ಸಚಿವರಿಂದಲೇ ಗಲಭೆಗೆ ಕುಮ್ಮಕ್ಕು: ದೇವೇಗೌಡ

By Kannadaprabha News  |  First Published Dec 21, 2019, 8:06 AM IST

ಅಮಾಯಕ ಯುವಕರಿಬ್ಬರು ಪೊಲೀಸರ ಗೋಲಿಬಾರ್‌ಗೆ ಬಲಿ| ಸಚಿವರಿಂದಲೇ ಗಲಭೆಗೆ ಕುಮ್ಮಕ್ಕು: ದೇವೇಗೌಡ| 


ಬೆಂಗಳೂರು[ಡಿ.21]: ಪೌರತ್ವ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಮಂಗಳೂರಿನಲ್ಲಿ ನಡೆದ ಘಟನೆ ದುರದೃಷ್ಟಕರ. ಅಮಾಯಕ ಯುವಕರಿಬ್ಬರು ಪೊಲೀಸರ ಗೋಲಿಬಾರ್‌ಗೆ ಬಲಿಯಾಗಿದ್ದಾರೆ. ಸರ್ಕಾರದ ಸಚಿವರೇ ಗಲಭೆಗೆ ಕುಮ್ಮಕ್ಕು ಕೊಡುವಂತಹ ಹೇಳಿಕೆ ನೀಡಿ ಜನರನ್ನು ಪ್ರಚೋದಿಸುತ್ತಿರುವುದು ಖಂಡನಾರ್ಹ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ವಿಷಾದ ವ್ಯಕ್ತಪಡಿಸಿದ್ದಾರೆ.

ನಾನು ಕೇರಳದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪಕ್ಷದ ರಾಷ್ಟ್ರೀಯ ನಾಯಕರಾದ ಬಿ.ಎಂ.ಫಾರೂಕ್‌ ಮಂಗಳೂರಿನಲ್ಲಿದ್ದುಕೊಂಡು ಜನರಿಗೆ ನೆರವಾಗುತ್ತಿದ್ದಾರೆ. ಅಲ್ಲಿಂದಲೇ ಎಲ್ಲಾ ಮಾಹಿತಿಗಳನ್ನೂ ನನಗೆ ತಿಳಿಸಿದ್ದಾರೆ. ಜನರು ಶಾಂತಿ ಕಾಪಾಡಬೇಕು. ಸರ್ಕಾರ ಶಾಂತಿ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ಎನ್‌ಆರ್‌ಸಿ ಮತ್ತು ಸಿಎಎ ಬಗ್ಗೆ ಸಾರ್ವಜನಿಕರಲ್ಲಿ ಸಂಶಯ ಇರುವುದನ್ನು ನಿವಾರಿಸುವುದು ಸರ್ಕಾರದ ಕರ್ತವ್ಯ. ಅದನ್ನು ಅಧಿಕಾರಿಗಳ ಮೂಲಕ ಮಾಡುವುದನ್ನು ಬಿಟ್ಟು, ಪೊಲೀಸ್‌ ಬಲ ಪ್ರಯೋಗಿಸಿ ಜನರನ್ನು ಹೆದರಿಸುವುದು ಸಮಂಜಸವಲ್ಲ ಎಂದು ಪ್ರಕಟಣೆಯಲ್ಲಿ ಕಿಡಿಕಾರಿದ್ದಾರೆ.

Tap to resize

Latest Videos

144ನೇ ಸೆಕ್ಷನ್‌ ವಿಧಿಸಿ ನಾಗರಿಕರ ಪ್ರತಿಭಟನೆಯ ಹಕ್ಕು ಕಸಿದುಕೊಳ್ಳಬೇಡಿ. ಸರ್ಕಾರ ಇರುವುದು ಪ್ರಜೆಗಳ ರಕ್ಷಣೆಗಾಗಿಯೇ ಹೊರತು ಹಿಂಸೆಗೆ ಪ್ರಚೋದನೆ ನೀಡುವುದಕ್ಕಲ್ಲ. ಕಾನೂನು ಸುವ್ಯವಸ್ಥೆ ಕಾಪಾಡಲು ಆದ್ಯತೆ ನೀಡಬೇಕು. ಶಾಂತಿ ಕದಡುವವರನ್ನು ಗುರುತಿಸಿ ಬಂಧಿಸಿ. ಆದರೆ, ಅಮಾಯಕರನ್ನು ಕೊಲ್ಲಬಾರದು ಎಂದು ಸರ್ಕಾರದ ನಡೆಯನ್ನು ಟೀಕಿಸಿದ್ದಾರೆ.

ಸಾರ್ವಜನಿಕರು ಪ್ರಚೋದನೆಗೊಳಗಾಗದೆ ಶಾಂತಿ ಕಾಪಾಡಬೇಕು. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಘಟನೆ ಕುರಿತು ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಮೃತರ ಅಂತ್ಯಸಂಸ್ಕಾರವನ್ನು ಗೌರವಯುತವಾಗಿ ನಡೆಸಲು ಸರ್ಕಾರ ಸೂಕ್ತ ಬಂದೋಬಸ್‌್ತ ಒದಗಿಸಬೇಕು ಎಂದೂ ಅವರು ಆಗ್ರಹಿಸಿದ್ದಾರೆ.

ಡಿ.21ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!