
ಬೆಂಗಳೂರು (ಜೂ.29): ರಾಜ್ಯದ ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ರಾಜ್ಯದ ಪ್ರಮುಖ ಜಲಾಶಯಗಳಿಗೆ ಭರ್ಜರಿ ನೀರು ಹರಿದುಬರುತ್ತಿದೆ. ಸಣ್ಣ ಪುಟ್ಟ ಜಲಾಶಯಗಳು ಈಗಾಗಲೇ ತುಂಬಿವೆ. ಪ್ರಮುಖ ಜಲಾಶಯಗಳನ್ನು ಸುರಕ್ಷತೆಯ ದೃಷ್ಟಿಯಿಂದ ಪೂರ್ಣ ಪ್ರಮಾಣದಲ್ಲಿ ತುಂಬಿಸದೆ ಒಳ ಹರಿವಿನ ಪ್ರಮಾಣದಷ್ಟೇ ನೀರನ್ನು ಹೊರ ಬಿಡಲಾಗುತ್ತಿದೆ.
ಜೂನ್ ತಿಂಗಳಿನಲ್ಲಿಯೇ ಯಥೇಚ್ಚ ನೀರು ಹರಿದು ಬರುತ್ತಿರುವುದು ರಾಜ್ಯದ ಅಣೆಕಟ್ಟೆಗಳ ಇತಿಹಾಸದಲ್ಲಿಯೇ ಹಲವು ದಾಖಲೆಗಳನ್ನು ನಿರ್ಮಿಸುತ್ತಿದೆ. ರಾಜ್ಯದ ಜೀವನಾಡಿ ಕಾವೇರಿ ನದಿಗೆ ಮಂಡ್ಯದ ಶ್ರೀರಂಗಪಟ್ಟಣ ಬಳಿ ನಿರ್ಮಿಸಿರುವ ಕೆಆರ್‌ಎಸ್ ಜಲಾಶಯ ತುಂಬಲು ಕೇವಲ 1 ಅಡಿ ಮಾತ್ರ ಬಾಕಿ ಇದೆ. ಇನ್ನು ಈಗಾಗಲೇ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯ ತುಂಬುವ ಹಂತಕ್ಕೆ ಬಂದಿದ್ದರೂ ಸುರಕ್ಷತೆ ದೃಷ್ಟಿಯಿಂದ ಹೆಚ್ಚು ನೀರನ್ನು ನದಿಗೆ ಬಿಡಲಾಗುತ್ತಿದೆ. ಹಾಸನದ ಹೇಮಾವತಿ, ಕೊಡಗಿನ ಹಾರಂಗಿಗಳನ್ನು ಪೂರ್ತಿ ತುಂಬಿಸದೆ ನೀರನ್ನು ನದಿಗೆ ಬಿಡುಗಡೆ ಮಾಡಲಾಗುತ್ತಿದೆ.
ಮಹಾರಾಷ್ಟ್ರದಲ್ಲಿ ಮಳೆ ಆಗುತ್ತಿರುವುದರಿಂದ ವಿಜಯಪುರ ಜಿಲ್ಲೆಯ ಕೃಷ್ಣಾ ನದಿಗೆ ಕಟ್ಟಿರುವ ಆಲಮಟ್ಟಿ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಹಾಗಾಗಿ ಎಲ್ಲ ಗೇಟುಗಳನ್ನು ತೆರೆದು ನೀರನ್ನು ಹೊರಬಿಡಲಾಗುತ್ತಿದೆ. ಯಾದಗಿರಿ ಜಿಲ್ಲೆಯಲ್ಲಿ ಕೃಷ್ಣಾ ನದಿಗೆ ಕಟ್ಟಿರುವ ಮತ್ತೊಂದು ಡ್ಯಾಂ ನಾರಾಯಣಪುರದ ಬಸವ ಸಾಗರ ಜಲಾಶಯದ 30 ಕ್ರಸ್ಟ್‌ಗೇಟುಗಳ ಮೂಲಕ 1.10 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ.
ಇನ್ನು 19ನೇ ಕ್ರಸ್ಟ್ ಗೇಟ್ ತುಂಡಾಗಿ ಕಳೆದ ವರ್ಷ ಅಪಾರ ಪ್ರಮಾಣದ ನೀರು ಹರಿದು ಹೋಗಿದ್ದ ವಿಜಯನಗರ ಜಿಲ್ಲೆಯ ಹೊಸಪೇಟೆ ಬಳಿಯಲ್ಲಿರುವ ತುಂಗಾಭದ್ರ ಅಣೆಕಟ್ಟೆಯಲ್ಲಿ 80 ಟಿಎಂಸಿ ನೀರು ಮಾತ್ರ ಸಂಗ್ರಹಿಸಲು ನಿರ್ಧರಿಸಲಾಗಿದೆ. ಆದ್ದರಿಂದ ಹೆಚ್ಚಿನ ನೀರನ್ನು ನದಿಗೆ ಯಾವುದೇ ಕ್ಷಣದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಈ ಸಂಬಂಧ ಈಗಾಗಲೇ ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ.
ರಾಜ್ಯ ಜೀವನಾಡಿ ಕಾವೇರಿ ನದಿಗೆ ನಿರ್ಮಿಸಲಾಗಿರುವ ಕೃಷ್ಣರಾಜ ಸಾಗರ ಜಲಾಶಯ ಜೂನ್ ತಿಂಗಳಿನಲ್ಲಿಯೇ ತುಂಬಿರುವುದು ಸಾರ್ವತ್ರಿಕ ದಾಖಲೆ ಆಗಲಿದೆ. ಈಗಾಗಲೇ 123 ಅಡಿ ತುಂಬಿದೆ. ಇದಕ್ಕೆ ನಾಳೆ ಮುಖ್ಯಮಂತ್ರಿ ಬಾಗಿನ ಅರ್ಪಿಸಲಿದ್ದಾರೆ. ಜಲಾಶಯಕ್ಕೆ ೭೩,೮೧೧ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯದಿಂದ ೩೮,೯೮೩ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಕಬಿನಿ ಜಲಾಶಯಕ್ಕೆ 30853 ಕ್ಯುಸೆಕ್ ಒಳ ಹರಿವು ಇದ್ದು, 30000 ಕ್ಯುಸೆಕ್ ಹೊರ ಹರಿಸಲಾಗುತ್ತಿದೆ. ಹಾರಂಗಿಗೆ ಒಳಹರಿವು 4,592 ಕ್ಯುಸೆಕ್, ಇದ್ದು, ನದಿಗೆ 6500 ಕ್ಯುಸೆಕ್ ಬಿಡಲಾಗುತ್ತಿದೆ. ಲಿಂಗನಮಕ್ಕಿ ಜಲಾಶಯಕ್ಕೆ 24,752 ಕ್ಯುಸೆಕ್ ಒಳಹರಿವು ಇದ್ದು, ನದಿಗೆ ನೀರು ಬಿಡುತ್ತಿಲ್ಲ. ಭದ್ರಾಗೆ ಒಳಹರಿವು 21139 ಕ್ಯುಸೆಕ್ ಇದ್ದು, ಕೇವಲ 1290 ಕ್ಯುಸೆಕ್ ಹೊರ ಹರಿಯುತ್ತಿದೆ.
ಇನ್ನು ಬಸವಸಾಗರ ಜಲಾಶಯಕ್ಕೆ 1.10 ಲಕ್ಷ ಕ್ಯೂಸೆಕ್ ನೀರಿನ ಒಳಹರಿವು ಬರುತ್ತಿದ್ದು, ಎಲ್ಲಾ 30 ಗೇಟ್‌ಗಳಿಂದ 78,445 ಕ್ಯೂಸೆಕ್, ಎಂಪಿಸಿಎಲ್‌ನಿಂದ 6 ಸಾವಿರ ಕ್ಯೂಸೆಕ್ ನೀರು ಸೇರಿ ಒಟ್ಟಾರೆಯಾಗಿ 1.10 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ನಾರಾಯಣಪುರ ಜಲಾಶಯದಿಂದ ಸುಮಾರು 1.10 ಕ್ಯುಸೆಕ್ ನೀರನ್ನು ಶನಿವಾರ ಹರಿದು ಬಿಡಲಾಗಿದೆ. ಇದೀಗ ಒಂದು ಲಕ್ಷಕ್ಕು ಹೆಚ್ಚಿನ ಪ್ರಮಾಣದಲ್ಲಿ ಕೃಷ್ಣಾ ನದಿ ಮುಖಾಂತರ ನೀರನ್ನು ಹೊರಗಡೆ ಬಿಡಲಾಗುತ್ತಿದೆ.
ಕೆಆರ್‌ಎಸ್ ಸಂಪೂರ್ಣ ಭರ್ತಿ:
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಎಸ್. ಅಣೆಕಟ್ಟೆ ತನ್ನ 124.80 ಅಡಿ ಗರಿಷ್ಠ ಸಾಮರ್ಥ್ಯಕ್ಕೆ ಸಂಪೂರ್ಣ ಭರ್ತಿಯಾಗಿ ಹೊಸ ದಾಖಲೆ ನಿರ್ಮಿಸಿದೆ. ಜಲಾಶಯಕ್ಕೆ 46,501 ಕ್ಯೂಸೆಕ್ ಒಳಹರಿವು ಬರುತ್ತಿದ್ದು, ಈಗ 21,463 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಬಾಗಿನ ಕಾರ್ಯಕ್ರಮಕ್ಕಾಗಿ ಹೊರಹರಿವನ್ನು ತಗ್ಗಿಸಿದ್ದ ಅಧಿಕಾರಿಗಳು, ಈಗ ಜಲಾಶಯ ಸಂಪೂರ್ಣ ಭರ್ತಿಯಾದ ಹಿನ್ನೆಲೆಯಲ್ಲಿ ಒಳಹರಿವಿನಷ್ಟೇ ನೀರನ್ನು ಬಿಡುಗಡೆ ಮಾಡಲಿದ್ದಾರೆ. ಜೂನ್ ತಿಂಗಳಲ್ಲೇ ಮೊದಲ ಬಾರಿಗೆ ಭರ್ತಿಯಾದ ಕೆಆರ್‌ಎಸ್ ಅಣೆಕಟ್ಟೆ ಈ ಮೂಲಕ ಹೊಸ ದಾಖಲೆ ನಿರ್ಮಿಸಿದೆ.
ಇಂದಿನ ನೀರಿನ ಮಟ್ಟ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ