ಕೊರೋನಾ ಸಾವಿನ ನಿಖರ ಕಾರಣ ತಿಳಿಯಲು ಸಮಿತಿ ರಚನೆ: ಡಿಸಿಎಂ ಅಶ್ವತ್ಥನಾರಾಯಣ

By Kannadaprabha NewsFirst Published Aug 5, 2020, 7:10 AM IST
Highlights

ಕೊರೋನಾ ಸಾವಿನ ಕುರಿತು ಸಮಿತಿ ಅಧ್ಯಯನ: ಡಿಸಿಎಂ|ಯಾವ ಆಸ್ಪತ್ರೆಯಲ್ಲಿ ಕೋವಿಡ್‌ ಚಿಕಿತ್ಸೆಗೆ ಎಷ್ಟುಹಾಸಿಗೆ ಮೀಸಲಿವೆ ಅದರಲ್ಲಿ ಎಷ್ಟು ಭರ್ತಿಯಾಗಿವೆ, ಎಷ್ಟುಖಾಲಿ ಇವೆ? ಎಂಬ ರಿಯಲ್‌ ಟೈಮ್‌ ಮಾಹಿತಿ ವೆಬ್‌ಸೈಟ್‌ನಲ್ಲಿ ನಿಗದಿತ ಗಂಟೆಗಳಿಗೊಮ್ಮೆ ಅಪ್‌ಡೇಟ್‌ ಆಗುತ್ತಿರಬೇಕು| ಈ ಮಾಹಿತಿ ಸಾರ್ವಜನಿಕರಿಗೂ ಆನ್‌ಲೈನ್‌ನಲ್ಲಿ ಲಭ್ಯವಾಗುತ್ತಿರಬೇಕು ಎಂದು ತಿಳಿಸಿದ ಸಚಿವರು|

ಬೆಂಗಳೂರು(ಆ.05): ನಗರದಲ್ಲಿ ಕೋವಿಡ್‌ನಿಂದ ಸಾವಿನ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ನಿಖರ ಕಾರಣಗಳನ್ನು ತಿಳಿಯಲು ಉನ್ನತ ಮಟ್ಟದ ಅಧಿಕಾರಿಗಳ ಪ್ರತ್ಯೇಕ ಸಮಿತಿ ರಚಿಸಲು ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

ಕೋವಿಡ್‌ ಸಂಬಂಧ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್‌ ಹಾಗೂ ಇತರೆ ಅಧಿಕಾರಿಗಳೊಂದಿಗೆ ಮಂಗಳವಾರ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಸಾವಿನ ಪ್ರಕರಣಗಳು ಹೆಚ್ಚಾಗಲು ನಿಖರ ಕಾರಣಗಳನ್ನು ತಿಳಿಯಲು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಪ್ರತ್ಯೇಕ ಸಮಿತಿ ರಚಿಸಬೇಕು. ಆ ಸಮಿತಿಯು ಕೋವಿಡ್‌ ಚಿಕಿತ್ಸೆ ತಡವಾಗಿ ಸಾವು ಹೆಚ್ಚಾಗುತ್ತಿದೆಯಾ, ಆಸ್ಪತ್ರೆಗಳ ಬೆಡ್‌ ಕೊರತೆ ಅಥವಾ ವಿಳಂಬವಾಗುತ್ತಿದೆಯಾ ಅಥವಾ ಚಿಕಿತ್ಸಾ ವಿಧಾನದಲ್ಲಿ ಏನಾದರೂ ಲೋಪಗಳಾಗುತ್ತಿವೆಯಾ ಎಂಬುದು ಸೇರಿದಂತೆ ಬೇರೆ ಬೇರೆ ಕಾರಣಗಳೇನು ಎಂಬುದನ್ನು ಅಧ್ಯಯನ ಮಾಡಿ ವರದಿ ಕೊಡಬೇಕು. ಇದಕ್ಕಾಗಿ ಸಮಿತಿ ಸದಸ್ಯರು ಸರ್ಕಾರಿ ಹಾಗೂ ಖಾಸಗಿ ಎರಡೂ ರೀತಿಯ ಆಸ್ಪತ್ರೆಗಳಲ್ಲಿನ ದಾಖಲಾತಿ, ಚಿಕಿತ್ಸಾ ವಿಧಾನಗಳನ್ನು ನಿರಂತರವಾಗಿ ಪರಿಶೀಲಿಸಬೇಕು. ಆ ವರದಿ ಆಧರಿಸಿ ಯಾವುದೇ ರೀತಿಯ ಲೋಪಗಳಾಗುತ್ತಿದ್ದರೆ ಸರಿಪಡಿಸಿಕೊಂಡು ಸಾವಿನ ಪ್ರಮಾಣ ಕಡಿಮೆ ಮಾಡಲು ಕ್ರಮ ವಹಿಸುವಂತೆ ಬಿಬಿಎಂಪಿ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಮತ್ತೋರ್ವ ಕೇಂದ್ರ ಸಚಿವರೊಬ್ಬರಿಗೆ ಕೊರೋನಾ: ಶಾ ಚಿಕಿತ್ಸೆ ಪಡೆಯುತ್ತಿರೋ ಆಸ್ಪತ್ರೆಗೆ ದಾಖಲು

ರಿಯಲ್‌ ಟೈಮ್‌ ಅಪ್‌ಡೇಟ್‌:

ಯಾವ ಆಸ್ಪತ್ರೆಯಲ್ಲಿ ಕೋವಿಡ್‌ ಚಿಕಿತ್ಸೆಗೆ ಎಷ್ಟುಹಾಸಿಗೆ ಮೀಸಲಿವೆ ಅದರಲ್ಲಿ ಎಷ್ಟು ಭರ್ತಿಯಾಗಿವೆ, ಎಷ್ಟುಖಾಲಿ ಇವೆ? ಎಂಬ ರಿಯಲ್‌ ಟೈಮ್‌ ಮಾಹಿತಿ ವೆಬ್‌ಸೈಟ್‌ನಲ್ಲಿ ನಿಗದಿತ ಗಂಟೆಗಳಿಗೊಮ್ಮೆ ಅಪ್‌ಡೇಟ್‌ ಆಗುತ್ತಿರಬೇಕು. ಈ ಮಾಹಿತಿ ಸಾರ್ವಜನಿಕರಿಗೂ ಆನ್‌ಲೈನ್‌ನಲ್ಲಿ ಲಭ್ಯವಾಗುತ್ತಿರಬೇಕು ಎಂದಿದ್ದಾರೆ.

click me!