
ಮಂಡ್ಯ (ನ.1): ರೈತರ ಜಮೀನನ್ನು ರಕ್ಷಿಸಲು ಭೂಮಿ ಯೋಜನೆ ಮೂಲಕ ಆರನೇ ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ.
ಮಂಡ್ಯದಲ್ಲಿ ಶನಿವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ರೈತರ ಜಮೀನುಗಳು ಪೌತಿ ಖಾತೆ ಆಗಿಲ್ಲ. ಇ-ಸ್ವತ್ತು ಸೇರಿದಂತೆ ಹಲವು ಸಮಸ್ಯೆಗಳನ್ನು ನಾನೂ ಸ್ವತಃ ರೈತನಾಗಿ ಅರಿತಿದ್ದೇನೆ. ಹಾಗಾಗಿ ಪೋಡಿ, ಇ-ಸ್ವತ್ತು, ಇ-ಖಾತೆ ಸೇರಿದಂತೆ ಅಗತ್ಯ ದಾಖಲೆಗಳನ್ನು ಮಾಡಿ ರೈತರ ಜಮೀನುಗಳನ್ನು ಸಂರಕ್ಷಿಸುವ ಮೂಲಕ ಅವರ ಕುಟುಂಬಕ್ಕೆ ಆಧಾರವಾಗಬೇಕು ಎಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಮೇಕೆದಾಟು ಯೋಜನೆಗೆ ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಶೀಘ್ರವೇ ನಾವು ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ನಮ್ಮ ನೀರು ನಮ್ಮ ಹಕ್ಕನ್ನು ಉಳಿಸಿಕೊಳ್ಳುವ ಕೆಲಸ ಮಾಡುತ್ತೇವೆ. ಆ ಜವಾಬ್ದಾರಿಯನ್ನು ಚಲುವರಾಯಸ್ವಾಮಿ ಅವರಿಗೆ ವಹಿಸಿದ್ದೇವೆ ಎಂದರು.
ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಈಗಾಗಲೇ 2,500 ಎಕರೆ ಭೂಮಿಯನ್ನು ಗುರುತಿಸಲಾಗಿದೆ. ಇದರಲ್ಲಿ ರೈತರ ಖಾಸಗಿ ಜಮೀನು ಕೇವಲ 500 ಎಕರೆ ಮಾತ್ರ ಭೂಸ್ವಾಧೀನವಾಗಲಿದೆ. ಮೇಕೆದಾಟು ಯೋಜನೆಯಿಂದ ಕಾವೇರಿ ನೀರಿನ ನಿರ್ವಹಣೆಗೆ ದೊಡ್ಡ ಅನುಕೂಲವಾಗಲಿದೆ. ಯೋಜನೆಗೆ ಅಗತ್ಯವಾದ ಅರಣ್ಯ ಭೂಮಿಗೆ ಪರ್ಯಾಯವಾಗಿ ಜಮೀನು ನೀಡುವ ಪ್ರಕ್ರಿಯೆ ಆರಂಭವಾಗಿದೆ. ಮುಂದಿನ ಬಜೆಟ್ ವೇಳೆಗೆ ಕೇಂದ್ರ ಸರ್ಕಾರದಿಂದ ಅರಣ್ಯ ಭೂಮಿಗೆ ಅನುಮತಿ ಪಡೆಯುವ ನಿರೀಕ್ಷೆಯಿದೆ ಎಂದರು.
ಮುಂದಿನ ಬಜೆಟ್ ವೇಳೆಗೆ ಕೇಂದ್ರದಿಂದ ಅರಣ್ಯ ಭೂಮಿಗೆ ಸಂಬಂಧಿಸಿದ ಅಗತ್ಯ ಅನುಮತಿ ಪಡೆಯುವ ವಿಶ್ವಾಸವಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಸಚಿವರನ್ನು ಭೇಟಿಯಾಗಿ ಚರ್ಚಿಸಿದ್ದೇನೆ. ಬಿಜೆಪಿ ನಾಯಕರೂ ರಾಜಕೀಯ ಬದಿಗಿಟ್ಟು ಸಹಕಾರ ನೀಡಬೇಕು. ಎಲ್ಲರೂ ಒಟ್ಟಾಗಿ ಹೋಗಿ ಯೋಜನೆಗೆ ಅನುಮತಿ ಪಡೆಯೋಣ ಎಂದು ಮನವಿ ಮಾಡಿದರು.
ವಿಮಾನ ಎಂಜಿನ್ ದುರಸ್ತಿ ಘಟಕಕ್ಕೆ ರಾಜ್ಯ ಸರ್ಕಾರ ಜಮೀನು ನೀಡುತ್ತಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪತ್ರ ಬರೆದಿರುವ ಕುರಿತು ಕೇಳಿದಾಗ, ನಾವು ಈಗಾಗಲೇ 100 ಎಕರೆ ಜಮೀನು ನೀಡುವುದಾಗಿ ಹೇಳಿದ್ದೇವೆ. 500 ಎಕರೆ ಬೇಕೆಂದು ಕೇಳಿದ್ದಾರೆ. ಖಂಡಿತವಾಗಿಯೂ ಕೊಡುತ್ತೇವೆ. ಮೊದಲು ಅವರು ಕೆಲಸ ಆರಂಭಿಸಲಿ. ಆ ಬಳಿಕ ಎಷ್ಟು ಜಮೀನು ಬೇಕೋ ಅಷ್ಟನ್ನು ನೀಡುತ್ತೇವೆ ಎಂದರು.
2028ರಲ್ಲಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರುವುದು ಖಚಿತ. ಮುಂದಿನ ಮೂರರಿಂದ ನಾಲ್ಕು ತಿಂಗಳಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಎದುರಾಗಲಿವೆ. ಈ ಚುನಾವಣೆಗಳಿಗೆ ಎಲ್ಲರೂ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ