ಕರ್ನಾಟಕದ ಸ್ವರ್ಗವೆಂದೇ ಕರೆಯುವ ಕೊಡಗು ಜಿಲ್ಲೆಯ ಜನರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿವೆ ಎಂಬ ಭಯಾನಕ ವರದಿ ಹೊರಬಿದ್ದಿದೆ.
ವರದಿ : ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್ ಕೊಡಗು
ಕೊಡಗು (ಡಿ.11): ಕೊಡಗು ಜಿಲ್ಲೆಯಲ್ಲಿ ಬದುಕುತ್ತಿರುವವರು ಸ್ವರ್ಗದಲ್ಲಿ ಬದುಕುತ್ತಿದ್ದಾರೆ ಎಂದು ಹೊರ ಜಿಲ್ಲೆಯ ಜನರು ಅಂದುಕೊಂಡಿದ್ದಾರೆ. ಆದರೆ ಈ ಜಿಲ್ಲೆಯಲ್ಲಿ ಹೃದಯ ಸಂಬಂಧಿ ಕಾಯಿಗಳು ಇತ್ತೀಚಿನ ವರ್ಷಗಳಲ್ಲಿ ತೀವ್ರಗೊಳ್ಳುತ್ತಿವೆ ಎನ್ನುವ ಭಯಾನಕ ವಿಷಯ ಹೊರಬಿದ್ದಿದೆ. ಆದರೂ ಜಿಲ್ಲೆಯಲ್ಲಿ ಒಬ್ಬೇ ಒಬ್ಬರೂ ಹೃದಯ ಸಂಬಂಧಿ ವೈದ್ಯರಿಲ್ಲ ಎನ್ನುವುದೇ ಅಚ್ಚರಿ.
ಕೊಡಗು ಜಿಲ್ಲೆ ಎಂದರೆ ದಕ್ಷಿಣದ ಕಾಶ್ಮೀರ, ಪ್ರವಾಸಿಗರ ಸ್ವರ್ಗ ಎಂದೆಲ್ಲಾ ಕರೆಯುತ್ತಾರೆ. ಸ್ವರ್ಗ ಎಂದು ನೀವು ಅಂದುಕೊಂಡಿದ್ದರೆ ಇಲ್ಲಿನ ಜನರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿವೆ ಎನ್ನುವುದು ಅಚ್ಚರಿಯ ವಿಷಯ. ಹೌದು, ಕೊಡಗು ಜಿಲ್ಲೆಯಲ್ಲಿ ಹೃದಯ ಸಂಬಂಧಿ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಳೆದ ಒಂದು ವರ್ಷದಲ್ಲಿ 1,000 ಕ್ಕೂ ಹೆಚ್ಚು ಜನರು ಹೃದಯ ಸಂಬಂಧಿ ಕಾಯಿಲೆಗಳೆಂದು ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅದರಲ್ಲೂ ಹೃದಯ ಸಂಬಂಧಿ ಗಂಭೀರ ಸಮಸ್ಯೆಗೆ ಒಳಗಾದವರ ಸಂಖ್ಯೆಯೇ ಕಳೆದ 11 ತಿಂಗಳಲ್ಲೇ ಬರೋಬ್ಬರಿ 317 ಇದೆ.
undefined
ಬೆಂಗಳೂರು ಹೆಂಡ್ತಿ ಹಳ್ಳಿ ಮನೆಗೆ ಬರ್ತಿಲ್ಲಾಂತ ಆತ್ಮಹತ್ಯೆ ಮಾಡಿಕೊಂಡ ಚಾಮರಾಜನಗರ ಗಂಡ
ಕಳೆದ ಐದು ವರ್ಷಗಳಿಂದ ನೋಡುವುದಾದರೆ 2019 ರಲ್ಲಿ 100 ಜನರಿಗೆ ಹೃದಯದ ಗಂಭೀರ ಕಾಯಿಲೆಯೆಂದು ಹೊರ ಆಸ್ಪತ್ರೆಗಳಿಗೆ ರೆಫರ್ ಮಾಡಲಾಗಿದೆ. 2020 ರಲ್ಲಿ 309, 2021 ರಲ್ಲಿ 342, 2022 ರಲ್ಲಿ 362 ಜನರನ್ನು ಹೃದಯ ತುರ್ತು ಚಿಕಿತ್ಸೆಗಾಗಿ ಮೈಸೂರು ಮತ್ತು ಮಂಗಳೂರು ಜಿಲ್ಲೆಗಳ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ. ಇದು ಕೊಡಗು ಜಿಲ್ಲಾ ಆರೋಗ್ಯ ಇಲಾಖೆ ಮೂಲಕ ಹೊರ ಜಿಲ್ಲೆಗಳಿಗೆ ಕಳುಹಿಸಿರುವ ರೋಗಿಗಳ ಸಂಖ್ಯೆ ಎಂದು ಕೊಡಗು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಡೀನ್ ಡಾ. ವಿಶಾಲ್ ಹೇಳುತ್ತಾರೆ.
ಕೊಡಗು ಸರ್ಕಾರಿ ಆಸ್ಪತ್ರೆಗಳಿಗೆ ಬಾರದೆ ಹೊರ ಜಿಲ್ಲೆಗಳ ಆಸ್ಪತ್ರೆಗಳಿಗೆ ನೇರವಾಗಿ ದಾಖಲಾದ ಪ್ರಕರಣಗಳು ಬಹಳಷ್ಟಿವೆ. ಇಷ್ಟು ಪ್ರಮಾಣದಲ್ಲಿ ಕೊಡಗು ಜಿಲ್ಲೆಯಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುವವರ ಸಂಖ್ಯೆ ನಿರಂತರ ಹೆಚ್ಚಳವಾಗುತ್ತಲೇ ಇದೆ. ವಿಪರ್ಯಾಸವೆಂದರೆ ಕೊಡಗು ಜಿಲ್ಲೆಯಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ಸರ್ಕಾರಿ ಅಥವಾ ಖಾಸಗಿಯ ಒಬ್ಬೇ ಒಬ್ಬರೂ ವೈದ್ಯರಿಲ್ಲ. ಹೀಗಾಗಿಯೇ ಹಲವು ವರ್ಷಗಳಿಂದ ಕೊಡಗು ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ವಿಭಾಗಗಳನ್ನು ನೀಡುವಂತೆ ದೊಡ್ಡ ಅಭಿಯಾನವೇ ನಡೆಯುತ್ತಿದೆ. ಆದರೂ ಇದುವರೆಗೆ ಯಾರೂ ಸ್ಪಂದಿಸಲಿಲ್ಲ ಎನ್ನುವುದು ವಿಪರ್ಯಾಸದ ಸಂಗತಿಯಾಗಿದೆ.
ಸುವರ್ಣ ಸೌಧದಲ್ಲಿ ಸಾವರ್ಕರ್ ಫೋಟೋ ಹಾಕಿರೋದು ನನಗೂ ಇಷ್ಟವಿಲ್ಲ: ಶಾಸಕ ಬಸವರಾಜ ರಾಯರೆಡ್ಡಿ
ಹೃದಯ ಸಂಬಂಧಿ ಕಾಯಿಲೆಯೆಂದು ಕೊಡಗು ಜಿಲ್ಲಾಸ್ಪತ್ರೆಗೆ ತುರ್ತು ಚಿಕಿತ್ಸೆಗೆಂದು ಬರುವವರಿಗೆ ಇರುವ ಪಿಜಿಷಿಯನ್‌ಗಳೇ ತಾತ್ಕಾಲಿಕ ಚಿಕಿತ್ಸೆ ನೀಡಿ ಮೈಸೂರು ಅಥವಾ ಮಂಗಳೂರುಗಳಿಗೆ ಕಳುಹಿಸುತ್ತಿದ್ದಾರೆ. ಹೀಗೆ ಹೊರ ಜಿಲ್ಲೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆಯೇ ಮೃತಪಟ್ಟ ಪ್ರಕರಣಗಳೂ ಇವೆ. ಆದರೂ ಸಂಬಂಧಿಸಿದ ಇಲಾಖೆ ಅಥವಾ ಸರ್ಕಾರ ಗಮನ ಹರಿಸುತ್ತಿಲ್ಲ ಎಂದು ಸಾಮಾಜಿಕ ಹೋರಾಟಗಾರ ಸತ್ಯ ಆಕ್ರೋಶ ಹೊರಹಾಕಿದ್ದಾರೆ. ಇನ್ನಾದರೂ ಹೊಸ ಶಾಸಕರಿದ್ದು ಸ್ವತಃ ಅವರೇ ವೈದ್ಯರಾಗಿರುವುದರಿಂದ ಜಿಲ್ಲೆಗೆ ಹೃದಯ ಸಂಬಂಧಿ ವೈದ್ಯರನ್ನು ತರುವ ಕೆಲಸ ಮಾಡಲಿ ಎಂದು ಒತ್ತಾಯಿಸಿದ್ದಾರೆ.
ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುವವರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದ್ದು ಸಂಬಂಧಿಸಿದ ಇಲಾಖೆ ಅಥವಾ ಸರ್ಕಾರ ಎಚ್ಚೆತ್ತುಕೊಳ್ಳಬೇಕಾದ ತುರ್ತು ಅಗತ್ಯವಿದೆ ಎನ್ನುವುದು ಜನರ ಆಗ್ರಹವಾಗಿದೆ.