ಆಸ್ಪತ್ರೆಯಿಂದಲೇ ಸಿಎಂ ಬಿಎಸ್‌ವೈ ಕೆಲಸ| ಕಡತ ಪರಿಶೀಲನೆ, ಅಧಿಕಾರಿಗಳ ಜತೆ ಮಾತುಕತೆ| 3ನೇ ದಿನವೂ ಯಡಿಯೂರಪ್ಪಗೆ ಸೋಂಕಿನ ಲಕ್ಷಣಗಳಿಲ್ಲ
ಬೆಂಗಳೂರು(ಆ.05): ಕೊರೋನಾ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಗಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆರೋಗ್ಯ ಸ್ಥಿರವಾಗಿದ್ದು, ಆಸ್ಪತ್ರೆಯಿಂದಲೇ ಆಡಳಿತದ ಕೆಲಸಗಳನ್ನು ನಿಭಾಯಿಸುತ್ತಿದ್ದಾರೆ.
ಚಿಕಿತ್ಸೆಗೆ ಯಡಿಯೂರಪ್ಪ ಅವರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಆರೋಗ್ಯವು ಸ್ಥಿರವಾಗಿದ್ದು, ಕ್ರಿಯಾಶೀಲರಾಗಿದ್ದಾರೆ. ಆಸ್ಪತ್ರೆಯ ವೈದ್ಯರು ಯಡಿಯೂರಪ್ಪ ಅವರ ಆರೋಗ್ಯದ ಮೇಲೆ ನಿಗಾವಹಿಸುತ್ತಿದ್ದಾರೆ. ಇನ್ನು ಕೆಲ ದಿನ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗುವುದು. ತಜ್ಞರ ತಂಡವು ಅವರಿಗೆ ಚಿಕಿತ್ಸೆ ನೀಡುತ್ತಿದೆ ಎಂದು ಮಣಿಪಾಲ್ ಆಸ್ಪತ್ರೆಯ ವೈದ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿಹಿ ಸುದ್ದಿ: ರಾಜ್ಯದಲ್ಲಿ ಮತ್ತೆ ಪಾಸಿಟಿವ್‌ಗಿಂತ ಗುಣಮುಖ ಸಂಖ್ಯೆ ಹೆಚ್ಚಳ!
ಆಸ್ಪತ್ರೆಯಲ್ಲೂ ಕಡತ ಪರಿಶೀಲನೆ: ಭಾನುವಾರ ರಾತ್ರಿ 11 ಗಂಟೆ ವೇಳೆಗೆ ಯಡಿಯೂರಪ್ಪ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಮೂರನೇ ದಿನವಾದ ಮಂಗಳವಾರವೂ ಅವರು ಆರೋಗ್ಯವಾಗಿದ್ದು, ಲವಲವಿಕೆಯಿಂದ ಇದ್ದಾರೆ. ಕೊರೋನಾ ಸೋಂಕಿನ ಯಾವುದೇ ಲಕ್ಷಣಗಳೂ ಅವರಲ್ಲಿ ಕಂಡು ಬಂದಿರಲಿಲ್ಲ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಮುಖ್ಯಮಂತ್ರಿಗಳು ಕರ್ತವ್ಯ ನಿಭಾಯಿಸುವಲ್ಲಿ ನಿರತರಾಗಿದ್ದಾರೆ. ತುರ್ತಾಗಿ ವಿಲೇವಾರಿ ಆಗಬೇಕಾದಂಥ ಕಡತಗಳನ್ನು ತರಿಸಿಕೊಂಡು ಪರಿಶೀಲನೆ ನಡೆಸಿದರು. ಕೆಲವು ಕಡತಗಳಿಗೆ ಸಹಿ ಹಾಕಿ ತಮ್ಮ ಕೆಲಸವನ್ನು ನಿರ್ವಹಿಸಿದರು. ಈ ಮೂಲಕ ಆಸ್ಪತ್ರೆಯಲ್ಲಿ ಸುಮ್ಮನೆ ಇರದೆ ಅಲ್ಲಿಯೂ ಕರ್ತವ್ಯ ಪ್ರಜ್ಞೆ ಮೆರೆದರು. ಕಡತಗಳನ್ನು ಪರಿಶೀಲನೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ.
ಆಸ್ಪತ್ರೆಯಿಂದಲೇ ಬಿಎಸ್‌ವೈ ರಾಜ್ಯದ ಜನತೆಗೆ ವಿಶೇಷ ಮನವಿ
ಬೆಳಗ್ಗೆ ಎಂದಿನಂತೆ ಎಲ್ಲ ಪತ್ರಿಕೆಗಳನ್ನೂ ತಿರುವಿ ಹಾಕಿದ ಅವರು ನಂತರ ಸರ್ಕಾರದ ಮುಖ್ಯ ಕಾರ್ಯದರ್ಶಿಗಳೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿ ಪ್ರಮುಖ ಬೆಳವಣಿಗೆಗಳ ಮಾಹಿತಿ ಪಡೆದುಕೊಂಡು ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ಬಳಿಕ ಅಧಿಕಾರಿಗಳ ಜತೆ ದೂರವಾಣಿ ಮೂಲಕ ವೆಂಟಿಲೇಟರ್ ಹಾಸಿಗೆಗಳನ್ನು ಹೆಚ್ಚಿಸುವ ಸಂಬಂಧ ಸಭೆ ನಡೆಸಿದರು.