ಮೊದಲ ದಿನ 182 ಸದಸ್ಯರಿಂದ ಪ್ರಮಾಣವಚನ, ಹಿಂದುತ್ವ ಗೋಮಾತೆ ಹೆಸರಲ್ಲಿ ಯತ್ನಾಳ್ ಪ್ರಮಾಣ

By Kannadaprabha NewsFirst Published May 23, 2023, 6:22 AM IST
Highlights

ಹದಿನಾರನೇ ವಿಧಾನಸಭೆಯ ಮೊದಲ ಅಧಿವೇಶನ ಪ್ರಾರಂಭದ ದಿನವಾದ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಸಚಿವ ಸಂಪುಟದ ಎಂಟು ಮಂದಿ ಸದಸ್ಯರು, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ 182 ಮಂದಿ ಜನರು ವಿಧಾನಸಭೆ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು.

ಬೆಂಗಳೂರು (ಮೇ.23) : ಹದಿನಾರನೇ ವಿಧಾನಸಭೆಯ ಮೊದಲ ಅಧಿವೇಶನ ಪ್ರಾರಂಭದ ದಿನವಾದ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಸಚಿವ ಸಂಪುಟದ ಎಂಟು ಮಂದಿ ಸದಸ್ಯರು, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ 182 ಮಂದಿ ಜನರು ವಿಧಾನಸಭೆ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು.

ವಂದೇ ಮಾತರಂ ಗೀತೆಯೊಂದಿಗೆ ಆರಂಭವಾದ ಕಲಾಪದಲ್ಲಿ, ಮೊದಲು ಹಂಗಾಮಿ ಸ್ಪೀಕರ್‌ ಆರ್‌.ವಿ. ದೇಶಪಾಂಡೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ನೂತನ ಸದಸ್ಯರಿಗೆ ಪ್ರಮಾಣವಚನ ಸ್ವೀಕರಿಸಲು ಅವಕಾಶ ಮಾಡಿಕೊಟ್ಟರು.

‘ನಮ್ಮ ಕುಟುಂಬದಲ್ಲಿ ಮತ್ತೆ ಮಂತ್ರಿ’ ವಿಡಿಯೋ ವೈರಲ್‌: ಜಾರಕಿಹೊಳಿ ಕುಟುಂಬಕ್ಕೆ 2 ವರ್ಷದ ಬಳಿಕ ಮಂತ್ರಿಗಿರಿ

ಈ ವೇಳೆ ಕೆಲ ಸದಸ್ಯರು ರುಮಾಲು, ಕೇಸರಿ ಶಾಲು, ಹಸಿರು ಶಾಲುಗಳೊಂದಿಗೆ ಆಗಮಿಸಿ ಗಮನ ಸೆಳೆದರೆ ಮತ್ತೆ ಕೆಲವರು ‘ಹಿಂದುತ್ವ-ಗೋಮಾತೆ’, ‘ಆರಾಧ್ಯ ದೈವ ಡಿ.ಕೆ. ಶಿವಕುಮಾರ್‌’ ಹೀಗೆ ವಿವಿಧ ಹೆಸರುಗಳಲ್ಲಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಸದನದ ಗಮನ ಸೆಳೆದರು.

ಸಚಿವರಾಗಿ ಇಂಗ್ಲೀಷ್‌ನಲ್ಲಿ ಪ್ರಮಾಣವಚನ ಸ್ವೀಕರಿಸಿ ಟೀಕೆಗೆ ಗುರಿಯಾಗಿರುವ ಸಚಿವ ಜಮೀರ್‌ ಅಹಮದ್‌ಖಾನ್‌ ಹಂಗಾಮಿ ಸ್ಪೀಕರ್‌ ಕೊಠಡಿಗೆ ತೆರಳಿ ಪ್ರಮಾಣವಚನ ತೆಗೆದುಕೊಂಡರು. ಮೊದಲ ದಿನ 182 ಮಂದಿಗೆ ಪ್ರಮಾಣವಚನ ಬೋಧಿಸಿದ್ದು, ಬಾಕಿ ಉಳಿದಿರುವ 42 ಮಂದಿ ಮಂಗಳವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಮೊದಲಿಗೆ ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮೊದಲಿಗೆ ಪ್ರಮಾಣವಚನ ಸ್ವೀಕರಿಸಲು ಆಹ್ವಾನಿಸಿದರು. ವರುಣಾ ಕ್ಷೇತ್ರದಿಂದ ಚುನಾಯಿತರಾಗಿ ಮುಖ್ಯಮಂತ್ರಿಗಳಾಗಿರುವ ಸಿದ್ದರಾಮಯ್ಯ ಅವರು ಭಗವಂತನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಬಳಿಕ ಸಭಾಧ್ಯಕ್ಷರಿಗೆ ವಂದಿಸಿ ಪ್ರತಿಪಕ್ಷದ ಸಾಲಿನಲ್ಲಿದ್ದ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಸದಸ್ಯರಿಗೆ ಹಸ್ತಲಾಘವ ನೀಡಿದರು.

ಅಜ್ಜಯ್ಯನ ಹೆಸರಲ್ಲಿ ಡಿಕೆಶಿ ಪ್ರಮಾಣ:

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಗಂಗಾಧರಯ್ಯ ಅಜ್ಜಯ್ಯ ಹೆಸರಿನಲ್ಲಿ ಪ್ರಮಾಣ ಮಾಡಿ ಪ್ರಮಾಣವಚನ ಸ್ವೀಕರಿಸಿದರು. ಬಳಿಕ ಖುದ್ದು ವಿರೋಧಪಕ್ಷದ ಪ್ರತಿಯೊಬ್ಬ ಸದಸ್ಯರನ್ನೂ ಭೇಟಿ ಮಾಡಿ ಹಸ್ತಲಾಘವ ನೀಡಿದರು. ಈ ವೇಳೆ ರಾಜಕೀಯ ಶತ್ರು ಎಂದೇ ಬಿಂಬಿಸಲ್ಪಟ್ಟಿರುವ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರಿಗೆ ಖುಷಿಯಿಂದ ಕೈಕುಲುಕಿದರು.

ಹಿಂದುತ್ವ-ಗೋಮಾತೆ ಹೆಸರಿನಲ್ಲಿ ಯತ್ನಾಳ್‌ ಪ್ರಮಾಣ:

ಪ್ರಮಾಣವಚನ ಸ್ವೀಕಾರದ ವೇಳೆ ಕಾಂಗ್ರೆಸ್‌ ಸದಸ್ಯ ಯು.ಟಿ. ಖಾದರ್‌ ದೇವರು ಮತ್ತು ಕ್ಷೇತ್ರದ ಮತದಾರರ ಹೆಸರಿನಲ್ಲಿ, ಕಾಂಗ್ರೆಸ್‌ನ ಶಿವಾನಂದ ಪಾಟೀಲ್‌ ಅಣ್ಣ ಬಸವಣ್ಣ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರೆ ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್‌ ಯತ್ನಾಳ್‌ ‘ಹಿಂದುತ್ವ- ಗೋಮಾತೆ’ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಇನ್ನು ಮೊದಲ ಬಾರಿಗೆ ವಿಧಾನಸಭೆ ಸದಸ್ಯರಾಗಿ ಆಯ್ಕೆಯಾಗಿರುವ ಜನಾರ್ಧನ ರೆಡ್ಡಿ ಅವರು ಭಗವಂತ ಗಂಗಾವತಿ ಹಾಗೂ ಅಂಜನಾದ್ರಿ ಆಂಜನೇಯ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದರು.

ಡಿಕೆಶಿ ಹೆಸರಿನಲ್ಲಿ ಪ್ರಮಾಣ:

ಹಸಿರು ಶಾಲು ಹಾಕಿಕೊಂಡು ಸದನದಲ್ಲಿ ಆಗಮಿಸಿದ್ದ ಚನ್ನಗಿರಿ ಕ್ಷೇತ್ರದ ನೂತನ ಶಾಸಕ ಬಸವರಾಜ ಶಿವಗಂಗಾ ಅವರು, ‘ಆರಾಧ್ಯ ದೈವ ಡಿ.ಕೆ ಶಿವಕುಮಾರ್‌’ ಎಂಬ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸುತ್ತಿರುವ ದರ್ಶನ್‌ ಪುಟ್ಟಣ್ಣಯ್ಯ ಹಾಗೂ ದರ್ಶನ್‌ ಧ್ರುವನಾರಾಯಣ ಅವರು ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ ಗಮನ ಸೆಳೆದರು.

ನಯನಾ ಮೋಟಮ್ಮ ಪ್ರಮಾಣವಚನ ಸ್ವೀಕಾರದ ವೇಳೆ ಮಾಜಿ ಸಚಿವೆ ಮೋಟಮ್ಮ ಅವರು ಗ್ಯಾಲರಿಯಿಂದ ವೀಕ್ಷಿಸಿದರು. ದರ್ಶನ್‌ ಪುಟ್ಟಣ್ಣಯ್ಯ, ಬಸವರಾಜ ಶಿವಗಂಗಾ ಹಸಿರು ಶಾಲು ಧರಿಸಿ ಆಗಮಿಸಿದ್ದರೆ, ತುಳುನಾಡಿನ ಶಾಲು ಧರಿಸಿ ವೇದವ್ಯಾಸ ಕಾಮತ್‌ ಸದನಕ್ಕೆ ಆಗಮಿಸಿದ್ದರು. ಶಿವಮೊಗ್ಗ ಕ್ಷೇತ್ರದಿಂದ ಆಯ್ಕೆಯಾದ ಚೆನ್ನಬಸಪ್ಪ ಕೇಸರಿ ಶಾಲು ಧರಿಸಿ ಪ್ರಮಾಣವಚನ ಸ್ವೀಕರಿಸಿದರು.

ಪ್ಪ-ಮಕ್ಕಳು, ಮಾವ ಅಳಿಯರ ಜೋಡಿ

ವಿಧಾನಸಭೆ ಮೊದಲ ದಿನ ಅಪ್ಪ ಮಕ್ಕಳು ಹಾಗೂ ಮಾವ ಅಳಿಯರು ಒಟ್ಟಿಗೆ ಆಗಮಿಸಿ ಪಕ್ಕದಲ್ಲೇ ಕುಳಿತು ಬಳಿಕ ಪ್ರಮಾಣವಚನ ಸ್ವೀಕರಿಸಿದ್ದು ವಿಶೇಷವಾಗಿತ್ತು. ಜೆಡಿಎಸ್‌ನಿಂದ ಗೆದ್ದ ಜಿ.ಟಿ. ದೇವೇಗೌಡ ಹಾಗೂ ಪುತ್ರ ಹರೀಶ್‌ಗೌಡ ಅವರು ಅಕ್ಕ-ಪಕ್ಕದಲ್ಲೇ ಆಸೀನರಾಗಿದ್ದರು. ಇನ್ನು ಹೊಸಕೋಟೆ ಕಾಂಗ್ರೆಸ್‌ ಶಾಸಕ ಶರತ್‌ ಬಚ್ಚೇಗೌಡರಿಗೆ ಹೆಣ್ಣು ಕೊಟ್ಟಮಾವ ಪುಟ್ಟಸ್ವಾಮಿ ಗೌಡ ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿದ್ದರು. ಮಾವ-ಅಳಿಯ ಇಬ್ಬರೂ ಆಡಳಿತ ಪಕ್ಷದ ಸಾಲಿನಲ್ಲಿ ಅಕ್ಕ ಪಕ್ಕದಲ್ಲಿಯೇ ಕುಳಿತಿದ್ದು ವಿಶೇಷ.

ದೇವನಹಳ್ಳಿ ಶಾಸಕ ಕೆ.ಎಚ್‌. ಮುನಿಯಪ್ಪ, ಪುತ್ರಿ ರೂಪಕಲಾ ಶಶಿಧರ್‌, ಅಪ್ಪ ಎಂ.ಕೃಷ್ಣಪ್ಪ ಹಾಗೂ ಪುತ್ರ ಪ್ರಿಯಕೃಷ್ಣ, ಅಪ್ಪ ಜೆಡಿಎಸ್‌ ಶಾಸಕ ಎ.ಮಂಜು ಹಾಗೂ ಪುತ್ರ ಕಾಂಗ್ರೆಸ್‌ ಶಾಸಕ ಮಂಥರ್‌ಗೌಡ ಅವರು ವಿಧಾನಸಭೆಗೆ ಹಾಜರಾದರೂ ಅಕ್ಕ-ಪಕ್ಕ ಕುಳಿತಿರಲಿಲ್ಲ.

ಬಿಜೆಪಿ ಸದಸ್ಯೆ ಪ್ರಮಾಣಕ್ಕೆ ಕಾಂಗ್ರೆಸ್‌ ಆಕ್ಷೇಪ

ಬಿಜೆಪಿ ಮಹಿಳಾ ಸದಸ್ಯೆ ಭಾಗಿರತಿ ಮರುಳ್ಯ ಅವರು ‘ಕುಲದೇವರು, ಸತ್ಯಸಾರಮಣಿ ಹಾಗೂ ಕ್ಷೇತ್ರದ ಮತದಾರರ’ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಈ ವೇಳೆ ಕಾಂಗ್ರೆಸ್‌ನ ಬಸವರಾಜ ರಾಯರೆಡ್ಡಿ ಅವರು ಆಕ್ಷೇಪ ವ್ಯಕ್ತಪಡಿಸಿದರು. ಸಂವಿಧಾನಬದ್ಧವಾದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಬೇಕು ಎಂದು ಹೇಳಿದರು. ಈ ವೇಳೆ ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಮೊದಲು ಸಂಪ್ರದಾಯ ಶುರು ಮಾಡಿದ್ದು ಯಾರು ಎಂದು ಪ್ರಶ್ನೆ ಮಾಡಿದರು. ಮಧ್ಯಪ್ರವೇಶಿಸಿದ ಹಂಗಾಮಿ ಸ್ಪೀಕರ್‌, ಯಾವುದೇ ವ್ಯಕ್ತಿ ಹೆಸರಿನಲ್ಲಿ ಸ್ವೀಕರಿಸಬಾರದು. ಸಂವಿಧಾನ ಅಥವಾ ದೇವರ ಹೆಸರಿನಲ್ಲಿ ಮಾತ್ರ ಪ್ರಮಾಣವಚನ ಸ್ವೀಕರಿಸಬೇಕು. ಯಾವುದೇ ವ್ಯಕ್ತಿ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರೆ ಕಾನೂನು ಬದ್ದವಾಗಿರುವುದಿಲ್ಲ ಎಂದು ಹೇಳಿದರು.

ಡಿಕೆಶಿ ನನ್ನ ದೈವವೆಂದು ಶಾಸಕ ಪ್ರಮಾಣವಚನ: ಹಿಂದು ಹುಲಿ ಯತ್ನಾಳ್‌ ಘರ್ಜನೆ

ಇಲ್ಲಿರುವುದೆಲ್ಲಾ ಶುಗರ್‌, ಬಿಪಿ ಬ್ಯಾಂಕ್‌ಗಳೇ: ಯತ್ನಾಳ್‌

ಆಂಗ್ಲ ಅಕ್ಷರಮಾಲೆ ಪ್ರಕಾರ ಹೆಸರುಗಳನ್ನು ಕರೆದು ಪ್ರಮಾಣವಚನ ಸ್ವೀಕರಿಸಲು ಅನುವು ಮಾಡಿಕೊಡಲಾಗಿತ್ತು. ಇದರ ನಡುವೆ ಬಿ ಅಕ್ಷದಿಂದ ಶುರುವಾಗುವ ತಮ್ಮ ಹೆಸರಿನ ಬದಲು ಬೇರೆ ಹೆಸರುಗಳನ್ನು ಕರೆದಿದ್ದಕ್ಕೆ ಗರಂ ಆದ ಬಸನಗೌಡ ಪಾಟೀಲ್‌ ಯತ್ನಾಳ್‌ ಯಾವ ಕ್ರಮದಲ್ಲಿ ಹೆಸರು ಕರೆಯುತ್ತಿದ್ದೀರಿ ಎಂದು ಹಂಗಾಮಿ ಸ್ಪೀಕರ್‌ ಅವರಿಗೆ ಪ್ರಶ್ನಿಸಿದರು.

ಈ ವೇಳೆ ಆರ್‌.ವಿ. ದೇಶಪಾಂಡೆ ಆಸ್ಪತ್ರೆಯ ಕಾರಣ ನೀಡಿ ಬೇಗ ಹೋಗಬೇಕು ಎನ್ನುತ್ತಿದ್ದಾರೆ ಏನು ಮಾಡಲಿ ಎಂದು ಪ್ರಶ್ನಿಸಿದರು. ಇದಕ್ಕೆ ಯತ್ನಾಳ್‌, ‘ಹೀಗೆ ಹೇಳಿದರೆ ಹೇಗೆ? ಇಲ್ಲಿರುವ ನಾವೆಲ್ಲಾ ಶುಗರ್‌ ಮತ್ತು ಬಿಪಿ ಬ್ಯಾಂಕ್‌ಗಳೇ ಅಲ್ಲವೇ ಎಂದು ಹಾಸ್ಯ ಚಟಾಕಿ ಹಾರಿಸಿದರು.

click me!