ಕಾಗಿನೆಲೆಯಲ್ಲಿ 12ರಿಂದ ಹಾಲುಮತ ಸಂಸ್ಕೃತಿ ವೈಭವ

By Kannadaprabha News  |  First Published Jan 10, 2021, 11:21 AM IST

3 ದಿನ ಕುರುಬ ಸಮುದಾಯದ ಕಲೆ-ಸಂಸ್ಕೃತಿ ಅನಾವರಣ | ಸಿದ್ದರಾಮಯ್ಯರಿಂದ ಚಾಲನೆ


ಬೆಂಗಳೂರು(ಜ.10): ರಾಯಚೂರಿನ ದೇವದುರ್ಗ ತಾಲೂಕಿನ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಆವರಣದಲ್ಲಿ ಜ.12ರಿಂದ ಮೂರು ದಿನಗಳ ಕಾಲ ‘ಹಾಲುಮತ ಸಂಸ್ಕೃತಿ ವೈಭವ’ ಹಮ್ಮಿಕೊಳ್ಳಲಾಗಿದ್ದು, ಈ ಸಮಾರಂಭದಲ್ಲಿ ಕುರುಬ ಸಮುದಾಯದ ಕಲೆ-ಸಂಸ್ಕೃತಿ ಅನಾವರಣಗೊಳ್ಳಲಿದೆ.

ಶನಿವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮಾಜಿ ಸಚಿವ ಎಚ್‌.ಎಂ.ರೇವಣ್ಣ, ತಿಂಥಣಿ ಬ್ರಿಜ್‌ ಕನಕಗುರುಪೀಠದ ಸಿದ್ದರಾಮಾನಂದ ಸ್ವಾಮೀಜಿ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಗೋವಾದ ಉಪ ಮುಖ್ಯಮಂತ್ರಿ ಚಂದ್ರಕಾಂತ್‌ ಕವಳೇಕರ್‌, ಮಹಾರಾಷ್ಟ್ರದ ಆರ್‌ಎಸ್‌ಪಿ ರಾಷ್ಟ್ರೀಯ ಅಧ್ಯಕ್ಷ ಮಹದೇವ ಜಾನಕರ್‌ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

Latest Videos

undefined

ರಾಧಿಕಾಗೆ ಸಿಸಿಬಿ ಸಂಕಷ್ಟ: ಮಂಡ್ಯ ಅಭಿಮಾನಿಯಿಂದ ಉರುಳು ಸೇವೆ

ಈ ಬಾರಿಯ ಉತ್ಸವದಲ್ಲಿ ಹೆಳವ-ಸುಡುಗಾಡು ಸಿದ್ಧರು ಮತ್ತು ಟಗರುಜೋಗಿ ಸಮಾವೇಶ ಪ್ರಮುಖ ಆಕರ್ಷಣೆ ಆಗಿರಲಿದ್ದು, ಜ.13ರಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಇದನ್ನು ಉದ್ಘಾಟಿಸಲಿದ್ದಾರೆ ಎಂದು ಎಚ್‌.ಎಂ. ರೇವಣ್ಣ ವಿವರಿಸಿದರು. ಜ.14ರಂದು ಬೊಮ್ಮಗೊಂಡೇಶ್ವರ- ಸಿದ್ದರಾಮೇಶ್ವರ ಉತ್ಸವ ನಡೆಯಲಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಉದ್ಘಾಟಿಸುವರು. ಮಾಜಿ ಸಚಿವ ಎಚ್‌. ವಿಶ್ವನಾಥ್‌ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.

ಸಮಾರಂಭದಲ್ಲಿ ಟಗರುಗಳ ಕಾಳಗ, ಹೆಳವ-ಸುಡುಗಾಡಸಿದ್ಧ-ಟಗರುಜೋಗಿ ಸಮಾವೇಶ, ಬೊಮ್ಮಗೊಂಡೇಶ್ವರ-ಸಿದ್ದರಾಮೇಶ್ವರ ಉತ್ಸವ, ಎತ್ತುಗಳು ಭಾರ ಎಳೆಯುವ ಸ್ಪರ್ಧೆ, ಬೀರದೇವರ ಉತ್ಸವ, ಈಚೆಗೆ ಆಯ್ಕೆಗೊಂಡ ಪಂಚಾಯ್ತಿ ಸದಸ್ಯರ ಸಮಾವೇಶ, ಪುಸ್ತಕ ಬಿಡುಗಡೆ, ಪ್ರಶಸ್ತಿ ಪ್ರದಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಸಂಸ್ಕೃತಿ ವೈಭವಕ್ಕೆ ಮೆರುಗು ನೀಡಲಿವೆ. ಹಲವು ಸ್ಪರ್ಧೆಗಳಲ್ಲಿ ಗೆದ್ದವರಿಗೆ ಆಕರ್ಷಕ ಬಹುಮಾನ ನೀಡಿ ಸನ್ಮಾನಿಸಲಾಗುವುದು ಎಂದು ಹೇಳಿದರು.

ಲಕ್ಕಪ್ಪಗೌಡಗೆ ಕನಕ ರತ್ನ ಪ್ರಶಸ್ತಿ

ಇದೇ ವೇಳೆ ‘ಕನಕ ರತ್ನ’ ಸೇರಿದಂತೆ ರಾಜ್ಯಮಟ್ಟದ ಮೂರು ಪ್ರತಿಷ್ಠಿತ ಪ್ರಶಸ್ತಿಗಳನ್ನೂ ಘೋಷಿಸಲಾಯಿತು. ‘ಕನಕ ರತ್ನ’ ಪ್ರಶಸ್ತಿಗೆ ಜಾನಪದ ತಜ್ಞ ವಿಶ್ರಾಂತ ಕುಲಪತಿ ಪ್ರೊ.ಎಚ್‌.ಜೆ. ಲಕ್ಕಪ್ಪಗೌಡ ಅವರನ್ನು ಆಯ್ಕೆ ಮಾಡಲಾಗಿದೆ. ಅದೇ ರೀತಿ, ‘ಸಿದ್ದಶ್ರೀ ಪ್ರಶಸ್ತಿ’ಗೆ ಹಂಪಿಯ ಸುಭದ್ರಮ್ಮ ಕಾರಮಿಂಚಪ್ಪ ಮತ್ತು ‘ಹಾಲುಮತ ಭಾಸ್ಕರ’ ಪ್ರಶಸ್ತಿಗೆ ಕಡೂರಿನ ವಕೀಲ ಎಚ್‌.ಎಸ್‌. ಯಳವರ ಅವರನ್ನು ಆಯ್ಕೆ ಮಾಡಲಾಗಿದೆ. ಹಾಲುಮತ ಸಂಸ್ಕೃತಿ ವೈಭವದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ರೇವಣ್ಣ ಮಾಹಿತಿ ನೀಡಿದರು.

ಸುಡುಗಾಡು ಸಿದ್ಧರು ಹಾಲುಮತದ ಒಂದು ಭಾಗವಾಗಿದ್ದು, ಸಹಸ್ರಾರು ವರ್ಷಗಳಿಂದ ನಮ್ಮ ಪರಂಪರೆಯ ಪವಾಡಗಳನ್ನು ಜೀವಂತವಾಗಿರಿಸಿಕೊಂಡು ಬಂದಿದ್ದಾರೆ. ಸ್ಮಶಾನವನ್ನು ಆಶ್ರಹಿಸಿಕೊಂಡು ಬದುಕುವ ಸಮುದಾಯ ಇದಾಗಿದೆ. ಅದೇ ರೀತಿ, ಟಗರು ಜೋಗಿಗಳು ಕೂಡ ಊರೂರು ಸಂಚರಿಸುತ್ತಾ, ಸಮುದಾಯ ಕುರಿತು ಪ್ರಚಾರ ಮಾಡುತ್ತ ಬಂದಿದ್ದಾರೆ ಎಂದರು.

click me!