ಇಂದು 507 ಗುತ್ತಿಗೆ ವೈದ್ಯರ ಸಾಮೂಹಿಕ ರಾಜೀನಾಮೆ| ವೇತನ ಹೆಚ್ಚಳ ಮಾಡದೇ ಇದ್ದುದಕ್ಕೆ ಆಕ್ರೋಶ
ಬೆಂಗಳೂರು(ಜೂ.17): ಹಲವು ಬಾರಿಯ ಮನವಿ ನಂತರವೂ ರಾಜ್ಯ ಸರ್ಕಾರ ವೇತನ ಹೆಚ್ಚಳ ಮಾಡದ ಹಿನ್ನೆಲೆಯಲ್ಲಿ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ 507 ವೈದ್ಯರು ಬುಧವಾರ ಸಾಮೂಹಿಕ ರಾಜೀನಾಮೆ ನೀಡಲು ತೀರ್ಮಾನಿಸಿದ್ದಾರೆ.
ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಕೋರಿ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರಿಗೆ ಹಲವು ಬಾರಿ ಮನವಿ ಸಲ್ಲಿಸಿ, ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದ್ದರು. ಆದರೆ ಇದಕ್ಕೆ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸದ ಕಾರಣ ರಾಜೀನಾಮೆ ನೀಡಲು ವೈದ್ಯರು ನಿರ್ಧರಿಸಿದ್ದಾರೆ. ಈ ಕುರಿತು ಕರ್ನಾಟಕ ರಾಜ್ಯ ಗುತ್ತಿಗೆ ವೈದ್ಯಾಧಿಕಾರಿಗಳ ಸಂಘ ವತಿಯಿಂದ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ತಮ್ಮನ್ನು ಸೇವೆಯಿಂದ ಬಿಡುಗಡೆ ಮಾಡುವಂತೆ ಕೋರಲಿದ್ದಾರೆ.
undefined
ಸದ್ಯ ಕಾಯಂ ವೈದ್ಯರಿಗೆ 80 ಸಾವಿರ ವೇತನ ನೀಡಲಾಗುತ್ತಿದೆ. ಇನ್ನು ಹೊಸದಾಗಿ ನೇಮಕಗೊಂಡು ಕೋವಿಡ್ ಚಿಕಿತ್ಸೆಯಲ್ಲಿ ಪಾಲ್ಗೊಂಡವರಿಗೆ 60 ಸಾವಿರ ನೀಡಲಾಗುತ್ತಿದೆ. ಆದರೆ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರಿಗೆ ಮಾತ್ರ ಕೇವಲ 45 ಸಾವಿರ ವೇತನ ನೀಡಲಾಗುತ್ತಿದೆ. ರಾಜ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಶೇ. 30ರಷ್ಟುವೈದ್ಯ ಹುದ್ದೆಗಳು ಖಾಲಿ ಉಳಿದಿವೆ. ಹಾಗಿದ್ದರೂ ಮೂರು ವರ್ಷಗಳಿಂದ ಸೇವೆಯನ್ನು ಕಾಯಂ ಮಾಡದೆ, ವೇತನವನ್ನೂ ಹೆಚ್ಚಿಸದೆ ಕೋವಿಡ್ ಹೋರಾಟದಲ್ಲಿ ಕೈಜೋಡಿಸಿ ಸೇವೆ ಸಲ್ಲಿಸುತ್ತಿರುವ ನಮ್ಮನ್ನು ಕಡೆಗಣಿಸಲಾಗಿದೆ. ಇದರಿಂದ ಬೇಸತ್ತು ರಾಜೀನಾಮೆ ನೀಡುತ್ತಿದ್ದೇವೆ ಎಂದು ರಾಜ್ಯ ವೈದ್ಯಕೀಯ, ಅರೆ ವೈದ್ಯಕೀಯ ಗುತ್ತಿಗೆ, ಹೊರಗುತ್ತಿಗೆ ನೌಕರರು ಸಂಘದ ರಾಜ್ಯಾಧ್ಯಕ್ಷ ಎಚ್.ವೈ.ವಿಶ್ವಾರಾಧ್ಯ ತಿಳಿಸಿದ್ದಾರೆ.
ನಮ್ಮಿಂದ ರೋಗಿಗಳಿಗೆ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಸೇವೆ ಸಲ್ಲಿಸುತ್ತಿದ್ದೇವೆ. ಇನ್ನಾದರೂ ಸರ್ಕಾರ ನಮ್ಮ ಬೇಡಿಕೆಗಳ ಈಡೇರಿಕೆಗೆ ಮುಂದಾಗಬೇಕು. ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ನಮ್ಮ ನಿರ್ಧಾರದಿಂದ ಈ ಬಾರಿ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ.