
ಬೆಂಗಳೂರು (ಅ.15): ರಾಜ್ಯ ಸರ್ಕಾರಿ ನೌಕರರು ಮತ್ತು ನಿವೃತ್ತಿ ವೇತನದಾರರಿಗೆ ಕರ್ನಾಟಕ ಸರ್ಕಾರವು ಸಿಹಿಸುದ್ದಿ ನೀಡಿದ್ದು, ತುಟ್ಟಿಭತ್ಯೆಯ (Dearness Allowance - DA) ದರಗಳನ್ನು ಪರಿಷ್ಕರಿಸಿ ಆದೇಶ ಹೊರಡಿಸಿದೆ. ಪ್ರಸ್ತುತ ಮೂಲ ವೇತನದ ಶೇಕಡಾ 12.25 ರಷ್ಟಿದ್ದ ತುಟ್ಟಿಭತ್ಯೆಯ ದರವನ್ನು ಶೇಕಡಾ 14.25 ಕ್ಕೆ ಹೆಚ್ಚಿಸಿ ಮಂಜೂರು ಮಾಡಿದೆ.
ಈ ತುಟ್ಟಿ ಭತ್ಯೆ ಹೆಚ್ಚಳವು ದಿನಾಂಕ 1ನೇ ಜುಲೈ 2025 ರಿಂದ ಜಾರಿಗೆ ಬರಲಿದೆ. ಸರ್ಕಾರದ ಆದೇಶ ಸಂಖ್ಯೆ: ಆಇ 18 ಎಸ್‌ಆರ್‌ಪಿ 2025, ದಿನಾಂಕ: 15 ನೇ ಅಕ್ಟೋಬರ್ 2025 ರಂದು ಈ ನಡವಳಿಯನ್ನು ಹೊರಡಿಸಲಾಗಿದೆ. ಈ ನಿರ್ಧಾರದಿಂದ ರಾಜ್ಯದ ಲಕ್ಷಾಂತರ ಸರ್ಕಾರಿ ನೌಕರರು ಮತ್ತು ನಿವೃತ್ತಿ ವೇತನದಾರರಿಗೆ ಆರ್ಥಿಕ ನೆರವು ದೊರೆಯಲಿದೆ.
ರಾಜ್ಯ ಸರ್ಕಾರಿ ನೌಕರರು: 2024ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನವನ್ನು ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರುಗಳಿಗೆ ಈ ಆದೇಶ ಅನ್ವಯವಾಗುತ್ತದೆ.
ನಿವೃತ್ತಿ ವೇತನದಾರರು: ರಾಜ್ಯ ಸರ್ಕಾರದ ನಿವೃತ್ತಿ ವೇತನದಾರರು/ಕುಟುಂಬ ನಿವೃತ್ತಿ ವೇತನದಾರರಿಗೆ 5, ಹಾಗೂ ರಾಜ್ಯದ ಸಂಚಿತ ನಿಧಿಯಿಂದ ನಿವೃತ್ತಿ ವೇತನವನ್ನು ಪಡೆಯುತ್ತಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತಿ ವೇತನದಾರರು/ಕುಟುಂಬ ನಿವೃತ್ತಿ ವೇತನದಾರರಿಗೂ ಈ ಹೆಚ್ಚಿದ ದರಗಳು ದಿನಾಂಕ 1ನೇ ಜುಲೈ 2025 ರಿಂದ ಜಾರಿಗೆ ಬರಲಿವೆ.
ಇತರೆ ನೌಕರರು: ಸರ್ಕಾರದ ಮತ್ತು ಜಿಲ್ಲಾ ಪಂಚಾಯತ್‌ಗಳ ಪೂರ್ಣಾವಧಿ ನೌಕರರಿಗೆ, ಕಾಲಿಕ ವೇತನ ಶ್ರೇಣಿಗಳಲ್ಲಿರುವ ಪೂರ್ಣಾವಧಿ ವರ್ಕ್‌ಚಾರ್ಜ್ ನೌಕರರಿಗೆ, ಮತ್ತು ಸರ್ಕಾರದಿಂದ ಸಹಾಯಾನುದಾನ ಪಡೆಯುತ್ತಿರುವ ಶಿಕ್ಷಣ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಕಾಲಿಕ ವೇತನ ಶ್ರೇಣಿಗಳಲ್ಲಿರುವ ಪೂರ್ಣಾವಧಿ ನೌಕರರುಗಳಿಗೆ ಈ ಆದೇಶ ಅನ್ವಯಿಸುತ್ತದೆ.
ಯುಜಿಸಿ ನೌಕರರು: ಯುಜಿಸಿ/ಎಐಸಿಟಿಇ/ಐಸಿಎಆರ್ ವೇತನ ಶ್ರೇಣಿಗಳ ನಿವೃತ್ತ ನೌಕರರುಗಳಿಗೂ ಸಹ ಈ ಆದೇಶಗಳು ಅನ್ವಯಿಸುತ್ತವೆ. (ಆದರೆ, ಯುಜಿಸಿ/ಎಐಸಿಟಿಇ/ಐಸಿಎಆರ್ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿರುವ ನೌಕರರಿಗೆ ಮತ್ತು ಎನ್‌ಜೆಪಿಸಿ ವೇತನ ಶ್ರೇಣಿಗಳ ನ್ಯಾಯಾಂಗ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಆದೇಶಗಳನ್ನು ಹೊರಡಿಸಲಾಗುವುದು.)
ತುಟ್ಟಿಭತ್ಯೆಯ ಉದ್ದೇಶಕ್ಕಾಗಿ 'ಮೂಲ ವೇತನ' ಎಂದರೆ ಸರ್ಕಾರಿ ನೌಕರನು ಧಾರಣ ಮಾಡಿರುವ ಹುದ್ದೆಗೆ ಅನ್ವಯವಾಗುವ ವೇತನ ಶ್ರೇಣಿಯಲ್ಲಿ ಪಡೆಯುತ್ತಿರುವ ವೇತನವಾಗಿದ್ದು, ಅದರಲ್ಲಿ ಸ್ಥಗಿತ ವೇತನ ಬಡ್ತಿ, ವೈಯಕ್ತಿಕ ವೇತನ ಮತ್ತು ಹೆಚ್ಚುವರಿ ವೇತನ ಬಡ್ತಿಗಳು ಸೇರುತ್ತವೆ. ಆದರೆ, ತುಟ್ಟಿ ಭತ್ಯೆಯ ಮಂಜೂರಾತಿಯ ಉದ್ದೇಶಕ್ಕಾಗಿ ಮೇಲೆ ಸೂಚಿಸಿರುವುದನ್ನು ಹೊರತುಪಡಿಸಿ ಇತರೆ ಯಾವುದೇ ಉಪಲಬ್ಧಗಳನ್ನು ಸೇರಿಸತಕ್ಕದ್ದಲ್ಲ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ, ಆರ್ಥಿಕ ಇಲಾಖೆಯ (ಸೇವೆಗಳು-2) ಸರ್ಕಾರದ ಜಂಟಿ ಕಾರ್ಯದರ್ಶಿ (ಉಮಾ.ಕೆ.) ಅವರ ಸಹಿಯೊಂದಿಗೆ ಈ ಮಹತ್ವದ ಆದೇಶವನ್ನು ಹೊರಡಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ