Karnataka ellection results 2023: ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು?

Published : May 14, 2023, 06:04 AM IST
Karnataka ellection results 2023: ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು?

ಸಾರಾಂಶ

ಭಾರಿ ಬಹುಮತದಿಂದ ಗೆದ್ದು ಸರ್ಕಾರ ರಚನೆಗೆ ಮುಂದಾಗಿರುವ ಕಾಂಗ್ರೆಸ್‌ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಎಂಬುದು ಪಕ್ಷದ ಹೈಕಮಾಂಡ್‌ಗೆ ಕಬ್ಬಿಣದ ಕಡಲೆಯಾಗುವ ಎಲ್ಲ ಸಾಧ್ಯತೆಗಳಿವೆ.

ಬೆಂಗಳೂರು (ಮೇ.14) : ಭಾರಿ ಬಹುಮತದಿಂದ ಗೆದ್ದು ಸರ್ಕಾರ ರಚನೆಗೆ ಮುಂದಾಗಿರುವ ಕಾಂಗ್ರೆಸ್‌ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಎಂಬುದು ಪಕ್ಷದ ಹೈಕಮಾಂಡ್‌ಗೆ ಕಬ್ಬಿಣದ ಕಡಲೆಯಾಗುವ ಎಲ್ಲ ಸಾಧ್ಯತೆಗಳಿವೆ.

ಮುಖ್ಯಮಂತ್ರಿ ಹುದ್ದೆಗೆ ಪ್ರಮುಖ ದಾವೆದಾರರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌(DK Shivakumar) ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ.(Siddaramaiah) ಚುನಾವಣಾ ಪೂರ್ವದಲ್ಲೇ ಆರಂಭವಾಗಿದ್ದ ಮುಖ್ಯಮಂತ್ರಿ ಹುದ್ದೆಯ ಪೈಪೋಟಿಯನ್ನು ಹತೋಟಿಯಲ್ಲಿಡಲು ಕಾಂಗ್ರೆಸ್‌ ಹೈಕಮಾಂಡ್‌ ಯಶಸ್ವಿಯಾಗಿತ್ತು. ಒತ್ತಾಯಪೂರ್ವಕವೋ ಅಥವಾ ಪ್ರಬುದ್ಧ ನಡೆಯೋ ಗೊತ್ತಿಲ್ಲ. ಆದರೆ, ಉಭಯ ನಾಯಕರು ತಮ್ಮ ಆಕಾಂಕ್ಷೆಗಳನ್ನು ಹತೋಟಿಯಲ್ಲಿಟ್ಟುಕೊಂಡೇ ಒಗ್ಗಟ್ಟು ಪ್ರದರ್ಶಿಸಿದ್ದರು.

ಕೊನೆಗೂ ಕಾಂಗ್ರೆಸ್‌ ಕಡೆಗೆ ವಾಲಿದ ಲಿಂಗಾಯತರು, ಒಕ್ಕಲಿಗ ಮತಗಳು

ಇದೀಗ ಕಾಂಗ್ರೆಸ್‌ ಗಳಿಸಿರುವ ಭಾರಿ ಬಹುಮತ ಈ ಒಗ್ಗಟ್ಟನ್ನು ಛಿದ್ರಗೊಳಿಸಲಿದೆ. ಏಕೆಂದರೆ, ಉಭಯ ನಾಯಕರು ತಾವೇ ಮುಖ್ಯಮಂತ್ರಿಯಾಗಬೇಕು ಎಂಬ ಪಟ್ಟು ಹಿಡಿಯಲು ಅಣಿಯಾಗಿದ್ದಾರೆ. ವಾಸ್ತವವಾಗಿ ನೂತನವಾಗಿ ಆಯ್ಕೆಯಾಗಿರುವ ಶಾಸಕರು ತಮ್ಮ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಬೇಕು. ಶಾಸಕರ ಈ ಅಭಿಪ್ರಾಯದ ಆಧಾರದ ಮೇಲೆ ಹೈಕಮಾಂಡ್‌ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಬೇಕು ಎಂಬುದು ಪ್ರಕ್ರಿಯೆ. ಆದರೆ, ಈ ಪ್ರಕ್ರಿಯೆ ಇಷ್ಟುಸರಳವಾಗಿ ನಡೆಯುವ ಸಾಧ್ಯತೆಯಿಲ್ಲ.

ಏಕೆಂದರೆ, ಪಕ್ಷ ಸಂಕಷ್ಟದಲ್ಲಿದ್ದಾಗ ಕೆಪಿಸಿಸಿ ಗಾದಿಯೇರಿ ಆಡಳಿತಾರೂಢ ಬಿಜೆಪಿ ಒಡ್ಡಿದ್ದ ಸವಾಲುಗಳನ್ನು ಎದುರಿಸಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ತಮ್ಮ ಪಾತ್ರ ಹಿರಿದು ಎಂಬ ಭಾವನೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಇದೆ. ಇದೇ ವೇಳೆ ಜನನಾಯಕರಾದ ಸಿದ್ದರಾಮಯ್ಯ ತಮ್ಮ ಬೆನ್ನಿಗಿರುವ ದೊಡ್ಡ ಸಮೂಹವು ಪಕ್ಷಕ್ಕೆ ಬೆಂಬಲ ಧಾರೆಯೆರೆದಿರುವ ಕಾರಣದಿಂದಲೇ ಪಕ್ಷಕ್ಕೆ ಈ ಮಟ್ಟದ ಯಶಸ್ಸು ದೊರಕಿದೆ ಎಂಬ ಪ್ರತಿಪಾದನೆಗೆ ಮುಂದಾಗುತ್ತಾರೆ.

ಹೀಗಾಗಿ, ಕೇವಲ ಶಾಸಕರ ಅಭಿಪ್ರಾಯದ ಮೇಲೆ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಸರಳ ಅವಕಾಶ ಹೈಕಮಾಂಡ್‌ಗೆ ದೊರೆಯುವುದಿಲ್ಲ. ಸಂಘರ್ಷವಿಲ್ಲದೆ ಈ ಸಮಸ್ಯೆಯನ್ನು ನಿಭಾಯಿಸಬೇಕಾದರೆ ಕಾಂಗ್ರೆಸ್‌ ಹೈಕಮಾಂಡ್‌ ನೇರ ಮಧ್ಯಪ್ರವೇಶ ಮಾಡಬೇಕಾಗುತ್ತದೆ. ತನ್ಮೂಲಕ ಉಭಯ ನಾಯಕರನ್ನು ಒಗ್ಗೂಡಿಸಿ ಸರ್ವ ಸಮ್ಮತ ಅಭಿಪ್ರಾಯ ರೂಪಿಸಬೇಕಾಗುತ್ತದೆ.

ಐದು ವರ್ಷದ ಆಡಳಿತವನ್ನು ಶೇ.50ರ ಆಧಾರದ (ತಲಾ ಎರಡೂವರೆ ವರ್ಷ) ಹಂಚುವ ಫಾರ್ಮುಲಾ ಈಗಾಗಲೇ ಪಕ್ಷದ ವಲಯದಲ್ಲಿ ಚರ್ಚೆಯಲ್ಲಿದೆ. ಆದರೆ, ಇದನ್ನು ಸುತಾರಾಂ ಒಪ್ಪುವುದಿಲ್ಲ ಎಂದು ಡಿ.ಕೆ.ಶಿವಕುಮಾರ್‌ ಪಾಳೆಯ ಬಹಿರಂಗವಾಗಿ ಹೇಳಿದೆ. ಡಿ.ಕೆ.ಶಿವಕುಮಾರ್‌ ಅವರ ಸಹೋದರ ಡಿ.ಕೆ.ಸುರೇಶ್‌ ಅವರು ಬಹುಮತ ಗಳಿಸಿದ ಮರು ಕ್ಷಣವೇ ಈ ಅಭಿಪ್ರಾಯವನ್ನು ಬಹಿರಂಗವಾಗಿ ಹೇಳಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್‌ ರಾಜ್ಯದ ಮುಖ್ಯಮಂತ್ರಿಯಾಗಬೇಕು ಎನ್ನುವವರಲ್ಲಿ ನಾನು ಮೊದಲಿಗ ಎಂದಿದ್ದಾರೆ. ಅಲ್ಲದೆ, ಉಭಯ ನಾಯಕರಿಗೂ ಅಧಿಕಾರ ಹಂಚುವ 50:50 ಫಾರ್ಮುಲಾ ನನಗೆ ಗೊತ್ತಿಲ್ಲ. ಆದರೆ, ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗಬೇಕು ಎಂಬುದು ಪಕ್ಷದ ಕಾರ್ಯಕರ್ತರು, ಬೆಂಬಲಿಗರ ಆಶಯ ಎನ್ನುವ ಮೂಲಕ ಯಾವುದೇ ಫಾರ್ಮುಲಾವನ್ನು ಶಿವಕುಮಾರ್‌ ಬಣ ಒಪ್ಪುವುದಿಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಅವರು ಮತ್ತೆ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಬೇಕು ಎನ್ನುವುದು ನನ್ನ ಇಚ್ಛೆಯಲ್ಲ. ಅದು ನಾಡಿನ ಜನರ ಇಚ್ಛೆ. ಅವರು ಸಿದ್ಧಾಂತಕ್ಕೆ ಬದ್ಧವಾದ ರಾಜಕಾರಣಿ, ಸಂವಿಧಾನದ ಮೇಲೆ ನಂಬಿಕೆ ಇರುವವರು. ಸರ್ವ ಜನರ ಪರವಾದ ಆಡಳಿತ ನಡೆಸುವವರು. ಹಾಗಾಗಿ ಅವರು ಮತ್ತೆ ಮುಖ್ಯಮಂತ್ರಿಯಾಗಬೇಕು ಎಂದು ಜನ ಬಯಸಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

Karnataka election results 2023: ಭದ್ರಕೋಟೆಯಲ್ಲೇ ಬಿದ್ದಿದ್ದು ಜೆಡಿಎಸ್‌ ಹಿನ್ನಡೆಗೆ ಕಾರಣ

ತನ್ಮೂಲಕ ಮುಖ್ಯಮಂತ್ರಿ ಹುದ್ದೆಗೆ ಉಭಯ ನಾಯಕರು ಹಾಗೂ ಅವರ ಬೆಂಬಲಿಗರು ತೀವ್ರ ಲಾಬಿ ನಡೆಸುವ ಸ್ಪಷ್ಟಸಾಕ್ಷ್ಯ ದೊರಕಿದೆ. ಹೈಕಮಾಂಡ್‌ ಇದನ್ನು ಹೇಗೆ ನಿಭಾಯಿಸುತ್ತದೆ ಎಂಬುದು ಇದೀಗ ಮಿಲಿಯನ್‌ ಡಾಲರ್‌ ಪ್ರಶ್ನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ