Congress Party Infighting: ಸರ್ಕಾರದ ವಿರುದ್ಧವೇ ಸಿಡಿದ ‘ಕೈ’ ಶಾಸಕರ ಬಾಯಿ ಮುಚ್ಚಿಸಿ; ಸಿಎಂಗೆ ಹೈಕಮಾಂಡ್ ತಾಕೀತು

Kannadaprabha News   | Kannada Prabha
Published : Jun 25, 2025, 05:07 AM ISTUpdated : Jun 25, 2025, 12:08 PM IST
Siddaramaiah

ಸಾರಾಂಶ

ಸರ್ಕಾರದ ವಿರುದ್ಧ ಲಂಚದ ಆರೋಪ ಮತ್ತು ಅಸಮಾಧಾನ ಹೊರಹಾಕುತ್ತಿರುವ ಕಾಂಗ್ರೆಸ್ ಶಾಸಕರಿಗೆ ಹೈಕಮಾಂಡ್ ಖಡಕ್ ಸೂಚನೆ ನೀಡಿದೆ. ಸಮಸ್ಯೆಗಳಿದ್ದರೆ ಮುಖ್ಯಮಂತ್ರಿ ಮತ್ತು ಪಕ್ಷದ ಅಧ್ಯಕ್ಷರನ್ನು ಭೇಟಿಯಾಗಿ ಚರ್ಚಿಸಿ ಬಗೆಹರಿಸಿಕೊಳ್ಳುವಂತೆ ಸೂಚಿಸಲಾಗಿದೆ.

ಬೆಂಗಳೂರು (ಜೂ.25): ವಿವಿಧ ಇಲಾಖೆಗಳ ವಿರುದ್ಧ ಲಂಚದ ಆರೋಪ, ಸಚಿವರ ಕಾರ್ಯವೈಖರಿ ಬಗ್ಗೆ ಬಹಿರಂಗ ಅಸಮಾಧಾನ ಹಾಗೂ ಅನುದಾನಕ್ಕಾಗಿ ಬೇಡಿಕೆ ಇಟ್ಟು ರಾಜ್ಯ ಸರ್ಕಾರವನ್ನು ಮುಜುಗರಕ್ಕೆ ಒಳಪಡಿಸುತ್ತಿರುವ ಸ್ವಪಕ್ಷೀಯ ಶಾಸಕರಿಗೆ ಸ್ಪಷ್ಟ ಸೂಚನೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್‌ ಸೂಚಿಸಿದೆ.

ಶಾಸಕರ ಸಮಸ್ಯೆಗಳು ಏನೇ ಇದ್ದರೂ ಮುಖ್ಯಮಂತ್ರಿ ಹಾಗೂ ಪಕ್ಷದ ಅಧ್ಯಕ್ಷರನ್ನು ಖುದ್ದು ಭೇಟಿಯಾಗಿ ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ಸ್ವಪಕ್ಷೀಯ ಶಾಸಕರೇ ಈ ರೀತಿ ಸರ್ಕಾರದ ವಿರುದ್ಧ ಆರೋಪ, ಅಸಮಾಧಾನ ಹೊರಹಾಕಿದರೆ ಕಾರ್ಯಕರ್ತರಿಗೆ, ಜನತೆಗೆ ತಪ್ಪು ಸಂದೇಶ ಹೋಗುತ್ತದೆ. ಜತೆಗೆ ಪ್ರತಿಪಕ್ಷಗಳು ಇದನ್ನು ಉಪಯೋಗಿಸಿಕೊಂಡು ಸರ್ಕಾರದ ವಿರುದ್ಧ ಟೀಕೆ, ಮುಗಿಬೀಳಲು ದಾರಿಯಾಗುತ್ತದೆ. ಶಾಸಕರ ಇಂಥ ನಡೆ ಸಹಿಸಲು ಸಾಧ್ಯವಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಕೂಡಲೇ ಸಂಬಂಧಿಸಿದ ಎಲ್ಲ ಶಾಸಕರನ್ನು ಕರೆಸಿ ಬಾಯಿಗೆ ಬೀಗ ಹಾಕಿಕೊಂಡು ಇರುವಂತೆ ಸೂಚನೆ ನೀಡಿ ಎಂದು ತಿಳಿಸಿದ್ದಾರೆ.

ಆದರೆ ಇಷ್ಟು ಖಡಕ್‌ ಸೂಚನೆ ಬಳಿಕವೂ ಸಿಡಿದೆದ್ದಿದ್ದ ಶಾಸಕರು ಸುಮ್ಮನಾಗುತ್ತಾರಾ ಎಂಬುದೇ ಪ್ರಶ್ನೆ.

ಸುರ್ಜೇವಾಲ ಜತೆ ಸಿಎಂ ಭೇಟಿ:

ದೆಹಲಿ ಪ್ರವಾಸದಲ್ಲಿರುವ ಸಿದ್ದರಾಮಯ್ಯ ಮಂಗಳವಾರ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರನ್ನು ಭೇಟಿ ಮಾಡಿ ಕೆಲ ಕಾಲ ಮಾತನಾಡಿದರು. ಈ ವೇಳೆ, ಆಳಂದ ಶಾಸಕ ಬಿ.ಆರ್‌.ಪಾಟೀಲ್‌ ಅವರು ವಸತಿ ಇಲಾಖೆ ವಿರುದ್ಧ ಮಾಡಿರುವ ಮನೆಗಳ ಮಂಜೂರಾತಿಗೆ ಲಂಚದ ಆರೋಪ, ಕಾಗವಾಡ ಶಾಸಕ ರಾಜು ಕಾಗೆ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಸಿಗುತ್ತಿಲ್ಲ ಎಂದು ರಾಜೀನಾಮೆ ಬೆದರಿಕೆ ಹಾಕಿರುವುದು, ರಸ್ತೆ, ಚರಂಡಿ ನಿರ್ಮಾಣಕ್ಕೂ ಹಣ ಸಿಗುತ್ತಿಲ್ಲ ಎಂಬ ಮೊಳಕಾಲ್ಮೂರು ಶಾಸಕ ಎನ್‌.ವೈ ಗೋಪಾಲ ಕೃಷ್ಣ ಅವರ ಹೇಳಿಕೆ ಸೇರಿ ಶಾಸಕರ ಅಸಮಾಧಾನ, ಸಚಿವರ ಕಾರ್ಯವೈಖರಿ ವಿರುದ್ಧ ಈ ಹಿಂದೆ ಕೆಲ ಶಾಸಕರು ಬರೆದಿದ್ದ ಪತ್ರ, ಆರೋಪದ ವಿಚಾರಗಳ ಬಗ್ಗೆ ಸುರ್ಜೇವಾಲ ಅವರಿಗೆ ಮಾಹಿತಿ ನೀಡಲಾಗಿದೆ.

ಇದಕ್ಕೆ ಸುರ್ಜೇವಾಲ ಅವರು ಎಲ್ಲ ಅಸಮಾಧಾನಿತ ಶಾಸಕರನ್ನು ಕರೆಸಿ ಬುದ್ದಿ ಹೇಳಿ. ಸರ್ಕಾರ ಉತ್ತಮವಾಗಿ ನಡೆಯುತ್ತಿದೆ. ಜನಪ್ರಿಯ ಗ್ಯಾರಂಟಿ ಯೋಜನೆಗಳ ಜಾರಿ ಸೇರಿ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಿಕೊಂಡು ಸಾಗುತ್ತಿದೆ. ಬರುವ ದಿನಗಳಲ್ಲಿ ಎಲ್ಲ ಶಾಸಕರ ಕ್ಷೇತ್ರಗಳಿಗೂ ಅನುದಾನ ದೊರೆಯಲಿದೆ ಎಂದು ತಿಳಿಸಿ, ಯಾವುದೇ ಕಾರಣಕ್ಕೂ ಮತ್ತೆ ಸರ್ಕಾರದ ವಿರುದ್ಧವಾಗಲಿ, ಪಕ್ಷದ ವಿರುದ್ಧವಾಗಲಿ ಅಸಮಾಧಾನ, ಆರೋಪಗಳನ್ನು ಮಾಡದಂತೆ ಸ್ಪಷ್ಟ ಸೂಚನೆ ನೀಡುವಂತೆ ಹೇಳಿದರು ಎಂದು ಮೂಲಗಳು ತಿಳಿಸಿವೆ.

ನಮ್ಮದು ಗಂಡ-ಹೆಂಡಿರ ಜಗಳ

ಸರ್ಕಾರ ಹಾಗೂ ನಮ್ಮ ನಡುವಿನದು ಗಂಡ-ಹೆಂಡತಿ ಜಗಳ ಇದ್ದಂತೆ. ಸಂಸಾರ ಅಂದಮೇಲೆ ಗಂಡ-ಹೆಂಡತಿ ಜಗಳ ಇದ್ದೇ ಇರುತ್ತದೆ. ವಸತಿ ಇಲಾಖೆಯ ಭ್ರಷ್ಟಾಚಾರದ ಕುರಿತು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರ ಬಳಿ ಜೂ.25ರಂದು ಬೆಂಗಳೂರಿನಲ್ಲಿ ಮಾತನಾಡುವೆ.\B

ಬಿ.ಆರ್. ಪಾಟೀಲ, ಕಾಂಗ್ರೆಸ್‌ ಶಾಸಕ 

‘ಬುದ್ಧಿ’ ಹೇಳಲು ಖುದ್ದು ಜು.13ಕ್ಕೆ ರಾಜ್ಯಕ್ಕೆ ಸುರ್ಜೇವಾಲಾ ಭೇಟಿ

ಸರ್ಕಾರದ ವಿರುದ್ಧ ಸ್ವಪಕ್ಷೀಯ ಶಾಸಕರೇ ಅಸಮಾಧಾನ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಬುದ್ದಿ ಹೇಳಲು ಜು.13ಕ್ಕೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರೇ ಖುದ್ದು ರಾಜ್ಯಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಮುಖ್ಯಮಂತ್ರಿಯವರ ಭೇಟಿ ಸಂದರ್ಭದಲ್ಲೇ ಸುರ್ಜೇವಾಲ ಅವರು ಈ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ತಮ್ಮ ಭೇಟಿ ವೇಳೆ ಅಸಮಾಧಾನಿತ ಶಾಸಕರನ್ನು ಕರೆಸಿ ಮಾತನಾಡುವುದಾಗಿಯೂ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಎಂಎಲ್ಸಿ ಪಟ್ಟಿ ಶೀಘ್ರ ಅಂತಿಮಗೊಳಿಸಿ: ವರಿಷ್ಠರಿಗೆ ಸಿದ್ದು ಮನವಿ

ಮಂಗಳವಾರ ದಿಲ್ಲಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರನ್ನು ಭೇಟಿ ಮಾಡಿ ರಾಜ್ಯ ಕಾಂಗ್ರೆಸ್‌ ಆಗುಹೋಗುಗಳ ಚರ್ಚೆ ಮಾಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್