ನೆರೆ ಸಂತ್ರಸ್ತ ರೈತರಿಗೆ ಬೆಳೆ ವಿಮೆಯೇ ಸಿಕ್ಕಿಲ್ಲ!

By Kannadaprabha NewsFirst Published Jan 25, 2020, 4:00 PM IST
Highlights

ನೆರೆ ಸಂತ್ರಸ್ತ ರೈತರಿಗೆ ಬೆಳೆ ವಿಮೆಯೇ ಸಿಕ್ಕಿಲ್ಲ| 6 ತಿಂಗಳಾದರೂ ನಯಾಪೈಸೆ ವಿಮೆ ನೀಡದ ಕಂಪನಿಗಳು| ಕೃಷಿ ಇಲಾಖೆ ಬಳಿ ತಂತ್ರಾಂಶ ಇಲ್ಲ ಎಂದು ನೆಪ| ಶೀಘ್ರದಲ್ಲೇ ಮಧ್ಯಂತರ ಪರಿಹಾರ, ಪೂರ್ಣ ಪರಿಹಾರ ಪಾವತಿಗೆ ಇನ್ನೂ 4 ತಿಂಗಳು ಬೇಕು: ಕೃಷಿ ಇಲಾಖೆ

ಲಿಂಗರಾಜು ಕೋರಾ

ಬೆಂಗಳೂರು[ಜ.25]: ಕಳೆದ ಮುಂಗಾರು ಹಂಗಾಮಿನ ಆಗಸ್ಟ್‌ನಲ್ಲಿ ಉಂಟಾದ ವಿನಾಶಕಾರಿ ಪ್ರವಾಹದಿಂದ ರಾಜ್ಯದಲ್ಲಿ 9.5 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಬೆಳೆ ನಷ್ಟವಾಗಿದೆ. ಆದರೆ, ಪ್ರವಾಹ ಉಂಟಾಗಿ ಆರು ತಿಂಗಳಾಗುತ್ತಿದ್ದರೂ ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯಡಿ(ಪಿಎಂಎಫ್‌ಬಿವೈ) ಬೆಳೆ ವಿಮೆ ಮಾಡಿಸಿದ ರಾಜ್ಯದ ರೈತರಿಗೆ ಒಂದು ಪೈಸೆ ವಿಮಾ ಹಣ ಪಾವತಿಯಾಗಿಲ್ಲ.

ರಾಜ್ಯದಲ್ಲಿ ಕಳೆದ ಮುಂಗಾರು ಹಂಗಾಮಿನಲ್ಲಿ 11.02 ಲಕ್ಷ ರೈತರು ಪಿಎಂಎಫ್‌ಬಿವೈ ಬೆಳೆ ವಿಮೆ ಮಾಡಿಸಿದ್ದಾರೆ. ಇದರಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ರೈತರು ಪ್ರವಾಹಕ್ಕೀಡಾದ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುತ್ತಾರೆ ಎನ್ನುತ್ತವೆ ಮೂಲಗಳು. ಯೋಜನೆಯ ನಿಯಮಾವಳಿ ಪ್ರಕಾರ, ಪ್ರವಾಹದಿಂದ ಬೆಳೆ ನಷ್ಟಅನುಭವಿಸಿದ ರೈತರಿಗೆ ವಿಮೆ ಕಂಪನಿಗಳು ಈಗಾಗಲೇ ಮಧ್ಯಂತರ ಪರಿಹಾರ ನೀಡಬೇಕಾಗಿತ್ತು. ಆದರೆ, ರೈತರಿಂದ ಪ್ರೀಮಿಯಂ ಮೊತ್ತ ಪಾವತಿಸಿಕೊಂಡ ಖಾಸಗಿ ವಿಮೆ ಕಂಪನಿಗಳ ಜತೆಗೆ ಕೃಷಿ ಇಲಾಖೆಯಲ್ಲಿನ ತಂತ್ರಾಂಶ ಲೋಪದ ನೆಪವೊಡ್ಡಿ ಇದುವರೆಗೂ ಯಾವೊಬ್ಬ ರೈತರಿಗೂ ವಿಮಾ ಹಣ ನೀಡಿಲ್ಲ.

ಕರ್ನಾಟಕಕ್ಕೆ 2ನೇ ಹಂತದ ಪ್ರವಾಹ‌ ಪರಿಹಾರ ಘೋಷಿಸಿದ ಕೇಂದ್ರ ಸರ್ಕಾರ

ರೈತರಿಗೆ ಬೆಳೆ ವಿಮೆ ಪರಿಹಾರ ವಿಳಂಬವಾಗಿರುವ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ. ಸದ್ಯದಲ್ಲೇ ಮಧ್ಯಂತರ ವಿಮೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ, ಪೂರ್ಣ ಪ್ರಮಾಣದ ವಿಮೆ ಪರಿಹಾರ ಮೊತ್ತ ಪಾವತಿಗೆ ಇನ್ನೂ ಮೂರ್ನಾಲ್ಕು ತಿಂಗಳು ಸಮಯವಾಗಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಇಳುವರಿ ಮೌಲ್ಯಮಾಪನ ವಿಳಂಬ:

ಮುಂಗಾರು ಹಂಗಾಮಿನ ಬೆಳೆಗಳನ್ನು ಡಿಸೆಂಬರ್‌ ವೇಳೆಗೆ ಕಟಾವು ಮಾಡಲಾಗುತ್ತದೆ. ಬೆಳೆ ವಿಮೆ ಮಾಡಿಸಿದ ರೈತರು ಬೆಳೆ ನಷ್ಟದ ಪರಿಹಾರಕ್ಕೆ ಅರ್ಜಿ ಸಲ್ಲಿಸಿದರೆ ಸಂಬಂಧಿಸಿದ ಖಾಸಗಿ ಕಂಪನಿಗಳು ಸ್ಥಳೀಯ ಕೃಷಿ ಇಲಾಖೆ ಅಧಿಕಾರಿಗಳ ಜತೆ ರೈತರ ಜಮೀನಿನ ಪರಿಶೀಲನೆ ಮಾಡುತ್ತವೆ. ಬೆಳೆ ಹಾನಿ ಸಾಬೀತಾದಲ್ಲಿ ಪರಿಹಾರ ನೀಡಬೇಕಾಗುತ್ತದೆ. ಈ ಸಂಬಂಧ ಎಲ್ಲ ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಠ 1 ತಿಂಗಳು ಬೇಕಾಗುತ್ತದೆ. ಬೆಳೆ ಇಳುವರಿ ಆಧರಿಸಿ ವಿಮಾ ಪರಿಹಾರ ಮೊತ್ತವನ್ನು ನೀಡಲಾಗುತ್ತದೆ.

ಆದರೆ, ಈ ಬಾರಿಯದ್ದು ಪ್ರವಾಹ ಸನ್ನಿವೇಶ. ಆಗಸ್ಟ್‌ನಲ್ಲಿ ಉಂಟಾದ ಪ್ರವಾಹದಿಂದ ಬೆಳೆ ಹಾನಿಯಾಗಿರುವುದು ಸ್ಪಷ್ಟವಿತ್ತು. ಈ ಬಗ್ಗೆ ಇಲಾಖೆಯ ಬಳಿ ದಾಖಲೆಗಳು ಲಭ್ಯವಿದ್ದವು. ಪ್ರವಾಹ ಸನ್ನಿವೇಶದಲ್ಲಿ ಮಧ್ಯಂತರ ಪರಿಹಾರ ನೀಡಬೇಕು ಎಂಬ ನಿಯಮವಿದೆ. ಕೃಷಿ ಇಲಾಖೆಯಲ್ಲಿ ಬೆಳೆ ನಷ್ಟಪತ್ತೆ ವಿಧಾನ ಸಮರ್ಪಕವಾಗಿ ಇಲ್ಲದ ಕಾರಣ ಮಧ್ಯಂತರ ಪರಿಹಾರ ನೀಡಿಲ್ಲ. ಇದಷ್ಟೇ ಅಲ್ಲ, ಪರಿಪೂರ್ಣ ಪರಿಹಾರ ನೀಡಲು ಇನ್ನೂ ಮೂರ್ನಾಲ್ಕು ತಿಂಗಳಾದರೂ ಆಗುತ್ತದೆ. ಹೀಗಾಗಿ ರೈತರು ಸಂಕಷ್ಟದಲ್ಲಿದ್ದಾರೆ.

ಈ ಕುರಿತು ಕೃಷಿ ಇಲಾಖೆ ನಿರ್ದೇಶಕ ಬಿ.ವೈ. ಶ್ರೀನಿವಾಸ್‌ ಅವರನ್ನು ಸಂಪರ್ಕಿಸಿದಾಗ, ಬೆಳೆ ಇಳುವರಿ ಮೌಲ್ಯಮಾಪನ ಪ್ರಕ್ರಿಯೆ ಪ್ರಗತಿಯಲ್ಲಿದೆ. ಪೂರ್ಣಗೊಂಡ ಬಳಿಕ ಯಾವ ಪ್ರದೇಶದ ರೈತರಿಗೆ ಯಾವ್ಯಾವ ಬೆಳೆಗಳಿಗೆ ಎಷ್ಟುವಿಮೆ ಪರಿಹಾರ ನೀಡಬೇಕೆಂಬ ನಿರ್ಧಾರಕ್ಕೆ ಬರಲಾಗುತ್ತದೆ. ಈ ಬಾರಿ ರಾಜ್ಯದಲ್ಲಿ ಉಂಟಾದ ಪ್ರವಾಹದಿಂದ ಉಂಟಾದ ಕೆಲ ಗೊಂದಲಗಳಿಂದ ಪ್ರಕ್ರಿಯೆ ತಡವಾಗಿದೆ. ಈ ಪ್ರಕ್ರಿಯೆ ಪೂರ್ಣಗೊಂಡು ವಿಮೆ ಕಂಪನಿಗಳಿಂದ ರೈತರಿಗೆ ವಿಮಾ ಹಣ ಪಾವತಿಯಾಗಲು ಇನ್ನೂ ಮೂರ್ನಾಲ್ಕು ತಿಂಗಳು ಆಗಬಹುದು ಎಂದು ಹೇಳಿದರು.

ಪ್ರವಾಹದಲ್ಲಿ ಸಿಲುಕಿದ್ದ 300 ಮಂದಿ ರಕ್ಷಣೆ; ರಾವಸಾಬ- ನಂಜಯಗೆ ಶೌರ್ಯ ಪ್ರಶಸ್ತಿ ಗರಿ!

ತಂತ್ರಾಂಶ ಸಿದ್ಧತೆ ಆಗಿರಲಿಲ್ಲ:

ಇನ್ನು, ನೈಸರ್ಗಿಕ ವಿಕೋಪವಾದಾಗ ಬೆಳೆ ವಿಮೆ ಮಾಡಿಸಿದ ರೈತರಿಗೆ ತಕ್ಷಣವೇ ಶೇ.25ರಷ್ಟುವಿಮೆ ಪರಿಹಾರ ಹಣವನ್ನು ಮೌಲ್ಯಮಾಪನ ಮಾಡಿ ಮಧ್ಯಂತರ ಪರಿಹಾರವಾಗಿ ನೀಡಬೇಕಾಗುತ್ತದೆ. ಆದರೆ, ಈ ಸಂಬಂಧ ಅಗತ್ಯ ತಂತ್ರಾಂಶ ಸಿದ್ಧತೆ ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಮಧ್ಯಂತರ ಪರಿಹಾರ ವಿಳಂಬವಾಗಿದೆ ಎನ್ನಲಾಗಿದೆ.

ಪಿಎಂಎಫ್‌ಬಿವೈ ಯೋಜನೆ ವಿವರ (2019ರ ಮುಂಗಾರು ಅವಧಿ)

ವಿಮೆ ನೋಂದಾಯಿತ ರೈತರ ಸಂಖ್ಯೆ 11.02 ಲಕ್ಷ

ವಿಮೆ ಮಾಡಿಸಲಾದ ಭೂಮಿ 12.47 ಲಕ್ಷ ಹೆಕ್ಟೇರ್‌

ರೈತರಿಂದ ಪಾವತಿಯಾದ ಪ್ರೀಮಿಯಂ 135.52 ಕೋಟಿ ರು.

ಸರ್ಕಾರದಿಂದ ಪಾವತಿಯಾದ ಪ್ರೀಮಿಯಂ 1200 ಕೋಟಿ ರು.

ಕೇಂದ್ರ ಕೊಟ್ಟ ನೆರೆ ಪರಿಹಾರ ಸಾಲದು: ಸಿಎಂ ಯಡಿಯೂರಪ್ಪ

click me!