ರಿಕ್ಷಾ, ಬಸ್‌ ಚಾಲಕರ ಆಕಸ್ಮಿಕ ಸಾವಿಗೆ 5 ಲಕ್ಷ ರು. ಪರಿಹಾರ

By Kannadaprabha NewsFirst Published Aug 14, 2021, 7:25 AM IST
Highlights
  • ರಿಕ್ಷಾ, ಬಸ್‌ ಚಾಲಕರ ಆಕಸ್ಮಿಕ ಸಾವಿಗೆ 5 ಲಕ್ಷ ರು. ಪರಿಹಾರ 
  • ಅಧಿವೇಶನದಲ್ಲಿ ಮಸೂದೆ ಮಂಡನೆ: ಸಚಿವ ಹೆಬ್ಬಾರ್‌
  • ನಾನೂ ಚಾಲಕನಾಗಿದ್ದೆ, ನನಗೆ ಅವರ ಕಷ್ಟಗೊತ್ತಿದೆ

ಬೆಂಗಳೂರು(ಆ.14): ಆಟೋ ರಿಕ್ಷಾ, ಬಸ್‌ ಚಾಲಕರು ಮತ್ತು ಕಾರ್ಮಿಕ ಇಲಾಖೆ ವ್ಯಾಪ್ತಿಯ ತಾಂತ್ರಿಕ ಸಿಬ್ಬಂದಿ ಆಕಸ್ಮಿಕವಾಗಿ ಸಾವನ್ನಪ್ಪಿದರೆ ಕಾರ್ಮಿಕ ಇಲಾಖೆಯಿಂದ ಐದು ಲಕ್ಷ ರು. ಪರಿಹಾರ ನೀಡುವ ಮಸೂದೆಯನ್ನು ಮುಂಬರುವ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್‌ ಹೇಳಿದ್ದಾರೆ.

ಶುಕ್ರವಾರ ವಿಕಾಸಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಒಂದು ಕಾಲದಲ್ಲಿ ನಾನೇ ಚಾಲಕನಾಗಿ ಕೆಲಸ ಮಾಡಿದ್ದೇನೆ. ಕಾರ್ಮಿಕರ ಕಷ್ಟಗಳೇನು ಎಂಬುದು ನನಗೆ ಗೊತ್ತಿದೆ. ಹೀಗಾಗಿ ಕಾರ್ಮಿಕರು ಮೃತಪಟ್ಟರೆ ಐದು ಲಕ್ಷ ರು. ಪರಿಹಾರ ನೀಡುವ ಹೊಸ ಕಾರ್ಯಕ್ರಮವನ್ನು ರೂಪಿಸಲು ಮುಂದಾಗಿದ್ದೇನೆ. ಇಲಾಖೆಯಲ್ಲಿ ದೃಢ ಹೆಜ್ಜೆ ಇಡಬೇಕೆಂಬ ಸಂಕಲ್ಪ ಮಾಡಿರುವ ಕಾರಣ ಮಸೂದೆಯನ್ನು ಜಾರಿಗೊಳಿಸುವ ತೀರ್ಮಾನಕ್ಕೆ ಬರಲಾಗಿದೆ. ಈಗಾಗಲೇ ಇಲಾಖೆಯಲ್ಲಿ ರೂಪರೇಷೆಗಳನ್ನು ಸಿದ್ಧಪಡಿಸಲಾಗಿದೆ. ಇದರಿಂದ ಕಾರ್ಮಿಕ ವರ್ಗಕ್ಕೆ ಬಹುದೊಡ್ಡ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಸಾಮಾನ್ಯ ಜನರು ಫ್ಲ್ಯಾಟ್ ಖರೀದಿಸಲು ಸರ್ಕಾರದಿಂದ ಆಫರ್

ಕಾರ್ಮಿಕ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ನೀಡುವ ಸಹಾಯಧನವನ್ನು ದುಪ್ಪಟ್ಟು ಮಾಡಲಾಗಿದೆ. ಕಾರ್ಮಿಕರ ಹಿತವನ್ನು ಕಾಪಾಡುವುದು ನನ್ನ ಮೊದಲ ಆದ್ಯತೆ. ಕಾರ್ಮಿಕ ಇಲಾಖೆಗೆ ಸಂಬಂಧಪಟ್ಟಂತೆ ಇನ್ನುಮುಂದೆ ಜಾಗೃತಿ ಜಾಥಾವನ್ನು ನಡೆಸಲಾಗುವುದು. ವಲಸೆ ಕಾರ್ಮಿಕರಿಗೆ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ವಸತಿ ಸಮುಚ್ಚಯ ಕಟ್ಟಲು ತೀರ್ಮಾನಿಸಲಾಗಿದೆ. ಅಲ್ಲದೆ, ಕಾರ್ಮಿಕರಿಗೆ ನೀಡುತ್ತಿರುವ ವಿವಿಧ ಸಹಾಯಧನವನ್ನು ದುಪ್ಪಟ್ಟು ಮಾಡಲು ನಿರ್ಧರಿಸಲಾಗಿದೆ. ಕಾರ್ಮಿಕ ಇಲಾಖೆಯಲ್ಲಿ ವಿಜಿಲೆನ್ಸ್‌ ಸೆಲ್‌ ಮಾಡಲಾಗುತ್ತದೆ ಎಂದು ತಿಳಿಸಿದರು.

ಬಿಜೆಪಿಗೆ ವಲಸೆ ಬಂದವರಲ್ಲಿ ಕೆಲವರಿಗೆ ಸಚಿವ ಸ್ಥಾನ ಕೈತಪ್ಪಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸುತ್ತೇವೆ. ಅತಿ ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳು ಒಳ್ಳೆಯ ತೀರ್ಮಾನ ಕೈಗೊಳ್ಳುತ್ತಾರೆ. ನಮ್ಮ ಸ್ನೇಹಿತರಿಗೆ ಸಚಿವ ಸ್ಥಾನ ಸಿಗಲಿದೆ ಎಂಬ ವಿಶ್ವಾಸ ಇದೆ. ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ವಿಚಾರ ಎಲ್ಲರಿಗೂ ಗೊತ್ತಿದೆ. ಪ್ರಕರಣ ನ್ಯಾಯಾಲಯದಲ್ಲಿದೆ. ಎಲ್ಲವೂ ಮುಗಿದ ಮೇಲೆ ಸಚಿವ ಸ್ಥಾನ ಸಿಗಲಿದೆ ಎಂದರು.

4 ದಿನ ವ್ಯಾಪಕ ಮಳೆ : ಹವಾಮಾನ ಇಲಾಖೆ ಸೂಚನೆ

ಇಂದಿರಾ ಕ್ಯಾಂಟೀನ್‌ ಹೆಸರು ಬದಲಾವಣೆ ಪ್ರಸ್ತಾಪ ಕುರಿತು ಮಾತನಾಡಿದ ಅವರು, ನಾಳೆಯೇ ಬದಲಾವಣೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿಗಳು ಎಲ್ಲಿಯೂ ತಿಳಿಸಿಲ್ಲ. ಮುಖ್ಯಮಂತ್ರಿಗಳು ಸೂಕ್ತ ನಿರ್ಣಯ ಕೈಗೊಳ್ಳಲಿದ್ದಾರೆ. ಅದಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಹೆಬ್ಬಾರ್‌ ಹೇಳಿದರು.

click me!