
ಹುಬ್ಬಳ್ಳಿ: ರಾಜ್ಯದ ಯೂಟ್ಯೂಬರ್‌ಗಳು ತಮ್ಮ ಚಾನೆಲ್‌ಗಳನ್ನು ಪ್ರಾರಂಭಿಸಲು ಪರವಾನಗಿಯನ್ನು ಕಡ್ಡಾಯಗೊಳಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಹೇಳಿಕೆ ನೀಡಿದ್ದಾರೆ. ಧರ್ಮಸ್ಥಳದಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆ ಹಿನ್ನೆಲೆಯಲ್ಲಿ ಯೂಟ್ಯೂಬ್ ಬಳಕೆದಾರರು ಕೆಲವು ವಿವಾದಾತ್ಮಕ ವಿಷಯಗಳನ್ನು ಪ್ರಸಾರ ಮಾಡಲು ಮತ್ತು ಹೆಚ್ಚು ಜನಪ್ರಿಯತೆ ಗಳಿಸಲು ಚಾನೆಲ್‌ಗಳನ್ನು ಬಳಸುತ್ತಿದ್ದಾರೆ ಎಂಬ ಆರೋಪದ ವಿರುದ್ಧ ಕರ್ನಾಟಕ ಎಲೆಕ್ಟ್ರಾನಿಕ್ ಮಾಧ್ಯಮ ಪತ್ರಕರ್ತರ ಸಂಘದ ಬೇಡಿಕೆಯ ಮಧ್ಯೆ ಸಿಎಂ ಈ ಹೇಳಿಕೆ ನೀಡಿದ್ದಾರೆ.
ಹುಬ್ಬಳ್ಳಿ ನಗರದ ಖಾಸಗಿ ಹೋಟೆಲ್ ನಲ್ಲಿ ಕರ್ನಾಟಕ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ಸ್ ಅಸೋಸಿಯೇಷನ್ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ನೂತನ ಸಂಘವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಚಿವರಾದ ಸಂತೋಷ ಲಾಡ್, ಚಲುವರಾಯಸ್ವಾಮಿ, ಸಭಾಪತಿ ಬಸವರಾಜ್ ಹೊರಟ್ಟಿ, ಶಾಸಕರಾದ ಪ್ರಸಾದ್ ಅಬ್ಬಯ್ಯ, ಮಹೇಶ್ ಟೆಂಗಿನಕಾಯಿ, ಎಂ. ಆರ್ ಪಾಟೀಲ, ಅಶೋಕ್ ಪಟ್ಟಣ, ವಿಜಯಾನಂದ ಕಾಶಪ್ಪನವರ, ಬಸವರಾಜ್ ಶಿವಣ್ಣವರ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಮೋಟಕುಗೊಳಿಸೋ ಕೆಲಸ ಎಂದೂ ಮಾಡಲ್ಲ ಎಂದರು. ಈ ಸಂಘಟನೆಯನ್ನು ಸಂತೋಷದಿಂದ ಉದ್ಘಾಟನೆ ಮಾಡಿದ್ದೇನೆ. ಹಕ್ಕುಗಳ ರಕ್ಷಣೆಗಾಗಿ ಸಂಘಟನೆಯಾಗಬೇಕು. ಹೋರಾಟ ನಡೆಸಬೇಕು.
ವೆಬ್ ಪೋರ್ಟಲ್, ಯ್ಯೂಟ್ಯೂಬ್ ಗಳಿಗೆ ಕೂಡಾ ಪರವಾನಗಿ ಪಡೆಯಬೇಕು. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತದೆ. ಪತ್ರಕರ್ತರು ಸತ್ಯ ಹೇಳೋ ಕೆಲಸ ಮಾಡಬೇಕು. ಎಲೆಕ್ಟ್ರಾನಿಕ್ ಮೀಡಿಯಾಗಳ ಮೇಲೆ ಜನ ಹೆಚ್ಚು ಭರವಸೆ ಇಟ್ಟುಕೊಂಡಿದ್ದಾರೆ. ಆ ಭರವಸೆ ಸುಳ್ಳಾಗದಂತೆ ನೋಡಿಕೊಳ್ಳಬೇಕು. ಗಾಳಿ ಸುದ್ದಿ, ಉಹಾ ಪತ್ರಿಕೋದ್ಯಮ ಮಾಡಬಾರದು. ಪರಿಶೀಲನೆ ಮಾಡಿ ಸುದ್ದಿ ಪ್ರಸಾರ ಮಾಡಬೇಕು. ನಾನು ಎಂದಿಗೂ ನನ್ನ ಬಗ್ಗೆ ಒಳ್ಳೆಯದನ್ನು ಬರಿಯಿರಿ ಅಂತ ಹೇಳಿಲ್ಲ. ಟೀಕೆ ಮಾಡಿ ಬರೆದಾಗ ಯಾಕೆ ಬರಿದಿರಿ ಅಂತ ಕೇಳಿಲ್ಲಾ. ಸುಳ್ಳುಸುದ್ದಿ ಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಇದನ್ನು ನಿಯಂತ್ರಣ ಮಾಡಲು ಕಾನೂನು ಮಾಡಲು ಮುಂದಾಗಿದ್ದೇವೆ. ಪತ್ರಕರ್ತರು ಶಿಕ್ಷಕರಿದ್ದಂತೆ. ನೀವು ನ್ಯಾಯವಾಗಿರಿ, ನೈಜ ವಿಚಾರವನ್ನು ಪ್ರಚಾರ ಮಾಡಿ. ಸತ್ಯ ಇದೆಯಾ ಅನ್ನೋದನ್ನು ಪರಿಶೀಲಿಸಿ. ಪತ್ರಕರ್ತರಿಗಾಗಿ ಹಲವಾರು ಯೋಜನೆ ಜಾರಿಗೆ ತಂದಿದ್ದೇವೆ. ನಿಮ್ಮ ಜೊತೆ ಇರ್ತೇವೆ, ಆದರೆ ಸತ್ಯವನ್ನು ಬರೀರಿ ಎಂದರು.
ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಅಸಾಮಾನ್ಯ ಘಟನೆಗಳು ಎಲ್ಲರ ಗಮನ ಸೆಳೆದವು. ಕಾರ್ಯಕ್ರಮವು ನಗೆ-ಮೋಜು ಮತ್ತು ಹಾಸ್ಯದಿಂದ ಕೂಡಿ ವಿಭಿನ್ನವಾಗಿತ್ತು
ಕರ್ನಾಟಕ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ಸ್ ಅಸೋಸಿಯೇಷನ್‌ನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಬಳಿ ವರದಿಗಾರರ ಪಾತ್ರವಹಿಸಿ ಪ್ರಶ್ನೆ ಕೇಳಿದ್ದು, ಬೇರೆ ಯಾರೂ ಅಲ್ಲ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ. ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂಬ ಪ್ರಶ್ನೆಯನ್ನು ಅವರು ಸಿಎಂ ಎದುರು ನೇರವಾಗಿ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, “ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸರ್ಕಾರ ಈ ವಿಚಾರದಲ್ಲಿ ನಿರ್ಲಕ್ಷ್ಯ ತೋರುವುದಿಲ್ಲ” ಎಂದು ಭರವಸೆ ನೀಡಿದರು.
ಇನ್ನೊಂದೆಡೆ, ಕಾರ್ಯಕ್ರಮವನ್ನು ಕವರ್ ಮಾಡುವ ಕ್ಯಾಮರಾಮೆನ್ ಪಾತ್ರವನ್ನು ನಿರ್ವಹಿಸಿದ್ದು ಕಾರ್ಮಿಕ ಸಚಿವ ಸಂತೋಷ್ ಲಾಡ್. ಅವರು ಕೈಯಲ್ಲಿ ಕ್ಯಾಮೆರಾ ಹಿಡಿದು ಸಿಎಂ ಸಂದರ್ಶನವನ್ನು ಚಿತ್ರೀಕರಿಸಿದ್ದು ಎಲ್ಲರಿಗೂ ಆಶ್ಚರ್ಯ ತಂದಿತು. ಇದರಿಂದ ಸಭಾಂಗಣದಲ್ಲಿ ಹಾಸ್ಯಭರಿತ ವಾತಾವರಣ ನಿರ್ಮಾಣವಾಯಿತು.
ಸಿಎಂಗೆ ನೇರವಾಗಿ ಪ್ರಶ್ನೆ ಕೇಳಿದ ಸಂತೋಷ್ ಲಾಡ್ – “ನಿಮ್ಮ ಎನರ್ಜಿ ಗುಟ್ಟು ಏನು?” ಎಂದು ಕುತೂಹಲ ವ್ಯಕ್ತಪಡಿಸಿದರು. ಇದಕ್ಕೆ ಸಿಎಂ ಹಾಸ್ಯಮಿಶ್ರಿತ ಗಂಭೀರ ಉತ್ತರ ನೀಡಿ, ನಾನೊಬ್ಬ ಸಾಮಾನ್ಯ ಮನುಷ್ಯ. ಯಾವುದೇ ಕೆಟ್ಟ ಅಭ್ಯಾಸಗಳಿಲ್ಲ. ಆರೋಗ್ಯ ಚೆನ್ನಾಗಿರುವುದರಿಂದಲೇ ಇಷ್ಟು ಶಕ್ತಿ ಸಿಕ್ಕಿದೆ. ಜನರ ಆಶೀರ್ವಾದದಿಂದ ಜನಪರವಾದ ಕೆಲಸ ಮಾಡಲು ಸಾಧ್ಯವಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಬಸವರಾಜ ಹೊರಟ್ಟಿ ಸಹ ಭಾಗವಹಿಸಿದ್ದರು. ಸಿಎಂಗೆ ತಿರುಗಿ, “ನೀವು ಇತ್ತಿಚೆಗೆ ಬಹಳ ಸ್ಮಾರ್ಟ್ ಆಗಿ ಕಾಣುತ್ತಿದ್ದೀರಿ” ಎಂದು ಹೊಗಳಿಕೆಯ ಸ್ವರದಲ್ಲಿ ಪ್ರಶ್ನೆ ಹಾಕಿದರು. ಇದಕ್ಕೆ ಸಿಎಂ ಕೂಡ ನಗೆ ಚಟಾಕಿ ಹೊಡೆದು, ನಾನೇನು ಸ್ಮಾರ್ಟ್ ಆಗಿಲ್ಲ. ನನ್ನ ಸ್ನೇಹಿತ ಆಗಿರುವುದರಿಂದ ಇವ್ನಿಗೆ ಹೀಗೇ ಕಾಣುತ್ತಿದೆ ಎಂದು ಹಾಸ್ಯಭರಿತವಾಗಿ ಉತ್ತರಿಸಿದರು.
ಈ ಪ್ರತಿಕ್ರಿಯೆಯಿಂದ ಸಭಾಂಗಣವೇ ನಗೆಗಡಲಲ್ಲಿ ತೇಲಿತು. ಸಾಮಾನ್ಯವಾಗಿ ಗಂಭೀರ ಚರ್ಚೆಗಳೊಂದಿಗೆ ನಡೆಯುವ ರಾಜಕೀಯ ಸಮಾರಂಭಗಳಲ್ಲಿ ಇಂತಹ ಹಾಸ್ಯಮಯ ಸನ್ನಿವೇಶಗಳು ಅಪರೂಪ. ಆದರೆ ಈ ಬಾರಿ ಬಿಜೆಪಿ ಶಾಸಕರ ವರದಿಗಾರಿಕೆ, ಕಾರ್ಮಿಕ ಸಚಿವರ ಕ್ಯಾಮೆರಾ ಹಾಗೂ ಸಿಎಂ ಸಿದ್ದರಾಮಯ್ಯರ ನಗೆಚಟಾಕಿಗಳು ಕಾರ್ಯಕ್ರಮಕ್ಕೆ ವಿಭಿನ್ನ ಮೆರಗು ನೀಡಿದವು. ಕಾರ್ಯಕ್ರಮವನ್ನು ಸಾಕ್ಷಿಯಾಗಿದ್ದ ಎಲೆಕ್ಟ್ರಾನಿಕ್ ಮೀಡಿಯಾ ಪತ್ರಕರ್ತರು ಮಾತ್ರವಲ್ಲದೆ, ನೆರೆದಿದ್ದ ಪ್ರತಿಯೊಬ್ಬರೂ ನಗುತ್ತಾ, ನೆನಪಿನಲ್ಲೇ ಉಳಿಯುವಂತಹ ಕ್ಷಣಗಳನ್ನು ಅನುಭವಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ