣದಂತೆ ಕಟ್ಟಲ್ಪಡುತ್ತಿರುತ್ತವೆ. ಅಧಿಕಾರ ಹಪಾಹಪಿಗಳು ಸಾವಿನ ದಲ್ಲಾಳಿಗಳಾಗುತ್ತಾರೆ. ಇಂಥವರೇ ತುಂಬಿರುವ ಜನ ವಿರೋಧಿ ಪ್ರಭುತ್ವ ಅಂತ್ಯ ಕಾಲ ಸಮೀಪಿಸಿದೆ.
(4/4)
ಹೋರಾಟಗಾರರನ್ನು ಕಂಡೊಡನೇ ಗುಂಡಿಕ್ಕಲು ಆದೇಶಿಸುವ ಯಡಿಯೂರಪ್ಪ ತಾವೂ ಹೋರಾಟಗಳಿಂದಲೇ ರಾಜಕೀಯದಲ್ಲಿ ಮೇಲೇರಿದವರು ಎಂಬುದನ್ನು ‘ಅನರ್ಹ ಅಧಿಕಾರ’ದ ಮದ ಮರೆಸಿದಂತಿದೆ. ಅವರ ಹೋರಾಟಗಳನ್ನು ಹಿಂದಿನ ಸರ್ಕಾರಗಳು ಬಂದೂಕು, ಗುಂಡುಗಳಿಂದ ಹತ್ತಿಕ್ಕಿದ್ದವೇ? ಹೀಗಿದ್ದೂ ಹೋರಾಟಗಳ ಮೇಲೆ ಯಡಿಯೂರಪ್ಪ ಅವರಿಗೆ ಏಕೆ ಇಷ್ಟುದ್ವೇಷ? ಹಿಂದಿನ ಸರ್ಕಾರದಲ್ಲಿ ರೈತರನ್ನು ಕೊಂದು, ಈ ಬಾರಿ ಅಮಾಯಕ ಹೋರಾಟಗಾರರನ್ನು ಕೊಂದ ಯಡಿಯೂರಪ್ಪ ತಕ್ಷಣ ಮೃತ ಹೋರಾಟಗಾರ ಕುಟುಂಬಗಳ ಕ್ಷಮೆ ಕೋರಬೇಕು. ಅಧಿಕಾರದ ಅಮಲಿನಲ್ಲಿರುವವರ ದಾಹ, ಕ್ರೌರ್ಯಕ್ಕೆ ಪ್ರಜೆಗಳ ಹೆಣಗಳು ತೋರಣದಂತೆ ಕಟ್ಟಲ್ಪಡುತ್ತಿರುತ್ತವೆ. ಅಧಿಕಾರ ಹಪಾಹಪಿಗಳು ಸಾವಿನ ದಲ್ಲಾಳಿಗಳಾಗುತ್ತಾರೆ. ಇಂತಹವೇ ತುಂಬಿರುವ ಜನವಿರೋಧಿ ಪ್ರಭುತ್ವದ ಅಂತ್ಯಕಾಲ ಸಮೀಪಿಸಿದೆ ಎಂದು ಕುಮಾರಸ್ವಾಮಿ ಟೀಕಾಪ್ರಹಾರ ನಡೆಸಿದ್ದಾರೆ.
ಎಚ್‌ಡಿಕೆ ಪ್ರಶ್ನೆಗಳು
- ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಯಾರೂ ಪ್ರತಿಭಟಿಸಲೇಬಾರದೆ?
- ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ರಾಜ್ಯದಲ್ಲಿ ಗೋಲಿಬಾರ್ ನಡೆಸಿದ್ದಾದರೂ ಯಾಕೆ?
- ಅಮಾಯಕರ ‘ರಕ್ತ ತರ್ಪಣ’ ಕೊಡುವ ಮೂಲಕ ಯಾರಿಗೆ ಯಾವ ಸಂದೇಶ ರವಾನಿಸಲಾಗಿದೆ?