ಇವತ್ತು ನನಗೆ ಬಹಳ ಸಂತೋಷದ ದಿನ. ಈ ಜಾಗದಲ್ಲಿ ನಾನೇ ಬಂದು ಭೂಮಿ ಪೂಜೆ ಮಾಡಿದ್ದೆ. ಇವತ್ತು ಈ ಸ್ಥಾವರವನ್ನ ನಮ್ಮ ಸರ್ಕಾರವೇ ಲೋಕಾರ್ಪಣೆ ಮಾಡಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಹೇಳಿದರು.
ಬೆಂಗಳೂರು (ಸೆ.24): ಇವತ್ತು ನನಗೆ ಬಹಳ ಸಂತೋಷದ ದಿನ. ಈ ಜಾಗದಲ್ಲಿ ನಾನೇ ಬಂದು ಭೂಮಿ ಪೂಜೆ ಮಾಡಿದ್ದೆ. ಇವತ್ತು ಈ ಸ್ಥಾವರವನ್ನ ನಮ್ಮ ಸರ್ಕಾರವೇ ಲೋಕಾರ್ಪಣೆ ಮಾಡಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಹೇಳಿದರು.
ಇಂದು ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ವತಿಯಿಂದ ಯಲಹಂಕದ KPCL ಆವರಣದಲ್ಲಿ ನಡೆದ ರಾಜ್ಯದ ಪ್ರಪ್ರಥಮ ನೈಸರ್ಗಿಕ ಅನಿಲ 370 ಮೆಗಾ ವ್ಯಾಟ್ ಸಾಮರ್ಥ್ಯ ಹೊಂದಿರುವ ವಿದ್ಯುತ್ ಸ್ಥಾವರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಕಾಂಗ್ರೆಸ್ ಸರ್ಕಾರ ನಾಡಿನ ಜನತೆಗೆ ಕೊಡುಗೆಗಳನ್ನ ನೀಡಿದೆ. ಜನನ ಉಚಿತ, ಮರಣ ಖಚಿತ. ಹುಟ್ಟು ಸಾವಿನ ನಡುವೆ ನಾವು ಏನ್ ಮಾಡ್ತಿವಿ ಅನ್ನೋದು ಮುಖ್ಯ. ಒಂದು ಕೊಟ್ಟು ಹೋಗುವುದು ಇನ್ನೊಂದು ಬಿಟ್ಟು ಹೋಗುವುದು. ನಂಬಿಕೆ ಮುಖ್ಯ ರಾಜ್ಯದ ಜನರಿಗೆ ನಾವು ಕೊಟ್ಟ ಕೊಡುಗೆ ಏನು? ಅನ್ನೋದು ಮುಖ್ಯ. ಇಲ್ಲಿ ಅಧಿಕಾರ ಯಾರಿಗೂ ಶಾಶ್ವತ ಅಲ್ಲ, ಇವತ್ತು ಇರ್ತೇವೆ ನಾಳೆ ಹೋಗ್ತೇವೆ. ಅಧಿಕಾರಿಗಳಿಗೆ 30 ವರ್ಷ, ರಾಜಕಾರಣಿಗಳಿಗೆ 5 ವರ್ಷ. ಆದರೆ ರಾಜಕಾರಣಿಗಳಿಗೆ ಜನ ಆಶೀರ್ವಾದ ಮಾಡಿದ್ರೆ ಮತ್ತೆ ಅಧಿಕಾರ ಸಿಗುತ್ತೆ. ಸಚಿವ ಜಾರ್ಜ್ ಅವ್ರು ಅದನ್ನೇ ಹೇಳಿದ್ದು, ಜನರು ನಮ್ಮ ಸರ್ಕಾರ ನಾವು ಅಧಿಕಾರದಲ್ಲಿದ್ದ ಸಮಯದಲ್ಲಿ ನೀಡಿದ ಕೊಡುಗೆಗಳನ್ನ ನೆನೆಯುತ್ತಾರೆ ಎಂದು. ಈ ಹಿಂದೆ ಬಿಜೆಪಿ ಜೆಡಿಎಸ್ ಗೆ ಅಧಿಕಾರ ನೀಡಿದ್ರು. ಆದರೆ ರಾಜ್ಯದ ಜನರಿಗೆ ಅವರ ಕೊಡುಗೆ ಏನು? ಎಂದು ಪ್ರಶ್ನಿಸಿದರು.
ಮುಡಾ ಪ್ರಕರಣ: ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡ್ತಾರಾ? ಮುಂದಿರುವ ಆಯ್ಕೆಗಳೇನು?
ನಾನು ಹಿಂದೆ ಸಚಿವನಾಗಿದ್ದೆ, ಆಗ ಈ ಯೋಜನೆಗೆ ಚಾಲನೆ ನೀಡಿದ್ದು. ಆಗ ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಅವರು ಗ್ಯಾಸ್ ಕರೆಂಟ್ ಬಿಡದಿಯಲ್ಲಿ ಮಾಡೋದ್ರ ಬಗ್ಗೆ ಹೇಳಿದ್ರು. ಆದ್ರೆ ನಾವೀಗ ಮಾಡಿರೋ ಈ ಯೋಜನೆ ಅತ್ಯಂತ ವಿಶೇಷವಾದ ಯೋಜನೆಯಾಗಿದೆ. ಇಲ್ಲಿನ ನಾಗರಿಕರು ಸೌಂಡ್ ಬಗ್ಗೆ ಅಕ್ಷೇಪಣೆ ಮಾಡಿದ್ದಾರೆ. ಸಚಿವ ಜಾರ್ಜ್ ಅವರು ಅದನ್ನ ಸರಿಮಾಡೋ ಮಾಡಿದ್ದಾರೆ ಎಂದರು.
ಬೇರೆಯವರಿಗೆ ಇಲ್ಲದ ನೈತಿಕತೆ ಸಿದ್ದರಾಮಯ್ಯಗೆ ಯಾಕೆ?: ಸಚಿವ ಎಂಬಿ ಪಾಟೀಲ್
ಕುಸುಮ ಅನ್ನೋ ಯೋಜನೆ ಬಂದಿದೆ. ಅದರ ಅಡಿಪಾಯ ನಮ್ಮದು. 15 ಸಾವಿರ ಎಕರೆ ಭೂಮಿಯನ್ನ ರೈತರಿಂದ ಲೀಸ್ ಪಡೆದು ಮಾಡಿದ ಕಾರ್ಯಕ್ರಮ ಅದು. ಅದನ್ನ ಕುಸುಮ ಅಂತಾ ಯೋಜನೆಯಾಗಿ ತಂದಿದ್ದಾರೆ ಮೇಕೆದಾಟು ಯೋಜನೆಯಲ್ಲಿ 440 ಮೇಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಕನಸು ಇದೆ. ಅದನ್ನ ನೋಡೋಣ. ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಇಂಧನ ಸಚಿವ ಕೆ ಜೆ ಜಾರ್ಜ್,ಸಚಿವ ಭೈರತಿ ಸುರೇಶ್, ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.