ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಅಭಾವವಿದೆ ಎಂದು ಹೇಳುತ್ತಲೇ ರಾಜ್ಯ ಸರ್ಕಾರ, 2 ಸಾವಿರ ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಹರಿಸಿದೆ ಎಂಬ ಅನುಮಾನ ಗೋಚರವಾಗುತ್ತಿದೆ.
ಮಂಡ್ಯ (ಜು.23): ರಾಜ್ಯದ ದಕ್ಷಿಣ ಒಳನಾಡಿದ ಅತ್ಯಂತ ಪ್ರಮುಖ ಜಲಾಶಯವಾದ ಹಾಗೂ ಬೆಂಗಳೂರು ಸೇರಿದಂತೆ ಮೂರ್ನಾಲ್ಕು ಜಿಲ್ಲೆಗಳಿಗೆ ನೀರು ಒದಗಿಸುವ ಕಾವೇರಿ ನದಿಯ ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಅಭಾವವಿದೆ ಎಂದು ಹೇಳುತ್ತಲೇ ರಾಜ್ಯ ಸರ್ಕಾರ, 2 ಸಾವಿರ ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಹರಿಸಿದೆ ಎಂಬ ಅನುಮಾನ ಗೋಚರವಾಗುತ್ತಿದೆ.
ಹೌದು, ನಿನ್ನೆಯಿಂದ ಕಾವೇರಿ ನೀರಾವರಿ ನಿಗಮವು ಯಾವುದೇ ಮಾಹಿತಿಯನ್ನೂ ನೀಡದೇ ನಾಲೆ ಹಾಗೂ ನದಿಗೆ ನೀರು ಬಿಡುಗಡೆ ಮಾಡಿದೆ. ಆದ್ದರಿಂದ KRS ಡ್ಯಾಂನಿಂದ ತಮಿಳುನಾಡಿಗೆ ಸರ್ಕಾರ ನೀರು ಹರಿಸಿದೆಯೇ? ರಾಜ್ಯದ ಜನತೆಗೆ ಕುಡಿಯುವ ನೀರಿನ ಜೊತೆಗೆ ತಮಿಳುನಾಡಿಗೂ ನೀರು ಬಿಟ್ತಾ? ಸಂಕಷ್ಟ ಸೂತ್ರದಡಿ 2 ಸಾವಿರ ಕ್ಯೂಸೆಕ್ ನೀರು ಹರಿಸಲಾಗಿದೆಯೇ? ಎಂಬ ಅನುಮಾನಗಳು ಮಂಡ್ಯ ಜಿಲ್ಲೆಯಲ್ಲಿ ಗೋಚರವಾಗತ್ತಿದೆ. ಜನ ಜಾನುವಾರು ಕುಡಿಯುವ ಉದ್ದೇಶಕ್ಕೆಂದು ನಾಲೆ ಹಾಗೂ ನದಿಗೆ ನೀರು ಬಿಡುಗಡೆ ಮಾಡಿದೆ. ಒಟ್ಟಾರೆ, ನಾಲೆ ಹಾಗೂ ನದಿಗೆ ಸೇರಿ 5,258 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.
ಮಳೆ ಕೊರತೆ ನಡುವೆಯೂ ಜಲಾಶಯ ಭರ್ತಿ, ಈ ವರ್ಷ ತುಂಬಿದ ರಾಜ್ಯದ ಮೊಟ್ಟ ಮೊದಲ ಡ್ಯಾಂಗೆ ಬಾಗಿನ ಅರ್ಪಣೆ
3 ಸಾವಿರ ನಾಲೆಗೆ, ಇನ್ನೆರಡು ಸಾವಿರ ನದಿಗೆ: ಇನ್ನು ಮಂಡ್ಯದ ಕಾವೇರಿ ನೀರಾವರಿ ನಿಗಮದಿಂದ ಬಿಡುಗಡೆ ಮಾಡಲಾದ 5,250 ಕ್ಯೂಸೆಕ್ಸ್ ನೀರಿನಲ್ಲಿ 3000 ಕ್ಯೂಸೆಕ್ ನೀರನ್ನು ನಾಲೆಗಳಿಗೆ ಕುಡಿಯುವ ನೀರಿಗಾಗಿ ಹರಿಸಲಾಗಿದೆ. ಆದರೆ, ಇದರೊಂದಿಗೆ 2 ಸಾವಿರ ಕ್ಯೂಸೆಕ್ ನೀರನ್ನು ಕಾವೇರಿ ನದಿಗೆ ಹರಿಸಲಾಗಿದೆ. ಅಂದರೆ, ಯಾವುದೇ ಮುನ್ಸೂಚನೆಯನ್ನೂ ನೀಡದೇ ಕಾವೇರಿ ನದಿಗೆ ನೀರು ಹರಿಸುವ ಮೂಲಕ ಕುಡಿಯುವ ನೀರಿನ ನೆಪದಲ್ಲಿ ತಮಿಳುನಾಡಿಗೂ ರಾಜ್ಯ ಸರ್ಕಾರದಿಂದ ನೀರು ಬಿಟ್ಟಿರುವ ಅನುಮಾನ ಎದುರಾಗಿದೆ.
ಜುಲೈನಲ್ಲಿ 40 ಟಿಎಂಸಿ ನೀರು ಹರಿಸಬೇಕು: ಇನ್ನು ಕಾವೇರಿ ನದಿ ನೀರಿನ ಹಂಚಿಕೆಯ ಸಂಕಷ್ಟ ಸೂತ್ರದಂತೆ ತಮಿಳುನಾಡಿಗೆ ನೀರು ಕೊಡುವುದು ಅನಿವಾರ್ಯವಾಗಿದೆ. ತಮಿಳುನಾಡಿಗೆ ನೀರು ಬಿಡದೆ ಕೇವಲ ನಾಲೆಗಳಿಗೆ ನೀರು ಬಿಟ್ಟರೆ ಕಾವೇರಿ ನೀರು ನಿರ್ವಹಣೆ ಪ್ರಾಧಿಕಾರದ ಕೆಂಗಣ್ಣಿಗೆ ಗುರಿ ಸಾಧ್ಯತೆಯಿದೆ. ಆದ್ದರಿಂದ, ನಾಲೆಗೆ ನೀರು ಕೊಟ್ಟು ರೈತರನ್ನ ಸಮಾಧಾನ ಮಾಡಿದ ಸರ್ಕಾರ ತಮಿಳುನಾಡಿಗೆ ನೀರು ಬಿಡುಗಡೆ ಮಾಡಿದೆ ಎಂಬುದು ಗೋಚರವಾಗುತ್ತಿದೆ. ತಮಿಳುನಾಡಿಗೆ ಜುಲೈ ತಿಂಗಳಲ್ಲಿ 40 ಟಿಎಂಸಿ ನೀರು ಬಿಡಬೇಕು. ಆದರೆ, 40 ಟಿಎಂಸಿಯಲ್ಲಿ ಸಂಕಷ್ಟ ಸೂತ್ರದಡಿ ಎಷ್ಟು ಸಾಧ್ಯವೊ ಅಷ್ಟು ನೀರು ಬಿಡುಗಡೆಗೆ ಚಿಂತನೆ ಮಾಡಲಾಗಿತ್ತು. ಆ ಮೂಲಕ ಕಾವೇರಿ ನೀರು ನಿರ್ವಹಣೆ ಪ್ರಾಧಿಕಾರದ ಕೆಂಗಣ್ಣಿನಿಂದ ಪಾರಾಗಲು ಪ್ಲಾನ್ ಮಾಡಿದಂತಾಗಿದೆ.
ನಾಳೆಯಿಂದ 50 ಕಿ.ಮೀ ವೇಗದಲ್ಲಿ ಬಿರುಗಾಳಿ ಸಹಿತ ಮಳೆ: ಕರಾವಳಿ ಜನರೇ ಮೀನುಗಾರಿಕೆಗೆ ಹೋಗಬೇಡಿ
ಕೆಆರ್‌ಎಸ್ ಡ್ಯಾಂ ಒಳಹರಿವು ಹೆಚ್ಚಳ: ಮತ್ತೊಂದೆಡೆ ಕೃಷ್ಣರಾಜ ಸಾಗರ ಜಲಾಶಯ (KRS Dam) ಒಳ ಹರಿವಿನಲ್ಲೂ ಹೆಚ್ಚಳವಾಗಿದೆ. ನಿನ್ನೆ 6,278 ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. ಇಂದು ಒಳ ಹರಿವಿನ ಪ್ರಮಾಣ 9,514 ಕ್ಯೂಸೆಕ್ ಗೆ ಏರಿಕೆಯಾಗಿದೆ. ನಾಳೆ ವೇಳೆಗೆ ಮತ್ತಷ್ಟು ಒಳ ಹರಿವು ಹೆಚ್ಚಳವಾಗುವ ಸಾಧ್ಯತೆಯಿದೆ. ಹಾರಂಗಿ ಡ್ಯಾಂನಿಂದಲೂ ನೀರು ಬಿಡುಗಡೆ ಮಾಡಿರುವದರಿಂದ ನಾಳೆಗೆ KRS ಒಳ ಹರಿವು ಹೆಚ್ಚಾಗುವುದು ಖಚಿತವಾಗಿದೆ. ಒಳ ಹರಿವು ಹೆಚ್ಚಾದಂತೆ ರೈತರ ಆತಂಕ ದೂರವಾಗಲಿದೆ. ಕೆಆರ್‌ಎಸ್ ಜಲಾಶಯ 124.80 ಅಡಿ ಗರಿಷ್ಠ ಮಟ್ಟವನ್ನು ಹೊಂದಿದ್ದು, ಪ್ರಸ್ತುತ 91.82 ಅಡಿ ನೀರು ಸಂಗ್ರಹಣೆಯಿದೆ. ಇಂದು 17.051 ಟಿಎಂಸಿ ನೀರು ಸಂಗ್ರಹವಾಗಿದೆ.