ತಪ್ಪು ದಾಖಲೆ ನೀಡಿದರೆ ಸೆಕ್ಷನ್ 227 BNS ಆಕ್ಟ್ ಅಡಿ ಶಿಕ್ಷೆ; ಮತಗಳ್ಳತನ ಆರೋಪಕ್ಕೆ ಚುನಾವಣಾಧಿಕಾರಿ ತಿರುಗೇಟು, ಸಹಿ ಮಾಡಿ ಆಕ್ಷೇಪಣೆ ಪ್ರಮಾಣಪತ್ರ ಸಲ್ಲಿಸುವಂತೆ ಸೂಚನೆ!

Published : Aug 07, 2025, 04:36 PM ISTUpdated : Aug 07, 2025, 04:43 PM IST
rahul gandhi

ಸಾರಾಂಶ

ಚುನಾವಣಾ ಆಯೋಗ ಹಾಗೂ ಬಿಜೆಪಿ ವಿರುದ್ಧ ಮತಗಳ್ಳತನದ ಆರೋಪ ಮಾಡಿರುವ ಕಾಂಗ್ರೆಸ್‌ಗೆ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಅನ್ಬು ಕುಮಾರ್ ಪತ್ರ ಬರೆದಿದ್ದಾರೆ. ಸಾಕ್ಷ್ಯಾಧಾರಿತ ಪ್ರಮಾಣ ಪತ್ರ ಸಲ್ಲಿಸುವಂತೆ ಸೂಚಿಸಿದ್ದಾರೆ. ತಪ್ಪು ಮಾಹಿತಿ ನೀಡಿದರೆ ಕಠಿಣ ಶಿಕ್ಷೆ ಎಂದು ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು (ಆ.7): ಚುನಾವಣಾ ಆಯೋಗ ಹಾಗೂ ಬಿಜೆಪಿ ವಿರುದ್ಧ ಮತಗಳ್ಳತನದ ಗಂಭೀರ ಆರೋಪ ಮಾಡಿರುವ ಕಾಂಗ್ರೆಸ್, ವಿಪಕ್ಷ ನಾಯಕ ರಾಹುಲ್ ಗಾಂಧಿ ಗುರುವಾರ ಆ ಕುರಿತು ದಾಖಲೆ ಬಿಡುಗಡೆ ಮಾಡಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಇದೀಗ ಹೊಸ ತಿರುವು ಪಡೆದುಕೊಂಡಿದೆ.

ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಅನ್ಬು ಕುಮಾರ್ ಅವರು ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಪತ್ರ ಬರೆದು, ಮತದಾರರ ಪಟ್ಟಿಯಲ್ಲಿ ಅಕ್ರಮಗಳೆಂಬ ಆರೋಪಗಳಿಗೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಿತ ಪ್ರಮಾಣ ಪತ್ರವನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ.

ಪತ್ತದಲ್ಲೇನಿದೆ?

ಅನ್ಬು ಕುಮಾರ್ ಅವರು ತಮ್ಮ ಪತ್ರದಲ್ಲಿ, ಮತದಾರರ ಪಟ್ಟಿಯ ತಯಾರಿಕೆಯು ಕಾಲಕಾಲಕ್ಕೆ ಸಂಪೂರ್ಣ ಪಾರದರ್ಶಕವಾಗಿ ನಡೆಯುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. 2024ರ ನವೆಂಬರ್‌ನಲ್ಲಿ ಕರಡು ಮತದಾರರ ಪಟ್ಟಿಯನ್ನು ಮತ್ತು 2025ರ ಜನವರಿಯಲ್ಲಿ ಅಂತಿಮ ಮತದಾರರ ಪಟ್ಟಿಯನ್ನು ಕಾಂಗ್ರೆಸ್ ನಾಯಕರಿಗೆ ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ. ಆದರೆ, ಈ ಪಟ್ಟಿಗಳ ಬಗ್ಗೆ ಕಾಂಗ್ರೆಸ್‌ನಿಂದ ಯಾವುದೇ ಆಕ್ಷೇಪಣೆಗಳು ಸಲ್ಲಿಕೆಯಾಗಿಲ್ಲ. ಎರಡನೇ ಹಂತದಲ್ಲಿ ಚುನಾವಣಾಧಿಕಾರಿಗಳ ಮುಂದೆಯೂ ಯಾವುದೇ ಆಕ್ಷೇಪಣೆಗಳನ್ನು ಎತ್ತಿಲ್ಲ. ಚುನಾವಣೆಯ ನಡವಳಿಕೆಯ ಬಗ್ಗೆ ಆಕ್ಷೇಪಣೆಗಳಿದ್ದರೆ, ಅವುಗಳನ್ನು ಎಲೆಕ್ಷನ್ ಪಿಟಿಷನ್ ಮೂಲಕ ಹೈಕೋರ್ಟ್‌ನಲ್ಲಿ ಸಲ್ಲಿಸಬೇಕಿತ್ತು. ಆದರೆ, ರಾಹುಲ್ ಗಾಂಧಿಯವರು ಕಾನೂನಾತ್ಮಕ ಕ್ರಮಕ್ಕಿಂತ ಸುದ್ದಿಗೋಷ್ಠಿಯ ಮೂಲಕ ಆರೋಪ ಮಾಡಿರುವುದು ಸರಿಯಲ್ಲ ಎಂದು ಅವರು ಟೀಕಿಸಿದ್ದಾರೆ.

ರಾಹುಲ್ ಗಾಂಧಿ ಅವರ ಆರೋಪಗಳನ್ನು ಸಾಬೀತುಪಡಿಸಲು, ಅನ್ಬು ಕುಮಾರ್ ಅವರು ರಿಜಿಸ್ಟ್ರೇಷನ್ ಆಫ್ ಎಲೆಕ್ಟೋರ್ಸ್ ರೂಲ್ಸ್ 1960ರ ಸೆಕ್ಷನ್ 20 (3)(b) ಪ್ರಕಾರ ಪ್ರಮಾಣ ಪತ್ರವನ್ನು ಸಹಿ ಮಾಡಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಈ ಪ್ರಮಾಣ ಪತ್ರದಲ್ಲಿ ಅಕ್ರಮವಾಗಿ ಸೇರಿಸಲಾಗಿರುವ ಅಥವಾ ಅಳಿಸಲಾಗಿರುವ ಮತದಾರರ ಹೆಸರು, ಚುನಾವಣಾ ಐಡಿ ನಂಬರ್, ಮತ್ತು ಮತದಾರರ ಪಟ್ಟಿಯ ಸೀರಿಯಲ್ ನಂಬರ್‌ನಂತಹ ವಿವರಗಳನ್ನು ಒಳಗೊಂಡಿರಬೇಕು. ಈ ಮಾಹಿತಿಯನ್ನು ಒದಗಿಸಿದರೆ ಮಾತ್ರ ಮುಂದಿನ ಕಾನೂನಾತ್ಮಕ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಇದರ ಜೊತೆಗೆ, ತಪ್ಪು ಅಥವಾ ಆಧಾರರಹಿತ ಮಾಹಿತಿಯನ್ನು ಒದಗಿಸಿದರೆ, ಸೆಕ್ಷನ್ 31 ಆರ್‌ಪಿ ಆಕ್ಟ್ 1950 ಮತ್ತು ಸೆಕ್ಷನ್ 227 ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಕಠಿಣ ಶಿಕ್ಷೆಗೆ ಗುರಿಯಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಪತ್ರದ ಜೊತೆಗೆ, ಅನ್ಬು ಕುಮಾರ್ ಅವರು ಪ್ರಮಾಣ ಪತ್ರದ ಕಾಪಿಯನ್ನು ಕಳುಹಿಸಿದ್ದಾರೆ, ಇದರಲ್ಲಿ ತಪ್ಪು ಮಾಹಿತಿ ನೀಡಿದರೆ ಶಿಕ್ಷೆಗೆ ಒಳಗಾಗುವ ಸಾಧ್ಯತೆಯ ಬಗ್ಗೆ ಉಲ್ಲೇಖಿಸಲಾಗಿದೆ. ಕಾಂಗ್ರೆಸ್ ನಿಯೋಗವು ಆಗಸ್ಟ್ 8ರಂದು ಚುನಾವಣಾಧಿಕಾರಿಗಳನ್ನು ಭೇಟಿಯಾಗಲು ಸಮಯ ಖಚಿತಪಡಿಸಿರುವುದಾಗಿ ತಿಳಿದುಬಂದಿದೆ. ಈ ಭೇಟಿಯಲ್ಲಿ ಮತದಾರರ ಪಟ್ಟಿಯ ಕುರಿತಾದ ಆರೋಪಗಳ ಬಗ್ಗೆ ಮತ್ತಷ್ಟು ಚರ್ಚೆಯಾಗುವ ಸಾಧ್ಯತೆಯಿದೆ. ಈ ಘಟನೆಯು ಕರ್ನಾಟಕದ ರಾಜಕೀಯ ವಲಯದಲ್ಲಿ ತೀವ್ರ ಗಮನ ಸೆಳೆದಿದ್ದು, ಕಾಂಗ್ರೆಸ್‌ನ ಮುಂದಿನ ಕ್ರಮವನ್ನು ಎಲ್ಲರೂ ಗಮನಿಸುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌