
ತಿರುವನಂತಪುರ (ಫೆ.28): ಕಾಡಾನೆ ದಾಳಿಯಿಂದ ಮೃತಪಟ್ಟ ಕೇರಳದ ವ್ಯಕ್ತಿಗೆ ಕರ್ನಾಟಕ ಸರ್ಕಾರ 15 ಲಕ್ಷ ಪರಿಹಾರ ನೀಡಿದ ಸುದ್ದಿ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಆದರೆ, ಕಾಂಗ್ರೆಸ್ ಪಕ್ಷ ಈ ನಿರ್ಧಾರದಿಂದ ಹಿಂದೆ ಸರಿದಿದೆ. ಕರ್ನಾಟಕ ಸರ್ಕಾರದ ಪರಿಹಾರ ಹಣ ಘೋಷಣೆ ರಾಜಕೀಯ ವಿವಾದವಾಗಿ ಮಾರ್ಪಟ್ಟ ಹಿನ್ನಲೆಯಲ್ಲಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ 15 ಲಕ್ಷ ಪರಿಹಾರವನ್ನು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯಿಂದಲೇ(ಕೆಪಿಸಿಸಿ) ನೀಡುವಂತೆ ಸೂಚನೆ ನೀಡಿದ್ದರು. ಈ ನಡುವೆ ರಾಜ್ಯ ಸರ್ಕಾರ ಪರಿಹಾರ ಹಣ ನೀಡದಿರುವ ಬಗ್ಗೆ ಯಾವುದೇ ಪ್ರಕಟಣೆ ನೀಡಿಲ್ಲ. ಆದರೆ, ಕಾಡಾನೆ ದಾಳಿಯಿಂದ ಮೃತಪಟ್ಟ ಅಜೀಶ್ ಕುಟುಂಬ, ಕೇರಳ ಕಾಂಗ್ರೆಸ್ ಹಣ ಘೋಷಣೆ ಮಾಡುವ ಮುನ್ನವೇ ಕರ್ನಾಟಕ ಸರ್ಕಾರ ಘೋಷಣೆ ಮಾಡಿರುವ ಪರಿಹಾರ ಹಣ ಬೇಡ ಎಂದು ಹೇಳಿದ್ದರು. ಕೇರಳ ವ್ಯಕ್ತಿಗೆ ರಾಜ್ಯ ಸರ್ಕಾರ ಪರಿಹಾರ ಹಣ ನೀಡಿದ್ದನ್ನು ಕರ್ನಾಟಕದಲ್ಲಿ ಪಕ್ಷಾತೀತವಾಗಿ ಪ್ರಶ್ನೆ ಮಾಡಲಾಗಿತ್ತು. ಈ ನಡುವೆ ರಾಜ್ಯ ಅರಣ್ಯ ಸಚಿವ ರಾಜ್ಯದ ಕಾಡಾನೆಯಿಂದ ಕೇರಳ ವ್ಯಕ್ತಿ ಮೃತಪಟ್ಟಿರುವ ಕಾರಣ ಪರಿಹಾರ ಹಣ ನೀಡುತ್ತಿದ್ದೇವೆ ಎಂದು ಸಮರ್ಥಿಸಿಕೊಂಡಿದ್ದರು. ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಕಾನೂನಾತ್ಮಕವಾಗಿ ಹೋರಾಟ ಮಾಡಲು ಬಿಜೆಪಿ ಸಿದ್ಧವಾಗಿರುವುದನ್ನು ಅರಿತ ರಾಹುಲ್ ಗಾಂಧಿ, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸದೇ ಇರಲು ಈ ಮೊತ್ತವನ್ನು ಕೇರಳ ಕಾಂಗ್ರೆಸ್‌ನಿಂದ ನೀಡುವಂತೆ ಸೂಚನೆ ನೀಡಿದ್ದಾರೆ.
ಮಂಗಳವಾರ ಈ ಕುರಿತಾಗಿ ಕೆಪಿಸಿಸಿ ಅಧ್ಯಕ್ಷ ಕೆ. ಸುಧಾಕರನ್, ರಾಹುಲ್ ಗಾಂಧಿ ಅವರಿಂದ ಸೂಚನೆ ಸ್ವೀಕರಿಸಿದ ಬೆನ್ನಲ್ಲಿಯೇ 15 ಲಕ್ಷ ಹಣವನ್ನು ಘೋಷಣೆ ಮಾಡಿದ್ದಾರೆ. ಫೆಬ್ರವರಿ 29 ರಂದು ಸಮರಾಗ್ನಿ ಮೆರವಣಿಗೆ ಮುಗಿದ ನಂತರ ಸುಧಾಕರನ್ ಅವರೇ ಕುಟುಂಬವನ್ನು ಭೇಟಿ ಮಾಡಿ ಹಣ ಹಸ್ತಾಂತರಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಕರ್ನಾಟಕ ಕೇರಳ ಗಡಿಯಲ್ಲಿ ಬಿಡಲಾಗಿದ್ದ ರೇಡಿಯೋ ಕಾಲರ್ ಹೊಂದಿದ್ದ ಕರ್ನಾಟಕದ ಬೇಲೂರು ಮೂಲದ ಕಾಡಾನೆ, ವಯನಾಡ್‌ಗೆ ನುಗ್ಗಿ ಅಜೀಶ್ ಎನ್ನುವ ವ್ಯಕ್ತಿಯನ್ನು ತುಳಿದು ಸಾಯಿಸಿತ್ತು. ಇತ್ತೀಚೆಗೆ ಕುಟುಂಬವನ್ನು ಭೇಟಿ ಮಾಡಿದ್ದ ವಯನಾಸ್ ಸಂಸದ ರಾಹುಲ್ ಗಾಂಧಿ, ಈ ಕುಟುಂಬಕ್ಕೆ ಪರಿಹಾರ ನೀಡುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿದ್ದರು. ರಾಹುಲ್ ಗಾಂಧಿಯಿಂದ ಸೂಚನೆ ಬಂದ ಬೆನ್ನಲ್ಲಿಯೇ ರಾಜ್ಯ ಸರ್ಕಾರ, ಅರಣ್ಯ ಇಲಾಖೆ ವತಿಯಿಂದ 15 ಲಕ್ಷ ರೂಪಾಯಿ ಪರಿಹಾರ ಹಣವನ್ನು ಘೋಷಣೆ ಮಾಡಿತ್ತು.
ಕೇರಳ ವ್ಯಕ್ತಿಗೆ ಕರ್ನಾಟಕ ಸರ್ಕಾರ ಪರಿಹಾರ ಹಣ ಘೋಷಣೆ ಮಾಡುತ್ತಿದ್ದಂತೆ ರಾಜ್ಯದ ಜನರು, ಮಾಧ್ಯಮಗಳು ಹಾಗೂ ವಿಪಕ್ಷಗಳು ಸರ್ಕಾರದ ಬೆನ್ನುಬಿದ್ದಿದ್ದವು. ರಾಜ್ಯದಲ್ಲಿಯೇ ಆನೆ ದಾಳಿಯಲ್ಲಿ ಮೃತಪಟ್ಟ ವ್ಯಕ್ತಿಗಳು ಪರಿಹಾರ ಹಣಕ್ಕಾಗಿ ಸರ್ಕಾರಿ ಕಚೇರಿಗಳ ಮೆಟ್ಟಿಲು ಏರುತ್ತಿರುವಾಗ, ಕೇರಳ ವ್ಯಕ್ತಿಗೆ ಪರಿಹಾರ ಹಣ ನೀಡಿದ್ದೇಕೆ ಎನ್ನುವ ಪ್ರಶ್ನೆಗಳು ಎದ್ದಿದ್ದವು. ರಾಹುಲ್ ಗಾಂಧಿಗೆ ಸಮಾಧಾನ ಪಡಿಸಲು ರಾಜ್ಯದ ಖಜಾನೆಯ ಹಣವನ್ನು ನೀಡಲು ಅವಕಾಶ ನೀಡೋದಿಲ್ಲ ಎಂದು ಬಿಜೆಪಿ ವಿರೋಧಿಸಿತ್ತು. ಇದು ಕರ್ನಾಟಕದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.
ಇದ್ಯಾವ್ ನ್ಯಾಯ ಸ್ವಾಮಿ..ಫುಟ್‌ಪಾತ್‌ನಲ್ಲಿ ಬೆಸ್ಕಾಂ ತಂತಿ ತಗುಲಿ ಹೆಣವಾದ ತಾಯಿ ಮಗುವಿಗೆ 5 ಲಕ್ಷ, ಕೇರಳ ವ್ಯಕ್ತಿಗೆ 15 ಲಕ್ಷ!
ಈ ಕುರಿತಾಗಿ ಸೋಮವಾರ ಮಾಧ್ಯಮದೊಂದಿಗೆ ಮಾತನಾಡಿದ ಅಜೀಶ್ ಅವರ ತಂದೆ, ಕರ್ನಾಟಕ ಸರ್ಕಾರದ ಪರಿಹಾರ ಹಣವನ್ನು ನಾವು ವಿನಮ್ರವಾಗಿಯೇ ತಿರಸ್ಕರಿಸುತ್ತಿದ್ದೇವೆ ಎಂದು ಹೇಳಿದ್ದರು. ಇದರ ಮರುದಿನವೇ ಸುದ್ದಿಗೋಷ್ಠಿಯಲ್ಲಿ ಕೆ.ಸುಧಾಕರಣ್ ನೆರವು ಘೋಷಣೆ ಮಾಡಿದ್ದಾರೆ. ಬಿಜೆಪಿಯ ಅಮಾನವೀಯ ಧೋರಣೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಂಕಷ್ಟದ ಸಮಯದಲ್ಲಿ ನಮ್ಮ ಕುಟುಂಬಕ್ಕೆ ಕಾಂಗ್ರೆಸ್ ಬೆಂಬಲ ನೀಡಿದೆ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ