ಹಳೆಯ ಸ್ಪ್ಲೆಂಡರ್‌ನಲ್ಲಿ ದೇಶ ಸುತ್ತಿದ ತಂದೆ-ಮಗನಿಗೆ ₹10 ಲಕ್ಷ ಬೆಲೆಯ ‘ಹೀರೋ’ ಗಿಫ್ಟ್‌!

Kannadaprabha News, Ravi Janekal |   | Kannada Prabha
Published : Jun 29, 2025, 08:18 AM IST
Hero motocorp to award hero centennial bike worth Rs 10L for udupi

ಸಾರಾಂಶ

ಉಡುಪಿಯ ತಂದೆ-ಮಗನ ಜೋಡಿ ಹಳೆಯ ಸ್ಪ್ಲೆಂಡರ್ ಬೈಕ್‌ನಲ್ಲಿ ಖಾರ್ದುಂಗ್ಲಾವರೆಗೆ ಸವಾರಿ ಮಾಡಿದ ಸಾಹಸಕ್ಕೆ ಹೀರೋ ಕಂಪನಿ ಬಹುಮಾನ ನೀಡಿದೆ. 25 ವರ್ಷ ಹಳೆಯ ಸ್ಪ್ಲೆಂಡರ್‌ನಲ್ಲಿ 17 ರಾಜ್ಯಗಳನ್ನು ಸುತ್ತಿ, ಖಾರ್ದುಂಗ್ಲಾವನ್ನೂ ತಲುಪಿದ ಸಾಧನೆಗಾಗಿ ಸೆಂಟಿನ್ನಿಯಲ್ ಸಿಇ- 100 ಬೈಕ್ ಉಡುಗೊರೆಯಾಗಿ ನೀಡಲಾಗಿದೆ.

ಉಡುಪಿ (ಜೂ.29): ವಿಶ್ವದ 2ನೇ ಅತೀ ಎತ್ತರದ, ಅತ್ಯಂತ ಕಠಿಣ ಮಾರ್ಗಗಳಲ್ಲಿ ಒಂದಾದ ಕಾಶ್ಮೀರದ ಖಾರ್ದುಂಗ್ಲಕ್ಕೆ ತಮ್ಮ ಹಳೆಯ ಸ್ಪ್ಲೆಂಡರ್ ಬೈಕಿನಲ್ಲಿ ಯಶಸ್ವಿಯಾಗಿ ಹೋಗಿ ಬಂದ ಉಡುಪಿಯ ತಂದೆ- ಮಗನಿಗೆ ಹೀರೋ ಕಂಪನಿ ಭರ್ಜರಿ ಬಹುಮಾನ ನೀಡಿದೆ.

ಜಿಲ್ಲೆಯ ಕಾಪು ತಾಲೂಕಿನ ಶಿರ್ವ ಗ್ರಾಮದ ರಾಜೇಂದ್ರ ಶೆಣೈ ಮತ್ತವರ ಮಗ ಪ್ರಜ್ವಲ್ ಶೆಣೈ ಅವರ ಈ ಸಾಹಸಗಾಥೆಯ ಮಾಹಿತಿ ಪಡೆದ ಹೀರೋ ಕಂಪನಿ, ಅವರಿಗೆ ತನ್ನ ಮಾಸ್ಟರ್‌ಪೀಸ್ ಎಂದು ಕರೆಯುವ ಸೆಂಟಿನ್ನಿಯಲ್ ಸಿಇ- 100 ಬೈಕನ್ನು ನೀಡಿ ಗೌರವಿಸಿದೆ. ಶನಿವಾರ ಉಡುಪಿಯ ಹೀರೋ ಶೋರೂಂನಲ್ಲಿ ಅವರಿಗೆ ಈ ಬೈಕನ್ನು ಹಸ್ತಾಂತರಿಸಲಾಗಿದೆ.

ರಾಜೇಂದ್ರ ಶೆಣೈ ಅವರು ತಮ್ಮ 25 ವರ್ಷ ಹಳೆಯ ಈ ಹೀರೋ ಸ್ಪ್ಲೆಂಡರ್ ಬೈಕ್‌ನಲ್ಲಿ ಈವರೆಗೆ 17 ರಾಜ್ಯಗಳನ್ನು ಸಂಚರಿಸಿದ್ದಾರೆ. ತಿರುಪತಿ, ಮಧುರೈ, ಕನ್ಯಾಕುಮಾರಿ, ಪುರಿ, ಶಿರಡಿ, ನಾಸಿಕ್, ಪಂಡರಾಪುರ, ಅಯೋಧ್ಯೆ ಹೀಗೆ ಹತ್ತಾರು ಪುಣ್ಯಕ್ಷೇತ್ರಗಳಿಗೆ ಹೋಗಿ ಬಂದಿದ್ದಾರೆ. ಇತ್ತೀಚೆಗೆ ಪ್ರಯಾಗ್ ರಾಜ್‌ನ ಮಹಾಕುಂಭಮೇಳಕ್ಕೂ ಹೋಗಿ ಬಂದಿದ್ದಾರೆ ಈ ಅಪ್ಪ-ಮಗ ಜೋಡಿ.

ಕಳೆದ ವರ್ಷ ಇವರು ಹೊಸ ಸಾಹಸಕ್ಕೆ ಕೈಹಾಕಿದರು. ಬೇರೆಯವರೆಲ್ಲ ಬುಲೆಟ್ ಅಥವಾ ಅದಕ್ಕಾಗಿಯೇ ಇರುವ ಬೈಕ್‌ಗಳಲ್ಲಿ ಕಾಶ್ಮೀರಕ್ಕೆ ಹೋಗುವ ಸಾಹಸ ಮಾಡುತಿದ್ದರೆ ಈ ಜೋಡಿ ತಮ್ಮ ಮೆಚ್ಚಿನ ಸ್ಪ್ಲೆಂಡರ್‌ನಲ್ಲಿಯೇ ಹೊರಟು ಬಿಟ್ಟರು. ಕೇವಲ 10 ದಿನಗಳಲ್ಲಿ ಉಡುಪಿಯಿಂದ ಸುಮಾರು 1900 ಕಿ.ಮೀ. ದೂರದಲ್ಲಿರುವ, ನೆಲಮಟ್ಟದಿಂದ 17,982 ಅಡಿ ಎತ್ತರದ ಕಾಶ್ಮೀರದ ಖಾರ್ದುಂಗ್ಲಾಕ್ಕೆ ಯಶಸ್ವಿಯಾಗಿ ತಲುಪಿದ್ದರು. ಈ ಬಗ್ಗೆ ‘ಕನ್ನಡಪ್ರಭ’ ವಿಶೇಷ ವರದಿಯನ್ನೂ ಪ್ರಕಟಿಸಿತ್ತು.

ಈ ವರ್ಷ ಹೀರೋ ಮೋಟೋ ಕಾರ್ಪ್ ಸಂಸ್ಥೆಯ ಸಂಸ್ಥಾಪಕ ಡಾ.ಬ್ರಿಜ್ ಮೋಹನ್ ಲಾಲ್ ಮುಂಜಾಲ್ ಅವರ 100ನೇ ಜನ್ಮದಿನವನ್ನು ಕಂಪನಿ ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಿದೆ. ಕಂಪನಿಯು ಸೆಂಟಿನ್ನಿಯಲ್ ಎಂಬ ಕೇವಲ 100 ಬೈಕ್‌ಗಳನ್ನು ಬಿಡುಗಡೆ ಮಾಡಿದೆ. ಇದು ಕಲೆಕ್ಟರ್ಸ್ ಎಡಿಷನ್ ಆಗಿದ್ದು, ಅವುಗಳನ್ನು ಆನ್‌ಲೈನ್‌ನಲ್ಲಿ ಹರಾಜು ಮಾಡಲಾಗುತ್ತಿದೆ. ಈ ಬೈಕ್‌ಗೆ ಅತೀ ಹೆಚ್ಚು ₹20.30 ಲಕ್ಷವರೆಗೆ ಬಿಡ್ ಮಾಡಲಾಗಿದೆ. ಅಂತಹ ಪ್ರತಿಷ್ಠಿತ ಬೈಕನ್ನು ಶೆಣೈ ಅವರಿಗೆ ಬೆಸ್ಟ್ ಕಸ್ಟಮರ್ ಎಂದು ಗುರುತಿಸಿ, ಉಡುಗೊರೆಯಾಗಿ ನೀಡಿ, ಅವರ ಸಾಹಸಕ್ಕೆ ಗೌರವ ಸಲ್ಲಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!