
ನವದೆಹಲಿ (ಆ.07): ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕಾರು ಚಾಲಕ ಬಾಬು ಆತ್ಮಹ*ತ್ಯೆ ಮಾಡಿಕೊಂಡಿರುವ ವಿಚಾರ ಕೇಳಿ ನನಗೆ ತೀವ್ರ ನೋವುಂಟಾಗಿದೆ. ನನಗೆ ಬಾಬು ಎಂಬ ವ್ಯಕ್ತಿ ಯಾರೆಂದು ಗೊತ್ತಿಲ್ಲ. ಅವರ ಮುಖವನ್ನೂ ನಾನು ನೋಡಿಲ್ಲ. ಈ ವ್ಯಕ್ತಿ ಯಾಕೆ ನನ್ನ ಹೆಸರು ಉಲ್ಲೇಖ ಮಾಡಿದ್ದಾರೋ ಗೊತ್ತಿಲ್ಲ ಎಂದು ಸಂಸದ ಡಾ.ಕೆ. ಸುಧಾಕರ್ ಹೇಳಿದರು.
ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿಗಳ ಕಾರು ಚಾಲಕ ಬಾಬು (33) ತಮ್ಮ ಹೆಸರನ್ನು ಬರೆದಿಟ್ಟು ಆತ್ಮಹ*ತ್ಯೆ ಮಾಡಿಕೊಂಡ ವಿಚಾರದ ಬಗ್ಗೆ ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. 'ಬಾಬು ಆತ್ಮಹತ್ಯೆ ನನಗೆ ನೋವು ತಂದಿದೆ, ಆದರೆ ಆ ವ್ಯಕ್ತಿ ನನಗೆ ಗೊತ್ತಿಲ್ಲ, ಮುಖವನ್ನೂ ನೋಡಿಲ್ಲ. ಯಾಕೆ ನನ್ನ ಹೆಸರು ಉಲ್ಲೇಖ ಮಾಡಿದ್ದಾರೆ ಎಂಬುದು ಗೊತ್ತಿಲ್ಲ' ಎಂದು ಹೇಳಿದ್ದಾರೆ.
ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆಯಾಗಲಿ:
ಈ ಘಟನೆ ರಾಜಕೀಯ ತಿರುವು ಪಡೆದುಕೊಳ್ಳುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸುಧಾಕರ್, 'ಇದರ ಹಿಂದೆ ರಾಜಕೀಯ ಪಿತೂರಿ ಇದೆ. ಕಾಂಗ್ರೆಸ್ ಶಾಸಕರ ಹೆಸರಿದ್ದರೆ ಒಂದು ಕಾನೂನು, ಬಿಜೆಪಿ ಶಾಸಕರ ಹೆಸರಿದ್ದರೆ ಮತ್ತೊಂದು ಕಾನೂನು ಎಂಬಂತಾಗಿದೆ' ಎಂದು ಆರೋಪಿಸಿದರು. ಬಾಬು ಕುಟುಂಬಸ್ಥರು ದೂರು ನೀಡಲು ಹೋದಾಗ, ಅಲ್ಲಿನ ಪಿಎಸ್‌ಐ ಡೆತ್ ನೋಟ್‌ನಲ್ಲಿರುವಂತೆ ದೂರು ನೀಡುವಂತೆ ಒತ್ತಾಯಿಸಿದ್ದಾರೆಂದು ನನಗೆ ಮಾಹಿತಿ ಇದೆ ಎಂದರು. ಆದರೆ, ಈ ಸಾವಿನ ಬಗ್ಗೆ ಪಾರದರ್ಶಕವಾಗಿ ತನಿಖೆ ನಡೆಯಬೇಕೆಂದು ಒತ್ತಾಯಿಸಿದರು.
ಈ ಸಾವಿನ ವಿಚಾರವನ್ನು 'ನನ್ನೂ ಒಳಗೊಂಡಂತೆ ಯಾರೇ ತಪ್ಪಿತಸ್ಥರಿದ್ದರೂ ಅವರಿಗೆ ಉಗ್ರ ಶಿಕ್ಷೆಯಾಗಲಿ. ಮಾಧ್ಯಮ ಟ್ರಯಲ್‌ಗಿಂತ ಸರಿಯಾದ ತನಿಖೆ ಆಗಲಿ. ಬಾಬು ಅವರ ಸಾವನ್ನು ರಾಜಕೀಯ ಕಾರಣಕ್ಕೆ ಎಳೆದು ತರುವುದು ಸರಿಯಲ್ಲ' ಎಂದು ಹೇಳಿದರು.
ಮೃತರ ಕುಟುಂಬವನ್ನು ಭೇಟಿ ಮಾಡುವೆ:
ಚಾಲಕ ಬಾಬು ಅವರ ಸಾವಿನ ಬಗ್ಗೆ ತನಿಖೆ ನಡೆಯುತ್ತಿರುವಾಗ, ಮಡಿಕೇರಿ ಪ್ರಕರಣದಲ್ಲಿ ಶಾಸಕರ ಹೆಸರು ಯಾಕೆ ಸೇರಿಸಿಲ್ಲ ಎಂದು ಸುಧಾಕರ್ ಪ್ರಶ್ನಿಸಿದ್ದಾರೆ. ತನ್ನ ಬೆಂಬಲಿಗ ಎಂದು ಆರೋಪಿಸಲಾದ ನಾಗೇಶ್ ಅವರ ಮಾವ ಚಿಕ್ಕಾಡಗನಹಳ್ಳಿ ಕೃಷ್ಣಮೂರ್ತಿ ಪರಿಚಯ ತಮಗಿದೆ ಎಂದು ಒಪ್ಪಿಕೊಂಡಿದ್ದಾರೆ. 'ನಾನು ದೆಹಲಿಯಿಂದ ಮರಳಿದ ಬಳಿಕ ಮೃತರ ಕುಟುಂಬದ ಸದಸ್ಯರನ್ನು ಭೇಟಿ ಮಾಡುತ್ತೇನೆ' ಎಂದು ಭರವಸೆ ನೀಡಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್, 'ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿಯವರ ಕಾರು ಚಾಲಕ ಬಾಬು ಆತ್ಮಹ*ತ್ಯೆ ಮಾಡಿಕೊಂಡಿರುವ ಬಗ್ಗೆ ನನಗೆ ಮಾಹಿತಿ ಸಿಕ್ಕಿದೆ. ಅವರು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು. ಡೆತ್ ನೋಟ್‌ನಲ್ಲಿ ಸಂಸದ ಡಾ. ಕೆ. ಸುಧಾಕರ್ ಮತ್ತು ಅವರ ಬೆಂಬಲಿಗರ ಹೆಸರನ್ನು ಬರೆದಿದ್ದಾರೆ. ಲೋಕಸಭಾ ಸದಸ್ಯರ ಹೆಸರು ಉಲ್ಲೇಖವಾಗಿರುವುದರಿಂದ, ಕಾನೂನಿನ ಪ್ರಕಾರ ಸುದೀರ್ಘ ಮತ್ತು ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಯಾರೇ ಆಗಲಿ, ತನಿಖೆ ನಡೆಸಿ ಸತ್ಯ ಹೊರತರಬೇಕು' ಎಂದು ಒತ್ತಾಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ