ಅನುದಾನ ಕೊರತೆ, ಸರ್ವಪಕ್ಷ ಸಭೆಯಲ್ಲಿ ತೀವ್ರ ವಿರೋಧ, ಹೆಚ್ಚು ದಿನ ರಸ್ತೆ ಪಕ್ಕ ನಿಂತ ವಾಹನ ಹರಾಜು

By Gowthami K  |  First Published Jul 28, 2024, 2:03 PM IST

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚನೆ ಹೆಸರಿನಲ್ಲಿ ರಾಜಧಾನಿ ಬೆಂಗಳೂರನ್ನು ಪಾಲಿಕೆಗಳ ಲೆಕ್ಕದಲ್ಲಿ ವಿಭಜನೆ ಮಾಡುವ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದೆ.


ಬೆಂಗಳೂರು (ಜು.28):‘ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ, ಕಸ ವಿಲೇವಾರಿ ಸಮಸ್ಯೆ, ಕುಡಿಯುವ ನೀರಿನ ಅಭಾವ ಹಾಗೂ ಅನುದಾನ ಕೊರತೆ ಬಗ್ಗೆ ಆಡಳಿತ ಹಾಗೂ ಪ್ರತಿಪಕ್ಷದ ಶಾಸಕರು ಶನಿವಾರ ನಡೆದ ಬೆಂಗಳೂರು ನಗರ ಸರ್ವಪಕ್ಷಗಳ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು’ ಎಂದು ತಿಳಿದುಬಂದಿದೆ.

ಅಲ್ಲದೆ, ‘ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚನೆ ಹೆಸರಿನಲ್ಲಿ ರಾಜಧಾನಿ ಬೆಂಗಳೂರನ್ನು ಪಾಲಿಕೆಗಳ ಲೆಕ್ಕದಲ್ಲಿ ವಿಭಜನೆ ಮಾಡುವ ಬಗ್ಗೆ ಬಿಜೆಪಿ ಶಾಸಕರು ಆಕ್ಷೇಪಿಸಿದ್ದಾರೆ. ಇಂತಹ ಮಹತ್ವದ ನಿರ್ಧಾರ ತೆಗೆದುಕೊಳ್ಳುವಾಗಲೂ ಶಾಸಕರ ಅಭಿಪ್ರಾಯ ತೆಗೆದುಕೊಳ್ಳದಿದ್ದರೆ ಹೇಗೆ? ಬೆಂಗಳೂರು ನಗರವನ್ನು ಇಬ್ಭಾಗ ಮಾಡುವ ಬದಲು, ಬೆಂಗಳೂರು ಸುತ್ತಲಿನ ಪ್ರದೇಶಗಳನ್ನು ನಾಲ್ಕು ಪ್ರತ್ಯೇಕ ಪಾಲಿಕೆಗಳಾಗಿ ರಚಿಸಿ’ ಎಂದು ಕೆಲ ಸದಸ್ಯರು ಸಲಹೆ ನೀಡಿದರು ಎಂದು ತಿಳಿದುಬಂದಿದೆ.

Tap to resize

Latest Videos

ಕೋರ್ಟ್ ತರಾಟೆ ಬೆನ್ನಲ್ಲೇ ಎಚ್ಚೆತ್ತ ಬಿಬಿಎಂಪಿ, ಅನಧಿಕೃತ ಫ್ಲೆಕ್ಸ್‌ ಮುದ್ರಿಸಿದರೆ ಉದ್ದಿಮೆ ಲೈಸೆನ್ಸ್‌ ರದ್ದು

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ‘ನಾಗರಿಕರ ಧ್ವನಿ- ಅದೇ ಸರ್ಕಾರದ ಧ್ವನಿ’ ಎಂಬ ಪರಿಕಲ್ಪನೆಯಡಿ ವಿವಿಧ ಯೋಜನೆಗಳ ಬಗ್ಗೆ ಸರ್ವಪಕ್ಷ ಶಾಸಕರು ಹಾಗೂ ಜನಪ್ರತಿನಿಧಿಗಳ ಸಭೆ ನಡೆಸಲಾಯಿತು. ಈ ವೇಳೆ ಗ್ರೇಟರ್‌ ಬೆಂಗಳೂರು ಆಡಳಿತ ವಿಧೇಯಕ ಸೇರಿದಂತೆ ಬೆಂಗಳೂರು ನಗರದ ಸಮಸ್ಯೆಗಳ ಬಗ್ಗೆ ಹಲವು ಶಾಸಕರು ಪ್ರಸ್ತಾಪಿಸಿದರು.

ಸದನ ಸಮಿತಿ ಮಾಡುತ್ತೇವೆ: ಡಿಕೆಶಿ
ಇದಕ್ಕೆ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್‌, ‘ಗ್ರೇಟರ್ ಬೆಂಗಳೂರು ವಿಚಾರವಾಗಿ ಅಶ್ವಥ್ ನಾರಾಯಣ ಅವರು ಸೇರಿದಂತೆ ಯಾರೂ ಗಾಬರಿಯಾಗುವುದು ಬೇಡ, ವಿಧೇಯಕದ ಸಂಪೂರ್ಣ ಮಾಹಿತಿ ನಿಮ್ಮ ಕೈಯಲ್ಲಿದೆ. ಪ್ರತಿ ಪದವನ್ನೂ ಪರಿಶೀಲಿಸಿ ನೀವು ಚರ್ಚೆ ಮಾಡಿ. ಈ ವಿಚಾರದಲ್ಲಿ ಎಷ್ಟು ಹೊತ್ತು ಬೇಕಾದರೂ ಚರ್ಚೆ ಮಾಡಲು ಸಿದ್ಧ. ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹೇಳಿ, ನಿಮ್ಮ ಸಲಹೆ ಸೂಚನೆ ಪರಿಗಣಿಸುತ್ತೇವೆ’ ಎಂದು ಹೇಳಿದರು.

ಅಲ್ಲದೆ ನಿಮ್ಮ ಒತ್ತಾಯದ ಹಿನ್ನೆಲೆಯಲ್ಲಿ ಜಂಟಿ ಸದನ ಸಮಿತಿ ಮಾಡಲು ನಿರ್ಧರಿಸಿದ್ದೇವೆ. ವಿರೋಧ ಪಕ್ಷದ ನಾಯಕರು ಇಲ್ಲೇ ಇದ್ದು, ಅವರು ನಿಮ್ಮ ಪಕ್ಷದಿಂದ ಸಮಿತಿಗೆ ಹೆಸರು ಶಿಫಾರಸು ಮಾಡಿದರೆ ಇಂದು (ಶನಿವಾರ) ಸಂಜೆಯೇ ಸಮಿತಿ ರಚಿಸಿ ಅದನ್ನು ಅಧಿಕೃತವಾಗಿ ಘೋಷಣೆ ಮಾಡಬಹುದು’ ಎಂದೂ ಹೇಳಿದರು.

ಉಪನಗರ ಸಂಪಿಗೆ ರೈಲ್ವೆ ಮಾರ್ಗಕ್ಕೆ 1442 ಕೋಟಿ ವೆಚ್ಚ, ಆ.9 ಟೆಂಡರ್‌ ಅರ್ಜಿ ಹಾಕಲು ಕೊನೆ ದಿನ

ಆದರೆ ಶಿಫಾರಸು ಅಂತಿಮವಾಗದ ಹಿನ್ನೆಲೆಯಲ್ಲಿ ಮುಂದಿನ 2-3 ದಿನಗಳಲ್ಲಿ ಜಂಟಿ ಸದನ ಸಮಿತಿ ರಚಿಸುವುದಾಗಿ ಶಿವಕುಮಾರ್‌ ಸ್ಪಷ್ಟಪಡಿಸಿದರು.
ಇದಕ್ಕೂ ಮೊದಲು ಬ್ರ್ಯಾಂಡ್ ಬೆಂಗಳೂರು ಕುರಿತ ಕಿರುಹೊತ್ತಿಗೆಯನ್ನು ಉಪಮುಖ್ಯಮಂತ್ರಿಗಳು ಬಿಡುಗಡೆ ಮಾಡಿದರು. ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ವಸತಿ ಸಚಿವ ಜಮೀರ್ ಅಹ್ಮದ್, ಬಿಬಿಎಂಪಿ ಆಯುಕ್ತರಾದ ತುಷಾರ್ ಗಿರಿನಾಥ್ ಹಾಜರಿದ್ದರು.

ಗ್ರೇಟರ್ ಬೆಂಗಳೂರಿಗೆ ಸಮರ್ಥನೆ: ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚನೆಗೆ ಸಮರ್ಥನೆ ನೀಡಿದ ಶಿವಕುಮಾರ್‌, ‘ಬೆಂಗಳೂರು ಯೋಜಿತ ನಗರವಲ್ಲ. ನಾನು ಈ ಹಿಂದೆ ನಗರಾಭಿವೃದ್ಧಿ ಸಚಿವನಾಗಿದ್ದಾಗ ಬೆಂಗಳೂರಿನ ಜನಸಂಖ್ಯೆ 70 ಲಕ್ಷ ಇತ್ತು. ಈಗ ಅದು 1.40 ಕೋಟಿಗೆ ಏರಿಕೆಯಾಗಿದೆ. 1.04 ಕೋಟಿ ವಾಹನಗಳಿವೆ. ಪ್ರತಿನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಇಲ್ಲಿಗೆ ಬಂದವರು ಯಾರೂ ವಾಪಸು ಹೋಗುತ್ತಿಲ್ಲ. ಹೀಗಾಗಿ ಬೆಳೆಯುತ್ತಿರುವ ನಗರವನ್ನು ನಿಯಂತ್ರಿಸಲು ಆಡಳಿತ ವಿಕೇಂದ್ರೀಕರಣ ಅಗತ್ಯ’ ಎಂದು ಹೇಳಿದರು.

ಕಸ, ಕುಡಿಯುವ ನೀರಿನ ಸಮಸ್ಯೆ: ಸಭೆಯಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ಶಾಸಕರು ತಮ್ಮ ಕ್ಷೇತ್ರಗಳಲ್ಲಿನ ಕಸ ವಿಲೇವಾರಿ ಸಮಸ್ಯೆ ಹಾಗೂ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ ಮಳೆಗಾಲ ಶುರುವಾದರೂ ಪ್ರವಾಹ ಉಂಟಾಗದಂತೆ ಅಗತ್ಯ ಕ್ರಮ ವಹಿಸಲು ಸೂಕ್ತ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ಡಿ.ಕೆ.ಶಿವಕುಮಾರ್‌, ಬೇಸಿಗೆಯಲ್ಲಿ ನೀರಿನ ಸಮಸ್ಯೆ ಆಗಿದ್ದು ನಿಜ. ಕಾವೇರಿ ನೀರಿನ ಸಮಸ್ಯೆ ಒಂದೆಡೆಯಾದರೆ, ಕಳೆದ ಬೇಸಿಗೆಯಲ್ಲಿ ನಗರದ 7 ಸಾವಿರ ಕೊಳವೆಬಾವಿ ಬರಿದಾಗಿ ಸಮಸ್ಯೆ ಉದ್ಭವಿಸಿತ್ತು. ಇವುಗಳಿಗೆ ಅಂತರ್ಜಲ ಹೆಚ್ಚಿಸದಿದ್ದರೆ ಪರ್ಯಾಯ ಅವಕಾಶವಿಲ್ಲ ಎಂದರು.
ಇನ್ನು ಕಸದ ವಿಚಾರ ನಿಮಗೆಲ್ಲಾ ತಿಳಿದಿದೆ. ಕಸ ಸಂಚಾರಿ ದಟ್ಟಣೆ ವಿಚಾರವಾಗಿ ಸಾರ್ವಜನಿಕರಿಂದ 70 ಸಾವಿರ ಸಲಹೆಗಳು ಬಂದಿವೆ. ಇವುಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಿಎಂ ಜೊತೆ ಚರ್ಚಿಸಿ ವಿಶೇಷ ಅನುದಾನ
ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಿಗೂ ಅನುದಾನ ಇಲ್ಲ. ಹೀಗಾಗಿ ಕೂಡಲೇ ವಿಶೇಷ ಅನುದಾನ ಒದಗಿಸಬೇಕು ಎಂದು ಸಭೆಯಲ್ಲಿ ಶಾಸಕರು ಆಗ್ರಹಿಸಿದರು. ಈ ವೇಳೆ ಶಿವಕುಮಾರ್, ಮುಖ್ಯಮಂತ್ರಿಗಳು ಹಾಗೂ ಸಚಿವರ ಜತೆ ಮಾತನಾಡಿ ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ಶಾಸಕರಿಗೆ ವಿಶೇಷ ಅನುದಾನ ಕೊಡಲಾಗುವುದು ಎಂದು ಭರವಸೆ ನೀಡಿದರು.

ಹೆಚ್ಚು ದಿನ ರಸ್ತೆ ಪಕ್ಕ ನಿಂತ ವಾಹನಗಳ ಹರಾಜು: ಡಿಕೆಶಿ
ರಸ್ತೆಗಳಲ್ಲಿ ಹಲವು ತಿಂಗಳಿಂದ ಪಾರ್ಕಿಂಗ್ ಮಾಡಿರುವ ವಾಹನಗಳನ್ನು ಟೋಯಿಂಗ್ ಮಾಡಲು ಸಂಚಾರ ಪೊಲೀಸರಿಗೆ ಅನುಮತಿ ನೀಡಲಾಗಿದೆ. ರಸ್ತೆ ಪಕ್ಕ ವಾಹನ ನಿಲ್ಲಿಸಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದ್ದು, ಅಂತಹ ವಾಹನಗಳನ್ನು ಟೋಯಿಂಗ್ ಮಾಡಿ ನಿಯಮ ಪ್ರಕಾರ ಹರಾಜು ಹಾಕಲು ಸಂಚಾರ ಪೋಲಿಸರಿಗೆ ಸೂಚನೆ ನೀಡಲಾಗಿದೆ ಡಿ.ಕೆ.ಶಿವಕುಮಾರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

click me!