
ಬೆಂಗಳೂರು (ಜೂ.7): ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 51.61 ಲಕ್ಷ ಮಕ್ಕಳಿಗೆ 2025-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ 244 ದಿನ ಮೊಟ್ಟೆ/ಬಾಳೆಹಣ್ಣು ವಿತರಿಸಲು ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ವಾರದಲ್ಲಿ 2 ದಿನ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುದಾನದಲ್ಲಿ ಮತ್ತು ಉಳಿದ ನಾಲ್ಕು ದಿನ ಅಜೀಂ ಪ್ರೇಮ್ ಜಿ ಫೌಂಡೇಶನ್ ಸಹಯೋಗದಲ್ಲಿ ಪೌಷ್ಠಿಕ ಆಹಾರ ವಿತರಿಸಲಾಗುತ್ತದೆ.
ಪೂರ್ವ ಪ್ರಾಥಮಿಕ ತರಗತಿಯಿಂದ 10ನೇ ತರಗತಿವರೆಗಿನ ಮಕ್ಕಳು ಯೋಜನೆಯ ಫಲಾನುಭವಿಗಳಾಗಿದ್ದು, ಪ್ರತಿ ವಿದ್ಯಾರ್ಥಿಗೆ ದಿನಕ್ಕೆ ಒಂದು ಮೊಟ್ಟೆ ಅಥವಾ 2 ಬಾಳೆಹಣ್ಣಿಗೆ 6 ರು. ವಿನಿಯೋಗಿಸಲಾಗುತ್ತದೆ. ಮೊಟ್ಟೆಯ ತೂಕ ಕನಿಷ್ಟ 50 ಗ್ರಾಂ. ಇರಬೇಕು. ಮೊಟ್ಟೆ ತಿನ್ನದ ಮಕ್ಕಳಿಗೆ ಎರಡು ಉತ್ತಮವಾದ ಬಾಳೆ ಹಣ್ಣುಗಳನ್ನು ವಿತರಿಸಬೇಕು. ಮೊಟ್ಟೆ ಮತ್ತು ಬಾಳೆ ಹಣ್ಣು ತಿನ್ನುವ ಮಕ್ಕಳ ಅಂಕಿ-ಅಂಶಗಳನ್ನು ಇಲಾಖೆಗೆ ಅಪ್‌ಡೇಟ್ ಮಾಡಬೇಕು ಎಂದು ಸೂಚಿಸಲಾಗಿದೆ.
ಅಲ್ಲದೆ, ಪ್ರತಿನಿತ್ಯ ಪ್ರಾರ್ಥನೆ ವೇಳೆ ಪೌಷ್ಠಿಕಾಂಶದ ಪ್ರಯೋಜನಗಳ ಕುರಿತು ಮಕ್ಕಳಿಗೆ ಅರಿವು ಮೂಡಿಸಬೇಕು. ಬೆಳಗ್ಗೆ 11 ಗಂಟೆಯೊಳಗೆ ಮಕ್ಕಳ ಹಾಜರಾತಿ ಪಡೆದುಕೊಂಡು ಇಲಾಖೆಯ ವೆಬ್‌ಸೈಟ್‌ನಲ್ಲಿ ಮಾಹಿತಿ ಅಪ್‌ಡೇಟ್ ಮಾಡಬೇಕು.
ಪ್ರತಿ ವಾರ ಕನಿಷ್ಠ ಹತ್ತು ಜನ ಪಾಲಕರನ್ನು ಶಾಲೆಗೆ ಕರೆಸಿ ಮಧ್ಯಾಹ್ನದ ಬಿಸಿಯೂಟ ಸೇವಿಸುವ ಮೂಲಕ ಮಕ್ಕಳಿಗೆ ವಿತರಿಸುವ ಆಹಾರದ ಗುಣಮಟ್ಟ ಮತ್ತು ಪೂರಕ ಪೌಷ್ಠಿಕ ಆಹಾರದ ಗುಣಮಟ್ಟ ಖಾತ್ರಿಪಡಿಸಬೇಕು ಎಂದು ಶಿಕ್ಷಕರು ಮತ್ತು ಅಧಿಕಾರಿಗಳಿಗೆ ಶಿಕ್ಷಣ ಇಲಾಖೆ ಸೂಚಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ