
ಶಿವಮೊಗ್ಗ (ಜು.28): ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಬರಗಾಲ ಬರುತ್ತೆ ಎಂದು ವಿರೋಧಪಕ್ಷದವರು ಹೇಳುತ್ತಿದ್ದರು. ಈಗ ರಾಜ್ಯಾದ್ಯಂತ ಮಳೆಯಾಗ್ತಿದೆ ಅವರಿಗೆ ಬಾಯಿ ಮುಚ್ಚುವ ಪರಿಸ್ಥಿತಿ ಬಂದಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಲೇವಡಿ ಮಾಡಿದರು.
ಇಂದು ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಮಳೆಯಾಗುತ್ತಿದ್ದು ಸಂತೋಷವಾಗಿದೆ. ಕಳೆದ ಬಾರಿ ನನಗೆ ಅನುಭವ ಇರಲಿಲ್ಲ ಹೊಸದಾಗಿ ಮಂತ್ರಿಯಾಗಿದ್ದೆ. ಬರಗಾಲದಿಂದ ಉಂಟಾದ ನೀರಿನ ಕೊರತೆ ಸಾಕಷ್ಟು ಸಮಸ್ಯೆ ಸೃಷ್ಟಿಸಿತ್ತು. ಆದರೆ ಈ ಬಾರಿ ಉತ್ತಮ ಮಳೆಯಾಗಿದೆ. ಶರಾವತಿ ನದಿ ನೀರಿನಿಂದ ಸಾಗರ, ಹೊಸನಗರ, ಸೊರಬ ತಾಲೂಕುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಹೋದ್ರೂ ಪ್ರವಾಸಿ ಮಂದಿರ ಬೀಗ ತೆರೆಯದ ಅಧಿಕಾರಿಗಳು!
ನದಿ ಮುಳುಗಡೆ ಸಂತ್ರಸ್ತರ ಪರವಾಗಿ ಮಲೆನಾಡಿನಲ್ಲಿ ಜನಾಕ್ರೋಶ ಪ್ರತಿಭಟನೆ ನಡೆಸಿದ್ದೆವು. ಒತ್ತುವರಿ ಕಾನೂನು ಹಿನ್ನೆಲೆ ರೈತರಿಗೆ ತೊಂದರೆ ಉಂಟಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ಶರಾವತಿ, ಚಕ್ರ, ಸಾವೆಹಕ್ಲು ಮುಳುಗಡೆ ಸಂತ್ರಸ್ತರ ಪರವಾಗಿ ವಕಾಲತ್ತು ನಡೆಸಿದ್ದೇವೆ. ಸಂತ್ರಸ್ತರ ಸಮಸ್ಯೆ ಪರಿಹಾರಕ್ಕೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಸರ್ಕಾರದಲ್ಲಿ ವಿಪಕ್ಷಗಳ ಜವಾಬ್ದಾರಿ ಹೆಚ್ಚಿದೆ. ಸುಖಾಸುಮ್ಮನೆ ನೀರಿಲ್ಲದ ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಬಾರದು. ನೀರಿಲ್ಲದ ಬಾವಿಗೆ ಬಂದು ಬೀಳುವುದು ಉಪಯೋಗ ಆಗುವುದಿಲ್ಲ ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದರು.
ಶರಾವತಿ ನದಿ ಸಂತ್ರಸ್ತ ಪರವಾಗಿ ರಾಜ್ಯ ಸರ್ಕಾರದ ಜವಾಬ್ದಾರಿ ಮುಗಿದಿದೆ. ಇನ್ನೇನಿದ್ರು ಕೇಂದ್ರ ಸರ್ಕಾರದವರು ಜವಾಬ್ದಾರಿ ಹೊರಬೇಕು. ಶಿವಮೊಗ್ಗದಲ್ಲಿ ಹರಿಯುವ ತುಂಗಾ ನದಿಗೆ ತಡೆಗೋಡೆ ನಿರ್ಮಾಣಕ್ಕೆ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ನದಿ ಭಾಗದಲ್ಲಿ ಕುಡಿಯುವ ನೀರಿಗಾಗಿ ಚೆಕ್ ಡ್ಯಾಮ್ ಗಳು ಹಾಗೂ ಬ್ಯಾರೇಜ್ ಗಳ ನಿರ್ಮಾಣಕ್ಕೆ ಚಿಂತನೆ ನಡೆದಿದೆ. ಹಾಗೆಯೇ ಕೆರೆಗಳ ಹೂಳನ್ನು ಎತ್ತಿ ನೀರು ಸಂಗ್ರಹಣೆಯ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದರು.ಇದೇ ವೇಳೆ ರೈತರ ಆತ್ಮಹತ್ಯೆ ಪರಿಹಾರ ಸಿಗದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈಗಾಗಲೇ ಎಸಿಗಳಿಗೆ ಈ ಪ್ರಕರಣಗಳ ಪರಿಶೀಲನೆ ನಡೆಸಲು ಸೂಚನೆ ನೀಡಲಾಗಿದೆ. ರೈತರ ಆತ್ಮಹತ್ಯೆ ಪ್ರಕರಣದಲ್ಲಿ ಎಫ್ ಎಸ್ ಎಲ್ ವರದಿ ವಿಳಂಬವಾಗುತ್ತಿರುವ ಹಿನ್ನೆಲೆ ಪರಿಹಾರಕ್ಕೆ ವಿಳಂಬವಾಗಿದೆ ಎಂದರು.
ಇನ್ನು ಮುಡಾ ಹಗರಣದಲ್ಲಿ ಬಿಜೆಪಿಯವರು ತಮ್ಮ ವಿರುದ್ಧ ತಾವೇ ಪ್ರತಿಭಟನೆ, ಪಾದಯಾತ್ರೆ ನಡೆಸುತ್ತಿದ್ದಾರೆ. ಈ ಹಗರಣದಲ್ಲಿ ವಿಪಕ್ಷಗಳ ನಾಯಕರ ಲಿಸ್ಟೇ ಹೆಚ್ಚಾಗಿದ ಎಂದು ಆರೋಪಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ