ನೆರೆಯಲ್ಲಿ ಮನೆ ಕಳಕೊಂಡವರಿಗೆ 5 ಲಕ್ಷ ರು.

By Sujatha NRFirst Published Aug 14, 2021, 7:45 AM IST
Highlights
  • ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜುಲೈನಲ್ಲಿ ಉಂಟಾದ ಪ್ರವಾಹದಿಂದ ಹಾನಿಯಾದ ಮನೆಗಳ ಪುನರ್‌ ನಿರ್ಮಾಣಕ್ಕೆ ಪರಿಹಾರ
  •   ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಹೆಚ್ಚುವರಿ ಪರಿಹಾರ

ಬೆಂಗಳೂರು (ಆ.14):  ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜುಲೈನಲ್ಲಿ ಉಂಟಾದ ಪ್ರವಾಹದಿಂದ ಹಾನಿಯಾದ ಮನೆಗಳ ಪುನರ್‌ ನಿರ್ಮಾಣ, ದುರಸ್ತಿ ಕಾರ್ಯ ಹಾಗೂ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಹೆಚ್ಚುವರಿ ಪರಿಹಾರ ನೀಡುವ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಭಾಗಶಃ ಅಥವಾ ಸಂಪೂರ್ಣ ಹಾನಿಗೊಂಡ ಮನೆಗಳಿಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಮಾರ್ಗಸೂಚಿ ಅನ್ವಯ ನೀಡಬೇಕಿದ್ದ 95,100 ರು. ಬದಲಿಗೆ ರಾಜ್ಯದಿಂದ ಹೆಚ್ಚುವರಿಯಾಗಿ 4,04,900 ರು. ಸೇರಿಸಿ 5 ಲಕ್ಷ ರು. ಪರಿಹಾರ ನೀಡಲಾಗುವುದು ಎಂದು ಹೇಳಲಾಗಿದೆ.

ಜುಲೈನಲ್ಲಿ ರಾಜ್ಯದ 13 ಜಿಲ್ಲೆಗಳ 61 ತಾಲೂಕುಗಳನ್ನು ಪ್ರವಾಹಪೀಡಿತ ತಾಲೂಕು ಎಂದು ಘೋಷಿಸಲಾಗಿತ್ತು. ಈ ವ್ಯಾಪ್ತಿಯಲ್ಲಿ ಮನೆ ಹಾನಿ, ಮನೆಗಳಲ್ಲಿನ ಗೃಹೋಪಯೋಗಿ ವಸ್ತುಗಳು ಹಾನಿಯಾಗಿರುವ ನೆರೆ ಸಂತ್ರಸ್ತರಿಗೆ ಪರಿಹಾರವನ್ನು ಕೇಂದ್ರ ಸರ್ಕಾರದ ಎಸ್‌ಡಿಆರ್‌ಎಫ್‌, ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಪ್ರಕಾರ ನೀಡಲಾಗುತ್ತಿತ್ತು. ಆಗಸ್ಟ್‌ 12ರಂದು ಆದೇಶ ಹೊರಡಿಸಿರುವ ರಾಜ್ಯ ಸರ್ಕಾರವು ಪರಿಷ್ಕೃತ ಪರಿಹಾರ ದರ ಪಟ್ಟಪ್ರಕಟಿಸಿದೆ.

ಸಾಮಾನ್ಯ ಜನರು ಫ್ಲ್ಯಾಟ್ ಖರೀದಿಸಲು ಸರ್ಕಾರದಿಂದ ಆಫರ್

ಪರಿಷ್ಕೃತ ಪರಿಹಾರ ದರ:  ಪ್ರವಾಹ ನೀರು ನುಗ್ಗಿರುವ ಮನೆಗಳ ಗೃಹೋಪಯೋಗಿ ವಸ್ತು, ಬಟ್ಟೆ-ಬರೆ ಹಾನಿಗೆ 3,800 ರು. ಇರುವ ಮಾರ್ಗಸೂಚಿ ದರದ ಬದಲಿಗೆ 10 ಸಾವಿರು ರು. ನೀಡಲಾಗುವುದು. ಶೇ.75ಕ್ಕಿಂತ ಹೆಚ್ಚು (ಸಂಪೂರ್ಣ) ಹಾನಿಯಾಗಿರುವ ಮನೆಗಳಿಗೆ 95,100 ರು. ಪರಿಹಾರ ನೀಡಲಾಗುತ್ತಿತ್ತು. ಈ ಮೊತ್ತವನ್ನು 5 ಲಕ್ಷ ರು.ಗಳಿಗೆ ಪರಿಷ್ಕರಣೆ ಮಾಡಲಾಗಿದೆ. ಶೇ.25ರಿಂದ ಶೇ.75ರಷ್ಟುತೀವ್ರ ಹಾನಿಯಾಗಿರುವ (ಕೆಡವಿ ಪುನರ್‌ನಿರ್ಮಾಣ ಮಾಡಬೇಕಿರುವ) ಮನೆಗಳಿಗೆ 95,100 ರು. ಬದಲಿಗೆ 5 ಲಕ್ಷ ರು., ಶೇ.25ರಿಂದ ಶೇ.75ರಷ್ಟುತೀವ್ರ ಹಾನಿಯಾಗಿದ್ದರೂ ದುರಸ್ತಿ ಮಾಡಬಹುದಾದ ಮನೆಗೆ 95,100 ರು.ಗಳಿದ್ದ ಪರಿಹಾರವನ್ನು 3 ಲಕ್ಷ ರು.ಗಳಿಗೆ ಪರಿಷ್ಕರಣೆ ಮಾಡಲಾಗಿದೆ.

ಇನ್ನು ಶೇ.15ರಿಂದ 25ರಷ್ಟುಭಾಗಶಃ ಮನೆ ಹಾನಿಗೆ 5,200 ರು.ಗಳಿದ್ದ ಪರಿಹಾರವನ್ನು 50 ಸಾವಿರ ರು.ಗಳಿಗೆ ಹೆಚ್ಚಿಸಲಾಗಿದೆ. ಪರಿಷ್ಕೃತ ಹೆಚ್ಚುವರಿ ಮೊತ್ತವನ್ನು ರಾಜ್ಯ ಸರ್ಕಾರ ಪಾವತಿಸಲಿದ್ದು, ಜಿಲ್ಲಾ ವಿಪತ್ತು ಪರಿಹಾರ ನಿಧಿಯಡಿ ಪರಿಹಾರವನ್ನು ಒದಗಿಸಲಾಗುವುದು ಎಂದು ಕಂದಾಯ ಇಲಾಖೆ ವಿಪತ್ತು ನಿರ್ವಹಣೆ ಮತ್ತು ಸೇವೆಗಳ ಇಲಾಖೆ ಆದೇಶದಲ್ಲಿ ತಿಳಿಸಿದೆ.

'ಬಾಕಿ ವಿಮೆ ಹಣ ರೈತರ ಖಾತೆಗೆ ಶೀಘ್ರದಲ್ಲಿ ಜಮಾ'

ಷರತ್ತುಗಳು:  ಪರಿಹಾರ ವಿತರಣೆಗೆ ಕೆಲ ಷರತ್ತು ವಿಧಿಸಿದ್ದು, ನೆರೆ ಸಂತ್ರಸ್ತರ ಬಟ್ಟೆಬರೆ, ದಿನಬಳಕೆ ವಸ್ತುಗಳ ಹಾನಿಗೆ 10 ಸಾವಿರ ರು. ಪರಿಹಾರವನ್ನು ಜಿಲ್ಲಾ ವಿಪತ್ತು ಪರಿಹಾರ ನಿಧಿಯಿಂದ ನೇರವಾಗಿ ಸಂತ್ರಸ್ತರ ಬ್ಯಾಂಕ್‌ ಖಾತೆಗೆ ಜಮೆ ಮಾಡಬೇಕು. ಸಂತ್ರಸ್ತರಿಗೆ ಭರಿಸಿರುವ ಕುಟುಂಬವಾರು ವೆಚ್ಚದ ಲೆಕ್ಕಗಳ್ನು ಜಿಲ್ಲಾಧಿಕಾರಿಗಳು ಕಡ್ಡಾಯವಾಗಿ ನಿರ್ವಹಿಸಬೇಕು. ಪ್ರವಾಹದಿಂದ ಮನೆ ಕಳೆದುಕೊಂಡಂತಹ ಸಂತ್ರಸ್ತರಿಗೆ ರಾಜೀವ್‌ ಗಾಂಧಿ ವಸತಿ ನಿಗಮದಿಂದ ಅಭಿವೃದ್ಧಿಪಡಿಸಲಾದ ತಂತ್ರಾಂಶದಿಂದ ನೇರವಾಗಿ ಖಾತೆಗೆ ಹಣ ಜಮೆ ಮಾಡಬೇಕು. ಪ್ರವಾಹ ಪೀಡಿತ ಪ್ರದೇಶಗಳ ಸಂಬಂಧಪಟ್ಟಅಧಿಕಾರಿಗಳು ವಸತಿ ಇಲಾಖೆ ಮಾರ್ಗಸೂಚಿ ಅನ್ವಯ ಅರ್ಹ ಸಂತ್ರಸ್ತರ ವಿವರಗಳನ್ನು ತಂತ್ರಾಂಶದಲ್ಲಿ ದಾಖಲಿಸಬೇಕು ಎಂದು ಹೇಳಲಾಗಿದೆ

click me!