ಕರ್ನಾಟಕದ 7 ಶಾಸಕರ ವಿರುದ್ಧ ದಾಖಲಾಗಿದೆ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ: ಎಡಿಆರ್ ವರದಿಯಲ್ಲಿ ಬಹಿರಂಗ

Published : Oct 31, 2026, 04:26 PM IST
Suvarna Vidhana Soudha

ಸಾರಾಂಶ

ಎಡಿಆರ್ ಸಂಸ್ಥೆಯ ನೂತನ ವರದಿಯ ಪ್ರಕಾರ, ಕರ್ನಾಟಕದ 7 ಹಾಲಿ ಶಾಸಕರು ಮಹಿಳೆಯರ ಮೇಲಿನ ಅಪರಾಧ ಹಾಗೂ ಕಿರುಕುಳದ ಗಂಭೀರ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಇಂತಹ ಪ್ರಕರಣಗಳನ್ನು ಹೊಂದಿರುವ ಜನಪ್ರತಿನಿಧಿಗಳ ಪಟ್ಟಿಯಲ್ಲಿ ಕರ್ನಾಟಕವು ದೇಶದಲ್ಲೇ 6ನೇ ಸ್ಥಾನದಲ್ಲಿದೆ.

ಬೆಂಗಳೂರು (ಅ.31): ಅಪರಾಧ ಹಿನ್ನೆಲೆಯುಳ್ಳ ನಾಯಕರು ಶಾಸನಸಭೆ ಪ್ರವೇಶಿಸುತ್ತಿರುವ ವಿಚಾರ ಮತ್ತೆ ತೀವ್ರ ಚರ್ಚೆಗೆ ಗ್ರಾಸವಾಗಿದೆ: ಕರ್ನಾಟಕದ ಹಾಲಿ 7 ಜನ ಶಾಸಕರು ಮಹಿಳೆಯರ ಮೇಲಿನ ಅಪರಾಧ ಹಾಗೂ ಕಿರುಕುಳಕ್ಕೆ ಸಂಬಂಧಿಸಿದ ಗಂಭೀರ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ಆಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಸಂಸ್ಥೆಯ ನೂತನ ವರದಿಯು ಆತಂಕಕಾರಿ ಸತ್ಯವನ್ನು ಹೊರಹಾಕಿದೆ.

ಮಹಿಳೆಯರ ವಿರುದ್ಧದ ಕಿರುಕುಳ, ದೌರ್ಜನ್ಯ ಹಾಗೂ ಹಿಂಸಾಚಾರದ ಭೀತಿ ದಿನನಿತ್ಯದ ಬದುಕಿನ ಭಾಗವಾಗಿದೆ ಎಂಬ ಆತಂಕ ಜನಮಾನಸದಲ್ಲಿದೆ. ಆದರೆ, ಇಂತಹ ಅಪರಾಧ ಪ್ರಕರಣಗಳ ಆರೋಪ ಎದುರಿಸುತ್ತಿರುವ ನಾಯಕರೇ ಶಾಸನಸಭೆಗಳಲ್ಲಿ ಜನಪ್ರತಿನಿಧಿಗಳಾಗಿ ಕುಳಿತಾಗ ಪರಿಸ್ಥಿತಿ ಏನಾಗಬಹುದು? ಎನ್ನುವ ಕಠಿಣ ಪ್ರಶ್ನೆಯನ್ನು ಎಡಿಆರ್ ವರದಿ ಎತ್ತಿದೆ. ಲೋಕಸಭೆ, ರಾಜ್ಯಸಭೆ ಹಾಗೂ ರಾಜ್ಯ ವಿಧಾನಸಭೆಗಳ ನಾಯಕರ ಅಫಿಡವಿಟ್ ಪರಿಶೀಲಿಸಿ ಸಿದ್ಧಪಡಿಸಲಾದ ಈ ವರದಿಯ ಪ್ರಕಾರ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಹೊಂದಿರುವ ಹಾಲಿ ಸಂಸದರು ಮತ್ತು ಶಾಸಕರ ಸಂಖ್ಯೆಯಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲೇ 6ನೇ ಸ್ಥಾನದಲ್ಲಿದೆ.

ದೇಶದಲ್ಲೇ 6ನೇ ಸ್ಥಾನದಲ್ಲಿ ಕರ್ನಾಟಕ – ಲೋಕಸಭೆ/ರಾಜ್ಯಸಭೆ ಸಂಸದರಿಗಿಲ್ಲ ಕೇಸ್

ವರದಿಯ ಪ್ರಕಾರ ಕರ್ನಾಟಕದ ಈ 7 ಪ್ರತಿನಿಧಿಗಳೂ ಸಹ ಹಾಲಿ ಶಾಸಕರಾಗಿದ್ದಾರೆ (MLAs). ಅದೃಷ್ಟವಶಾತ್ ಕರ್ನಾಟಕದ ಹಾಲಿ ಲೋಕಸಭೆ ಅಥವಾ ರಾಜ್ಯಸಭೆಯ ಯಾವುದೇ ಸಂಸದರು (MPs) ಇಂತಹ ಪ್ರಕರಣಗಳನ್ನು ಹೊಂದಿಲ್ಲ. ದೇಶದಲ್ಲೇ ಅತ್ಯಂತ ಹೆಚ್ಚು ಅಂದರೆ ಬರೋಬ್ಬರಿ 69 ಇಂತಹ ಜನಪ್ರತಿನಿಧಿಗಳನ್ನು ಹೊಂದುವ ಮೂಲಕ ಪಶ್ಚಿಮ ಬಂಗಾಳ ಮೊದಲ ಸ್ಥಾನದಲ್ಲಿದ್ದರೆ, ಆಂಧ್ರಪ್ರದೇಶ (22) ಎರಡನೇ ಸ್ಥಾನ, ಒಡಿಶಾ (17) ಮೂರನೇ ಸ್ಥಾನ, ಮಹಾರಾಷ್ಟ್ರ (11) ನಾಲ್ಕನೇ ಸ್ಥಾನ ಹಾಗೂ ಬಿಹಾರ (10) ಐದನೇ ಸ್ಥಾನದಲ್ಲಿದೆ. ಕರ್ನಾಟಕದ 7 ಶಾಸಕರ ಸಂಖ್ಯೆಯು ಜಾರ್ಖಂಡ್ (6), ಕೇರಳ (5), ಮಧ್ಯಪ್ರದೇಶ (5), ರಾಜಸ್ಥಾನ (5) ಹಾಗೂ ತೆಲಂಗಾಣ (5) ರಾಜ್ಯಗಳಿಗಿಂತ ಹೆಚ್ಚಾಗಿದೆ ಎಂಬುದು ಗಮನಾರ್ಹ.

ದೇಶಾದ್ಯಂತ 187 ಜನಪ್ರತಿನಿಧಿಗಳು – 14 ನಾಯಕರ ವಿರುದ್ಧ ಅ**ತ್ಯಾಚಾರ ಪ್ರಕರಣ

ರಾಷ್ಟ್ರಮಟ್ಟದ ಲೆಕ್ಕಾಚಾರವನ್ನು ಗಮನಿಸುವುದಾದರೆ, ದೇಶಾದ್ಯಂತ ಒಟ್ಟು 187 ಹಾಲಿ ಸಂಸದರು ಮತ್ತು ಶಾಸಕರು ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ. ಇದರಲ್ಲಿ 168 ಶಾಸಕರು, 15 ಲೋಕಸಭಾ ಸಂಸದರು ಹಾಗೂ 4 ರಾಜ್ಯಸಭಾ ಸಂಸದರಿದ್ದಾರೆ. ಇದಕ್ಕಿಂತಲೂ ಭೀಕರ ಸತ್ಯವೆಂದರೆ, ದೇಶಾದ್ಯಂತ ಒಟ್ಟು 14 ಹಾಲಿ ಸಂಸದರು ಮತ್ತು ಶಾಸಕರು ತಮ್ಮ ವಿರುದ್ಧ ಅ**ತ್ಯಾಚಾರ (R**ape) ಪ್ರಕರಣಗಳು ಇರುವುದಾಗಿ ಘೋಷಿಸಿಕೊಂಡಿದ್ದಾರೆ. ಇಂತಹ ನಾಯಕರನ್ನು ಹೊಂದಿರುವ ದೇಶದ 11 ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವೂ ಒಂದಾಗಿದ್ದು, ಕರ್ನಾಟಕದ ಒಬ್ಬ ಹಾಲಿ ಶಾಸಕನ ವಿರುದ್ಧ ಅ**ತ್ಯಾಚಾರ ಪ್ರಕರಣ ದಾಖಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಗರಿಷ್ಠ 3 ಹಾಗೂ ಮಧ್ಯಪ್ರದೇಶದಲ್ಲಿ 2 ನಾಯಕರ ವಿರುದ್ಧ ಅ**ತ್ಯಾಚಾರ ಕೇಸ್‌ಗಳಿವೆ.

ರಾಜಕೀಯ ಶುದ್ಧೀಕರಣಕ್ಕೆ 'ಎಡಿಆರ್' ಕಟ್ಟುನಿಟ್ಟಿನ ಶಿಫಾರಸುಗಳು:

ನ್ಯಾಯಾಲಯಗಳು ದೋಷಾರೋಪಣೆ (Charges framed) ಪಟ್ಟಿ ಸಲ್ಲಿಕೆಯಾಗಿರುವ ಪ್ರಕರಣಗಳಲ್ಲೂ ರಾಜಕೀಯ ಪಕ್ಷಗಳು ಇಂತಹ ನಾಯಕರಿಗೆ ಟಿಕೆಟ್ ನೀಡುತ್ತಿರುವುದು ರಾಜಕೀಯ ಮತ್ತು ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಗಂಭೀರ ಸೋಲನ್ನು ತೋರಿಸುತ್ತದೆ. ಪ್ರಭಾವಿ ಶಾಸಕರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ತನಿಖೆ ಹಾಗೂ ವಿಚಾರಣೆಯನ್ನು ವಿಳಂಬಗೊಳಿಸುವ ಮತ್ತು ಸಂತ್ರಸ್ತರು ಹಾಗೂ ಅವರ ಕುಟುಂಬದವರನ್ನು ಬೆದರಿಸುವ ಸಾಧ್ಯತೆಗಳಿರುತ್ತವೆ ಎಂದು ಎಡಿಆರ್ ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ (National Election Watch) ಕಳವಳ ವ್ಯಕ್ತಪಡಿಸಿವೆ.

ಎಡಿಆರ್ ನೀಡಿದ ಪ್ರಮುಖ ಶಿಫಾರಸುಗಳು

ಗಂಭೀರ ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸದಂತೆ ಬ್ರೇಕ್ ಹಾಕುವುದು. ಅ**ತ್ಯಾಚಾರದಂತಹ ಭೀಕರ ಅಪರಾಧಗಳಲ್ಲಿ ದೋಷಿ ಎಂದು ಸಾಬೀತಾದವರನ್ನು ಚುನಾವಣೆಯಿಂದ ಖಾಯಂ ಆಗಿ ಅನರ್ಹಗೊಳಿಸುವುದು. ಮಹಿಳೆಯರ ವಿರುದ್ಧ ಗಂಭೀರ ಪ್ರಕರಣಗಳನ್ನು ಎದುರಿಸುತ್ತಿರುವ ಶಾಸಕರನ್ನು ಸಚಿವ ಸಂಪುಟದಿಂದ ದೂರವಿಡುವುದು. ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆ ಹಾಗೂ ಅವರನ್ನು ಆಯ್ಕೆ ಮಾಡಲು ಇರುವ ಸೂಕ್ತ ಕಾರಣಗಳನ್ನು ಸಾರ್ವಜನಿಕವಾಗಿ ಪ್ರಕಟಿಸದ ಪಕ್ಷಗಳ ವಿರುದ್ಧ ಕಟ್ಟುನಿಟ್ಟಿನ ದಂಡ ವಿಧಿಸುವುದು. ನ್ಯಾಯಾಲಯದ ಉಸ್ತುವಾರಿಯಲ್ಲಿ ಕಾಲಮಿತಿಯ ಒಳಗೆ ವಿಚಾರಣೆ ಪೂರ್ಣಗೊಳಿಸುವುದು ಹಾಗೂ ಮತದಾರರು ಮತ ಚಲಾಯಿಸುವ ಮುನ್ನ ಅಭ್ಯರ್ಥಿಯ ಹಿನ್ನೆಲೆಯನ್ನು ಸರಿಯಾಗಿ ಪರಿಶೀಲಿಸುವುದು.

ಅಪರಾಧ ಹಿನ್ನೆಲೆಯುಳ್ಳ ಅಭ್ಯರ್ಥಿಗಳಿಗೆ ರಾಜಕೀಯ ಪಕ್ಷಗಳು ಟಿಕೆಟ್ ನೀಡುವುದನ್ನು ತಡೆಯಲು ಮತ್ತು ರಾಜಕೀಯ ವಲಯದಲ್ಲಿ ಜವಾಬ್ದಾರಿ ಹೆಚ್ಚಿಸಲು ಈ ವರದಿ ಬಲವಾದ ತಳಹದಿ ಒದಗಿಸಿದೆ ಎಂದು ಸಾಮಾಜಿಕ ಹೋರಾಟಗಾರರು ಅಭಿಪ್ರಾಯಪಟ್ಟಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜಾಮೀನು ಸಿಕ್ಕ ಬಳಿಕ ಮೊದಲ ಬಾರಿ ಕಾಣಿಸಿಕೊಂಡ ಚಿನ್ನ ಕಳ್ಳಸಾಗಣೆ ಆರೋಪಿ ನಟಿ ರನ್ಯಾ ರಾವ್, ವಿಐಪಿ ಮೂಲಕ ಹಾಸನಾಂಬೆ ದರ್ಶನ!
ನೀರು ಹರಿಸಿದ್ದಕ್ಕೆ ₹1.5 ಲಕ್ಷ ಕೋಟಿ ಕೊಡಿ: ರಾಜಸ್ಥಾನಕ್ಕೆ ಪಂಜಾಬ್‌ ತಾಕೀತು, ಕರ್ನಾಟಕದಿಂದ ತಮಿಳುನಾಡಿಗೆ ಈ ಬೇಡಿಕೆ ಸಾಧ್ಯವೇ?