ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಏ.1ರಿಂದ ಅನ್ವಯವಾಗುವಂತೆ ವಾರ್ಷಿಕ ವಿದ್ಯುತ್ ದರ ಪರಿಷ್ಕರಣೆ ಮಾಡಿದ್ದು, ಗೃಹ ಬಳಕೆ ಗ್ರಾಹಕರಿಗೆ ವಿದ್ಯುತ್ ದರ, ನಿಗದಿತ ಶುಲ್ಕ ಹೆಚ್ಚಳ ಮೂಲಕ ಬರೆ ಹಾಕಿದೆ.
ಬೆಂಗಳೂರು (ಮಾ.28): ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಏ.1ರಿಂದ ಅನ್ವಯವಾಗುವಂತೆ ವಾರ್ಷಿಕ ವಿದ್ಯುತ್ ದರ ಪರಿಷ್ಕರಣೆ ಮಾಡಿದ್ದು, ಗೃಹ ಬಳಕೆ ಗ್ರಾಹಕರಿಗೆ ವಿದ್ಯುತ್ ದರ, ನಿಗದಿತ ಶುಲ್ಕ ಹೆಚ್ಚಳ ಮೂಲಕ ಬರೆ ಹಾಕಿದೆ. ಇದೇ ವೇಳೆ ಕೈಗಾರಿಕೆ ಹಾಗೂ ವಾಣಿಜ್ಯ ಸಂಪರ್ಕಗಳಿಗೆ ಶುಲ್ಕ ಕಡಿತದ ಯುಗಾದಿ ಕೊಡುಗೆ ನೀಡಿದೆ. ಕೆಇಆರ್‌ಸಿ ಆದೇಶದ ಪರಿಣಾಮ ಏ.1ರಿಂದ ಅನ್ವಯವಾಗುವಂತೆ 2025-26ನೇ ಸಾಲಿಗೆ ಗೃಹ ಬಳಕೆದಾರರಿಗೆ ವಿದ್ಯುತ್ ದರ ಪ್ರತಿ ಯುನಿಟ್‌ಗೆ 26 ಪೈಸೆ ಹಾಗೂ ನಿಗದಿತ ಶುಲ್ಕ ಪ್ರತಿ ಕಿ.ವ್ಯಾಟ್‌ಗೆ ಬರೋಬ್ಬರಿ 25 ರು. ಹೆಚ್ಚಳ ಆಗಲಿದೆ. ಮತ್ತೊಂದೆಡೆ ಕೈಗಾರಿಕೆ ಹಾಗೂ ವಾಣಿಜ್ಯ ಸಂಪರ್ಕಗಳಿಗೆ ಪ್ರತಿ ಯುನಿಟ್‌ಗೆ 64 ಪೈಸೆಯಿಂದ 1.75 ರು.ವರೆಗೆ ವಿದ್ಯುತ್ ದರದಲ್ಲಿ ಭಾರಿ ಕಡಿತ ಆಗಲಿದೆ. ನಿಗದಿತ ಶುಲ್ಕವೂ 5 ರು.ಹಾಗೂ 10 ರು.ಮಾತ್ರ ಹೆಚ್ಚಳ ಮಾಡಲಾಗಿದೆ. ತನ್ಮೂಲಕ ಕೆಇಆರ್‌ಸಿಯು ಯುಗಾದಿ ಹಬ್ಬಕ್ಕೆ ಗೃಹ ಬಳಕೆ ಗ್ರಾಹಕರಿಗೆ ಬೇವು ಹಾಗೂ ವಾಣಿಜ್ಯ, ಕೈಗಾರಿಕಾ ಗ್ರಾಹಕರಿಗೆ ಬೆಲ್ಲ ಹಂಚಿದೆ.
ವಾಸ್ತವವಾಗಿ ವಾರ್ಷಿಕ ದರ ಪರಿಷ್ಕರಣೆಯಲ್ಲಿ ಗೃಹ ಬಳಕೆ ವಿದ್ಯುತ್ ದರ ಪ್ರತಿ ಯುನಿಟ್‌ಗೆ 10 ಪೈಸೆ ಕಡಿಮೆ ಮಾಡಲಾಗಿದೆ. ಆದರೆ, ಮಾ.18 ರಂದು ಕೆಇಆರ್‌ಸಿಯು ಪಿಟಿಸಿಎಲ್, ಎಸ್ಕಾಂಗಳ ನೌಕರರ ಪಿಂಚಣಿ, ಗ್ರಾಚ್ಯುಟಿ ಹೊರೆ ಗ್ರಾಹಕರ ಮೇಲೆ ಹಾಕಿ ರೀತಿಯ ಸಂಪರ್ಕಗಳಿಗೂ ಏ.1ರಿಂದ ಅನ್ವಯವಾಗುವಂತೆ ಪ್ರತಿ ಯುನಿಟ್‌ಗೆ 36 ಪೈಸೆ ಹೆಚ್ಚಳ ಮಾಡಿತ್ತು. ಹೀಗಾಗಿ ವಾರ್ಷಿಕ ದರ ಪರಿಷ್ಕರಣೆಯಲ್ಲಿ ಕೆಇಆರ್‌ಸಿಯು ಗೃಹ ಬಳಕೆ ದರ 10 ಪೈಸೆ ಕಡಿಮೆ ಮಾಡಿದ್ದರೂ ಏ.1ರಿಂದ ಅನ್ವಯವಾಗುವಂತೆ 26 ಪೈಸೆ ಹೊರೆ ಬೀಳಲಿದೆ. ಇನ್ನು ಪ್ರತಿ ಕಿ.ವ್ಯಾಟ್‌ಗೆ 120 ರು. ಇದ್ದ ನಿಗದಿತ ಶುಲ್ಕವನ್ನು 145 ರು.ಗೆ ಹೆಚ್ಚಳ ಮಾಡುವುದರಿಂದ ನಿಗದಿತ ಶುಲ್ಕ ತೀವ್ರ ಹೊರೆಯಾಗಲಿದೆ.
ಎಸ್ಸಿ ಒಳ ಮೀಸಲಾತಿಗಾಗಿ ಮತ್ತೊಂದು ಸಮೀಕ್ಷೆ: ನ್ಯಾ.ನಾಗಮೋಹನದಾಸ್ ಆಯೋಗಕ್ಕೇ ಹೊಣೆ
ಗೃಹ ಜ್ಯೋತಿಗೆ ಹೊರೆ ಇಲ್ಲ: ಶೂನ್ಯ ಬಿಲ್ ಪಡೆಯುತ್ತಿರುವ ಗೃಹ ಜ್ಯೋತಿ ಫಲಾನುಭವಿಗಳ ವಿದ್ಯುತ್ ಶುಲ್ಕ ಸರ್ಕಾರವೇ ಭರಿಸುವುದರಿಂದ ಅಂತಹ ಗ್ರಾಹಕರಿಗೆ ಹೊರೆ ಆಗುವುದಿಲ್ಲ. ಆದರೆ ಗೃಹಜ್ಯೋತಿ ವ್ಯಾಪ್ತಿಗೆ ಬಾರದ ಗ್ರಾಹಕರು ಹಾಗೂ ಗೃಹಜ್ಯೋತಿ ಫಲಾನುಭವಿಗಳಾಗಿದ್ದರೂ ಅರ್ಹತೆ ಪಡೆದಿರುವ ಉಚಿತ ಮಿತಿಗಿಂತ ಹೆಚ್ಚು ಬಳಸುತ್ತಿರುವ ಗ್ರಾಹಕರಿಗೆ ಕಹಿ ಅನುಭವ ಆಗಲಿದೆ.
ಮುಂದಿನ ಮೂರು ವರ್ಷವೂ ಬರೆ: ಇನ್ನು ವಿದ್ಯುತ್ ಶುಲ್ಕ ಪರಿಷ್ಕರಣೆ ಆದೇಶ ಮೂರು ವರ್ಷಗಳಿಗೆ ಅನ್ವಯವಾಗುವಂತೆ ಮಾಡಿದ್ದು, ಗೃಹ ಬಳಕೆ ಗ್ರಾಹಕರಿಗೆ 2026-27ನೇ ಸಾಲಿನಲ್ಲಿ ಯಾವುದೇ ದರ ಪರಿಷ್ಕರಣೆ ಸೂಚಿಸಿಲ್ಲ. ಆದರೂ ಪಿಂಚಣಿ ಹಾಗೂ ಗ್ರ್ಯಾಚುಯಿಟಿ ಹೊರೆ ಹೊರಿಸಿರುವುದರಿಂದ ಪ್ರತಿ ಯುನಿಟ್‌ಗೆ 35 ಪೈಸೆ ಹೆಚ್ಚಳ ಆಗಲಿದೆ. ಇನ್ನು 2027-28ನೇ ಸಾಲಿನಲ್ಲಿ 5 ಪೈಸೆ ಕಡಿಮೆ ಮಾಡುವುದಾಗಿ ಹೇಳಿದ್ದರೂ ಪಿಂಚಣಿ ಹಾಗೂ ಗ್ರ್ಯಾಚುಯಿಟಿ ಹೊರೆಯಿಂದಾಗಿ 29 ಪೈಸೆ ಪ್ರತಿ ಯುನಿಟ್‌ಗೆ ಹೆಚ್ಚಳ ಆಗಲಿದೆ. ಇನ್ನು ನಿಗದಿತ ಶುಲ್ಕವೂ 2026-27ನೇ ಸಾಲಿಗೆ 150 ರು.ಗೆ, 2027-28ನೇ ಸಾಲಿಗೆ 160 ರು.ಗೆ ಹೆಚ್ಚಳ ಆಗಲಿದೆ. ಹೀಗಾಗಿ ನಿಗದಿತ ಶುಲ್ಕದ ಹೊರೆ ಮುಂದಿನ ವರ್ಷಗಳಲ್ಲೂ ಮುಂದುವರೆಯಲಿದೆ.
ವಾಣಿಜ್ಯ, ಕೈಗಾರಿಕೆಗಳ ದರ ಇಳಿಕೆ: ಮತ್ತೊಂದೆಡೆ ಎಲ್‌ಟಿ ಹಾಗೂ ಎಚ್‌ಟಿ ವಾಣಿಜ್ಯ, ಕೈಗಾರಿಕಾ ಸಂಪರ್ಕಗಳ ವಿದ್ಯುತ್ ದರವನ್ನು ತೀವ್ರ ಕಡಿಮೆ ಮಾಡಿದ್ದು, ನಿಗದಿತ ಶುಲ್ಕವನ್ನು ಪ್ರತಿ ಎಚ್‌ಪಿಗೆ 10 ರು. ಹಾಗೂ ಪ್ರತಿ ಕೆವಿಎಗೆ 5 ರು. ಮಾತ್ರ ಹೆಚ್ಚಳ ಮಾಡಿದೆ. ಎಲ್‌ಟಿ ವಾಣಿಜ್ಯ ಸಂಪರ್ಕಗಳಿಗೆ ಪ್ರತಿ ಯುನಿಟ್‌ಗೆ 8 ರು. ಇದ್ದ ವಿದ್ಯುತ್ ಶುಲ್ಕ ಮಾ.18 ರಿಂದ 8.36 ರು.ಗೆ ಹೆಚ್ಚಳ ಆಗಿತ್ತು. ಇದೀಗ 1 ರು. ಕಡಿಮೆ ಮಾಡಿದ್ದು, 7.36 ರು. ಪಾವತಿಸಬೇಕಾಗಿದೆ. ಹೀಗಾಗಿ ಒಟ್ಟಾರೆ ಕಳೆದ ವರ್ಷಕ್ಕೆ ಹೋಲಿಸಿದರೆ 64 ಪೈಸೆ ಕಡಿಮೆಯಾಗಲಿದೆ. ಇದೇ ರೀತಿ ಎಲ್‌ಟಿ-5 ಕೈಗಾರಿಕೆ ಸಂಪರ್ಕಗಳಿಗೆ 1.60 ರು. ಕಡಿಮೆ ಮಾಡಿದ್ದು, 1.24 ರು. ಕಡಿಮೆಯಾಗಲಿದೆ. ಎಚ್‌ಟಿ-1 ಕೈಗಾರಿಕಾ ಗ್ರಾಹಕರಿಗೆ 6.90 ರು. ಇದ್ದ ಬೆಲೆ 6.96 ರು. ಆಗಲಿದ್ದು, ದರ 6 ಪೈಸೆ ಹೆಚ್ಚಳ ಆಗಲಿದೆ.
ಎಚ್‌ಟಿ-ವಾಣಿಜ್ಯ ಸಂಪರ್ಕಗಳಿಗೆ ಬರೋಬ್ಬರಿ 2.05 ರು. ಕಡಿಮೆ ಮಾಡಿದ್ದು, ಮಾ.18ರ ಆದೇಶ ಅನ್ವಯವಾದ ಬಳಿಕವೂ 1.75 ರು. ಕಡಿಮೆಯಾಗಲಿದೆ. ಇನ್ನು ಎಚ್‌ಟಿ ಸಂಪರ್ಕ ಪಡೆದಿರುವ ವಸತಿ ಸಮುಚ್ಚಯಗಳಿಗೆ 35 ಪೈಸೆ ದರ ಕಡಿತ ಮಾಡಿರುವ ಹಿನ್ನೆಲೆಯಲ್ಲಿ ಏ.1 ರಿಂದ ಸಂಬಂಧಪಟ್ಟ ಗ್ರಾಹಕರಿಗೆ ಕೇವಲ 1 ಪೈಸೆ ಮಾತ್ರ ದರ ಹೆಚ್ಚಳ ಆಗಲಿದೆ. ವಾಣಿಜ್ಯ ಸಂಪರ್ಕಗಳಿಗೆ ಪ್ರತಿ 210 ರು. ಇದ್ದದ್ದನ್ನು 215 ರು.ಗೆ ಹೆಚ್ಚಳ ಮಾಡಲಾಗಿದೆ. ಎಲ್‌ಟಿ- ಕೈಗಾರಿಕೆಗೆ ಸಂಬಂಧಿಸಿ ಪ್ರತಿ ಎಚ್‌ಪಿಗೆ 140 ರು. ಇದ್ದ ದರವನ್ನು 150 ರು.ಗೆ ಹೆಚ್ಚಳ ಮಾಡಲಾಗಿದೆ. ಜತೆಗೆ 50 ಎಚ್.ಪಿ. ಮೇಲೆ ಇದ್ದ 250 ರು. ಸ್ಲ್ಯಾಬ್ ತೆಗೆದು ಹಾಕಲಾಗಿದೆ. ಇನ್ನು ಎಚ್.ಟಿ.ವಾಣಿಜ್ಯ ಹಾಗೂ ಎಚ್.ಟಿ. ಕೈಗಾರಿಕೆಗೂ ಪ್ರತಿ ಕೆವಿಎಗೆ ನಿಗದಿತ ಶುಲ್ಕ 5 ರು. ಮಾತ್ರ ಹೆಚ್ಚಳ ಮಾಡಲಾಗಿದೆ.
ವಾಣಿಜ್ಯ, ಕೈಗಾರಿಕೆಗೆ ಮುಂದಿನ ವರ್ಷಗಳಲ್ಲಿ ತುಸು ದರ ಏರಿಕೆ ಬಿಸಿ: 2026-27ನೇ, 2027-28ನೇ ಸಾಲಿನಲ್ಲೂ ವಾಣಿಜ್ಯ ಹಾಗೂ ಕೈಗಾರಿಕೆ ಸಂಪರ್ಕಗಳ ವಿದ್ಯುತ್ ದರ ಕಡಿಮೆ ಮಾಡಲಾಗಿದೆ. ಆದರೆ, ಪಿಂಚಣಿ, ಗ್ರ್ಯಾಚುಯಿಟಿ ಹೊರೆ ಎಲ್ಲಾ ರೀತಿಯ ಗ್ರಾಹಕರ ಮೇಲೆ ವಿಧಿಸಿರುವುದರಿಂದ ವಾಣಿಜ್ಯ, ಕೈಗಾರಿಕೆ ಎಲ್ಲಾ ಸಂಪರ್ಕಗಳಿಗೂ 2026-27ರಲ್ಲಿ ಪ್ರತಿ ಯುನಿಟ್‌ಗೆ 35 ಪೈಸೆ, 2027-28ರಲ್ಲಿ 34 ಪೈಸೆ ಹೆಚ್ಚಳ ಆಗಲಿದೆ. ಹೀಗಾಗಿ ದರ ಇಳಿಕೆ ಬಳಿಕವೂ ವಾಣಿಜ್ಯ ಹಾಗೂ ಕೈಗಾರಿಕೆ ಸಂಪರ್ಕಗಳಿಗೆ ತುಸು ಬಿಸಿ ತಟ್ಟಲಿದೆ.
ಹೋಂಸ್ಟೇಗಳಿಗೆ ಗೃಹ ವಿದ್ಯುತ್: ಸೋಲಾರ್ ಮೇಲ್ಛಾವಣಿ ಅಳವಡಿಸಿರುವ ಗೃಹ ಬಳಕೆದಾರರಿಗೆ ನಿಗದಿತ ಶುಲ್ಕದ ಮೇಲೆ 25 ರು. ರಿಯಾಯಿತಿ, ಪ್ರವಾಸೋದ್ಯಮ ಇಲಾಖೆ ಮಾರ್ಗಸೂಚಿ ಅನುಸರಿಸುವ ಹೋಮ್‌ಸ್ಟೇಗಳು ಇನ್ನು ಮುಂದೆ ಗೃಹಬಳಕೆ ವಿದ್ಯುತ್ ಬಿಲ್ ಅಡಿ ತರಲು ಕೆಇಆರ್‌ಸಿ ಸೂಚನೆ ನೀಡಿದೆ. ಇನ್ನು ಅಡಕೆ ಕತ್ತರಿಸುವ ಯಂತ್ರ ಗೃಹ ಬಳಕೆ ಅಡಿಗೆ ತರಲು, ಬಿಎಂಆರ್‌ಸಿಎಲ್‌ಗೆ ರಿಯಾಯಿತಿ ಮುಂದುವರೆಸಲು ತೀರ್ಮಾನಿಸಲಾಗಿದೆ.
ಮಾ.18ರ ಕೆಇಆರ್‌ಸಿ ಆದೇಶವೇನು?: ಮಾ.18 ರಂದು ಕೆಪಿಟಿಸಿಎಲ್, ಎಸ್ಕಾಂಗಳ ನೌಕರರ ಪಿಂಚಣಿ, ಗ್ರಾಚುಯುಟಿ ಹೊರೆ ಗ್ರಾಹಕರ ಮೇಲೆ ಹಾಕಿ ಏ.1 ರಿಂದ ಅನ್ವಯವಾಗುವಂತೆ ಪ್ರತಿ ಯುನಿಟ್‌ಗೆ ಮುಂದಿನ ಮೂರು ವರ್ಷ 35 ಪೈಸೆಯಿಂದ 39 ಪೈಸೆವರೆಗೆ ದರ ಹೆಚ್ಚಳ ಮಾಡಿ ಆದೇಶ ನೀಡಿತ್ತು. ಇದರ ಅನ್ವಯ ಕೃಷಿ ಐಪಿ ಸೆಟ್‌ನಿಂದ ಹಿಡಿದು ಎಲ್ಲಾ ಗ್ರಾಹಕರಿಗೂ 2025-26ನೇ ಸಾಲಿನಲ್ಲಿ 36 ಪೈಸೆ, 2026-27ನೇ ಸಾಲಿನಲ್ಲ 35 ಪೈಸೆ, 2027-28ನೇ ಸಾಲಿನಲ್ಲಿ 34 ಪೈಸೆ ದರ ಹೆಚ್ಚಳ ಮಾಡಲಾಗಿತ್ತು.
ರಾಜಣ್ಣ ಪುತ್ರನೂ ಉಲ್ಟಾ ಹೊಡೆದ್ರಣ್ಣ: ಹನಿಟ್ರ್ಯಾಪ್ ಅಲ್ಲ, ಆಗಿದ್ದು ಕೊಲೆ ಯತ್ನ: ರಾಜೇಂದ್ರ
100 ಯುನಿಟ್ ಬಳಸುವ 3 ಕಿ.ವ್ಯಾಟ್ ಗ್ರಾಹಕನಿಗೆ ಮಾಸಿಕ ₹101 ಹೊರೆ!: 3 ಕಿ.ವ್ಯಾಟ್ ಸಾಮರ್ಥ್ಯದ ವಿದ್ಯುತ್ ಸಂಪರ್ಕ ಹೊಂದಿದ್ದು, ಮಾಸಿಕ 100 ಯುನಿಟ್ ವಿದ್ಯುತ್ ಬಳಕೆ ಮಾಡುತ್ತಿರುವ ಗ್ರಾಹಕನಿಗೆ ಪ್ರತಿ ಯುನಿಟ್‌ಗೆ 36 ಪೈಸೆ ಹೆಚ್ಚಳ ಮಾಡಿರುವುದರಿಂದ 36 ರು. ಹೊರೆಯಾಗಲಿದೆ. ಇದೀಗ 10 ಪೈಸೆ ಕಡಿಮೆ ಮಾಡಿರುವುದರಿಂದ 10 ರು. ಹೊರೆ ಕಡಿಮೆಯಾಗಲಿದ್ದು, 100 ಯುನಿಟ್‌ಗೆ 26 ರು. ಹೆಚ್ಚುವರಿ ಶುಲ್ಕ ಭರಿಸಬೇಕಾಗುತ್ತದೆ. ಇನ್ನು 3 ಕಿ.ವ್ಯಾಟ್‌ಗೆ ಪ್ರತಿ ಕಿ.ವ್ಯಾಟ್‌ಗೆ ಮಾಸಿಕ 120 ರು.ಗಳಂತೆ 360 ರು. ನಿಗದಿತ ಶುಲ್ಕ ಪಾವತಿಸುತ್ತಿದ್ದ ಗ್ರಾಹಕ ಇದೀಗ ಪ್ರತಿ ಕಿ.ವ್ಯಾಟ್‌ಗೆ 145 ರು.ಗಳಂತೆ 435 ರು. ಪಾವತಿ ಮಾಡಬೇಕಾಗಿದ್ದು 75 ರು. ಹೊರೆ ತಗುಲಲಿದೆ. ಹೀಗಾಗಿ 26 ರು.ಹಾಗೂ 75 ರು. ಸೇರಿ 101 ರು. ಹೊರೆಯಾಗಲಿದೆ.