ಆರು ತಿಂಗಳ ಕಾಲ ಮಳೆ ಸುರಿಯುವ ಕೊಡಗು ಜಿಲ್ಲೆಯಲ್ಲಿ ಈ ಬಾರಿ ತೀವ್ರ ಮಳೆ ಕೊರತೆ ಎದುರಾಗಿದೆ. ಪರಿಣಾಮ ಬೇಸಿಗೆಯ ಆರಂಭದಲ್ಲಿಯೇ ಜೀವನದಿ ಎಂದು ಕರೆಸಿಕೊಳ್ಳುತ್ತಿದ್ದ ಕಾವೇರಿ ತನ್ನ ಹರಿಯುವಿಕೆಯನ್ನೇ ನಿಲ್ಲಿಸಿದ್ದಾಳೆ. ಪರಿಣಾಮ ಈ ಪಟ್ಟಣ ನದಿತಟದ ಮೇಲೆ ನೆಲೆ ನಿಂತಿದ್ದರೂ ಈಗ ಕುಡಿಯುವ ನೀರಿಗೆ ಹಾಹಾಕಾರ ಎದುರಿಸುತ್ತಿದೆ!
ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ
ಕೊಡಗು(ಮಾ.18) : ಆರು ತಿಂಗಳ ಕಾಲ ಮಳೆ ಸುರಿಯುವ ಕೊಡಗು ಜಿಲ್ಲೆಯಲ್ಲಿ ಈ ಬಾರಿ ತೀವ್ರ ಮಳೆ ಕೊರತೆ ಎದುರಾಗಿದೆ. ಪರಿಣಾಮ ಬೇಸಿಗೆಯ ಆರಂಭದಲ್ಲಿಯೇ ಜೀವನದಿ ಎಂದು ಕರೆಸಿಕೊಳ್ಳುತ್ತಿದ್ದ ಕಾವೇರಿ ತನ್ನ ಹರಿಯುವಿಕೆಯನ್ನೇ ನಿಲ್ಲಿಸಿದ್ದಾಳೆ. ಪರಿಣಾಮ ಈ ಪಟ್ಟಣ ನದಿತಟದ ಮೇಲೆ ನೆಲೆ ನಿಂತಿದ್ದರೂ ಈಗ ಕುಡಿಯುವ ನೀರಿಗೆ ಹಾಹಾಕಾರ ಎದುರಿಸುತ್ತಿದೆ.
undefined
ಹೌದು ತವರು ಜಿಲ್ಲೆ ಕೊಡಗಿನಲ್ಲಿ ಹುಟ್ಟಿ ಜಿಲ್ಲೆಯ ನೂರಾರು ಗ್ರಾಮಗಳ ಮೂಲಕ ಹರಿಯುವ ಕಾವೇರಿ ಸಮೃದ್ಧಿಯಾಗಿಸಿತ್ತು. ಆದರೆ ಈಗ ತವರು ಬಿಟ್ಟು ಮುಂದೆ ಹರಿಯದ ಪರಿಸ್ಥಿತಿ ಎದುರಾಗಿದೆ. ನದಿಯ ಬಹುತೇಕ ಕಡೆ ಸಂಪೂರ್ಣ ಬತ್ತಿಹೋಗಿದ್ದು ತಗ್ಗು, ಗುಂಡಿ ಹಾಗೂ ಕಲ್ಲುಪೊಟರೆಗಳಲ್ಲಿ ಮಾತ್ರವೇ ನೀರು ನಿಂತಿದೆ. ಇದೇ ಕಾವೇರಿ ನದಿಯನ್ನೇ ಜೀವ ಜಲಕ್ಕಾಗಿ ನಂಬಿಕೊಂಡಿದ್ದ ಜಿಲ್ಲೆಯ ವಾಣಿಜ್ಯ ಪಟ್ಟಣ ಕುಶಾಲನಗರ ಈಗ ಕುಡಿಯುವ ನೀರಿಗೆ ಹಾಹಾಕಾರ ಎದುರಿಸುತ್ತಿದೆ.
ಬೆಂಗಳೂರಿನ 110 ಹಳ್ಳಿಗಳಿಗೆ ಜೂನ್ ವೇಳೆಗೆ 775 ಎಂಎಲ್‌ಡಿ ನೀರು ಪೂರೈಕೆ; ಸಿಎಂ ಸಿದ್ದರಾಮಯ್ಯ
ಕಾವೇರಿ ನದಿ ತಟದಲ್ಲಿ ನಿಂತು ನದಿಯ ಎಷ್ಟು ದೂರದವರೆಗೆ ಕಣ್ಣಾಯಿಸಿದರು ನೀರು ಕಾಣಿಸುತ್ತಿಲ್ಲ. ಬದಲಾಗಿ ನದಿಯಾಳದ ಕಲ್ಲುಬಂಡೆಗಳು ಮಾತ್ರವೇ ಕಾಣಿಸುತ್ತಿವೆ. ಕುಶಾಲನಗರ ಪುರಸಭೆ ನೀರು ಪೂರೈಕೆ ಮಾಡುತ್ತಿದ್ದ ಕಾವೇರಿ ನದಿಯ ಆ ಸ್ಥಳದಲ್ಲಿ ಗುಂಡಿಯಂತಿದ್ದು ಅದರಲ್ಲಿ ನೀರು ಸಂಗ್ರಹಿಸಿ ಎರಡು ದಿನಗಳಿಗೆ ಒಮ್ಮೆ ಅಲ್ಲಿಂದ ನೀರನ್ನು ಪೂರೈಕೆ ಮಾಡುತ್ತಿದೆ. ಈಗಾಗಲೇ ಒಂದು ವಾರ್ಡಿಗೆ ಒಂದು ದಿನ ನೀರು ಹರಿಸಿದರೆ ಮತ್ತೊಂದು ವಾರ್ಡಿಗೆ ಮತ್ತೊಂದು ದಿನ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೂ 25 ಕ್ಕೂ ಹೆಚ್ಚು ವಾರ್ಡುಗಳಿರುವ ಕುಶಾಲನಗರ ಪುರಸಭೆಗೆ ನೀರು ಪೂರೈಸಲಾಗುತ್ತಿಲ್ಲ. ಹೀಗಾಗಿಯೇ ಖಾಸಗಿ ವ್ಯಕ್ತಿಗಳ ಕೊಳವೆ ಬಾವಿಗಳನ್ನು ಅವಲಂಬಿಸಿ, ಅಲ್ಲಿಂದ ನೀರು ಪಡೆದು ಟ್ಯಾಂಕರ್ ಗಳ ಮೂಲಕ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ.
ಸದ್ಯ ಬಿರು ಬಿಸಿಲ ಬೇಗೆ ಜಿಲ್ಲೆಯನ್ನು ಬೇಯುವಂತೆ ಮಾಡುತ್ತಿದ್ದು, ಆ ಬಿಸಿಲ ತಾಪಕ್ಕೆ ನದಿಯಲ್ಲಿ ಅಲ್ಲಲ್ಲಿ ಇರುವ ನೀರು ಆವಿಯಾಗುತ್ತಿದೆ. ಒಂದು ವೇಳೆ ಜಿಲ್ಲೆಯಲ್ಲಿ ಅದರಲ್ಲೂ ಕಾವೇರಿ ನದಿಪಾತ್ರದ ಪ್ರದೇಶದಲ್ಲಿ ಮಳೆ ಬಂದಲ್ಲಿ ಕಾವೇರಿ ನದಿಯಲ್ಲಿ ನೀರು ಹರಿಯಬಹುದು. ಆದರೆ ಇನ್ನೂ ಎರಡುವರೆ ತಿಂಗಳ ಕಾಲ ಬೇಸಿಗೆ ಮುಂದುವರಿಯಲಿದ್ದು ಸಕಾಲಕ್ಕೆ ಮಳೆ ಬಾರದಿದ್ದರೆ ಎದುರಾಗಬಹುದಾದ ಜಲಕ್ಷಾಮದ ಭೀಕರತೆಯನ್ನು ಊಹಿಸುವುದಕ್ಕೂ ಅಸಾಧ್ಯ. ಮಳೆ ಬಾರದೇ ಇದ್ದಲ್ಲಿ ಕಾವೇರಿ ನದಿಯಲ್ಲಿ ಇರುವ ಕೋಟ್ಯಂತರ ಜಲಚರಗಳನ್ನು ರಕ್ಷಿಸುವುದೇ ಸವಾಲಿನ ಕೆಲಸವಾಗಲಿದೆ.
ಕೆಆರ್‌ಎಸ್ ನಂಬಿಕೊಂಡ ನಗರಗಳಿಗೆ ಇನ್ನೆರಡು ತಿಂಗಳಲ್ಲಿ ನೀರಿನ ಸಮಸ್ಯೆ!
ಈ ಕುರಿತು ಪ್ರತಿಕ್ರಿಯಿಸಿರುವ ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್ ಹಿಂದೆಂದೂ ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಈ ಮಟ್ಟಿನ ನೀರಿನ ಕೊರತೆಯ ಪರಿಸ್ಥಿತಿ ಎದುರಾಗಿರಲಿಲ್ಲ. ಮೇ ತಿಂಗಳಲ್ಲೂ ಕೂಡ ಕಾವೇರಿ ನದಿಯಲ್ಲಿ ನೀರು ಹರಿಯುತ್ತಿತ್ತು. ಹೀಗಾಗಿ ಪುರಸಭೆ ವ್ಯಾಪ್ತಿಯ ಜನರಿಗೆ ಅಗತ್ಯದಷ್ಟು ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತಿತ್ತು. ಆದರೆ ಈ ಬಾರಿ ಮಾರ್ಚಿ ತಿಂಗಳಿನಲ್ಲೇ ಕಾವೇರಿ ಹೊಳೆಯಲ್ಲಿ ನೀರು ಹರಿಯುತ್ತಿಲ್ಲ. ನೀರನ್ನು ಮೇಲೆತ್ತುವ ಜಾಗದಲ್ಲಿ ಒಂದು ಬಂಡು ನಿರ್ಮಿಸಲಾಗಿದ್ದು, ಅಲ್ಲಿ ಎರಡು ದಿನಗಳಿಗೆ ಒಮ್ಮೆ ತುಂಬಿಕೊಳ್ಳುವ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಜೊತೆಗೆ ಖಾಸಗಿ ಕೊಳವೆ ಬಾವಿಗಳಿಂದಲೂ ಪೂರೈಕೆ ಮಾಡಲಾಗುತ್ತಿದೆ. ತಕ್ಷಣದಲ್ಲೇ ಒಂದೆರಡು ಹದ ಮಳೆ ಬಂದಲ್ಲಿ ಸಮಸ್ಯೆ ಬಗೆಹರಿಯಬಹುದು ಎಂದಿದ್ದಾರೆ.