ರಾಜ್ಯದಲ್ಲಿ ರೇಷನ್ ಕಾರ್ಡ್ ಹೊಂದಿದ್ದರೂ 6 ತಿಂಗಳಿಂದ ರೇಷನ್ ಪಡೆಯದ 3.26 ಲಕ್ಷ ಪಡಿತರ ಚೀಟಿಯನ್ನು ರದ್ದುಗೊಳಿಸಲು ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು (ಅ.17): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪಡಿತರ ಚೀಟಿ (Ration Card) ಪ್ರಾಮುಖ್ಯತೆ ಹೆಚ್ಚಾಗಿದೆ. ಇನ್ನು ಕೆಲವರು ಕೆಲವು ಸರ್ಕಾರದಿಂದ ರೇಷನ್ ಪಡೆಯದಿದ್ದರೂ ಕೆಲವು ಸೌಲಭ್ಯಗಳನ್ನು ಪಡೆಯಲು ಪಡಿತರ ಚೀಟಿ ಮಾಡಿಸಿದ್ದರು. ಹೀಗೆ, ಪಡಿತರ ಚೀಟಿಯಿದ್ದರೂ ರೇಷನ್ ಪಡೆಯದ 3 ಲಕ್ಷಕ್ಕೂ ಅಧಿಕ ರೇಷನ್ ಕಾರ್ಡ್‌ಗಳನ್ನು ಅಮಾನತು ಮಾಡುವಂತೆ ಸರ್ಕಾರ ಆದೇಶ ನೀಡಿದೆ.
ಹೌದು, ಈಗಾಗಲೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗ್ಯಾರಂಟಿಗಳನ್ನುಜಾರಿಗೊಳಿಸಲು ಮೂಲ ದಾಖಲೆಯಾಗಿ ಆಧಾರ್‌ಕಾರ್ಡ್ ಹಾಗೂ ಪಡಿತರ ಚೀಟಿಯನ್ನು ಪರಿಗಣಿಸುತ್ತಿದೆ. ಮಹಿಳೆಯರಿಗೆ 2,000 ರೂ. ಹಣವನ್ನು ನೀಡುವ ಗೃಹಲಕ್ಷ್ಮಿ ಯೋಜನೆ, ಎಲ್ಲ ಪಡಿತರ ಚೀಟಿದಾರರಿಗೆ ತಲಾ 10 ಕೆ.ಜಿ. ಪಡಿತರ ನೀಡುವ ಅನ್ನಭಾಗ್ಯ ಯೋಜನೆಗೆ ಪಡಿತರ ಚೀಟಿಯೇ ಆಧಾರವಾಗಿದೆ. ಹೀಗಾಗಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಹೊಸ ಪಡಿತರ ಚೀಟಿ ವಿತರಣೆಯನ್ನು ಸ್ಥಗಿತಗೊಳಿಸಿದೆ. ಜೊತೆಗೆ, ಪಡಿತರ ಚೀಟಿ ಹೊಂದಿದ್ದರೂ ರೇಷನ್ ಪಡೆಯದವರಿಗೆ ಶಾಕ್ ನೀಡಲು ಮುಂದಾಗಿದೆ.
ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮನೆ ಬಾಗಿಲಿಗೆ ಪಡಿತರ ವಿತರಣೆಗೆ ಪಟ್ಟಿ ಸಿದ್ಧಪಡಿಸಿದ ಸರ್ಕಾರ
ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದ ಪಡಿತರ ಚೀಟಿ ಹೊಂದಿದ್ದರೂ 6 ತಿಂಗಳಿಂದ ನಿರಂತರವಾಗಿ ರೇಷನ್ ಪಡೆಯದವರಿಗೆ ಅನ್ನಭಾಗ್ಯ ಯೋಜನೆಯ 5 ಕೆ.ಜಿ. ಅಕ್ಕಿಯ ಹಣ ನೀಡುವುದಿಲ್ಲ ಎಂದು ತಿಳಿಸಿತ್ತು. ಕೇಂದ್ರ ಸರ್ಕಾರ ಈಗ ನೋಂದಣಿಯಾಗಿರುವ ಪಡಿತರ ಚೀಟಿಗಷ್ಟೇ ಅಕ್ಕಿ ವಿತರಣೆ ಮಾಡುತ್ತಿದ್ದು, ಹೊಸ ಪಡಿತರ ಚೀಟಿಗಳಿಗೆ ಅಕ್ಕಿ ವಿತರಣೆಗೆ ಅನುಮತಿ ನೀಡಿಲ್ಲ. ಜೊತೆಗೆ, ಹೊಸ ಪಡಿತರ ಚೀಟಿ ವಿತರಣೆ ಮಾಡಿದರೆ, ಹೆಚ್ಚುವರಿ 3 ಲಕ್ಷ ಫಲಾನುಭವಿಗಳಿಗೆ ಸರ್ಕಾರದ ಗ್ಯಾರಂಟಿ ಯೋಜನೆ ನೀಡಲು ಕೋಟ್ಯಂತರ ರೂ. ಹಣ ವ್ಯಯ ಮಾಡುವ ಸಾಧ್ಯತೆ ಹೆಚ್ಚಾಗಿದೆ ಎಂಬುದನ್ನು ಮನಗಂಡ ಸರ್ಕಾರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಲ್ಲಿಕೆಯಾಗಿದ್ದ 3.9 ಲಕ್ಷ ಹೊಸ ಪಡಿತರ ಚೀಟಿ ಅರ್ಜಿಗಳನ್ನು ಪರಿಶೀಲನೆ ಮಾಡಿ ಕಾಯ್ದಿರಿಸಿತ್ತು.
ಜೊತೆಗೆ, ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಹಾಕಿದವರಲ್ಲಿ ಅರ್ಹರನ್ನು ಮಾತ್ರ ಪತ್ತೆಹಚ್ಚಲು ಅಧಿಕಾರಿಗಳಿಗೆ ಟಾಸ್ಕ್ ನೀಡಲಾಗಿತ್ತು. ಆದರೆ, ಈಗ ಅರ್ಹರ ಸಂಖ್ಯೆಯೂ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಹೆಚ್ಚು ಹೊರೆಯಾಗುವ ಸಾಧ್ಯತೆಯಿದೆ. ಆದ್ದರಿಂದ ಸರ್ಕಾರವು ಈಗಾಗಲೇ ಪಡಿತರ ಚೀಟಿ ಹೊಂದಿದ್ದರೂ ರೇಷನ್ ಪಡೆಯದ ಫಲಾನುಭವಿಗಳ ಪಡಿತರ ಚೀಟಿ ರದ್ದುಗೊಳಿಸಲು ಚಿಂತನೆ ಮಾಡಿದ್ದು, ಅದರಂತೆ ಆದೇಶವನ್ನೂ ಹೊರಡಿಸಲಾಗಿದೆ. ಈ ಮೂಲಕ ಸರ್ಕಾರ ಮುಂದಿನ ಕೆಲವು ವರ್ಷಗಳವರೆಗೆ ಗ್ಯಾರಂಟಿ ಯೋಜನೆಗೆ ಈಗ ಲೆಕ್ಕ ಹಾಕಿರುವುದಕ್ಕಿಂತ ಹೆಚ್ಚುವರಿ ಹಣ ಖರ್ಚಾಗದಂತೆ ಸರಿದೂಗಿಸುವ ಪ್ರಯತ್ನವನ್ನೂ ಮಾಡುತ್ತಿರಬಹುದು.
ಕಳೆದ 6 ತಿಂಗಳಿಂದ ಪಡಿತರ ಪಡೆಯದವರ ರೇಷನ್ ಕಾರ್ಡ್ ಅಮಾನತು ಮಾಡಲು ಆಹಾರ ಇಲಾಖೆ ಮುಂದಾಗಿದೆ. ಈ ನಿಯಮ ಅಂತ್ಯೋದಯ, ಬಿಪಿಎಲ್ ಕಾರ್ಡ್ ಅನ್ವಯಿಸುತ್ತದೆ. ಸದ್ಯ ಆರು ತಿಂಗಳಿಂದ ಒಟ್ಟು 3.26 ಲಕ್ಷ ಜನ ಪಡಿತರ ಪಡೆದಿಲ್ಲ ಎಂಬ ಮಾಹಿತಿ ಲಭ್ಯವಾಗಿದ್ದು, ಅಂತಹ ರೇಷನ್ ಕಾರ್ಡ್ಗಳ ದತ್ತಾಂಶ ಸಂಗ್ರಹಿಸಿ ಅಮಾನತು ಮಾಡುವಂತೆ ಆದೇಶಿಸಿದೆ.
ಬಿಪಿಎಲ್ ಕಾರ್ಡ್‌ದಾರರಿಗೆ ಶಾಕ್: ಅನ್ನಭಾಗ್ಯದ ಹಣಕ್ಕೆ ಕತ್ತರಿ ಹಾಕಿದ ಸರ್ಕಾರ, 10 ಕೆ.ಜಿ. ಅಕ್ಕಿ ಕೊಡಲು ನಿರ್ಧಾರ
ಸರ್ಕಾರದ ದತ್ತಾಂಶದಂತೆ ಮುಂದಿನ ಒಂದು ವಾರದಲ್ಲಿ 3.26 ಲಕ್ಷ ಕಾರ್ಡ್ಗಳು ಅಮಾನತು ಆಗಲಿವೆ. ಈಗಾಗಲೇ ಮೃತರ ಹೆಸರಲ್ಲಿದ್ದ ಪಡಿತರ ಫಲಾನುಭವಿಗಳ ಹೆಸರು ಡಿಲೀಟ್ ಮಾಡಿ ರೇಷನ್ ಕಾರ್ಡ್ ಫಲಾನುಭವಿಗಳಿಗೆ ಆಹಾರ ಇಲಾಖೆ ಶಾಕ್ ಕೊಟ್ಟಿತ್ತು. ಇದೀಗ 6 ತಿಂಗಳಿನಿಂದ ಅಕ್ಕಿ ಪಡೆಯದ ರೇಷನ್ ಕಾರ್ಡ್‌ಗಳನ್ನು ಸಸ್ಪೆಂಡ್ ಮಾಡಲು ಮುಂದಾಗಿದೆ.