
ಬೆಂಗಳೂರು (ಜ.21): ನಟ ದರ್ಶನ್ ನಾನೊಬ್ಬ ಕನ್ನಡ ಚಿತ್ರರಂಗದ ಸೆಲೆಬ್ರಿಟಿ. ನನ್ನ ಜೀವಕ್ಕೂ ಅಪಾಯವಿದೆ ಎಂದು ಹೇಳಿದರೂ ಕೇಳದ ರಾಜ್ಯ ಪೊಲೀಸ್ ಇಲಾಖೆ, ನಟ ದರ್ಶನ್‌ಗೆ ನೀಡಿದ್ದ ಗನ್ ಲೈಸೆನ್ಸ್ ಅನ್ನು ರದ್ದುಗೊಳಿಸಲಾಗಿದೆ.
ಕನ್ನಡ ಚಿತ್ರರಂಗದ ನಟ ದರ್ಶನ್ ತೂಗುದೀಪ ಕೋಟ್ಯಾಂತರ ಆಸ್ತಿಯನ್ನು ಹೊಂದಿದ್ದು, ಅವರು ತಮ್ಮ ರಕ್ಷಣೆಗೆ ಗನ್ ಅಗತ್ಯವಿದೆ ಎಂದು ಗೃಹ ಇಲಾಖೆಯಿಂದ ಒಂದು ಗನ್ ಪಡೆದಿದ್ದರು. ಆದರೆ, ಇದೀಗ ರೇಣುಕಾಸ್ವಾಮಿ ಕೊಲೆ ಕೇಸಿನ ಪ್ರಮುಖ ಆರೋಪಿಯಾಗಿರುವ ದರ್ಶನ್ ಜಾಮೀನಿನ ಮೇಲೆ ಹೊರಗಿದ್ದಾರೆ. ಹೀಗಾಗಿ ಕೊಲೆ ಕೇಸಿನ ಸಾಕ್ಷಿಗಳ ಮೇಲೆ ಗನ್ ಹಿಡಿದು ಬೆದರಿಕೆ ಹಾಕಿ ಸಾಕ್ಷಿ ನಾಶಕ್ಕೆ ಪ್ರಯತ್ನ ಮಾಡಬಹುದು ಎಂದು ಪೊಲೀಸ್ ಇಲಾಖೆಯಿಂದ ಗನ್ ಲೈಸೆನ್ಸ್ ರದ್ದತಿ ಮಾಡುವ ಬಗ್ಗೆ ದರ್ಶನ್‌ಗೆ ನೋಟೀಸ್ ಜಾರಿ ಮಾಡಲಾಗಿತ್ತು. ಈ ನೊಟೀಸ್‌ಗೆ ಒಂದು ವಾರದ ಒಳಗೆ ಉತ್ತರಿಸಿದ ನಟ ದರ್ಶನ್ ನನಗೆ ಆತ್ಮ ರಕ್ಷಣೆಗೆ ಗನ್ ಅಗತ್ಯವಿದೆ. ಹೀಗಾಗಿ, ನನಗೆ ನೀಡಲಾದ ಗನ್ ಲೈಸೆನ್ಸ್ ರದ್ದು ಮಾಡಬಾರದು ಎಂದು ಉತ್ತರಿಸಿದ್ದರು.
ಈ ಬಗ್ಗೆ ಪೊಲೀಸ್ ಇಲಾಖೆಯಿಂದ ಇರುವ ಗನ್ ಲೈಸೆನ್ಸ್ ಅವಕಾಶಗಳು ಹಾಗೂ ನಿಯಮಾವಳಿಯನ್ನು ಪರಿಶೀಲನೆ ಮಾಡಲಾಗಿದೆ. ಅದರಲ್ಲಿ ಗಂಭೀರವಾದ ಕ್ರಿಮಿನಲ್ ಪ್ರಕರಣದ ಆರೋಪಿಗಳಿಗೆ ಗನ್ ಹೊಂದುವುದಕ್ಕೆ ಸರ್ಕಾರದಿಂದ ಅವಕಾಶ ನೀಡುವಂತಿಲ್ಲ ಎಂದು ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಟ ದರ್ಶನ್‌ಗೆ ನೀಡಲಾಗಿದ್ದ ಗನ್ ಲೈಸೆನ್ಸ್ ಅನ್ನು ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ. ಈ ಮೂಲಕ ದರ್ಶನ್‌ಗೆ ನೀಡಲಾಗಿದ್ದ ಪೊಲೀಸ್ ಇಲಾಖೆಯ ಗನ್ ಅನ್ನು ವಾಪಸ್ ವಶಕ್ಕೆ ಪಡೆಯಲಾಗುತ್ತದೆ.
ಇನ್ನು ನಟ ದರ್ಶನ್ ಗನ್ ಲೈಸೆನ್ಸ್ ರದ್ದು ಮಾಡುವ ವಿಚಾರದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಅವರು, ಆ ವ್ಯಕ್ತಿ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದರು. ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾದ ಹಿನ್ನಲೆಯಲ್ಲಿ ಗನ್ ಲೈಸೆನ್ಸ್ ರದ್ದತಿ ಮಾಡುವುದಾಗಿ ನೋಟಿಸ್ ಕೊಡಲಾಗಿತ್ತು. ಅವರು ಕೂಡ ನೋಟಿಸ್‌ಗೆ ಉತ್ತರ ಕೊಟ್ಟಿದ್ದರು. ಆದರೆ, ಇದೀಗ ತಾತ್ಕಾಲಿಕವಾಗಿ ಅವರಿಗೆ ನೀಡಲಾಗಿದ್ದ ಗನ್ ಲೈಸೆನ್ಸ್ ಅನ್ನು ರದ್ದು ಮಾಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಕೋಟಿ ಕೋಟಿ ಒಡೆಯ 37 ಲಕ್ಷಕ್ಕಾಗಿ ಪರದಾಟ; ಕೋರ್ಟ್ ಮೆಟ್ಟಿಲೇರಿದ ನಟ ದರ್ಶನ್
ನಟ ದರ್ಶನ್ ನೀಡಿದ್ದ ಉತ್ತರ ಏನಾಗಿತ್ತು?
ಗನ್ ಲೈಸೆನ್ಸ್ ವಾಪಸ್ ಪಡೆಯುವ ನೋಟೀಸ್‌ಗೆ ನಟ ದರ್ಶನ್ ಅವರು ನನಗೆ ಗನ್ ಬೇಕೆ ಬೇಕು ಎಂದು ಉತ್ತರ ನೀಡಿದ್ದರು. ಪೊಲೀಸರ ಪತ್ರಕ್ಕೆ ಉತ್ತರ ಕೊಟ್ಟ ನಟ ದರ್ಶನ್, ನನಗೆ ಗನ್ ಲೈಸನ್ಸ್ ಬೇಕು. ನಾನೊಬ್ಬ ಸೆಲೆಬ್ರಿಟಿ, ನಾನು ಹೋದ ಕಡೆ ಬಂದ ಕಡೆ ಸಾಕಷ್ಟು ಜನ ಸೇರುತ್ತಾರೆ. ಈ ವೇಳೆ ನನ್ನ ಆತ್ಮರಕ್ಷಣೆ ಬಹಳ ಮುಖ್ಯವಾದ ವಿಷಯ ಆಗುತ್ತದೆ. ನಾನು ಖಾಸಗಿ ಸೆಕ್ಯುರಿಟಿಯನ್ನು ನೇಮಿಸಿಕೊಂಡಿದ್ದರೂ, ವೈಯಕ್ತಿಕವಾಗಿ ಗನ್ ಲೈಸೆನ್ಸ್ ಅವಶ್ಯಕತೆ ಇರುತ್ತದೆ. ಹೀಗಾಗಿ ನನ್ನ ಗನ್ ಲೈಸನ್ಸ್ ರದ್ದು ಮಾಡಬಾರದು ಎಂದು ಉತ್ತರ ನೀಡಿದ್ದರು.
ಅಲ್ಲದೆ ತಾವು ಹೇಳಿರುವಂತೆ ಈ ಪರವಾನಗಿ ಹೊಂದಿರೋ ಗನ್ ಬಳಸಿ, ನನ್ನ ಮೇಲೆ ಸದ್ಯ ಚಾಲ್ತಿಯಲ್ಲಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾವುದೇ ಸಾಕ್ಷಿಗಳಿಗೆ ಬೆದರಿಕೆ ಹಾಕುವುದಿಲ್ಲ. ಒಂದು ವೇಳೆ ಅಂತಹ ಘಟನೆಗಳು ನಡೆದಲ್ಲಿ ತಾವು ಸೂಕ್ತ ಕ್ರಮ ಜರುಗಿಸಬಹುದು. ನನಗೆ ಜೀವ ಬೆದರಿಕೆ ಕೂಡ ಇದೆ ಎಂದು ನಟ ದರ್ಶನ್ ಗನ್ ಲೈಸೆನ್ಸ್ ರದ್ದು ಮಾಡಬಾರದು ಎಂದು ಪೊಲೀಸರ ಪತ್ರಕ್ಕೆ ಉತ್ತರಿಸಿದ್ದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೆ ಶೆಡ್‌ಗಳ ಮೇಲೆ ಘರ್ಜಿಸಿದ ಬಿಬಿಎಂಪಿ ಜೆಸಿಬಿ; ನಟ ದರ್ಶನ್ ಮನೆ ಉಡೀಸ್ ಯಾವಾಗ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ