ಕರಾವಳಿಗೆ ಮತ್ತೆ ಟೆರರ್‌ ಅಲರ್ಟ್‌: ಟಿಫಿನ್‌ ಬಾಕ್ಸ್‌ ಬಾಂಬ್‌ ಸ್ಫೋಟ ಸಂಚಿನ ಆತಂಕ!

By Kannadaprabha NewsFirst Published Sep 19, 2021, 7:19 AM IST
Highlights

* ಟಿಫಿನ್‌ ಬಾಕ್ಸ್‌ ಬಾಂಬ್‌ ಸ್ಫೋಟ ಸಂಚಿನ ಆತಂಕ

* ದ.ಕ., ಉ.ಕ., ಉಡುಪಿ, ಮಲೆನಾಡಲ್ಲಿ ಕಟ್ಟೆಚ್ಚರ

* ಕೇಂದ್ರ ಗುಪ್ತಚರ ಇಲಾಖೆಯ ಸೂಚನೆ ರವಾನೆ

ಮಂಗಳೂರು(ಸೆ.19): ನಿಷೇಧಿತ ಸ್ಯಾಟಲೈಟ್‌ ಫೋನ್‌ ಕರೆ ಪತ್ತೆಯಾದ ಬೆನ್ನಲ್ಲೇ ಇದೀಗ ಕರಾವಳಿ ಹಾಗೂ ಮಲೆನಾಡಿನಲ್ಲಿ ಟಿಫಿನ್‌ ಬಾಕ್ಸ್‌ ಬಾಂಬ್‌ ಕುರಿತ ಆತಂಕ ಶುರುವಾಗಿದೆ. ಪಂಜಾಬ್‌ನಲ್ಲಿ ಟಿಫಿನ್‌ ಬಾಕ್ಸ್‌ ಕ್ಯಾರಿಯರ್‌ನಲ್ಲಿ ಬಾಂಬ್‌ ಇಟ್ಟು ಸ್ಫೋಟಿಸುವ ಸಂಚು ಬೆಳಕಿಗೆ ಬರುತ್ತಲೇ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಕಟ್ಟೆಚ್ಚರದಿಂದಿರುವಂತೆ ಕೇಂದ್ರ ಗುಪ್ತಚರ ಇಲಾಖೆ ಸೂಚನೆ ನೀಡಿದೆ.

"

ಪಂಜಾಬ್‌ನ ಅಮೃತಸರದಲ್ಲಿ ಆ.7ರಂದು ಟಿಫಿನ್‌ ಬಾಕ್ಸ್‌ ಕ್ಯಾರಿಯರ್‌ನಲ್ಲಿ 2 ಕೆ.ಜಿ. ಆರ್‌ಡಿಎಕ್ಸ್‌ ಸ್ಫೋಟಕಗಳು ಪತ್ತೆಯಾಗಿತ್ತು. ಟ್ಯಾಂಕರ್‌ನ ಅಡಿ ಇರಿಸಲಾದ ಟಿಫಿನ್‌ ಬಾಕ್ಸ್‌ ಅನ್ನು ಖಚಿತ ಮಾಹಿತಿ ಮೇರೆಗೆ ಪೊಲೀಸರು ಶೋಧ ನಡೆಸಿ ಪತ್ತೆಹಚ್ಚಿದ್ದರು. ಅದರಲ್ಲಿ ಬಾಂಬ್‌ ಜೊತೆಗೆ ಟೈಮರ್‌ ಅನ್ನೂ ಅಳವಡಿಸಲಾಗಿತ್ತು. ಪ್ರಕರಣದ ಬೆನ್ನತ್ತಿದ ದೆಹಲಿ ಸ್ಪೆಷಲ್‌ ಪೊಲೀಸ್‌ ಸೆಲ…, ಇದರ ಹಿಂದೆ ಉಗ್ರರ ನಂಟು ಪತ್ತೆ ಮಾಡಿತ್ತು. ನಂತರದ ಕಾರ್ಯಾಚರಣೆಯಲ್ಲಿ ಉತ್ತರ ಪ್ರದೇಶದ ಆ್ಯಂಟಿ ಟೆರರ್‌ ಸ್ವಾ್ಯಡ್‌ ಜೊತೆಗೂಡಿ ಮಹಾರಾಷ್ಟ್ರ, ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಅಡಗಿದ್ದ ಆರು ಮಂದಿ ಉಗ್ರರನ್ನು ಬಂಧಿಸಿದ್ದರು.

ಸ್ಫೋಟದ ಸಂಚು: ಬಂಧನಕ್ಕೊಳಗಾಗಿರುವ ಉಗ್ರರು ಭಾರತದ ಪ್ರಮುಖ ನಗರಗಳಲ್ಲಿ ಟಿಫಿನ್‌ ಬಾಕ್ಸ್‌ನಲ್ಲಿ ಬಾಂಬ್‌ ಇರಿಸಿ ಸ್ಫೋಟ ನಡೆಸಲು ಸಂಚು ಹೂಡಿರುವುದನ್ನು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ಬೆಂಗಳೂರು ಮತ್ತು ಮೈಸೂರಿನಲ್ಲಿ ಹೈ ಅಲರ್ಟ್‌ನಲ್ಲಿರುವಂತೆ ಪೊಲೀಸರಿಗೆ ಕೇಂದ್ರ ಗುಪ್ತಚರ ಇಲಾಖೆ ಸೂಚನೆ ನೀಡಿತ್ತು. ಇದರ ಬೆನ್ನಲ್ಲೇ ಇದೀಗ ಕೋಮುಸೂಕ್ಷ್ಮವಾದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವ ಸೂಚನೆ ಹೊರಬಿದ್ದಿದೆ.

ಅದರಲ್ಲೂ ಮುಖ್ಯವಾಗಿ ಕರಾವಳಿಯಲ್ಲಿ ಸಮುದ್ರ ಮಾರ್ಗದಲ್ಲಿ ಉಗ್ರರು ನುಸುಳುವ ಸಾಧ್ಯತೆ ಇರುವುದರಿಂದ ಪೊಲೀಸರು, ಕರಾವಳಿ ಕಾವಲು ಪಡೆ, ಕೋಸ್ಟ್‌ಗಾರ್ಡ್‌ ಸೇರಿ ಕರಾವಳಿಯ ಎಲ್ಲ ಭದ್ರತಾ ವಿಭಾಗವನ್ನು ಎಚ್ಚರದಲ್ಲಿರುವಂತೆ ನಿರ್ದೇಶನ ನೀಡಲಾಗಿದೆ. ಅಲ್ಲದೆ, ಟಿಫಿನ್‌ ಬಾಕ್ಸ್‌ ಬಾಂಬ್‌ ಸ್ಫೋಟದ ಶಂಕೆ ಹಿನ್ನೆಲೆಯಲ್ಲಿ ನಿಗಾ ವಹಿಸುವಂತೆ ಸೂಚಿಸಲಾಗಿದೆ.

ಕೆಲ ದಿನಗಳ ಹಿಂದೆಯಷ್ಟೇ ಕರಾವಳಿ ಮತ್ತು ಮಲೆನಾಡಿನಲ್ಲಿ ಉಗ್ರರು ನಿಷೇಧಿತ ಸ್ಯಾಟಲೈಟ್‌ ಫೋನ್‌ ಬಳಸಿದ ಕುರಿತು ಅನುಮಾನ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಈಗ ಟಿಫಿನ್‌ ಬಾಕ್ಸ್‌ನಲ್ಲಿ ಬಾಂಬ್‌ ಇರಿಸಿ ಭಾರೀ ವಿಧ್ವಂಸಕ ಕೃತ್ಯ ನಡೆಸುವ ಸಂಚಿನ ಶಂಕೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಯಾಕೆ ಅಲರ್ಟ್‌?

1. ಇತ್ತೀಚೆಗೆ ಕರಾವಳಿ ಜಿಲ್ಲೆಗಳಲ್ಲಿ ನಿಷೇಧಿತ ಸ್ಯಾಟಲೈಟ್‌ ಫೋನ್‌ ಕರೆಗಳಿಂದ ಆತಂಕ

2. ಕಳೆದ ತಿಂಗಳು ಪಂಜಾಬ್‌ನಲ್ಲಿ ಟಿಫಿನ್‌ ಬಾಕ್ಸ್‌ ಬಾಂಬ್‌ ಪತ್ತೆ, ಬಳಿಕ ಭಾರೀ ಬೇಟೆ

3. 3 ರಾಜ್ಯದಲ್ಲಿ 6 ಉಗ್ರರ ಸೆರೆ. ಟಿಫಿನ್‌ ಬಾಂಬ್‌ ಇಡುವ ಬಗ್ಗೆ ಬಾಯ್ಬಿಟ್ಟಬಂಧಿತರು

4. ಈ ಹಿನ್ನೆಲೆಯಲ್ಲಿ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ಗುಪ್ತಚರ ಇಲಾಖೆ ಎಚ್ಚರಿಕೆ

5. ಸಮುದ್ರ ಮಾರ್ಗವಾಗಿ ಉಗ್ರರು ನುಸುಳುವ ಸಾಧ್ಯತೆ: ಕಟ್ಟೆಚ್ಚರ ವಹಿಸಲು ಸೂಚನೆ

ಹಿಂದೂ ಹಬ್ಬ ಟಾರ್ಗೆಟ್‌?

ಮುಂದಿನ ದಿನಗಳಲ್ಲಿ ದಸರಾ, ದೀಪಾವಳಿ ಹೀಗೆ ಸಾಲು ಸಾಲು ಹಬ್ಬಗಳು ಬರುತ್ತಿವೆ. ಇದೇ ವೇಳೆ ಹೆಚ್ಚು ಜನಸಂದಣಿ ಪ್ರದೇಶಗಳನ್ನು ನೋಡಿಕೊಂಡು ಪ್ಲಾಸ್ಟಿಕ್‌ ಟಿಫಿನ್‌ ಬಾಕ್ಸ್‌ಗಳಲ್ಲಿ ಸ್ಫೋಟಕ ಇರಿಸಿ ಭಾರೀ ಜೀವಹಾನಿ ಮಾಡುವುದು ಉಗ್ರರ ಸಂಚು ಎಂದು ಹೇಳಲಾಗಿದೆ. ಪಾಕಿಸ್ತಾನದ ಐಎಸ್‌ಐ ಕುಮ್ಮಕ್ಕಿನಿಂದ ಈ ಕುರಿತು ರಹಸ್ಯ ಸಿದ್ಧತೆ ನಡೆಯುತ್ತಿದೆ ಎಂದು ಗುಪ್ತಚರ ವರದಿ ಹೇಳುತ್ತಿವೆ. ಈ ಹಿಂದೆ ಇಂಡಿಯನ್‌ ಮುಜಾಹಿದೀನ್‌ ಉಗ್ರ ಸಂಘಟನೆ ಟಿಫಿನ್‌ ಬಾಕ್ಸ್‌ ಮೂಲಕ ಬಾಂಬ್‌ ಸ್ಫೋಟ ತಂತ್ರಗಾರಿಕೆಯನ್ನು ಕೆಲ ಕಡೆ ಪ್ರಯೋಗ ಮಾಡಿತ್ತು.

click me!