
ಬೆಂಗಳೂರು (ಮೇ.4) : ಇಲಾಖೆಗಳಿಗೆ ನಿಗದಿಪಡಿಸಿರುವ ತೆರಿಗೆ ಸಂಗ್ರಹ ಗುರಿಯಲ್ಲಿ ಒಂದು ರುಪಾಯಿಯೂ ಕಡಿಮೆ ಆಗಬಾರದು. ನಿಮಗೆ ಬೇಕಾದ ಅಗತ್ಯ ಸೌಕರ್ಯ ಒದಗಿಸಲಾಗುವುದು. ಆದರೆ, ತೆರಿಗೆ ಸಂಗ್ರಹ ವಿಷಯದಲ್ಲಿ ರಾಜಿಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ವಿಧಾನಸೌಧದ ಬ್ಯಾಂಕ್ವೆಂಟ್ ಹಾಲ್‌ನಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆರ್ಥಿಕ ಇಲಾಖೆ ಖರೀದಿಸಿರುವ ಹೊಸ ವಾಹನಗಳಿಗೆ ಚಾಲನೆ ಮತ್ತು ಅನುಕಂಪ ಆಧಾರಿತ ನೇಮಕಾತಿ ಆದೇಶ ಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.
ವಾಣಿಜ್ಯ ತೆರಿಗೆ ಇಲಾಖೆ, ಅಬಕಾರಿ ಇಲಾಖೆ ಸೇರಿ ಹಲವು ಇಲಾಖೆಗಳು ನಿಗದಿಪಡಿಸಿದ ತೆರಿಗೆ ಸಂಗ್ರಹ ಗುರಿ ಮುಟ್ಟಲೇಬೇಕು. ಯಾವುದೇ ನೆಪ ಹೇಳಬಾರದು. ತೆರಿಗೆ ಸಂಗ್ರಹದಲ್ಲಿ ಒಂದೇ ಒಂದು ರುಪಾಯಿ ಕಡಿಮೆ ಆಗಬಾರದು. ತೆರಿಗೆ ತಪ್ಪಿಸುವವರನ್ನು ಪತ್ತೆ ಹಚ್ಚಿ ವಸೂಲಿ ಮಾಡಿ. ನಿಮಗೆ ಬೇಕಾದ ಅಗತ್ಯ ಸಿಬ್ಬಂದಿ, ವಾಹನ ಮತ್ತಿತರ ಸೌಕರ್ಯ ಒದಗಿಸಲಾಗುವುದು. ತೆರಿಗೆ ಸಂಗ್ರಹ ವಿಷಯದಲ್ಲಿ ಮಾತ್ರ ರಾಜಿ ಆಗುವುದಿಲ್ಲ ಎಂದು ಸೂಚನೆ ನೀಡಿದರು.
ಇದನ್ನೂ ಓದಿ: ₹150 ಕೋಟಿ ಖರ್ಚು ಮಾಡಿದ ಜಾತಿ ಗಣತಿ ಗತಿ ಏನಾಯ್ತು? ಆರ್ ಅಶೋಕ್ ಪ್ರಶ್ನೆ!
ವಿನಾಕಾರಣ ಬಿಜೆಪಿ ಆರೋಪ:
ಗ್ಯಾರಂಟಿ ಯೋಜನೆಗಳಿಗೆ 50 ಸಾವಿರ ಕೋಟಿ ರು.ಗೂ ಅಧಿಕ ಹಣ ಬಜೆಟ್‌ನಲ್ಲಿ ಮೀಸಲಿಟ್ಟಿದ್ದೇವೆ. 83 ಸಾವಿರ ಕೋಟಿ ರು. ಬಂಡವಾಳ ವೆಚ್ಚಕ್ಕೆ ತೆಗೆದಿರಿಸಿದ್ದೇವೆ. ಕಳೆದ ವರ್ಷ 52 ಸಾವಿರ ಕೋಟಿ ರು. ಬಂಡವಾಳ ವೆಚ್ಚ ಮಾಡಿದ್ದರೆ, ಈ ವರ್ಷ ಅದಕ್ಕಿಂತ 31 ಸಾವಿರ ಕೋಟಿ ರು. ಅಧಿಕ ಬಂಡವಾಳ ವೆಚ್ಚ ಮಾಡಿದ್ದೇವೆ. ಆದರೂ ಬೊಕ್ಕಸದಲ್ಲಿ ಹಣ ಇಲ್ಲ ಎಂದು ಬಿಜೆಪಿ ಆರೋಪಿಸುತ್ತಿದೆ ಎಂದು ಟೀಕಿಸಿದರು.
ತೆರಿಗೆ ಸಂಗ್ರಹವಾಗದಿದ್ದರೆ ಅಭಿವೃದ್ಧಿ ಕುಂಠಿತವಾಗುತ್ತದೆ. 7ನೇ ವೇತನ ಆಯೋಗದ ಶಿಫಾರಸನ್ನು ನಾವು ಯಥಾವತ್ ಜಾರಿ ಮಾಡಿದ್ದೇವೆ. ಸರ್ಕಾರಿ ನೌಕರರಿಂದಲೂ ಇಷ್ಟೇ ಪ್ರಮಾಣದಲ್ಲಿ ಕರ್ತವ್ಯ ನಿರೀಕ್ಷಿಸುತ್ತೇವೆ. ನೀವು ಸಮರ್ಥವಾಗಿ ಕಾರ್ಯ ನಿರ್ವಹಿಸಿದರೆ ಪ್ರಣಾಳಿಕೆ, ಬಜೆಟ್‌ನಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಲು ಸಹಾಯಕವಾಗುತ್ತದೆ ಎಂದು ತಿಳಿಸಿದರು.
ಕೇಂದ್ರದಿಂದ ಅನ್ಯಾಯ:
ನಾವು ಕೇಂದ್ರ ಸರ್ಕಾರಕ್ಕೆ 4.5 ಲಕ್ಷ ಕೋಟಿ ರು. ತೆರಿಗೆ ನೀಡಿದರೆ ರಾಜ್ಯಕ್ಕೆ ವಾಪಸ್ ಬರುವುದು ಕೇವಲ 60 ಸಾವಿರ ಕೋಟಿ ರು. ಮಾತ್ರ. ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ಶೇ.50ರಷ್ಟು ತೆರಿಗೆ ರಾಜ್ಯಗಳಿಗೆ ವಾಪಸ್ ಕೊಡಬೇಕು ಎಂದು ಕೇಂದ್ರದ ಮೇಲೆ ಒತ್ತಡ ಹೇರಿದ್ದರು. ಈಗ ಇವರೇ ಪ್ರಧಾನಿ ಆಗಿದ್ದು ರಾಜ್ಯಗಳಿಗೆ ದೊಡ್ಡಮಟ್ಟದ ಅನ್ಯಾಯ ಮಾಡುತ್ತಿದ್ದಾರೆ. ಈ ಬಗ್ಗೆ ರಾಜ್ಯಗಳು ಧ್ವನಿ ಎತ್ತಬೇಕು ಎಂದು ಕರೆ ನೀಡಿದರು.
ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ್, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಶಾಸಕ ರಿಜ್ವಾನ್ ಹರ್ಷದ್ ಮತ್ತಿತರರು ಉಪಸ್ಥಿತರಿದ್ದರು.
5 ವರ್ಷ ಸಿದ್ದರಾಮಯ್ಯ ಸಿಎಂ: ರಾಯರೆಡ್ಡಿ
ಸಿದ್ದರಾಮಯ್ಯ ಅವರು ಆರ್ಥಿಕ ಚೌಕಟ್ಟು ಮೀರದೆ ಉತ್ತಮ ಆಡಳಿತ ನೀಡುತ್ತಿದ್ದು, ಮುಖ್ಯಮಂತ್ರಿಯಾಗಿ 5 ವರ್ಷ ಪೂರೈಸಲಿದ್ದಾರೆ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಆನೇಕಲ್: ಡಿಸಿಎಂ ಮಹತ್ವದ ಘೋಷಣೆ, ಮೆಟ್ರೋ ವಿಸ್ತರಣೆಗೆ ಡಿಪಿಆರ್ ಸಿದ್ಧತೆ!
ಉತ್ತಮ ಸರ್ಕಾರ ಎಂದು ಕರ್ನಾಟಕವು ರಾಷ್ಟ್ರಮಟ್ಟದಲ್ಲಿ ಎರಡನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಹಿಂದಿನ ಸರ್ಕಾರ ಮಾಡಿದ್ದ ಆರ್ಥಿಕ ತಪ್ಪುಗಳನ್ನು ಸಿದ್ದರಾಮಯ್ಯ ಸರಿಪಡಿಸಿದ್ದಾರೆ. ಮುಂದಿನ ಮೂರು ವರ್ಷವೂ ಸಿದ್ದರಾಮಯ್ಯ ನಾಯಕತ್ವದಲ್ಲಿ ಪಾರದರ್ಶಕ ಆಡಳಿತ ನೀಡಲಾಗುವುದು. ಆರ್ಥಿಕ ಇಲಾಖೆಯಲ್ಲಿ ಪ್ರಾಮಾಣಿಕ ಅಧಿಕಾರಿಗಳಿದ್ದಾರೆ. ಆದರೆ ಕರ್ನಾಟಕದ ಬಗ್ಗೆ, ಗ್ಯಾರೆಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ