
ಬೆಂಗಳೂರು (ಆ.26): ನಾಡಹಬ್ಬ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ರಾಜ್ಯದ ಶಾಲಾ ಮಕ್ಕಳಿಗೆ ಈ ಬಾರಿ ಭರ್ಜರಿ ರಜೆ ಸಿಗಲಿದೆ. ರಾಜ್ಯ ಶಿಕ್ಷಣ ಇಲಾಖೆ ಹೊರಡಿಸಿರುವ ಶೈಕ್ಷಣಿಕ ವೇಳಾಪಟ್ಟಿಯ ಪ್ರಕಾರ, 2025ರ ದಸರಾ ರಜೆ ಸೆಪ್ಟೆಂಬರ್ 20 ರಿಂದ ಅಕ್ಟೋಬರ್ 7ರವರೆಗೆ ಒಟ್ಟು 18 ದಿನಗಳು ಇರಲಿವೆ. ಈ ಸುದೀರ್ಘ ರಜೆ ಮಕ್ಕಳು ಹಾಗೂ ಪೋಷಕರಲ್ಲಿ ಸಂತಸ ಮೂಡಿಸಿದೆ.
ದಸರಾ ಹಬ್ಬದ ಸಮಯದಲ್ಲಿ ಸಾಮಾನ್ಯವಾಗಿ 15 ರಿಂದ ಒಂದು ತಿಂಗಳ ಕಾಲ ರಜೆ ನೀಡಲಾಗುತ್ತದೆ. ಅದರಂತೆ ಈ ವರ್ಷವೂ ಕೂಡಾ 18 ದಿನಗಳ ಕಾಲ ದಸರಾ ರಜೆಯನ್ನು ಘೋಷಣೆ ಮಾಡಲಾಗಿದೆ. ಈ ರಜೆಯನ್ನು ಮಧ್ಯಂತರ ಪರೀಕ್ಷೆಗಳು ಮುಗಿದ ನಂತರ ವಿದ್ಯಾರ್ಥಿಗಳಿಗೆ ಅಧಿಕೃತವಾಗಿ ಪ್ರಕಟಿಸಲಾಗುತ್ತದೆ. ಈ ರಜೆಯು ಪೋಷಕರಿಗೆ ತಮ್ಮ ಕುಟುಂಬದೊಂದಿಗೆ ಪ್ರವಾಸ ಹೋಗಲು ಅಥವಾ ಊರಿಗೆ ಭೇಟಿ ನೀಡಲು ಸೂಕ್ತ ಸಮಯಾವಕಾಶವನ್ನು ಒದಗಿಸಲಿದೆ. ಹಾಗೆಯೇ, ಮಕ್ಕಳು ತಮ್ಮ ಪೋಷಕರೊಂದಿಗೆ ಹೆಚ್ಚು ಸಮಯ ಕಳೆಯಲು ಇದು ಒಂದು ಉತ್ತಮ ಅವಕಾಶ.
ಆದರೆ, ರಜೆಯ ನಡುವೆಯೂ ಒಂದು ಪ್ರಮುಖ ಸೂಚನೆಯನ್ನು ಶಿಕ್ಷಣ ಇಲಾಖೆ ನೀಡಿದೆ. 'ಅಕ್ಟೋಬರ್ 2 ರಂದು' ರಜೆ ಇದ್ದರೂ, ಎಲ್ಲ ಶಾಲಾ ಮಕ್ಕಳು ಮತ್ತು ಶಿಕ್ಷಕರು ಶಾಲೆಗೆ ಕಡ್ಡಾಯವಾಗಿ ಹಾಜರಾಗಬೇಕು. ಈ ದಿನ ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಇರುವುದರಿಂದ, ಅವರ ಆದರ್ಶಗಳನ್ನು ಸ್ಮರಿಸಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲು ಆದೇಶಿಸಲಾಗಿದೆ.
ಒಟ್ಟಿನಲ್ಲಿ, ಈ ವರ್ಷದ ದಸರಾ ರಜೆಯು ಮಕ್ಕಳಿಗೆ ಹಬ್ಬದ ಸಂಭ್ರಮದ ಜೊತೆಗೆ ಪರೀಕ್ಷೆಯ ಒತ್ತಡದಿಂದ ಹೊರಬಂದು ವಿಶ್ರಾಂತಿ ಪಡೆಯಲು ಒಂದು ಒಳ್ಳೆಯ ಅವಕಾಶವಾಗಿದೆ. ಜೊತೆಗೆ, ಎಸ್ಸೆಸ್ಸೆಲ್ಸಿ ಸೇರಿದಂತೆ ಪ್ರಮುಖ ತರಗತಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಧ ವರ್ಷದಲ್ಲಿ ನಡೆದ ವಿಷಯದ ಬಗ್ಗೆ ಅಧ್ಯಯನ ಮಾಡುವುದಕ್ಕೆ ಸಮಯಾವಕಾಶ ಸಿಗಲಿದೆ. ದಸರಾದಲ್ಲಿ ಆಟದ ಜೊತೆಗೆ ಓದಿನ ಕಡೆಗೂ ಮಕ್ಕಳಿಗೆ ಗಮನ ಹರಿಸುವಂತೆ ಪೋಷಕರು ನಿಗಾವಹಿಸಬೇಕು.
ವಿಶ್ವ ವಿಖ್ಯಾತ ದಸರಾ ಮಹೋತ್ಸವ:
ರಾಜ್ಯದಲ್ಲಿ ವಿಜಯನಗರ ಸಾಮ್ರಾಜ್ಯದಿಂದ ಆರಂಭಿಸಲಾದ ದಸರಾ ಮಹೋತ್ಸವವನ್ನು ಮೈಸೂರು ಒಡೆಯರ್ ಸಂಸ್ಥಾನದಲ್ಲಿಯೂ ಮುಂದುವರೆಸಿಕೊಂಡು ಬರಲಾಗಿದೆ. ಇನ್ನು ನಾಡದೇವತೆಯಾಗಿ ಮೈಸೂರಿನ ಚಾಮುಂಡೇಶ್ವರಿ ದೇವಿಯನ್ನು ಪೂಜೆ ಮಾಡುವ ಹಿನ್ನೆಲೆಯಲ್ಲಿ ಚಾಮುಂಡಿ ದೇವಿಗೆ ನಡೆಸುವ ದಸರಾ ಮಹೋತ್ಸವವನ್ನು ನಾಡ ಹಬ್ಬವಾಗಿ ಘೋಷಣೆ ಮಾಡಲಾಯಿತು. ರಾಜರ ಕಾಲದಿಂದ ಇಂದಿನ ಸರ್ಕಾರದವರೆಗೂ ಮೈಸೂರು ದಸರಾ ಮಹೋತ್ಸವವನ್ನು ಅದ್ಧೂರಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ. ಹೀಗಾಗಿ, ಈ ದಸರಾ ಮಹೋತ್ಸವ ವಿಶ್ವ ವಿಖ್ಯಾತಿಯನ್ನು ಪಡೆದುಕೊಂಡಿದೆ.
ಸರ್ಕಾರದಿಂದ 11 ದಿನಗಳ ದಸರಾ ಮಹೋತ್ಸವ ಆಚರಣೆ:
2025ನೇ ಸಾಲಿನ ಈ ಬಾರಿ ದಸರಾ ಮಹೋತ್ಸವದ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 11 ದಿನಗಳ ಕಾಲ ದಸರಾ ನಡೆಯಲಿದೆ. ಸೆಪ್ಟೆಂಬರ್ 22ರಂದು ಆರಂಭಗೊಂಡು ಅಕ್ಟೋಬರ್ 2ರ ವಿಜಯ ದಶಮಿಯೊಂದಿಗೆ ಮುಕ್ತಾಯಗೊಳ್ಳಲಿದೆ. ದಸರಾ ಮಹೋತ್ಸವವನ್ನು ಈ ಬಾರಿ ಬೂಕರ್ ಪ್ರಶಸ್ತಿ ವಿಜೇತೆ ಸಾಹಿತಿ ಬಾನು ಮುಷ್ತಾಕ್ ಅವರು ಉದ್ಘಾಟನೆ ಮಾಡಲಿದ್ದಾರೆ. ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಏರ್ ಶೋ ನಡೆಸಲಾಗುತ್ತದೆ. ಈ ಬಾರಿ ಮೈಸೂರು ದಸರಾ ವಿಜೃಂಭಣೆಯಿಂದ ನಡೆಯಲಿದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ