
ಓಲಾ-ಉಬರ್ ಕಂಪನಿಗಳ ಬೇಕಾಬಿಟ್ಟಿ ದರ ವಸೂಲಿಗೆ ಬ್ರೇಕ್ ಹಾಕಲು ಸಾರಿಗೆ ಇಲಾಖೆ ಮುಂದಾಗಿದ್ದು, ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕಟ್ಟುನಿಟ್ಟಿನ ತಪಾಸಣೆಗೆ ಯೋಜನೆ ರೂಪಿಸಿದೆ. ಓಲಾ ಮತ್ತು ಉಬರ್ ಕಂಪನಿಗಳ ವಿರುದ್ಧ ಸಾರಿಗೆ ಇಲಾಖೆ ಕಾರ್ಯಾಚರಣೆ ಕೈಗೊಂಡಿದ್ದು, ಪ್ರಯಾಣ ದರವನ್ನು ಕಂಪನಿಗಳು ತಮ್ಮಿಷ್ಟದಂತೆ ನಿಗದಿ ಮಾಡುತ್ತಿದ್ದರಿಂದ, ಸಾರ್ವಜನಿಕರು ಅನೇಕ ಬಾರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ಈ ಕುರಿತು ಹಲವು ಬಾರಿ ಸಾರಿಗೆ ಇಲಾಖೆ ಓಲಾ ಮತ್ತು ಉಬರ್ ಕಂಪನಿಗಳಿಗೆ ನೋಟಿಸ್ ನೀಡಿದ್ದರೂ, ಕಂಪನಿಗಳು ಯಾವುದೇ ಬದಲಾವಣೆ ತರದೆ ತಮ್ಮ ಆಟಾಟೋಪ ಮುಂದುವರಿಸಿದ್ದವು. ಇದೀಗ ಓಲಾ-ಉಬರ್ ಕಂಪನಿಗಳ ಈ ಅಕ್ರಮ ವಸೂಲಿಗೆ ಕಡ್ಡಾಯ ಕಡಿವಾಣ ಹಾಕಲು ಸರ್ಕಾರ ಕ್ರಮ ಕೈಗೊಂಡಿದೆ.
ರಾಜ್ಯ ಸರ್ಕಾರ ಈಗಾಗಲೇ ಏಕರೂಪ ದರವನ್ನು ನಿಗದಿಪಡಿಸಿದರೂ, ಈ ನಿಯಮವನ್ನು ಕಂಪನಿಗಳು ಪಾಲಿಸುತ್ತಿಲ್ಲ. ಮೂರು ವರ್ಷಗಳಿಂದ ಓಲಾ-ಉಬರ್ ಟ್ಯಾಕ್ಸಿಗಳ ಪರಿಶೀಲನೆ ನಡೆಯದೆ ಇದ್ದುದು ಕೂಡ ಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ. ಮೋಟಾರ್ ವಾಹನ ಕಾಯ್ದೆ ಪಾಲಿಸದೇ, ನಿಯಮ ಉಲ್ಲಂಘಿಸುತ್ತಿದ್ದರೂ ಯಾವುದೇ ತಪಾಸಣೆ ಅಥವಾ ಕಠಿಣ ಕ್ರಮ ಕೈಗೊಳ್ಳಲಾಗಿರಲಿಲ್ಲ ಎಂದು ಮೂಲಗಳು ತಿಳಿಸುತ್ತಿವೆ.
ಮಿನಿಮಮ್ ದರವನ್ನು ಮೀರಿಸಿ ದರ ವಿಧಿಸುತ್ತಿರುವ ಓಲಾ-ಉಬರ್ ಕಂಪನಿಗಳು ಸರ್ಕಾರದ ಆದೇಶಕ್ಕೂ ಕಿವಿಗೊಡದೆ ತಮ್ಮ ಸೇವೆಯನ್ನು ಮುಂದುವರಿಸುತ್ತಿವೆ. ಇದರ ಪರಿಣಾಮವಾಗಿ ನಗರದ ಹಲವೆಡೆ ಈ ಕಂಪನಿಗಳ ಟ್ಯಾಕ್ಸಿ ಸೇವೆಗಳ ವಿರುದ್ಧ ಸಾರ್ವಜನಿಕರ ಆಕ್ರೋಶ ಹೆಚ್ಚುತ್ತಿದೆ.
ಈ ಹಿನ್ನೆಲೆ ರಾಜಧಾನಿ ಬೆಂಗಳೂರಿನಲ್ಲಿ ಓಲಾ ಮತ್ತು ಉಬರ್ ಟ್ಯಾಕ್ಸಿಗಳ ಕಾರ್ಯಾಚರಣೆಗಳಿಗೆ ಕಟ್ಟುನಿಟ್ಟಿನ ನಿಯಂತ್ರಣ ಹಾಕಲು ಸಾರಿಗೆ ಇಲಾಖೆ ಆಯುಕ್ತರು ಸೂಚನೆ ನೀಡಿದ್ದು, ಬೆಂಗಳೂರಿನ ಹತ್ತು ಪ್ರಯಾಣಿಕ ಸಾರಿಗೆ ಅಧಿಕಾರಿಗಳಿಗೆ (ಆರ್‌ಟಿಒ) ತೀವ್ರ ತಪಾಸಣೆ ನಡೆಸುವಂತೆ ನಿರ್ದೇಶನ ನೀಡಿದ್ದಾರೆ. ಇಂದಿನಿಂದಲೇ ಓಲಾ ಮತ್ತು ಉಬರ್ ಟ್ಯಾಕ್ಸಿಗಳ ಮೇಲೆ ತಪಾಸಣೆ ತೀವ್ರಗೊಳಿಸಲು ಆರ್‌ಟಿಒ ಇಲಾಖೆ ನಿರ್ಧಾರ ತೆಗೆದುಕೊಂಡಿದ್ದು, ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ