ಜಾಗತಿಕವಾಗಿ ಸಿಗರೇಟ್ ಮತ್ತು ತಂಬಾಕು ಸೇವನೆಯಿಂದ ಅಕಾಲಿಕ ಮರಣ ಹೊಂದುತ್ತಿರುವವರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ. ತಂಬಾಕು ಮುಕ್ತ ಯುವ ಅಭಿಯಾನ 2.O ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ದುಶ್ಚಟಗಳಿಂದ ದೂರವಿರಲು ಪ್ರತಿಜ್ಞಾವಿಧಿ ಬೋಧಿಸಿದರು. ಮಳೆಯಿಂದಾಗಿ ಜಾಗೃತಿ ಜಾಥಾ ರದ್ದಾಯಿತು.
ಬೆಂಗಳೂರು (ಅ.15): ಜಾಗತಿಕವಾಗಿ ಸಿಗರೇಟ್ ಹಾಗೂ ತಂಬಾಕು ಸೇವನೆ ಮಾಡುವ ಶೇ.50 ಜನರು ವಯೋಸಹಜಕ್ಕಿಂತ ಮೊದಲೇ ಸಾವಿಗೀಡಾಗುತ್ತಿದ್ದಾರೆ. ಹೀಗಾಗಿ, ನಾನು ಮೊದಲು ಸಿಗರೇಟ್ ಸೇದುತ್ತಿದ್ದವನು, ಶಾಸಕನಾದ ನಂತರ ಸಿಗರೇಟ್ ಸೇದುವುದನ್ನು ಬಿಟ್ಟುಬಿಟ್ಟಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮಂಗಳವಾರ ನಡೆದ ತಂಬಾಕು ಮುಕ್ತ ಯುವ ಅಭಿಯಾನ 2.O ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಅವರು, ತಂಬಾಕು ಉತ್ಪನ್ನಗಳನ್ನು ಬಳಸುವುದಿಲ್ಲ ಎಂದು ಎಲ್ಲ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳು ಪ್ರತಿಜ್ಞಾವಿಧಿಯನ್ನ ಚಾಚು ತಪ್ಪದೆ ಪಾಲಿಸಬೇಕು. ತಂಬಾಕು ಸೇವನೆಯಿಂದ ವಾರ್ಷಿಕ 13.5 ಲಕ್ಷ ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (World Health Organization-WHO)ಯ ವರದಿಯಿಂದ ಬಹಿರಂಗವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಈಗ ಸೈಬರ್ ಕ್ರೈಂ ರಾಷ್ಟ್ರೀಯ ರಾಯಭಾರಿ! ಲೈವ್ನಲ್ಲಿ ಬಂದ ನಟಿ ಹೇಳಿದ್ದೇನು?
ಎಲ್ಲ ಶಾಲಾ, ಕಾಲೇಜುಗಳ ಮಕ್ಕಳು ಸಿಗರೇಟ್ ಹಾಗೂ ತಂಬಾಕು ಸೇವನೆಯಿಂದ ದೂರ ಇರಬೇಕು. ತಂಬಾಕು ಸೇವನೆಯಿಂದ ಬರುವ ಕ್ಯಾನ್ಸರ್ ಎನ್ನುವುದು ಮಾರಕವಾದ ರೋಗವಾಗಿದೆ. ಇನ್ನು ಜಾಗತಿಕ ಮಟ್ಟದಲ್ಲಿ ತಂಬಾಕು ಸೇವಿಸುವ ಶೇ.50 ಜನ ವಯಸ್ಸಾಗುವ ಮುನ್ನವೇ ಯೌವ್ವನಾವಸ್ಥೆಯಲ್ಲಿಯೇ ಸಾವನ್ನಪ್ಪುತ್ತಿದ್ದಾರೆ. ಇನ್ನು ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಡ್ರಗ್ಸ್‌ಗೆ ಬಲಿಯಾಗಬೇಡಿ. ಮೈಸೂರು, ಹುಬ್ಬಳ್ಳಿ, ಬೆಂಗಳೂರು ಡ್ರಗ್ಸ್ ಹಾವಳಿ ಹೆಚ್ಚಾಗಿದೆ. ಡ್ರಗ್ಸ್ ಮಾರಾಟ ತಡೆಯಲು ಕಾನೂನು ತಿದ್ದುಪಡಿ ತರಲು ಗೃಹ ಇಲಾಖೆಗೆ ಈ ಬಗ್ಗೆ ಸೂಚನೆ ಕೊಟ್ಟಿದ್ದೇನೆ ಎಂದು ಮಾಹಿತಿ ನೀಡಿದರು.
ಇನ್ನು ಡ್ರಗ್ಸ್ ಸೇವನೆ ತಡೆಗಟ್ಟಲು ಹಾಗೂ ಡ್ರಗ್ಸ್ ಜಾಲವನ್ನು ಬೇಧಿಸಲು ಕಾನೂನು ತಿದ್ದುಪಡಿ ತರುವುದೊಂದೇ ಪರಿಹಾರವಲ್ಲ. ಪ್ರತಿಯೊಬ್ಬರಲ್ಲೂ ಈ ಬಗ್ಗೆ ಜಾಗೃತಿ ಬರಬೇಕು. ಯುವಕ ಯುವತಿಯರು ದುಶ್ಚಟಗಳಿಗೆ ಬಲಿಯಾಗಬೇಡಿ. ನಾನು ಮೊದಲು ಸಿಗರೇಟ್ ಸೇದುತ್ತಿದ್ದೆ. ಆದರೆ, ಶಾಸಕನಾದ ಮೇಲೆ ಸಿಗರೇಟ್ ಬಿಟ್ಟುಬಿಟ್ಟೆ ಎಂದು ವಿದ್ಯಾರ್ಥಿಗಳ ಮುಂದೆ ತಾವು ಕೂಡ ದುಶ್ಚಟಕ್ಕೆ ದಾಸನಾಗಿದ್ದು, ನಂತರ ವ್ಯಸನಮುಕ್ತರಾಗಿದ್ದ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
ದಿನಕ್ಕೆ 40 ಸಿಗರೇಟ್ ಸೇದುತ್ತಿದ್ದ ಸಿದ್ದರಾಮಯ್ಯ: ಈ ಹಿಂದೆ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ಅವರು ನಾನೂ ಒಂದು ಅವಧಿಯಲ್ಲಿ ತುಂಬಾ ಸಿಗರೇಟ್ ಸೇದುತ್ತಿದ್ದೆ. ನಾನು ಲಾಯರ್ ಆಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಬರೋಬ್ಬರಿ ದಿನಕ್ಕೆ 4 ಪ್ಯಾಕೆಟ್ ವ್ಹೀಲ್ಸ್ ಸಿಗರೇಟ್ ಸೇದುತ್ತಿದ್ದೆನು. ಅಂದರೆ, ಒಂದು ಪ್ಯಾಕೆಟ್‌ನಲ್ಲಿ 10 ಎಂದುಕೊಂಡರೂ ಒಟ್ಟು 40 ಸಿಗರೇಟ್ ಸೇದುತ್ತಿದ್ದೆನು. ನಾನು ಯಾವಾಗ ಶಾಸಕನಾದೆನೋ ಅಆಗ ಒಮ್ಮೆಲೇ ಜ್ಞಾನೋದಯವಾಗಿ ಸಿಗರೇಟ್ ಸೇದುವುದನ್ನೇ ಬಿಟ್ಟುಬಿಟ್ಟೆ ಎಂದು ಹೇಳಿದ್ದರು. ಇದೀಗ ಪುನಃ ವಿದ್ಯಾರ್ಥಿಗಳಿಗೆ ಸಿಗರೇಟ್ ಆರೋಗ್ಯಕ್ಕೆ ಹಾನಿಕರ ಎಂಬ ಜಾಗೃತಿಉ ಮೂಡಿಸುವ ಹಿನ್ನೆಲೆಯಲ್ಲಿ ಸಿಗರೇಟ್ ವರ್ಜನೆ ಮಾಡಿದ್ದ ವಿಚಾರವನ್ನು ಮತ್ತೆ ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ನಿರೂಪಣೆಗೆ ಗುಡ್ ಬೈ ಬೆನ್ನಲ್ಲೇ, ಕಲರ್ಸ್ ಕನ್ನಡದೊಂದಿಗಿನ ಸಂಬಂಧ ಬಿಚ್ಚಿಟ್ಟ ಕಿಚ್ಚ ಸುದೀಪ!
ಮಳೆಯಿಂದಾಗಿ ಜಾಗೃತಿ ಜಾಥಾ ರದ್ದು: ಬೆಂಗಳೂರಿನಲ್ಲಿ ಮಂಗಳವಾರ ಬೆಳಗ್ಗೆಯಿಂದಲೂ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ತಂಬಾಕು ಮುಕ್ತ ಯುವ ಅಭಿಯಾನ 2.O ಕಾರ್ಯಕ್ರಮದ ಜಾಗೃತಿ ಜಾಥಾವನ್ನು ರದ್ದುಗೊಳಿಸಲಾಗಿದೆ. ಇನ್ನು ವಿಧಾನಸೌಧದ ಮುಂದಿನ ಗಾಂಧಿ ಪ್ರತಿಮೆಯ ಮುಂಭಾಗದಲ್ಲಿ ನಡೆಯಬೇಕಿದ್ದ ಜಾಗೃತಿ ಕಾರ್ಯಕ್ರಮವನ್ನು ದಿಢೀರನೇ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ಗೆ ಶಿಫ್ಟ್ ಮಾಡಲಾಯಿತು. ಇಲ್ಲಿ ತಂಬಾಕು ಮುಕ್ತ ಯುವ ಅಭಿಯಾನ 2.O ಕಾರ್ಯಕ್ರಮದ ಜಾಗೃತಿ ಜಾಥಾದಲ್ಲಿ ಭಾಗವಹಿಸಲು ಬಂದಿದ್ದ ವಿದ್ಯಾರ್ಥಿಗಳಿಗೆ ಬ್ಯಾಂಕ್ವೆಟ್ ಹಾಲ್‌ನಲ್ಲಿ ಕೂರಿಸಿ ವೇದಿಕೆ ಕಾರ್ಯಕ್ರಮ ನಡೆಸಿಕೊಡಲಾಯಿತು.