ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದೆಹಲಿ ಭೇಟಿ ಕಾಂಗ್ರೆಸ್ ವಲಯದಲ್ಲಿ ಕುತೂಹಲ ಮೂಡಿಸಿದೆ. ವಿಧಾನ ಪರಿಷತ್ ಸ್ಥಾನಗಳು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಸಂಪುಟ ವಿಸ್ತರಣೆ ಮತ್ತು ಹನಿಟ್ರ್ಯಾಪ್ ಪ್ರಕರಣದ ಬಗ್ಗೆ ಹೈಕಮಾಂಡ್ ನಾಯಕರೊಂದಿಗೆ ಚರ್ಚಿಸುವ ಸಾಧ್ಯತೆ ಇದೆ.
ಬೆಂಗಳೂರು (ಏ.2): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕಮಾಂಡ್ ಭೇಟಿಗಾಗಿ ಬುಧವಾರದಿಂದ ನಡೆಸಲಿರುವ ಮೂರು ದಿನಗಳ ದೆಹಲಿ ಭೇಟಿ ಮೇಲೆ ಇಡೀ ಕಾಂಗ್ರೆಸ್ ರಾಜಕೀಯ ವಲಯದ ದೃಷ್ಟಿ ನೆಟ್ಟಿದೆ.
ಕರ್ನಾಟಕ ಭವನ ಉದ್ಘಾಟನೆ ನೆಪದಲ್ಲಿ ದೆಹಲಿ ಭೇಟಿ ನಡೆಯುತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಾರಿ ವರಿಷ್ಠ ರಾಹುಲ್ ಗಾಂಧಿ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಲಿದ್ದಾರೆ. ಇದರ ಜತೆಗೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿ ಹೈಕಮಾಂಡ್ ವರಿಷ್ಠರನ್ನು ಭೇಟಿ ಮಾಡಲಿರುವ ಕಾರಣಕ್ಕೆ ಕಾಂಗ್ರೆಸ್ ವಲಯದಲ್ಲಿ ಈ ಭೇಟಿ ಮಹತ್ವ ಪಡೆದಿದೆ.
ಇದಕ್ಕೆ ಮುಖ್ಯ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಲ್ಕು ಪ್ರಮುಖ ವಿಚಾರಗಳನ್ನು ಹೈಕಮಾಂಡ್ ನಾಯಕರೊಂದಿಗೆ ಚರ್ಚಿಸುವ ಅಜೆಂಡಾ ಇಟ್ಟುಕೊಂಡು ದೆಹಲಿಗೆ ತೆರಳುತ್ತಿರುವುದು.
1. ವಿಧಾನಪರಿಷತ್ತಿನ ಖಾಲಿ ಇರುವ ನಾಲ್ಕು ಸ್ಥಾನಗಳ ಭರ್ತಿ
2. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸುವುದು
3. ಸಚಿವ ಸಂಪುಟ ವಿಚಾರ
4. ಹನಿಟ್ರ್ಯಾಪ್ ಘಟನೆ ಹಾಗೂ ನಂತರದ ಬೆಳವಣಿಗೆಗಳ ಬಗ್ಗೆ ಹೈಕಮಾಂಡ್‌ಗೆ ಮಾಹಿತಿ ನೀಡುವುದು.
ವಿಧಾನಪರಿಷತ್ತಿನ ಖಾಲಿ ಇರುವ ನಾಲ್ಕು ಸ್ಥಾನಗಳಿಗೆ ನಲ್ವತ್ತಕ್ಕೂ ಹೆಚ್ಚು ಮಂದಿ ಪೈಪೋಟಿ ನಡೆಸಿದ್ದಾರೆ. ಒಕ್ಕಲಿಗ, ಹಿಂದುಳಿದ, ಪರಿಶಿಷ್ಟ (ಬಲಗೈ) ಹಾಗೂ ಬ್ರಾಹ್ಮಣ ಸಮುದಾಯದ ಶಾಸಕರಿಂದ ತೆರವಾಗಿರುವ ಈ ಸ್ಥಾನಗಳಿಗೆ ಬಹುತೇಕ ಅದೇ ಸಮುದಾಯಕ್ಕೆ ನೀಡುವುದು ಸಂಪ್ರದಾಯ. ಆದರೆ, ಈ ಬಾರಿ ಬ್ರಾಹ್ಮಣ ಸಮುದಾಯಕ್ಕೆ ಈ ಸ್ಥಾನ ತಪ್ಪುವ ಸಾಧ್ಯತೆಯಿದೆ. ಉಳಿದಂತೆ ಒಕ್ಕಲಿಗ, ಹಿಂದುಳಿದ, ಪರಿಶಿಷ್ಟರಿಂದ ಯಾರಿಗೆ ಅವಕಾಶ ನೀಡಬೇಕು ಎಂಬ ಬಗ್ಗೆ ಮುಖ್ಯಮಂತ್ರಿ ಹೈಕಮಾಂಡ್ ನಾಯಕರ ಜತೆ ಚರ್ಚೆ ನಡೆಸಲಿದ್ದಾರೆ.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ:
ರಾಜ್ಯದ ಕೆಲ ಸಚಿವರು ಆಗಾಗ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವನ್ನು ಪ್ರಸ್ತಾಪಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧ್ಯಕ್ಷರ ಬದಲಾವಣೆ ವಿಚಾರ ಬಗ್ಗೆ ತಮ್ಮ ನಿಲುವನ್ನು ಈ ಬಾರಿ ಹೈಕಮಾಂಡ್‌ಗೆ ನೇರವಾಗಿ ತಿಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಅಲ್ಲದೆ, ಒಂದು ವೇಳೆ ಹೈಕಮಾಂಡ್ ಅಧ್ಯಕ್ಷರ ಬದಲಾವಣೆ ಮಾಡಿದರೆ ಆ ಸ್ಥಾನಗಳಿಗೆ ತಮ್ಮ ಆಯ್ಕೆಯನ್ನು ತಿಳಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಲಿಂಗಾಯತ ಅಥವಾ ನಾಯಕ ಸಮುದಾಯಕ್ಕೆ ಈ ಸ್ಥಾನ ಈ ಬಾರಿ ದೊರೆಯಲಿ ಎಂಬ ಇಂಗಿತವನ್ನು ಅವರು ಹೊಂದಿದ್ದು, ಲಿಂಗಾಯತ ಸಮುದಾಯದಿಂದ ಈಶ್ವರ ಖಂಡ್ರೆ ಹಾಗೂ ನಾಯಕ ಸಮುದಾಯದಿಂದ ಸತೀಶ್ ಜಾರಕಿಹೊಳಿ ಅವರ ಹೆಸರು ಸೂಚಿಸಬಹುದು ಎನ್ನಲಾಗುತ್ತಿದೆ.
ಆದರೆ, ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಈಗಲೇ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಯುವ ಉಮೇದು ಇದ್ದಂತಿಲ್ಲ. ಏಕೆಂದರೆ, ಕೆಲ ಸಚಿವರು ಅಧ್ಯಕ್ಷ ಬದಲಾವಣೆ ಬಗ್ಗೆ ಬಹಿರಂಗ ಹೇಳಿಕೆ ನೀಡುತ್ತಿದ್ದ ಸಂದರ್ಭದಲ್ಲಿ ಹೈಕಮಾಂಡ್ ಸಂಪರ್ಕಿಸಿದ್ದ ಶಿವಕುಮಾರ್ ಅವರು, ಜಿಪಂ ಹಾಗೂ ತಾಪಂ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿ ನಂತರ ಅಧಿಕಾರ ತ್ಯಜಿಸುವುದಾಗಿ ಹೇಳಿದ್ದಾರೆ ಎನ್ನಲಾಗುತ್ತಿದೆ.
ಅಂದರೆ, ಡಿ.ಕೆ.ಶಿವಕುಮಾರ್ ಅವರು ಮುಂದಿನ ಅಕ್ಟೋಬರ್‌ವರೆಗೂ ಹುದ್ದೆಯಲ್ಲಿ ಮುಂದುವರೆಯುವ ಇಂಗಿತವಿದೆ. ಇನ್ನು ಈ ಹುದ್ದೆಯ ಆಕಾಂಕ್ಷಿಗಳ ಪಟ್ಟಿಯಲ್ಲಿರುವ ಸತೀಶ್ ಜಾರಕಿಹೊಳಿ ಹಾಗೂ ಈಶ್ವರ್ ಖಂಡ್ರೆ ಅವರು ಹುದ್ದೆಯ ಜತೆಗೆ ಸಚಿವ ಸ್ಥಾನವನ್ನು ಕನಿಷ್ಠ ಒಂದು ವರ್ಷದವರೆಗೆ ಮುಂದುವರೆಸಬೇಕು ಎಂಬ ಕೋರಿಕೆ ಮುಂದಿಟ್ಟಿದ್ದಾರೆ ಎನ್ನಲಾಗುತ್ತಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರದಲ್ಲಿ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕು.
ಸಚಿವ ಸಂಪುಟ ಪುನಾರಚನೆ ವಿಳಂಬ:
ವಾಸ್ತವವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಾಲ್ಮೀಕಿ ಹಗರಣದಿಂದಾಗಿ ಖಾತೆ ಕಳೆದುಕೊಂಡಿದ್ದ ಬಳ್ಳಾರಿಯ ನಾಗೇಂದ್ರ ಅವರೊಬ್ಬರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳುವ ಉದ್ದೇಶವಿತ್ತು. ಈ ಬಗ್ಗೆ ಹಿಂದೆ ಹೈಕಮಾಂಡ್ ಜತೆ ಚರ್ಚೆ ನಡೆಸಿದಾಗ ನಾಗೇಂದ್ರ ಒಬ್ಬರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದಕ್ಕಿಂತ ನಿರೀಕ್ಷಿತ ಸಾಧನೆ ತೋರದ ಕೆಲ ಸಚಿವರನ್ನು ಕೈಬಿಡುವ ಮೂಲಕ ಪುನಾರಚನೆ ಮಾಡಿ ಎಂದೇ ಸಲಹೆ ನೀಡಿತ್ತು.
ಆದರೆ, ಸರಿಯಾಗಿ ಕೆಲಸ ಮಾಡಿಲ್ಲ ಎಂದು ಸಚಿವರನ್ನು ಸಂಪುಟದಿಂದ ಕೈಬಿಡುವ ಮನಸ್ಥಿತಿ ಸಿದ್ದರಾಮಯ್ಯ ಅವರಿಗೆ ಇಲ್ಲ. ಬದಲಾಗಿ, ಎರಡು ವರ್ಷ ಪೂರ್ಣಗೊಂಡ ನಂತರ ಉಳಿದವರಿಗೂ ಅವಕಾಶ ನೀಡಬೇಕು ಎಂದು ಹೇಳಿ ಕೆಲ ಸಚಿವರನ್ನು ಸಂಪುಟದಿಂದ ಕೈ ಬಿಟ್ಟು ಹೊಸಬರಿಗೆ ಅವಕಾಶ ನೀಡುವ ಉದ್ದೇಶವಿದೆ. ಹೀಗಾಗಿ, ಈ ಬಾರಿ ಹೈಕಮಾಂಡ್ ಭೇಟಿ ವೇಳೆ ಸಚಿವ ಸಂಪುಟ ಬಗ್ಗೆ ಪ್ರಾಥಮಿಕ ಹಂತದ ಚರ್ಚೆ ನಡೆದರೂ ಸಂಪುಟ ಪುನಾರಚನೆ ನಡೆಯುವುದು ಮಾತ್ರ ಸರ್ಕಾರಕ್ಕೆ ಎರಡು ವರ್ಷ ತುಂಬಿದ ನಂತರವೇ ಎನ್ನುತ್ತವೆ ಉನ್ನತ ಮೂಲಗಳು.
ಹನಿಟ್ರ್ಯಾಪ್ ಘಟನೆ ಮಾಹಿತಿ:
ಸಚಿವ ಕೆ.ಎನ್. ರಾಜಣ್ಣ ಹನಿಟ್ರ್ಯಾಪ್ ವಿಚಾರ ಹೈಕಮಾಂಡ್ ಸೇರಿ ಕಾಂಗ್ರೆಸ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗಿದೆ. ಹನಿಟ್ರ್ಯಾಪ್ ನಂತಹ ಕೃತ್ಯದ ಹಿಂದೆ ಪಕ್ಷದ ನೇತಾರರೇ ಇದ್ದಾರೆ ಎಂಬ ಅನುಮಾನ ಹುಟ್ಟುವಂತಾಗಿದೆ. ಜತೆಗೆ, ಇಂತಹದೊಂದು ಗುಮಾನಿ ಹುಟ್ಟಬೇಕು ಎಂಬಂತೆಯೇ ನಡೆದುಕೊಂಡ ಸಚಿವ ಕೆ.ಎನ್.ರಾಜಣ್ಣ ಹಾಗೂ ಇತರ ಕೆಲ ಸಚಿವರು ಹೇಳಿಕೆಗಳನ್ನು ನೀಡಿದ್ದರು. ಜತೆಗೆ, ಈ ವಿಚಾರವನ್ನು ಸದನದಲ್ಲೇ ಪ್ರಸ್ತಾಪವಾಗುವಂತೆ ನೋಡಿಕೊಂಡ ರೀತಿಯ ಬಗ್ಗೆ ಹೈಕಮಾಂಡ್ ಮಟ್ಟದಲ್ಲೇ ಹಲವು ಗುಮಾನಿಗಳಿವೆ.
ಈ ಎಲ್ಲ ಹಿನ್ನೆಲೆಯಲ್ಲಿ ವರಿಷ್ಠರ ಭೇಟಿ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಇಡೀ ಘಟನೆಯ ಬಗ್ಗೆ ಹೈಕಮಾಂಡ್‌ಗೆ ಮಾಹಿತಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸಚಿವರ ದಂಡೇ ದೆಹಲಿಗೆ!
ಕುತೂಹಲಕಾರಿ ಸಂಗತಿಯೆಂದರೆ, ಮುಖ್ಯಮಂತ್ರಿಯವರ ಭೇಟಿ ಸಂದರ್ಭದಲ್ಲೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಎರಡು ದಿನಗಳ ಭೇಟಿಗಾಗಿ ದೆಹಲಿಗೆ ತೆರಳಲಿದ್ದಾರೆ. ಇದಿಷ್ಟೆ ಅಲ್ಲ, ಹನಿಟ್ರ್ಯಾಪ್ ಕುರಿತು ಸ್ಫೋಟಕ ಹೇಳಿಕೆ ನೀಡಿದ ಸಚಿವ ಕೆ.ಎನ್.ರಾಜಣ್ಣ, ಪಕ್ಷದೊಳಗೆ ವಿಪ್ಲವದ ಹೊಗೆ ಎದ್ದೇ ಇರುವಂತೆ ಮಾಡಲು ಸತತ ಪ್ರಯತ್ನ ಮಾಡುತ್ತಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಸಿದ್ದರಾಮಯ್ಯ ಅವರ ಆಪ್ತ ಸಚಿವ ಬೈರತಿ ಸುರೇಶ್ ಸೇರಿ ಸಚಿವರ ದೊಡ್ಡ ದಂಡೇ ದೆಹಲಿಗೆ ತೆರಳಲಿರುವುದು ಮುಂದಿನ ಮೂರು ದಿನಗಳ ಬೆಳವಣಿಗೆ ಬಗ್ಗೆ ತೀವ್ರ ಕುತೂಹಲ ಕೆರಳಿಸಿದೆ.