ಬೆಂಗಳೂರು(ಫೆ.20): ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯಿದೆ(Anti Conversion Bill) ಜಾರಿಗೆ ಮುಂದಾಗಿರುವುದರಿಂದ ರಾಜ್ಯದಲ್ಲಿ ಕ್ರಿಶ್ಚಿಯನ್(Christians) ಸಮುದಾಯ ಆತಂಕದಲ್ಲಿ ಜೀವನ ನಡೆಸುವಂತಾಗಿದೆ. ಕೆಲವು ಭಾಗಗಳಲ್ಲಿ ಕ್ರಿಶ್ಚಿಯನ್‌ರನ್ನು ಸಾಮಾಜಿಕವಾಗಿ ಬಹಿಷ್ಕರಿಸಲಾಗುತ್ತಿದೆ ಎಂದು ರಾಜ್ಯದ(Karnataka) ವಿವಿಧ ಭಾಗಗಳಲ್ಲಿ ವಾಸಿಸುವ ಕ್ರೈಸ್ತ ಸಮುದಾಯ ಕಳವಳ ವ್ಯಕ್ತಪಡಿಸಿದ್ದಾರೆ.
ಇದು ರಾಜ್ಯದಲ್ಲಿ ಕ್ರಿಶ್ಚಿಯನ್ ಸಮುದಾಯದವರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಕುರಿತಂತೆ ಸಂವಿಧಾನ ಸಂರಕ್ಷಣಾ ಚಳವಳಿ ಮತ್ತು ಪೀಪಲ್ ಯುನಿಯನ್ ಫಾರ್ ಸಿವಿಲ್ ಲಿಬಟ್ರ್ಸಿ(ಪಿಯುಸಿಎಲ್) ಸಂಘಟನೆ ನಗರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯದಲ್ಲಿ ಕ್ರಿಶ್ಚಿಯನ್ ಸಮುದಾಯದವರ ಮತಾಂತರ ಮಾಡುತ್ತಿದ್ದಾರೆಂದು ಸುಳ್ಳು ಅಪವಾದ ಮಾಡಲಾಗುತ್ತಿದೆ. ಇದೇ ಕಾರಣದಿಂದ ರಾಜ್ಯದ ಅನೇಕ ಕಡೆ ಕ್ರಿಶ್ಚಿಯನ್ ಸಮುದಾಯದವರ ವಿರುದ್ಧ ದಾಳಿಗಳು ಪ್ರಾರಂಭವಾಗಿವೆ ಎಂದು ಅವರು ಹೇಳಿದರು.
ಕುಣಿಗಲ್‌ನ ಕ್ರೈಸ್ತ ಧರ್ಮಗುರು ಮಾತನಾಡಿ, ನಮ್ಮ ಊರಿನಲ್ಲಿ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ನನಗೆ ಜೀವ ಬೆದರಿಕೆಯಿದೆ. ಈ ಸಂಬಂಧ ಸ್ಥಳೀಯ ಇಲಾಖೆಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದರು.
ಉಡುಪಿಯಿಂದ ಆಗಮಿಸಿದ್ದ ಮಹಿಳೆಯೊಬ್ಬರು ಮಾತನಾಡಿ, ನಮ್ಮ ವಿರುದ್ಧ ವಿನಾ ಕಾರಣ ದೂರುಗಳು ನೀಡುತ್ತಾರೆ. ಅದನ್ನು ಪರಿಶೀಲಿಸದೆ ಪೊಲೀಸರು ಕ್ರಮಕ್ಕೆ ಮುಂದಾಗುತ್ತಾರೆ. ಅಲ್ಲದೆ, ಮನೆಗೆ ಹೋಗುವ ದಾರಿಗೆ ಕಲ್ಲುಗಳನ್ನು ಅಡ್ಡಲಾಗಿ ಇಡುತ್ತಿದ್ದಾರೆ. ಮನೆ ಮುಂದೆ ನಿಲ್ಲಿಸುವ ವಾಹನಗಳನ್ನು ರಾತ್ರೋರಾತ್ರಿ ಪಂಕ್ಚರ್ ಮಾಡುವ ಮೂಲಕ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ತಿಳಿಸಿದರು.
Religious Conversion: ನಮ್ಮ ಧರ್ಮದವರು ಅನ್ಯಧರ್ಮಕ್ಕೆ ಹೋಗಲು ಬಿಡಬಾರದು: ನಿರ್ಮಲಾನಂದ ಶ್ರೀ
ವಕೀಲ ರಾಬಿನ್ ಎಂಬುವರು ಮಾತನಾಡಿ, ಕೆಲ ಭಾಗಗಳಲ್ಲಿ ಕ್ರಿಶ್ಚಿಯನ್ ಸಮುದಾಯದವರಿಗೆ ಬಹಿಷ್ಕಾರ ಹಾಕುತ್ತಿದ್ದಾರೆ. ಅಂಗಡಿಗಳಲ್ಲಿ ಸರಕುಗಳನ್ನು ನೀಡುತ್ತಿಲ್ಲ. ಗ್ರಾಮೀಣ ಭಾಗಗಳಲ್ಲಿ ಈ ಸಮುದಾಯದವರನ್ನು ಮಾತನಾಡುವುದಕ್ಕೂ ಜನತೆ ಹಿಂಜರಿಯುತ್ತಿದ್ದಾರೆ. ಕೆಲಸಕ್ಕೆ ಕರೆಯುತ್ತಿಲ್ಲ ಎಂದು ವಿವರಿಸಿದರು.
ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆ ಜಾರಿಗೆ ಮುಂದಾಗಿರುವ ಸರ್ಕಾರದ ಕ್ರಮ ಕ್ರಿಶ್ಚಿಯನ್ ಧರ್ಮದವರಿಗೆ ಕಿರುಕುಳ ನೀಡುವುದಾಗಿದೆ. ಇದು ಸಂವಿಧಾನ ಬಾಹಿರ ಕಾಯಿದೆಯಾಗಿದ್ದು ನ್ಯಾಯಾಲಯದ ಮೂಲಕ ಪ್ರಶ್ನಿಸುವ ಕುರಿತು ಸಭೆಯಲ್ಲಿ ನಿರ್ಧರಿಸಲಾಯಿತು.
ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕಾನಾಥ್, ಲೈಂಗಿಕ ಅಲ್ಪ ಸಂಖ್ಯಾತ ಸಮುದಾಯದ ಪ್ರತಿನಿಧಿ ಅಕ್ಕೈ ಪದ್ಮಶಾಲಿ, ವಕೀಲ ಅರವಿಂದ್ ನಾರಾಯಣ್ ಮತ್ತಿತರರು ಭಾಗಿಯಾಗಿದ್ದರು.
ಈ ಸಲವೇ ಮೇಲ್ಮನೇಲಿ ಮತಾಂತರ ವಿಧೇಯಕ ತರಲು ಕಟೀಲ್ ಸೂಚನೆ
ಬೆಂಗಳೂರು: ಪ್ರಸಕ್ತ ವಿಧಾನಮಂಡಲದ ಅಧಿವೇಶನದಲ್ಲಿ ವಿಧಾನಪರಿಷತ್ತಿನಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡಿಸಿ ಅಂಗೀಕರಿಸಲು ಬೇಕಾದ ಕ್ರಮ ಕೈಗೊಳ್ಳುವಂತೆ ಆಡಳಿತಾರೂಢ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಸೂಚನೆ ನೀಡಿದ್ದಾರೆ. ಸೋಮವಾರ ಪರಿಷತ್ ಸದಸ್ಯರ ಸಭೆ ನಡೆಸಿದ ಅವರು, ಬೆಳಗಾವಿ ಅಧಿವೇಶನದಲ್ಲಿ ಈ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರಗೊಂಡರೂ ಸಂಖ್ಯಾಬಲದ ಕೊರತೆಯಿಂದ ಪರಿಷತ್ತಿನಲ್ಲಿ ಸಾಧ್ಯವಾಗಲಿಲ್ಲ. ಈಗಲೂ ಬಹುಮತಕ್ಕೆ ಒಂದು ಮತ ಕಮ್ಮಿಯಿದೆ. ಅಗತ್ಯ ಬಿದ್ದರೆ ಪಕ್ಷೇತರ ಸದಸ್ಯ ಲಖನ್ ಜಾರಕಿಹೊಳಿ ಬೆಂಬಲ ಪಡೆದು ಮತಾಂತರ ನಿಷೇಧ ವಿಧೇಯಕ ಅಂಗೀಕಾರವಾಗುವಂತೆ ನೋಡಿಕೊಳ್ಳಬೇಕು ಎಂಬ ನಿರ್ದೇಶನ ನೀಡಿದರು ಎಂದು ಮೂಲಗಳು ತಿಳಿಸಿವೆ.
ಕರ್ನಾಟಕದಲ್ಲಿ ಮತಾಂತರ ಕಾಯ್ದೆ: ರಾಜ್ಯಸಭೆಯಲ್ಲಿ ಖರ್ಗೆ ಕಿಡಿ
ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಾದ ನಂತರ ಕ್ರಿಶ್ಚಿಯನ್ನರನ್ನು ಬಲಿಪಶು ಮಾಡಲಾಗುತ್ತಿದೆ ಎಂದು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ. ರಾಜ್ಯಸಭೆಯಲ್ಲಿ ಬುಧವಾರ ಮಾತನಾಡಿದ ಅವರು, ದೇಶದಲ್ಲಿ ಪರಿಶಿಷ್ಟಜಾರಿ, ಪರಿಶಿಷ್ಟಪಂಗಡ ಮತ್ತು ಕ್ರೈಸ್ತ ಧರ್ಮೀಯರ ವಿರುದ್ಧ ದಾಳಿಗಳು ನಡೆಯುತ್ತಿವೆ. 2015ರಿಂದ 2020ರ ವರೆಗೆ ಪರಿಶಿಷ್ಟಜಾತಿ ವಿರುದ್ಧದ ಅಪರಾಧಗಳು ಶೇ.30ರಷ್ಟುಏರಿಕೆಯಾಗಿವೆ. ಪರಿಶಿಷ್ಟಪಂಗಡದ ವಿರುದ್ಧದ ಅಪರಾಧ ಶೇ.26ರಷ್ಟುಏರಿಕೆಯಾಗಿದೆ. ಮತಾಂತರ ಮತ್ತಿತರ ನೆಪದಲ್ಲಿ ಕ್ರೈಸ್ತ ಧರ್ಮೀಯರ ವಿರುದ್ಧ 500ಕ್ಕೂ ದಾಳಿ ನಡೆದಿವೆ. ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಾದ ನಂತರ ಕ್ರಿಶ್ಚಿಯನ್ನರನ್ನು ಬಲಿಪಶು ಮಾಡಲಾಗುತ್ತಿದೆ. ಸರ್ಕಾರ ಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ್ ಎಂದು ಹೇಳುತ್ತಾ ಎಲ್ಲರನ್ನೂ ನಾಶ ಮಾಡುತ್ತಿದೆ ಎಂದು ಆರೋಪಿಸಿದರು.