ಶಾಲೆ-ಕಾಲೇಜಿನಲ್ಲಿ ಹಿಜಾಬ್ ನಿಷೇಧ ರದ್ದು, ಕೇಸರಿ ಶಾಲು ಧರಿಸುವಂತಿಲ್ಲ, ಶಿಕ್ಷಣ ಸಚಿವರ ಎಚ್ಚರಿಕೆ ಏನು?

Kannadaprabha News   | Kannada Prabha
Published : May 14, 2026, 06:56 AM ISTUpdated : May 14, 2026, 07:02 AM IST
Karnataka government issues important order to lift hijab ban in schools and colleges

ಸಾರಾಂಶ

ರಾಜ್ಯ ಸರ್ಕಾರವು 2022ರ ಹಿಜಾಬ್ ನಿಷೇಧದ ವಿವಾದಾತ್ಮಕ ಆದೇಶವನ್ನು ಹಿಂಪಡೆದಿದೆ. ಹೊಸ ಆದೇಶದ ಪ್ರಕಾರ, ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸಮವಸ್ತ್ರಕ್ಕೆ ಪೂರಕವಾಗಿ ಹಿಜಾಬ್, ಪೇಟ, ಜನಿವಾರ, ರುದ್ರಾಕ್ಷಿಯಂತಹ ಸಾಂಪ್ರದಾಯಿಕ ಸಂಕೇತಗಳನ್ನು ಧರಿಸಲು ಅನುಮತಿ ನೀಡಲಾಗಿದೆ. 

ಬೆಂಗಳೂರು (ಮೇ.14): ರಾಜ್ಯದ ಎಲ್ಲಾ ಸರ್ಕಾರಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿ 2022ರಲ್ಲಿ ಹೊರಡಿಸಿದ್ದ ವಿವಾದಾತ್ಮಕ ಆದೇಶವನ್ನು ಸರ್ಕಾರ ಹಿಂಪಡೆದಿದ್ದು, ಪೇಟ/ಅರ್ಬನ್‌, ಶಿರವಸ್ತ್ರ ಅಥವಾ ಹಿಜಾಬ್‌, ಜನಿವಾರ, ಶಿವಧಾರ, ರುದ್ರಾಕ್ಷಿ ಸೇರಿ ಯಾವುದೇ ಸಮಾನ ಸ್ವರೂಪದ ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತ ಸಂಕೇತಗಳನ್ನು ಧರಿಸಲು ಅವಕಾಶ ನೀಡಿ ಹೊಸ ಆದೇಶ ಮಾಡಿದೆ.

ಆದರೆ, ಪರೀಕ್ಷಾ ಸಂದರ್ಭದಲ್ಲಿ ರಾಷ್ಟ್ರ ಮತ್ತು ರಾಜ್ಯ ಮಟ್ಟದ ವಸ್ತ್ರ ಸಂಹಿತೆ ನಿಯಮಗಳನ್ನು ಸಂದರ್ಭೋಚಿತವಾಗಿ ಆಯಾ ಪ್ರಾಧಿಕಾರಿಗಳು ಅಳವಡಿಸಿಕೊಳ್ಳತಕ್ಕದ್ದು ಎಂದು ತಿಳಿಸಲಾಗಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಗುರುವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ತಮ್ಮ ಇಲಾಖೆ ಹೊರಡಿಸಿರುವ ಆದೇಶವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು. ಈ ವೇಳೆ, ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ಶಾಸಕ ರಿಜ್ವಾನ್‌ ಅರ್ಷದ್‌ ಜೊತೆಗಿದ್ದು, ಸರ್ಕಾರದ ಆದೇಶ ಸಮರ್ಥಿಸಿಕೊಂಡರು.

ಈ ವೇಳೆ ಮಾತನಾಡಿದ ಮಧು ಬಂಗಾರಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ದೇಶನದಂತೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಮ್ಮ ಇಲಾಖೆ ಈ ಮಹತ್ವದ ಆದೇಶ ಮಾಡಿದೆ ಎಂದು ತಿಳಿಸಿದರು. .

ಸಮವಸ್ತ್ರಕ್ಕೆ ಪೂರಕವಾಗಿರಬೇಕು:

ಇಲಾಖೆಯು ತನ್ನ ಆದೇಶದಲ್ಲಿ ವಿದ್ಯಾರ್ಥಿಗಳು ನಿಗದಿ ಪಡಿಸಲಾದ ಸಮವಸ್ತ್ರದೊಂದಿಗೆ ಸೀಮಿತ ಸಾಂಪ್ರದಾಯಿಕ ಜಾಗೂ ಪದ್ಧತಿ ಆಧಾರಿತವಾದ ಸಂಕೇತಗಳನ್ನು ಧರಿಸಲು ಅನುಮತಿ ನೀಡಿದೆ. ಆದರೆ ಇಂತಹ ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತವಾದ ಸಂಕೇತಗಳು ಸಮವಸ್ತ್ರಕ್ಕೆ ಪೂರಕವಾಗಿರಬೇಕು ಮತ್ತು ನಿಗದಿತ ಸಮವಸ್ತ್ರವನ್ನು ಬದಲಿಸುವ, ಮಾರ್ಪಡಿಸುವ ಅಥವಾ ಅದರ ಮೂಲ ಉದ್ದೇಶ ವಿಫಲಗೊಳಿಸುವಂತಿರಬಾರದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ಆದೇಶಕ್ಕೆ ವಿರುದ್ಧವಾಗಿರುವ ಯಾವುದೇ ಸುತ್ತೋಲೆ, ನಿರ್ಣಯ, ಸೂಚನೆ, ನಿರ್ದೇಶನಗಳಿದ್ದರೂ ಎಲ್ಲವೂ ತಕ್ಷಣದಿಂದ ಅನೂರ್ಜಿತವಾಗಲಿವೆ. ಒಟ್ಟಿನಲ್ಲಿ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಬಸವಣ್ಣನವರ ‘ಇವ ನಮ್ಮವ’ ಎಂಬ ಉದಾತ್ತವಾದ ಒಳಗೊಳ್ಳುವ ನಿಲುವು ಅಳವಡಿಸಿಕೊಳ್ಳಬೇಕು. ಯಾವುದೇ ವಿದ್ಯಾರ್ಥಿಗೆ ಯಾವುದೇ ಕಾರಣದಿಂದಲೂ ಶಿಕ್ಷಣಕ್ಕೆ ನಿರಾಕರಣೆ ಆಗದಂತೆ ಶಿಸ್ತು ಕಾಪಾಡಿಕೊಳ್ಳುವ ದೃಷ್ಟಿಯಿಂದ ಈ ಆದೇಶ ಮಾಡಲಾಗಿದೆ. ಈ ಆದೇಶ ಎಂದು ಸಚಿವರು ವಿವರಿಸಿದರು.

ಯಾವುದಕ್ಕೆ ಅವಕಾಶ:

ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತವಾದ ಸಂಕೇತಗಳ ಆಡಿಯಲ್ಲಿ ಸಾಮಾನ್ಯವಾಗಿ ಧರಿಸುವ ಪೇಟ/ಟರ್ಬನ್, ಜನಿವಾರ/ಪವಿತ್ರ ದಾರ, ಶಿವದಾರ, ರುದ್ರಾಕ್ಷಿ, ತಲೆವಸ್ತ್ರ/ಹಿಜಾಬ್ ಸೇರಿ ಇತರೆ ಯಾವುದೇ ಸಮಾನ ಸ್ವರೂಪದ ಸಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತ ಸಂಕೇತಗಳನ್ನು ಧರಿಸಲು ಅವಕಾಶ ನೀಡಿದೆ. ಆದರೆ ಇವು ಶಿಸ್ತು, ಸುರಕ್ಷತೆ ಮತ್ತು ವಿದ್ಯಾರ್ಥಿಯ ಗುರುತಿಸುವಿಕೆಗೆ ಅಡ್ಡಿಯಾಗಬಾರದು ಎಂದು ಹೇಳಿದೆ.

ನಿಗದಿತ ಸಮವಸ್ತ್ರದೊಂದಿಗೆ ಇಂತಹ ಸೀಮಿತ ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತವಾದ ಸಂಕೇತಗಳು ಧರಿಸುವ ಕಾರಣಕ್ಕಾಗಿ ಯಾವುದೇ ವಿದ್ಯಾರ್ಥಿಗೆ ಶಿಕ್ಷಣ ಸಂಸ್ಥೆ, ತರಗತಿ, ಪರೀಕ್ಷಾ ಕೊಠಡಿ ಅಥವಾ ಶೈಕ್ಷಣಿಕ ಚಟವಟಿಕೆಗಳಿಗೆ ಪ್ರವೇಶ ನಿರಾಕರಿಸುವಂತಿಲ್ಲ. ನಿರಾಕರಿಸಿದ್ದು ಕಂಡುಬಂದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಅಷ್ಟೇ ಅಲ್ಲ, ಇಂತಹ ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತ ಸಂಕೇತಗಳನ್ನು ಧರಿಸುವಂತೆ ಯಾವುದೇ ವಿದ್ಯಾರ್ಥಿಗಳಿಗೆ ಒತ್ತಾಯಿಸುವಂತಿಲ್ಲ ಹಾಗೂ ಸರ್ಕಾರ ನಿಗದಿಪಡಿಸಿದ ಸಂಕೇತಗಳನ್ನು ತೆಗೆಯುವಂತೆ ಒತ್ತಾಯಸುವಂತೆಯೂ ಇಲ್ಲ.

ಈ ಆದೇಶದ ಅನುಷ್ಠಾನ ಏಕರೂಪವಾಗಿಬೇಕು. ಧಾರ್ಮಿಕ, ಸಾಂಪ್ರದಾಯಿಕ, ನಿಷ್ಪಕ್ಷಪಾತವಾಗಿರಬೇಕು ಮತ್ತು ತಾರತಮ್ಯರಹಿತವಾಗಿರಬೇಕು. ಸಮಾನತೆ, ಘನತೆ, ಭಾತೃತ್ವ, ಜಾತ್ಯತೀತತೆ, ವೈಜ್ಞಾನಿಕತೆ, ವೈಚಾರಿಕತೆ ಮತ್ತು ಶಿಕ್ಷಣದ ಹಕ್ಕು ಎಂಬ ಸಾಂವಿಧಾನಿಕ ಮೌಲ್ಯಗಳಿಗೆ ಅನುಗುಣವಾಗಿರಬೇಕು. ಈ ಆದೇಶಕ್ಕೆ ವಿರುದ್ಧವಾಗಿರುವ ಯಾವುದೇ ಸುತ್ತೋಲೆ, ನಿರ್ಣಯ, ಸೂಚನೆ, ರೂಢಿ ಅಥವಾ ಸಂಸ್ಥೆಯ ನಿರ್ದೇಶನಗಳು ಅನೂರ್ಜಿತವಾಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇತ್ತೀಚೆಗೆ ಜನಿವಾರ ತೆಗೆಸುವ ವಿಚಾರಕ್ಕಾಗಿ ಸಂಘರ್ಷ ಭುಗಿಲೆದ್ದಿತ್ತು. ಇವೆಲ್ಲವನ್ನೂ ಕೂಲಂಕುಷವಾಗಿ ಪರಿಶೀಲಿಸಿ ಈ ನಿರ್ಣಯ ಕೈಗೊಳ್ಳಲಾಗಿದೆ. ಶಿಸ್ತು, ಸುರಕ್ಷತೆ ಹಾಗೂ ವಿದ್ಯಾರ್ಥಿಯನ್ನು ಗುರುತಿಸಲು ಧಾರ್ಮಿಕ ಸಂಕೇತಗಳು ಅಡ್ಡಿಯಾಗಕೂಡದು. 1ರಿಂದ 12ನೇ ತರಗತಿ ವಿದ್ಯಾರ್ಥಿಗಳ ಮನೋಸ್ಥೈರ್ಯ ಕುಗ್ಗಿಸದಿರಲು ಹಾಗೂ ಸಾಂವಿಧಾನಿಕ ಮೌಲ್ಯಗಳಿಗೆ ಅನುಗುಣವಾಗಿ ಈ ನಿರ್ಣಯ ತಳೆದಿದ್ದೇವೆ ಎಂದು ಮಧು ಬಂಗಾರಪ್ಪ ಸಮರ್ಥನೆ ಮಾಡಿಕೊಂಡಿದ್ದಾರೆ.

ಮುಸ್ಲಿಂ ಟೋಪಿ ಬಗ್ಗೆ ಸಿಎಂ ಜತೆ ಚರ್ಚಿಸಿ ನಿರ್ಧಾರ: ಸಚಿವ

ಮುಸಲ್ಮಾನ ವಿದ್ಯಾರ್ಥಿಗಳು ಧಾರ್ಮಿಕ ಟೋಪಿ ಧರಿಸಿಕೊಂಡು ಬಂದರೆ ಅವಕಾಶ ನೀಡುತ್ತೀರಾ ಎಂಬ ಪ್ರಶ್ನೆಗೆ, ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಸಮಾಲೋಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಸಚಿವ ತಿಳಿಸಿದರು.

ಧಾರ್ಮಿಕ ವಿವಾದಕ್ಕೆ ಬಳಸಿದರೆ ಕ್ರಮ: ಮಧ

ಸರ್ಕಾರ ಈಗ ಹೊರಡಿಸಿರುವ ಆದೇಶವನ್ನು ಧಾರ್ಮಿಕ ಸಂಘರ್ಷದಂಥ ಕೆಲಸಗಳಿಗೆ ಬಳಸಿಕೊಂಡರೆ ಕಾನೂನು ರೀತಿ ಕ್ರಮ ಜರುಗಿಸಲಾಗುವುದು. ನಾವೇನು ತಲೆಕೆಟ್ಟು ಈ ಆದೇಶ ಮಾಡಿಲ್ಲ ಎಂದು ಮಧು ಬಂಗಾರಪ್ಪ ಮಾರ್ಮಿಕವಾಗಿ ನುಡಿದರು.

ಇದೇ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವ ದಿನೇಶ್‌ ಗುಂಡೂರಾವ್‌, ಯಾವುದೇ ವಿದ್ಯಾರ್ಥಿಯ ಭಾವನೆಗೆ ನೋವುಂಟಾಗಬಾರದು ಎಂಬ ಉದ್ದೇಶದಿಂದ ಸರ್ಕಾರ ಈ ಆದೇಶ ಮಾಡಿದೆ. ಸಾಂಪ್ರದಾಯಿಕ ಸಂಕೇತಗಳು ಎಂದರೆ ಸರ್ಕಾರದ ಆದೇಶದಲ್ಲಿ ಇರುವುದು ಬಿಟ್ಟು ಹೆಣ್ಣುಮಕ್ಕಳು ಹಣೆಗೆ ಕುಂಕುಮ, ಬಿಂದಿ ಇಡುವುದು, ನಾಮ, ತಿಲಕ ಧಾರಣೆ ಸೇರಿ ಇನ್ನಿತರೆ ಸಂಪ್ರದಾಯಿಕ ಸಂಕೇತಗಳೂ ಸೇರುತ್ತವೆ ಎಂದು ಸ್ಪಷ್ಟಪಡಿಸಿದರು..

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka News Live: ಬಂಗಾರಪೇಟೆ: ಮಷಿನ್‌ಗನ್‌ನ 135 ಜೀವಂತ ಬುಲೆಟ್‌ ಪತ್ತೆ
ಅಧ್ಯಾತ್ಮದ ಶಕ್ತಿ ನನ್ನ ಅಹಂ ಅನ್ನು ಹೊಸಕಿ ಹಾಕಿತು: ಆರ್ಟ್‌ ಆಫ್ ಲಿವಿಂಗ್‌ನಲ್ಲಿ ರಜನಿ ಹೇಳಿದ ಆ ಅನುಭವ ಏನು?