ಸರ್ಕಾರದಿಂದ ರಾಜ್ಯದ ಎಣ್ಣೆ ಪ್ರಿಯರಿಗೆ ಶಾಕ್‌, ಮೂರನೇ ಬಾರಿ ಮದ್ಯದ ಬೆಲೆ ಏರಿಕೆ!

Published : May 06, 2025, 09:57 AM IST
ಸರ್ಕಾರದಿಂದ ರಾಜ್ಯದ ಎಣ್ಣೆ ಪ್ರಿಯರಿಗೆ ಶಾಕ್‌, ಮೂರನೇ ಬಾರಿ ಮದ್ಯದ ಬೆಲೆ ಏರಿಕೆ!

ಸಾರಾಂಶ

ನೆರೆರಾಜ್ಯಗಳಿಗೆ ಅನುಗುಣವಾಗಿ ಐಎಂಎಲ್ ಮತ್ತು ಬಿಯರ್ ದರ ಏರಿಕೆಗೆ ಸರ್ಕಾರ ಸಜ್ಜಾಗಿದೆ. ಕಾಂಗ್ರೆಸ್ ಅವಧಿಯ ಮೂರನೇ ಏರಿಕೆ ಇದಾಗಿದ್ದು, ಕೆಳಸ್ತರದ ಮದ್ಯದ ಮೇಲೆ ೧೦ ರಿಂದ ೨೫ ರೂ. ಹೆಚ್ಚಳವಾಗಲಿದೆ. ಹೆಚ್ಚುವರಿ ೧೪೦೦ ಕೋಟಿ ರೂ. ಗುರಿ ಸಾಧಿಸಲು ಈ ಕ್ರಮ ಅನಿವಾರ್ಯ ಎನ್ನುತ್ತಿದೆ ಅಬಕಾರಿ ಇಲಾಖೆ. ವೈನ್ ವರ್ತಕರು ಏರಿಕೆ ವಿರೋಧಿಸಿದ್ದಾರೆ.

ಬೆಂಗಳೂರು (ಮೇ.6): ನೆರೆ ರಾಜ್ಯಗಳ ಮದ್ಯದ ಬೆಲೆಗಳಿಗೆ ಅನುಗುಣವಾಗಿ ಐಎಂಎಲ್‌ ಹಾಗೂ ಬಿಯರ್‌ನ ಸ್ಲಾಬ್‌ಗಳನ್ನು ಪರಿಷ್ಕರಿಸಲು ಸರ್ಕಾರ ಮುಂದಾಗಿದೆ. ಈ ಮೂಲಕ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಮೂರನೇ ಸಲ ಮದ್ಯದ ದರ ಏರಿಕೆ ಆದಂತಾಗಲಿದೆ. ಇನ್ನೊಂದು ವಾರದಲ್ಲಿ ಹೊಸ ದರ ಜಾರಿಗೆ ತರಲು ಅಬಕಾರಿ ಇಲಾಖೆ ಸಿದ್ದತೆ ನಡೆಸುತ್ತಿದೆ. ಮದ್ಯದ 16 ಸ್ಲ್ಯಾಬ್​ಗಳಲ್ಲಿ 1 ರಿಂದ 4 ಸ್ಲ್ಯಾಬ್​ಗಳ ಮೇಲೆ ದರ ಏರಿಕೆಗೆ ಮುಂದಾಗಿದ್ದು, ಸ್ಯ್ಲಾಬ್-1, ಸದ್ಯ 80 ರೂಪಾಯಿ ಇದ್ದು ಅದರ ಮೇಲೆ 10 ರೂಪಾಯಿ ಏರಿಕೆ ಆಗಲಿದೆ. ಸ್ಲ್ಯಾಬ್- 2, 155 ರೂಪಾಯಿ ಇದ್ದು ಅದರ ಮೇಲೆ 15 ರೂಪಾಯಿ ಏರಿಕೆ ಆಗಲಿದೆ. ಸ್ಲ್ಯಾಬ್- 3, 185 ರೂಪಾಯಿ ಇದ್ದು ಅದರ ಮೇಲೆ 15 ರಿಂದ 20 ರೂಪಾಯಿ ಏರಿಕೆ ಆಗಲಿದೆ. ಸ್ಲ್ಯಾಬ್- 4, 235 ರೂಪಾಯಿ ಇದ್ದು ಅದರ ಮೇಲೆ 20 ರಿಂದ 25 ರೂಪಾಯಿ ಏರಿಕೆ ಆಗಲಿದೆ. 2024-25 ರಲ್ಲಿ ಅಬಕಾರಿ ಇಲಾಖೆಗೆ ರಾಜ್ಯ ಸರ್ಕಾರ ಬರೋಬ್ಬರಿ 38,600 ಕೋಟಿ ರೂಪಾಯಿ ಟಾರ್ಗೆಟ್ ನೀಡಿತ್ತು. ಈ ಸಾಲಿನಲ್ಲಿ ಹೆಚ್ಚುವರಿಯಾಗಿ 1400 ಕೋಟಿ ರೂಪಾಯಿ ಟಾರ್ಗೆಟ್ ನೀಡಿದೆ. ಈ ಹಿನ್ನೆಲೆಯಲ್ಲಿ ದರ ಏರಿಕೆ ಅನಿವಾರ್ಯ ಎಂದು ಅಬಕಾರಿ ಇಲಾಖೆ ದರ ಏರಿಕೆಗೆ ರೂಪುರೇಷೆಗಳನ್ನು ಮಾಡುತ್ತಿದೆ.

ಹೊರರಾಜ್ಯಕ್ಕಿಂತ ಮದ್ಯದ ಬೆಲೆ ಕಡಿಮೆ ಇದೆ: ಅಬಕಾರಿ ಸಚಿವ ತಿಮ್ಮಾಪೂರ

ಇದೆಲ್ಲದರ ನಡುವೆ ರಾಜ್ಯದಲ್ಲಿ ಮದ್ಯದ ಬೆಲೆ ಏರಿಕೆಯಾಗಿರುವುದು ನಿಜ, ಆದರೆ ಮಹಾರಾಷ್ಟ್ರ, ಆಂಧ್ರ, ತಮಿಳುನಾಡು ಪೋರ್ಸ್‌ ಸ್ಲ್ಯಾಬ್ ಗಿಂತ ರಾಜ್ಯದಲ್ಲಿ ದರ ಕಡಿಮೆ ಇದೆ, ಪ್ರೀಮಿಯಂ ಬ್ರ್ಯಾಂಡ್ ದರ ಏರಿಕೆ ಮಾಡಿಲ್ಲ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ತಿಳಿಸಿದ್ದಾರೆ. ಬಾಗಲಕೋಟೆಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸ್ವಲ್ಪ ಬೀಯರ್ ಬೆಲೆ ಹೆಚ್ಚಿಸಲಾಗಿದೆ, ಬಾಟಲ್‌ಗೆ ₹10 ಹೆಚ್ಚಳವಾಗಿದೆ, ನೆರೆ ರಾಜ್ಯಗಳಿಗಿಂತ ನಮ್ಮಲ್ಲಿ ಬೆಲೆ ಇನ್ನೂ ಕಡಿಮೆ ಇದೆ, ನಾವು ಬೀಯರ್ ಬೆಲೆ ಮಾತ್ರ ಏರಿಕೆ ಮಾಡಿದ್ದೇವೆ ಎಂದು ಹೇಳಿದರು.

ಬೆಲೆ ಏರಿಕೆಯಿಂದ ಕುಡುಕರ ಸಂಖ್ಯೆ ಕಡಿಮೆ ಆಗಲ್ವಾ ಎಂಬ ಮಾತಿಗೆ ಕುಡುಕರ ಸಂಖ್ಯೆ ಕಡಿಮೆ ಆದ್ರೆ ಒಳ್ಳೆಯದು, ನಾವು ಕ್ವಾಲಿಟಿ ಡ್ರಿಂಕ್ಸ್ ಕೊಡಬೇಕು ಎಂದು ಬೆಲೆ ಹೆಚ್ಚಳ ಮಾಡಿದ್ದೇವೆ, ಪೋರ್ಸ್ ಸ್ಲ್ಯಾಬ್ ಗಿಂತ ನಮ್ಮ ಡ್ರಿಂಕ್ಸ್‌ ಕ್ವಾಲಿಟಿ ಇದೆ. ಎಲ್ಲ ಸರ್ಕಾರಗಳ ಅವಧಿಯಲ್ಲೂ ಮದ್ಯದ ಬೆಲೆ ಏರಿಕೆ ಮಾಡುತ್ತಲೇ ಬಂದಿದ್ದಾರೆ, ನಮ್ಮ ಸರ್ಕಾರದಲ್ಲೂ ಸ್ವಲ್ಪ ಬೆಲೆ ಏರಿಕೆ ಮಾಡಲಾಗಿದೆ ಎಂದು ದರ ಹೆಚ್ಚಳ ಸಮರ್ಥಿಸಿಕೊಂಡರು.
 
ಮದ್ಯ ದರ ಹೆಚ್ಚಳ ಪ್ರಸ್ತಾವ ಕೈಬಿಡಿ ಸರ್ಕಾರಕ್ಕೆ ವೈನ್‌ ಮರ್ಚೆಂಟ್ಸ್‌ ಆಗ್ರಹ

ಮದ್ಯದ ದರ ಹೆಚ್ಚಳ ಪ್ರಸ್ತಾವವನ್ನು ಸರ್ಕಾರ ಕೈಬಿಡಬೇಕು ಎಂದು ಫೆಡರೇಷನ್‌ ಆಫ್‌ ವೈನ್‌ ಮರ್ಚೆಂಟ್ಸ್‌ ಅಸೋಸಿಯೇಷನ್‌ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ. ಈ ಬಗ್ಗೆ ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿ ಬಿ.ಗೋವಿಂದರಾಜ್‌ ಹೆಗ್ಡೆ ಅವರು ಆರ್ಥಿಕ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ಐಎಂಎಲ್‌ ಮದ್ಯ ಮತ್ತು ಬಿಯರ್ ಮೇಲೆ ಹೆಚ್ಚುವರಿ ಅಬಕಾರಿ ಶುಲ್ಕ ವಿಧಿಸುವಾಗ ವೈಜ್ಞಾನಿಕ ಮಾನದಂಡ ಅಳವಡಿಸಿಕೊಳ್ಳಬೇಕು. ಅಬಕಾರಿ ಅಧಿಕಾರಿಗಳ ನಿರ್ಲಕ್ಷ್ಯತೆಗೆ ಸನ್ನದುದಾರ ಮತ್ತು ಗ್ರಾಹಕ ಬಲಿ ಆಗಬಾರದು ಎಂದು ಮನವಿ ಮಾಡಿದ್ದಾರೆ. ಮದ್ಯದ ದರ ಹೆಚ್ಚಳವಾದರೆ ಅಕ್ಕಪಕ್ಕದ ರಾಜ್ಯಗಳಿಂದ ನಕಲಿ ಮದ್ಯ ರಾಜ್ಯ ಪ್ರವೇಶಿಸುವ ಸಾಧ್ಯತೆ ಇದ್ದು ದರ ಹೆಚ್ಚಳದ ಬಗ್ಗೆ ಪುನರ್‌ ಪರಿಶೀಲನೆ ನಡೆಸಬೇಕು. ಚಿಲ್ಲರೆ ಮದ್ಯ ಮಾರಾಟಗಾರರು ಗ್ರಾಹಕರ ಜೊತೆ ಸಂವಹನ ನಡೆಸುವುದರಿಂದ ಚಿಲ್ಲರೆ ಮದ್ಯ ಮಾರಾಟಗಾರರ ಸಭೆ ಕರೆದು ಅಭಿಪ್ರಾಯ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌