
ಬೆಂಗಳೂರು (ಜು.15): ಕರ್ನಾಟಕದಿಂದ ಕಾಶಿ ಯಾತ್ರೆಗೆ ಹೋಗಿಬಂದ 30 ಸಾವಿರ ಯಾತ್ರಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ತಲಾ 5 ಸಾವಿರ ರೂ. ಸಹಾಯಧನ ನೀಡುವುದಕ್ಕೆ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈಗಾಗಲೇ ಯಾತ್ರೆಗೆ ಹೋಗಿಬಂದವರು, ಇನ್ನುಮುಂದೆ ಹೋಗಿ ಬಂದಲ್ಲಿ ಅವರು ಈ ಸಂಬಂಧಪಟ್ಟ ದಾಖಲೆಗಳನ್ನು ಅರ್ಜಿಗಳೊಂದಿಗೆ ಲಗತ್ತಿಸಿ, ಸರ್ಕಾರಕ್ಕೆ ಸಲ್ಲಿಕೆ ಮಾಡಿದರೆ ಸಹಾಯಧನವನ್ನು ಬ್ಯಾಂಕ್ ಖಾತೆಗೆ ನೇರವಾಗಿ ಪಾವತಿಸಲಾಗುತ್ತದೆ.
2025-26ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದಿಂದ ಪ್ರಥಮ ಬಾರಿಗೆ ಕಾಶಿ ಯಾತ್ರೆ ಕೈಗೊಂಡ 30000 ಯಾತ್ರಾರ್ಥಿಗಳಿಗೆ ತಲಾ ರೂ.5000/-ಗಳಂತೆ ಸರ್ಕಾರದ ಸಹಾಯಧನವನ್ನು ವಿತರಿಸುವ ಕುರಿತು ಇಂದಿನಿಂದಲೇ (ಜು.15ರಿಂದ) ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಬಗ್ಗೆ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯಿಂದ ಅಧಿಕೃತವಾಗಿ ಪ್ರಕಟಣೆಯನ್ನೂ ನೀಡಲಾಗಿದೆ. ಆದರೆ, ಕಾಶಿ ಯಾತ್ರೆಗೆ ಹೋಗಿಬಂದ ಬಗ್ಗೆ ಅಧಿಕೃತವಾದ ದಾಖಲೆಗಳನ್ನು ನೀಡುವುದು ಕಡ್ಡಾಯವಾಗಿದೆ.
ಕಾಶಿ ಯಾತ್ರೆ ಸಹಾಯಧನ ಪಡೆಯಲು ಅರ್ಹತೆಗಳು:
ಯಾತ್ರಾರ್ಥಿಗಳು ಸಹಾಯಧನವನ್ನು ಒಂದು ಬಾರಿ ಪಡೆದ ನಂತರದಲ್ಲಿ ಅದೇ ವ್ಯಕ್ತಿಗೆ ಮತ್ತೊಮ್ಮೆ ಅನುದಾನ ನೀಡಲಾಗುವುದಿಲ್ಲ. ಈ ಬಗ್ಗೆ ಯಾತ್ರಾರ್ಥಿಗಳು 100 ರೂ.ಗಳ ಛಾಪಾ ಕಾಗದ (E-Stamp Paper)ದಲ್ಲಿ ಈ ಹಿಂದೆ ಸಹಾಯಧನವನ್ನು ಪಡೆದಿಲ್ಲವೆಂದು ಸ್ವದೃಢೀಕರಿಸಿ ನೋಟರಿ ಮೊಹರು ಮತ್ತು ಸಹಿಯೊಂದಿಗೆ ದೃಢೀಕರಣವನ್ನು ಅಪ್‌ಲೋಡ್ ಮಾಡತಕ್ಕದ್ದು.
ಕಾಶಿಯಾತ್ರೆ ಕೈಗೊಂಡಿರುವುದನ್ನು ದೃಢೀಕರಿಸುವ ಸಲುವಾಗಿ ಕಾಶಿ ವಿಶ್ವನಾಥಸ್ವಾಮಿ ದೇವಾಲಯದ ಮುಂಬದಿಯಲ್ಲಿ ಯಾತ್ರಾರ್ಥಿಗಳ ಛಾಯಚಿತ್ರ (Photo)/GPS location ಹೊಂದಿರುವ ಛಾಯಾಚಿತ್ರನ್ನು ಮೊಬೈಲ್‌ನಲ್ಲಿ ತೆಗೆದು ಆಪ್ ಲೋಡ್ ಮಾಡತಕ್ಕದ್ದು.
ಯಾತ್ರಾರ್ಥಿಯು ಅರ್ಜಿ ಸಲ್ಲಿಸುವ ಮುನ್ನ ಅವರ ಬ್ಯಾಂಕ್ ಖಾತೆಯು ಚಾಲ್ತಿಯಲ್ಲಿರಬೇಕು, ಸದರಿ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಅನ್ನು ತಪ್ಪದೇ Seed ಹಾಗೂ NPCI Active ಮಾಡಿಸಿರತಕ್ಕದ್ದು. (ಸರ್ಕಾರದ ಮಾರ್ಗಸೂಚಿಯನ್ವಯ ಆಯಾಯಾ ವರ್ಷದ ಅನುದಾನವನ್ನು ಆಯಾಯಾ ವರ್ಷ ಪಾವತಿಸಲು ಅವಕಾಶವಿರುವುದರಿಂದ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಅನ್ನು ತಪ್ಪದೇ Seed ಹಾಗೂ NPCI Active ಅನ್ನು ನಿಗದಿತ ದಿನಾಂಕದೊಳಗೆ ಮಾಡಿಸದಿದ್ದಲ್ಲಿ ತಾವೇ ನೇರ ಜವಾಬ್ದಾರರು) ಅವಧಿ ಮುಗಿದ ನಂತರ ಸಹಾಯಧನ ಕೋರಿ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಇನ್ನು ಹೆಚ್ಚಿನ ಮಾಹಿತಿಯನ್ನು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಅಧಿಕೃತ ವೆಬ್ ಸೈಟ್ https://itms.kar.nic.in ನಲ್ಲಿ ಪಡೆದುಕೊಳ್ಳಬಹುದಾಗಿದೆ.
ಸರ್ಕಾರದ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯಗಳಿಂದ ಬರುವ ಅನುದಾನವನ್ನು ಧಾರ್ಮಿಕ ದತ್ತಿ ಇಲಾಖೆಯಿಂದ ಭಕ್ತರಿಗಾಗಿ ಹಾಗೂ ದೇವಾಲಯ ಜೀರರ್ಣೋದ್ಧಾರ ಕಾರ್ಯಗಳಿಗಾಗಿ ಬಳಕೆ ಮಾಡುವ ಉದ್ದೇಶವನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಹಲವು ಧಾರ್ಮಿಕ ಯಾತ್ರೆಗಳಿಗೆ ಸಹಾಯಧನವನ್ನು ನೀಡಲು ಸರ್ಕಾರ ಆಗಿಂದಾಗ್ಗೆ ಅರ್ಜಿ ಆಹ್ವಾನಿಸುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ